ಮೈಸೂರು: ದೇಶದ ಬಡ ಜನರ ಕನಸುಗಳನ್ನು ನನಸು ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 75ನೇ ಜನ್ಮ ದಿನೋತ್ಸವದ ಅಂಗವಾಗಿ ನಂಜನಗೂಡು ರಸ್ತೆಯ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಆಯೋಜಿಸಿರುವ ವಜೊÅàತ್ಸವ ಸಮಾರಂಭದಲ್ಲಿ ಶುಕ್ರವಾರ ಪಾಲ್ಗೊಂಡು ಶ್ರೀಗಳ ಆರ್ಶೀವಾದ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಭ್ರಷ್ಟಾಚಾರ ರಹಿತವಾದ ಅಭಿವೃದ್ಧಿ ಪರವಾದ ಆಡಳಿತ ನೀಡುವಲ್ಲಿ ನರೇಂದ್ರ ಮೋದಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಮೋದಿ ಆಡಳಿತ ಭಾರತೀಯರಿಗೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಮೆಚ್ಚುಗೆಯಾಗಿದೆ. ಮುಂಬರುವ ದಿನಗಳಲ್ಲೂ ನರೇಂದ್ರ ಮೋದಿ ಅವರ ಅಭಿಪರ್ವ ಮುಂದುವರಿಯಲಿದೆ. ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ಹಿಂತಿರುಗಿ ನೋಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಯಶಸ್ವಿ 3 ವರ್ಷ ಪೂರೈಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಶುಭಾಶಯ ತಿಳಿಸಿದ ಅವರು, ಮೋದಿ ಸರ್ಕಾರ ಕಳೆದ 3 ವರ್ಷಗಳಲ್ಲಿ ದೇಶದ ಬಡ ಜನರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ. ಸೂರಿಲ್ಲದ ಬಡವರಿಗೆ ಸ್ವಂತ ಸೂರು ಕಟ್ಟಿಕೊಡುವ ಕಾರ್ಯಕ್ರಮ ಸೇರಿದಂತೆ ಜನಸಾಮಾನ್ಯರ ಕಲ್ಯಾಣಕ್ಕಾಗಿಯೇ ತಮ್ಮ ಸರ್ಕಾರ ಮೀಸಲು ಎಂಬಂತೆ ಮೋದಿ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶೇಷ ವಿಮಾನದಲ್ಲಿ ಮಹಾ ಸಿಎಂ ಆಗಮನ
ಗುರುವಾರ ಮಹಾರಾಷ್ಟ್ರದ ಲಾತೂರ್‌ನಲ್ಲಿ ಕಾರ್ಯಕ್ರಮ ಮುಗಿಸಿ ಹೊರಡುವಾಗ ಸಂಭವಿಸಿದ ಹೆಲಿಕಾಫ್ಟರ್ ಅವಘಡದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಶುಕ್ರವಾರ ಮೈಸೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸಿದರು.
ಬೆಳಗ್ಗೆ 9.30ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಫಡ್ನವೀಸ್ ಅವರನ್ನು ಸಂಸದ ಪ್ರತಾಪ್ ಸಿಂಹ್, ಮಾಜಿ ಸಚಿವ ಎಸ್.ಎ.ರಾಮದಾಸ್, ನಗರ ಬಿಜೆಪಿ ಅಧ್ಯಕ್ಷ ಡಾ.ಬಿಎಚ್.ಮಂಜುನಾಥ್, ಮುಖಂಡರಾದ ಸತೀಶ್, ಎಲ್.ನಾಗೇಂದ್ರ, ರಾಜೇಂದ್ರ ಇತರರು ಬರಮಾಡಿಕೊಂಡರು.