Advertisement

ಚಿತ್ತ ಸೆಳೆದ ಚಿತ್ರಾಂಗದಾ

10:49 AM Oct 06, 2019 | Lakshmi GovindaRaju |

ಯಕ್ಷಗಾನ ಬ್ಯಾಲೆ, ಡಾ. ಶಿವರಾಮ ಕಾರಂತರ ವಿಶಿಷ್ಟ ಶೋಧ. ಈಗಲೂ ಬ್ಯಾಲೆ ತನ್ನದೇ ಆದ ಕಲಾತ್ಮಕ ಪ್ರಯೋಗದೊಂದಿಗೆ, ನೋಡುಗರನ್ನು ರಂಜಿಸುತ್ತಿದೆ. ಸುಮಾರು ನೂರು ನಿಮಿಷ ನಡೆದ “ಚಿತ್ರಾಂಗದಾ’ ಪ್ರದರ್ಶನ ಎಲ್ಲೂ ಸೋಲದೆ, ಸೆಳೆದಿದ್ದು ಈ ಬಗೆಯಲ್ಲಿ…

Advertisement

ಶಿವರಾಮ ಕಾರಂತರಿಗೆ ಖ್ಯಾತಿ ತಂದುಕೊಟ್ಟ ಚಿತ್ರಾಂಗದಾ ಯಕ್ಷಗಾನ ಬ್ಯಾಲೆ ಪ್ರಯೋಗವನ್ನು ವಿದ್ವಾನ್‌ ಸುಧೀರ್‌ ರಾವ್‌ ಕೊಡವೂರು ಮರು ನಿರ್ದೇಶನದಲ್ಲಿ, ಮಾಲಿನಿ ಮಲ್ಯರ ಸಹಯೋಗದೊಂದಿಗೆ ಕರ್ನಾಟಕ ಕಲಾದರ್ಶಿನಿ ತಂಡವು ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಸಿಕೊಟ್ಟಿತು. ಗಣಪತಿ ಸ್ತುತಿಯೊಂದಿಗೆ ಪ್ರಸಂಗ ಪ್ರಾರಂಭವಾಯ್ತು. ಆ ಸ್ತುತಿ ಪದ್ಯಕ್ಕೆ ಚುರುಕು ಗತಿಯಲ್ಲಿ ನೃತ್ಯ ಮಾಡಿದ ಕಾರ್ತಿಕ್‌, ಎಲ್ಲರ ಗಮನ ಸೆಳೆದರು. ಮುಂದೆ, ಧರ್ಮರಾಜನ (ಬಸವ ಮರಕಾಲ) ಒಡ್ಡೋಲಗದಲ್ಲಿ ಅಶ್ವಮೇಧ ಯಾಗದ ಪ್ರಸ್ತಾಪವಾಗುತ್ತದೆ.

ಹಸ್ತಾಭಿನಯದ ಮೂಲಕ ಪಾತ್ರಧಾರಿಗಳಾದ ಕೃಷ್ಣಮೂರ್ತಿ ಉರಾಳ (ಅರ್ಜುನ), ಶ್ರೀಧರ ಕಾಂಚನ್‌ (ವೃಷಕೇತು), ಅಜಿತ್‌ ಕುಮಾರ್‌ (ಪ್ರದ್ಯುಮ್ನ) ಕಥಾ ನಿರೂಪಣೆ ನಡೆಸಿಕೊಟ್ಟರು. ಯಾಗದ ಕುದುರೆಯ ರಕ್ಷಕರಾಗಿ ಸಾಗುವ ಈ ಮೂವರು, ಪ್ರಯಾಣದ ನಡೆಯಲ್ಲಿ ಮೃದಂಗ ಹಾಗೂ ಚಂಡೆಯ ಪೆಟ್ಟಿಗೆ ಸಾಂಗತ್ಯವಾಗುವಂತೆ ಹೆಜ್ಜೆಗಾರಿಕೆ ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು. ಹಿಮ್ಮೇಳದಲ್ಲಿ ಅನಂತ ಪದ್ಮನಾಭ್‌ ಪಾರಕ್‌ (ಮೃದಂಗ) ಹಾಗೂ ದೇವದಾಸ ಕೂಡ್ಲಿ (ಚಂಡೆ) ಸಮರ್ಪಕವಾಗಿ ವೇಷಧಾರಿಗಳನ್ನು ಕುಣಿಸಿದರು. ಮೊದಲ ಪ್ರದರ್ಶನದ ಆಕರ್ಷಕ ಅಂಗಗಳಲ್ಲಿ “ಪ್ರಮೀಳಾರ್ಜುನ’ವೂ ಒಂದು.

ಪ್ರಮೀಳೆಯಾಗಿ ಖ್ಯಾತ ಸ್ತ್ರೀ ವೇಷಧಾರಿ ಡಾ. ರಾಧಾಕೃಷ್ಣ ಉರಾಳರ ಹಾವಭಾವ ಮನೋಜ್ಞವಾಗಿತ್ತು. ಯುದ್ಧದ ಸಂದರ್ಭದಲ್ಲಿ ಅವರಿಗೆ ಎದುರಾದ ಅರ್ಜುನ ಪಾತ್ರಧಾರಿ ಕೃಷ್ಣಮೂರ್ತಿ ಉರಾಳರ ಕುಣಿತವೂ ಗಮನ ಸಳೆಯುವಂತಿತ್ತು. ಕೃಷ್ಣಮೂರ್ತಿ ಉರಾಳರು ಗಾಂಭೀರ್ಯದಿಂದ ಅಭಿನಯಿಸಿ, ಸಂಭಾಷಣೆ ಇಲ್ಲದೆಯೇ ಹಾಡಿನ ಅಂತರಾರ್ಥವನ್ನು ಅಭಿನಯದ ಮೂಲಕ ವ್ಯಕ್ತಪಡಿಸಿದರು. “ಪಾರ್ಥನೆಂಬವನೇ ನೀನು| ನಿನ್ನಶ್ವವ| ಸ್ವಾರ್ಥದಿ ಕಟ್ಟಿಹೆನು|’ ಎಂಬ ಪದ್ಯವನ್ನು ಸುಧೀರ್‌ ಸೊಗಸಾಗಿ ಹಾಡಿದರು. ಅದಕ್ಕೆ ಸರಿಯಾಗಿ ಅಭಿನಯಿಸಿದ ಪ್ರಮೀಳೆ ಪ್ರೇಕ್ಷಕರ ಮನಗೆದ್ದಳು. ಅಂಬರದ ನುಡಿಗನುಗುಣವಾಗಿ “ಪ್ರಮೀಳಾರ್ಜುನ’ ಸುಖಾಂತ್ಯವಾಗುತ್ತದೆ.

ಚಿತ್ರಾಂಗದೆಯಾಗಿ ಮುಗ್ಧ ಗಣೇಶನಾಯಕ ಹಾಗೂ ಕಟಕಿಯಾಗಿ ಮನೋಜ ಭಟ್‌, ನರ್ತಿಸಿದ ಭಾಗವೂ ಅಷ್ಟೇ ಲಾಸ್ಯಮಯ. ಇತ್ತ, ಭಾಗವತ ಸುಧೀರ್‌ ಅವರು ಸಾವೇರಿ ಆದಿತಾಳದಲ್ಲಿ ಹಾಡಿದ “ಅಹುದೆ ಎನ್ನಯ ರಮಣ| ಏ ಸಖೀಯೆ| ಅಹುದೆ ಎನ್ನಯ ರಮಣ’ ಎನ್ನುವ ಭಾವಪೂರ್ಣ ಪದ್ಯಕ್ಕೆ ರವಿಕುಮಾರ್‌ ಮೈಸೂರು, ಪಿಟೀಲಿನ ಸಾಥ್‌ ನೀಡಿದರು. ವಿಳಂಬ ಗತಿಯಲ್ಲಿ ಸಾಗಿದ ಹಾಡಿಗೆ, ಚಿತ್ರಾಂಗದೆ ಸಂಭ್ರಮ ಹಾಗೂ ವಿಸ್ಮಯದ ಭಾವಗಳನ್ನು ತೋರ್ಪಡಿಸಿದ ಬಗೆ ವಿಶೇಷವಾದದ್ದು. ಬಭ್ರುವಾಹನನಾಗಿ ಪ್ರತೀಶ್‌ಕುಮಾರ್‌ ಅವರ ಒಡ್ಡೋಲಗದ ಪ್ರವೇಶವೇ ಚುರುಕಾಗಿತ್ತು.

Advertisement

ಕುಣಿತದ ಮೇಲೆ ತಮಗಿರುವ ಹಿಡಿತವನ್ನು ಮೊದಲಲ್ಲೇ ತೋರಿಸಿಕೊಟ್ಟರು. ಮಂತ್ರಿ ಸುಬುದ್ಧಿ ಪಾತ್ರವನ್ನು ಬಸವ ಮರಕಾಲ ವಹಿಸಿದ್ದರು. ದಿವಾಳಿ ಹನುಮನಾಗಿ ಕಾರ್ತಿಕ್‌, ಯಥೋಚಿತವಾದ ಹಾಸ್ಯ ನೀಡಿದರು. ಕುದುರೆ ಕಟ್ಟಿದ ಸಂಭ್ರಮದಲ್ಲಿರುವ ಬಭ್ರುವಾಹನನಿಗೆ ತಾಯಿಯಿಂದ ಹೊಸ ವಿಷಯ ತಿಳಿದಾಗ, “ತಪ್ಪು ಪಾಲಿಸಿಕೊಂಬುದೆಲೆ ತಾಯೇ| ಎನ್ನ | ಅಪ್ಪನೆಂಬುದ ಅರಿಯದಾದೆ ಎಲೆ ತಾಯೇ’ ಎಂಬ ಹಾಡಿನ ಅಭಿನಯ ನಿಜಕ್ಕೂ ಆಕರ್ಷಕ. ಅರ್ಜುನ ಹಾಗೂ ಬಭ್ರುವಾಹನನ ನಡುವಿನ ವಾದ ವಿವಾದದಲ್ಲಿ ಕೃಷ್ಣಮೂರ್ತಿ ಉರಾಳ ಹಾಗೂ ಪ್ರತೀಶಕುಮಾರ್‌ ಅವರ ಹೆಜ್ಜೆಗಾರಿಕೆ, ಹಸ್ತ ಹಾಗೂ ಮುಖಾಭಿನಯ ಸಮರ್ಪಕವಾಗಿತ್ತು.

ಯುದ್ಧದ ಸಂದರ್ಭದ ನೃತ್ಯಗಾರಿಕೆ ಕಾರಂತರ ಕಲ್ಪನೆಯಂತೆಯೇ ಇದ್ದು, ಪ್ರೇಕ್ಷಕರ ಮನಃಪಟಲದಲ್ಲಿ, ನಿಜವಾಗಿಯೂ ಯುದ್ಧ ನಡೆಯುತ್ತಿದೆ ಎಂಬ ಭಾವ ಮೂಡಿತು. ವೀರರಸಕ್ಕೆ ಪೂರಕವಾಗುವಂತೆ ಕೃಷ್ಣರಾಜ ಉಳಿಯಾರು ಅವರ ಸ್ಯಾಕೊಫೋನ್‌ ವಾದನ, ವಾತಾವರಣವನ್ನು ಇನ್ನಷ್ಟು ರಂಗೇರಿಸಿತು. ಅರ್ಜುನನ ಸಾವಿನ ಸುದ್ದಿ ತಿಳಿದು ರೋದಿಸುವ ಚಿತ್ರಾಂಗದೆ, ಅವಳೊಂದಿಗೆ ದುಃಖೀತಳಾಗಿರುವ ಉಲೂಪಿಯ (ರಾಧಾಕೃಷ್ಣ ಉರಾಳ) ಕರುಣಾ ರಸಪೂರಿತ ಅಭಿನಯ, ಕಾಂಭೋಜಿ ಏಕತಾಳದ “ಏನು ನಮ್ಮೊಳ್‌ ಹಗೆಯು ಬಂತು | ಕಂದಾಕಂದಾ’ ಎಂಬ ಪದ್ಯಕ್ಕೆ ಪಿಟೀಲಿನ ಸಾಥ್‌ ಅದ್ಭುತವಾಗಿತ್ತು.

ಮುಂದೆ ಬಭ್ರುವಾಹನ ಪಾತಾಳಕ್ಕೆ ತೆರಳಿದಾಗ, ಮಹಾಶೇಷನಾಗಿ ಕಾರ್ತಿಕ್‌ರ ಪ್ರವೇಶ ಹಾಗೂ ವೇಷಗಾರಿಕೆ ಸೊಗಸಾಗಿತ್ತು. ಮಹಾಶೇಷ ಹಾಗೂ ಬಭ್ರುವಾಹನನ ವಾದ-ಸಂವಾದದ ನಂತರ, ಕೃಷ್ಣನ ಪ್ರವೇಶ, ಅರ್ಜುನ ಬದುಕುವುದರೊಂದಿಗೆ ಪ್ರಸಂಗ ಮುಗಿಯುತ್ತದೆ. ಸುಮಾರು ನೂರು ನಿಮಿಷಗಳ ಈ ಪ್ರದರ್ಶನ ಎಲ್ಲೂ ಸೋಲಲಿಲ್ಲ. ತುಂಬಿದ ಸಭಾಭವನ ತದೇಕಚಿತ್ತವಾಗಿ ಬ್ಯಾಲೆಯನ್ನು ವೀಕ್ಷಿಸಿತು. ಈ ಬಗೆಯ ಯಶಸ್ಸಿಗೆ ನುರಿತ ಹಿಮ್ಮೇಳದವರು ಹಾಗೂ ಕಲಾನಿಷ್ಟ ಕಲಾವಿದರೇ ಕಾರಣ. ಪ್ರಸಂಗದ ನಿರ್ವಹಣೆಯಲ್ಲಿ ಶ್ರೀನಿವಾಸ ಸಾಸ್ತಾನರೊಂದಿಗೆ ಸದಾನಂದ ಹೆಗಡೆ, ಸುರೇಶ ತಂತ್ರಾಡಿ, ಗೌತಮ್‌ ಸಾಸ್ತಾನ, ರಾಜೇಶ ಆಚಾರ್ಯರು ಸಹಕರಿಸಿದ್ದರು. ಶ್ರೀ ರಾಮಾಶ್ರಮ ಸೇವಾ ಸಮಿತಿ ಸಹಕಾರದಿಂದ ಈ ಕಾರ್ಯಕ್ರಮ ನಡೆಯಿತು.

* ಡಾ. ಆನಂದರಾಮ ಉಪಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next