Advertisement
ಮಂಗಳವಾರ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಸರ್ಕಾರಕ್ಕೆ ತಮ್ಮ ಕ್ಷೇತ್ರಗಳ ಬಗ್ಗೆ ಪ್ರಶ್ನೆ ಕೇಳಿದ ಬಹುತೇಕ ಶಾಸಕರು ಹಾಜರಾಗಿರಲಿಲ್ಲ. ಸಭಾಧ್ಯಕ್ಷ ಕೋಳಿವಾಡ ಎರಡು ಸುತ್ತು ಕರೆದರೂ ಶಾಸಕರು ಬಂದಿರಲಿಲ್ಲ. ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣ, ಮಹಾಲಕ್ಷ್ಮಿ ಲೇಔಟ್‌ನ ಕೆ.ಗೋಪಾಲಯ್ಯ, ಅರಸೀಕೆರೆಯ ಶಿವಲಿಂಗೇಗೌಡ, ಚಿಂತಾಮಣಿಯ ಕೃಷ್ಣಾರೆಡ್ಡಿ, ನವಲಗುಂದದ ಎನ್.ಎಚ್.ಕೋನರೆಡ್ಡಿ, ಜಗಳೂರಿನ ರಾಜೇಶ್ ಎಚ್.ಪಿ., ಬಾಗೇಪಲ್ಲಿಯ ಸುಬ್ಟಾರೆಡ್ಡಿ, ಶ್ರವಣಬೆಳಗೊಳ ಶಾಸಕ ಸಿ.ಎನ್ ಬಾಲಕೃಷ್ಣ ತಾವು ಕೇಳಿದ ಪ್ರಶ್ನೆ ಬಗ್ಗೆ ಸರ್ಕಾರದಿಂದ ಉತ್ತರ ಪಡೆದು ಚರ್ಚಿಸಲು ಹಾಜರಿರಲಿಲ್ಲ. ಪ್ರಶ್ನೆ ಕೇಳಿ ಸದನಕ್ಕೆ ಗೈರು ಹಾಜರಾದವರಲ್ಲಿ ಜೆಡಿಎಸ್ ಶಾಸಕರೇ ಹೆಚ್ಚಾಗಿದ್ದರು.
ಶಾಸಕರ ಪ್ರಶ್ನೆಗೆ ಉತ್ತರಿಸಲೂ ಕೆಲವು ಸಚಿವರು ಸದನದಲ್ಲಿ ಹಾಜರಿರಲಿಲ್ಲ. ಸಕಲೇಶಪುರ ಶಾಸಕ ಎಚ್.ಕೆ ಕುಮಾರಸ್ವಾಮಿ ಪ್ರಶ್ನೆಗೆ ಉತ್ತರಿಸಲು ಗೃಹ ಸಚಿವ ರಾಮಲಿಂಗಾರೆಡ್ಡಿ, ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್ ಕೇಳಿದ ಪ್ರಶ್ನೆಗೆ ಉತ್ತರ ಕೊಡಲು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಜರಿರಲಿಲ್ಲ. ಈ ಎರಡೂ ಪ್ರಶ್ನೆಗಳಿಗೆ ನಂತರ ಉತ್ತರ ಕೊಡಿಸುವುದಾಗಿ ಸಭಾಧ್ಯಕ್ಷರು ಭರವಸೆ ನೀಡಿ ಪ್ರಶ್ನೆಗಳನ್ನು ತಡೆಹಿಡಿದರು.