ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಿ ನಡೆಯುತ್ತಿರುವ ದೊಂಬರಾಟವು ಅಸಹ್ಯ ಮೂಡಿಸುವಂತಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನ ಕುವೆಂಪು ಸಭಾಂಗಣದಲ್ಲಿ ಸ್ವಾಭಿಮಾನಿ ಕರ್ನಾಟಕ ವೇದಿಕೆ ಶನಿವಾರ ಹಮ್ಮಿಕೊಂಡಿದ್ದ “ಪ್ರಸ್ತುತ ರಾಕೀಯ ಬಿಕ್ಕಟ್ಟು ಮತ್ತು ಸಾರ್ವಜನಿಕ ಜವಾಬ್ದಾರಿ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಈ ಬಾರಿಯ ವಿಧಾನಸಭೆ ಚುನಾವಣೆಯಿಂದ ಉಂಟಾದ ರಾಜಕೀಯ ಬಿಕ್ಕಟ್ಟು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ದುರಂತವಾಗಿದೆ. ಅಧಿಕಾರ ಹಿಡಿಯಲು ಪಕ್ಷಗಳು ಮಾಡಿದ ಅನೈತಿಕ ರಾಜಕೀಯ ಜನರಲ್ಲಿ ರಾಜಕೀಯ ಎಂದರೆ ಹೊಲಸು ಎಂಬ ಭಾವನೆ ಮೂಡಿಸಿವೆ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿರುವುದು ನೈತಿಕವಾಗಿ ಸರಿಯಲ್ಲ ಎಂದು ಜನರಿಗೆ ಅನಿಸುತ್ತಿದ್ದರೂ ಸಂವಿಧಾನ ಬದ್ಧವಾಗಿ ಸರ್ಕಾರ ರಚನೆ ಸರಿಯಾಗೇ ಇದೆ. ಅಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಅನೈತಿಕ ಬೆಳವಣಿಗೆಗಳನ್ನು ಒಪ್ಪಿ ನಡೆಯಬೇಕಾದ್ದು ಅನಿವಾರ್ಯ ಎಂದರು.
ಸಂಪೂರ್ಣ ಬಹುಮತ ಪಡೆಯದೇ ಎರಡು ಪಕ್ಷಗಳು ಅಧಿಕಾರಕ್ಕೆ ಬಂದಿದೆ. ಈ ಎರಡೂ ಪಕ್ಷಗಳ ಯಾವೊಬ್ಬ ಶಾಸಕರೂ ತಮಗೆ ಸಚಿವ ಸ್ಥಾನ ಬೇಕೆಂದು ಒತ್ತಾಯಿಸಲು ಅರ್ಹರಲ್ಲ. ಆದರೆ, ಇಂದು ಅನೇಕ ಶಾಸಕರು ಸಚಿವ ಸ್ಥಾನ ತಮ್ಮ ಸ್ವಂತ ಆಸ್ತಿ ಎಂಬಂತೆ ಪಟ್ಟು ಹಿಡಿದು ಕುಳಿತ್ತಿರುವುದು ನಾಚಿಕೆಗೇಡಿನ ವಿಚಾರ. ಮುಂದಿನ ದಿನಗಳಲ್ಲೂ ಇದೇ ಪರಿಸ್ಥಿತಿ ಮುಂದುವರಿದರೆ ಸಮಿಶ್ರ ಸರ್ಕಾರಕ್ಕೆ ಉಳಿವಿಲ್ಲ ಎಂದು ಅಭಿಪ್ರಾಯಪಟ್ಟರು.
ಚಿಂತಕ ಪ್ರೊ.ಜಿ.ಕೆ.ಗೋವಿಂದರಾವ್ ಮಾತನಾಡಿ, ರಾಜ್ಯ ಸಮಿಶ್ರ ಸರ್ಕಾರವು ಜನ ನಮಗೆ ಸಂಪೂರ್ಣ ಬಹುಮತ ನೀಡಿಲ್ಲ ಎಂಬ ಅಂಶವನ್ನು ಅರಿತು ವಿನಯದಿಂದ ಆಡಳಿತ ನಡೆಸಬೇಕು. ಪ್ರಸ್ತುತ ರಾಜಕಾರಣಿಗಳು ಖಾದಿ, ಜೋತಿಷ್ಯ ಹಾಗೂ ವಾಸ್ತುವನ್ನು ದಿಕ್ಕರಿಸದ ಹೊರತು ಪ್ರಜಾಪ್ರಭುತ್ವದಲ್ಲಿ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ ಎಂದರು.
ಹಿರಿಯ ರಾಜಕಾರಣಿ ಎ.ಕೆ.ಸುಬ್ಬಯ್ಯ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಕೈಗಾರಿಕೆ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಸ್ವಾಭಿಮಾನಿ ಕರ್ನಾಟಕ ವೇದಿಕೆ ಅಧ್ಯಕ್ಷ ದ್ವಾರಕನಕುಂಟೆ ಪಾತಣ್ಣ ಉಪಸ್ಥಿತರಿದ್ದರು.