ಬೆಂಗಳೂರು: ರಾಜ್ಯ ಸರಕಾರ ತನ್ನ ಬಜೆಟ್ನಲ್ಲಿ ಹಂಚಿಕೆ ಮಾಡಿದ್ದ 3.33 ಲಕ್ಷ ಕೋಟಿ ರೂ. ಪೈಕಿ ಇದುವರೆಗೆ 1.79 ಲಕ್ಷ ಕೋಟಿ ರೂ. ಮಾತ್ರ ಖರ್ಚು ಮಾಡಿದ್ದು, ಇನ್ನೆರಡು ತಿಂಗಳಲ್ಲಿ ಶೇ. 45ರಷ್ಟು ಪ್ರಗತಿ ಸಾಧಿಸಲು ಸಾಧ್ಯವೇ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನಿಸಿದರು.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, 2024-25ನೇ ಆರ್ಥಿಕ ವರ್ಷ ಪೂರ್ಣಗೊಳ್ಳಲು ಕೇವಲ 2 ತಿಂಗಳು ಬಾಕಿ ಇದೆ. ಇದುವರೆಗೆ ಶೇ. 55.69ರಷ್ಟು ಪ್ರಗತಿ ಸಾಧಿಸಿರುವ ಸರಕಾರ, 2 ತಿಂಗಳಲ್ಲಿ ಉಳಿದ ಹಣವನ್ನು ಖರ್ಚು ಮಾಡುತ್ತದೆಯೇ? ಹೀಗಾದರೆ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ ಎಂದರು.
ಪರಿಶಿಷ್ಟ ಜಾತಿಯ ಉಪಯೋಜನೆಗಳಡಿ 28,527 ಕೋಟಿ ರೂ. ಇಟ್ಟು ಖರ್ಚು ಮಾಡಿರುವುದು ಮಾತ್ರ 13,923 ಕೋಟಿ ರೂ. ಟಿಎಸ್ಪಿ ಯೋಜನೆಗಳಡಿ 11,515 ಕೋಟಿ ರೂ. ಇಟ್ಟು, 4,927 ಕೋಟಿ ರೂ. ಖರ್ಚು ಮಾಡಿದೆ. ವಿಶೇಷ ಅಭಿವೃದ್ಧಿ ಯೋಜನೆಗಳಡಿ ಹಂಚಿಕೆ ಮಾಡಿದ್ದ 3,077 ಕೋಟಿ ರೂ.ನಲ್ಲಿ 1,076 ಕೊಟಿ ರೂ. ಖರ್ಚಾಗಿದೆ ಎಂದರು.
“ಕಮಿಷನ್ ದಂಧೆಗಾಗಿ ರಾಜ್ಯವನ್ನೇ ಕತ್ತಲೆಗೆ ದೂಡಿದ ಸರಕಾರ’
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಪಕ್ಕಾ ಶೇ. 60 ಪರ್ಸೆಂಟ್ ಕಮಿಷನ್ ಸರಕಾರ. ಕಾಂಗ್ರೆಸ್ನ ಆಡಳಿತದಿಂದಾಗಿ ರಾಜ್ಯದ ದಿವಾಳಿಯ ಕಡೆಗೆ ಸಾಗುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಮಾಚಲ ಪ್ರದೇಶ ಹಾಗೂ ಕೇರಳದಂತೆಯೇ ಕರ್ನಾಟಕ ಕೂಡ ದಿವಾಳಿಯ ಕಡೆಗೆ ಹೆಜ್ಜೆ ಇಡುತ್ತಿದೆ. ಕಾಂಗ್ರೆಸ್ನದ್ದು ಪಕ್ಕಾ 60 ಪರ್ಸೆಂಟ್ ಕಮಿಷನ್ನ ಸರಕಾರ. ಗುತ್ತಿಗೆದಾರರಿಗೆ ಪಾವತಿಸಲು ಸರಕಾರದ ಬಳಿ ಹಣವಿಲ್ಲ. ಬಿಜೆಪಿ ಸರಕಾರಕ್ಕೆ 40 ಪರ್ಸೆಂಟ್ ಎಂದು ಆರೋಪಿಸಿದ ಗುತ್ತಿಗೆದಾರರು, ಈಗ ಕಾಂಗ್ರೆಸ್ ಸರಕಾರ ಶೇ. 60ರ ಕಮಿಷನ್ ಸರಕಾರ ಎಂದು ಹೇಳಿ ದಯಾಮರಣಕ್ಕೆ ಅರ್ಜಿ ಸಲ್ಲಿಸಲು ನೋಡುತ್ತಿದ್ದಾರೆ ಎಂದು ಆರೋಪಿಸಿದರು.