ಕೆಲವರ ಜೀವನೋತ್ಸಾಹವನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಅಂತಹದ್ದೇ ಒಂದು ವ್ಯಕ್ತಿತ್ವ ಗೌರಜ್ಜಿಯದು. ಆಕೆಗೂ ಹೊಸದನ್ನು ಅಂದರೆ ಆಧುನಿಕ ಜಗತ್ತಿನ ಜೀವನಾಡಿಗಳು ಎಂದೇ ಕರೆಯಬಹುದಾದ ಮೊಬೈಲಿನ ಮೇಲೆ ಅದೇನೋ ವಿಪರೀತ ಸೆಳೆತ. ತನ್ನ ಮಗನ ಬಳಿ ಪರೋಕ್ಷವಾಗಿ ಮೊಬೈಲಿನ ಬಗ್ಗೆ ತನಗಿರುವ ಪ್ರೀತಿಯನ್ನು ಹೇಳಿಕೊಂಡು, ಒಂದು ದೊಡ್ಡ, ಬೆರಳಲ್ಲಿ ಉಜ್ಜುವ ಫೋನನ್ನು ತರಿಸಿಕೊಳ್ಳುವಲ್ಲಿ ಸಫಲಳಾದಳು. ಅಲ್ಲಿಂದ ಶುರುವಾದದ್ದೆ ಫೋನಾಯಣ.
ತನ್ನ ಪ್ರೀತಿಯ ಮೊಮ್ಮಗಳ ಹಿಂದೆ ಸುತ್ತಿ, ಅವಳು ಕೂತಿದ್ದಾಗ, ನಿಂತಿದ್ದಾಗ ಆಕೆಯ ಬೆಂಬಿಡದೆ ಮೊಬೈಲ್‌ಅನ್ನು ಬಳಸುವುದು ಹೇಗೆ ಎಂದು ತಿಳಿದುಕೊಂಡಳು. ಆದರೆ ನಮ್ಮ ಗೌರಜ್ಜಿಗೆ ಮರೆವು. ಇಂದು ಕಲಿತದ್ದು ನಾಳೆ ಜ್ಞಾಪಕದಲ್ಲಿ ಇರುವುದಿಲ್ಲ. ಮೊಮ್ಮಗಳ ಬಳಿ ಪ್ರತಿದಿನವೂ ಹಿಂದೆ ಕಲಿತಿದ್ದನ್ನೇ ಮತ್ತೆ ಮತ್ತೆ ಪ್ರಶ್ನಿಸುತ್ತಿದ್ದಳು.
ಆ ಮೊಮ್ಮಗಳು ಬರೆಯುತ್ತಿರುವಾಗ, ಓದುತ್ತಿರುವಾಗ, ತಿಂಡಿ ತಿನ್ನುತ್ತಿರುವಾಗ ಸಂದರ್ಭ ಯಾವುದೇ ಇರಲಿ ಗೌರಜ್ಜಿ ಹೋಗಿ ಆ ಮನೆಯ ಮದ್ಯ ಅಂಕಣದ ದಿವಾನದಲ್ಲಿ ಮೊಮ್ಮಗಳ ಎದುರಿಗೆ ಹೋಗಿ ಕುಳಿತುಬಿಡುತ್ತಿದ್ದಳು. “ಮಗ ಹೂವಿನ ಫೋಟೋ ತೆಗೆಯುವುದು ಹೇಗೆ? ನಿಮ್ಮ ಅತ್ತೆಗೆ ಕಳಿಸಬೇಕು’ ಎಂದು ಹೇಳುತ್ತಾ ಒಂದು ಮುಂಜಾನೆ ಮೊಮ್ಮಗಳ ಬಳಿ ದುಂಬಾಲು ಬಿದ್ದಳು. “ಇದನ್ನು ನಿನಗೆ ಎಷ್ಟು ಸಲ ಹೇಳಿಕೊಟ್ಟಿದ್ದೇನೆ’ ಎಂದು ಮೊಮ್ಮಗಳು ರೇಗಿದರೂ ಮೊಮ್ಮಗಳ ಕಿರಿಕಿರಿ ಬೈಗುಳದ ನಡುವೆಯೇ ತಾನೇ ತನ್ನ ಕೈಯಾರೆ ನೆಟ್ಟು ಬೆಳೆಸಿದ ಗುಲಾಬಿ ಗಿಡದ ಹೂವುಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ತನ್ನ ಮಕ್ಕಳಿಗೆ ವಾಟ್ಸಾéಪ್‌ನಲ್ಲಿ ಶೇರ್ ಮಾಡಿ ಸಂತಸಪಟ್ಟಿವಳು ಗೌರಜ್ಜಿ.
ತನ್ನ ಅಜ್ಜಿ ಎಲ್ಲರ ಮನೆ ಅಜ್ಜಿಯರಿಗಿಂತ ಬುದ್ಧಿವಂತೆ. ಅಜ್ಜಿಗೆ ಮೊಬೈಲ್ ಗುರು ನಾನೇ ಅಲ್ಲವೇ ಎಂದು ಒಳಗೊಳಗೆ ತನ್ನ ಬೆನ್ನು ತಟ್ಟಿಕೊಂಡಳು ಮೊಮ್ಮಗಳು. ಆದರೆ ಅಜ್ಜಿಗೆ ಎಷ್ಟು ಕಲಿತರೂ ತೃಪ್ತಿ ಇಲ್ಲ. ಯೂಟ್ಯೂಬಲ್ಲಿ ಟ್ರೆಂಡಿಂಗ್ ಶಾರ್ಟ್ಸ್ ನೋಡುವುದರಲ್ಲಿ ಅಜ್ಜಿ ತುಂಬಾ ಬ್ಯುಸಿ. ಅಜ್ಜಿ ಏನನ್ನು ನೋಡುತ್ತಿದ್ದಾಳೆ ಎಂದು ಮೊಮ್ಮಗಳು ಆಚೆಗೆ ಕತ್ತನ್ನು ಹೊರಳಿಸಿ ನೋಡಿದಳು. ಅಲ್ಲಿ ಹಿಂದಿ ಹಾಡೊಂದಕ್ಕೆ ಹೆಜ್ಜೆ ಹಾಕುತ್ತಿರುವ ಜೋಡಿಗಳು.
ಆಹಾ ಅಜ್ಜಿಗೆ ಒಳ್ಳೆ ಅಭಿರುಚಿ ಇದೆ. ಅಜ್ಜಿಗೆ ಓದುವ ಕಾಲಕ್ಕೆ ಮನೆಯವರ ಬೆಂಬಲ ದೊರಕಿದ್ದರೆ ಈಗ ಎಲ್ಲಿಯೋ ಇರುತ್ತಿದ್ದಳು ಎಂದು ಮೊಮ್ಮಗಳು ಮನಸ್ಸಿನಲ್ಲಿಯೇ ಅಂದುಕೊಂಡಳು.
ದಿನಗಳು ಹೀಗೆಯೇ ಉರುಳುತ್ತಿದ್ದವು. ಇತ್ತೀಚೆಗೆ, “ನಾನು ಇದರಲ್ಲಿ ಹಳೆಯ ಸಿನಿಮಾಗಳನ್ನು ನೋಡುವುದು ಹೇಗೆ’ ಎಂಬ ಹೊಸ ಪ್ರಶ್ನೆಯೊಂದಿಗೆ ಅಜ್ಜಿ ಮೊಮ್ಮಗಳ ಎದುರಿಗೆ ಬಂದು ಕುಳಿತಳು. ವಿಷಯ ಏನೇ ಇರಲಿ ಗೌರಜ್ಜಿಯ ತುಂಬು ವ್ಯಕ್ತಿತ್ವಕ್ಕೆ ತಲೆಬಾಗಲೇ ಬೇಕು ಅಲ್ಲವೇ?
ವಿಶಾಖ ಹೆಗಡೆ
ಸಂತ ಅಲೋಶಿಯಸ್ ಕಾಲೇಜು
ಮಂಗಳೂರು