Advertisement

ಗರ್ಭಪಾತದ ಕರುಣಾಜನಕ ಕತೆ: ಕಠಿನ ಕಾನೂನು ಅಗತ್ಯ

09:20 AM Dec 15, 2017 | Team Udayavani |

ಮಹಿಳೆಯರಿಗೆ ಸಂಬಂಧಿಸಿದ ಸ್ವಾಸ್ಥ್ಯ ಕಾಳಜಿಯಲ್ಲಿ ದೇಶ ಇನ್ನೂ ಬಹಳಷ್ಟು ಹಿಂದುಳಿದಿದೆ ಎಂಬ ಸತ್ಯಕ್ಕೆ ಲ್ಯಾನ್ಸೆಟ್‌ ವರದಿ ಕೈಗನ್ನಡಿ ಹಿಡಿದಿದೆ. 

Advertisement

ದೇಶದಲ್ಲಿ ಪ್ರತಿ ವರ್ಷ ಸುಮಾರು ಒಂದೂವರೆ ಕೋಟಿ ಗರ್ಭಪಾತಗಳು ಸಂಭವಿಸುತ್ತವೆ ಎಂಬ ಬೆಚ್ಚಿಬೀಳಿಸುವ ಅಂಶ ಅಮೆರಿಕ ಮೂಲದ “ದ ಲ್ಯಾನ್ಸೆಟ್‌’ ಎಂಬ ವೈದ್ಯಕೀಯ ನಿಯತಕಾಲಿಕ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ. 2015ನೇ ಸಾಲಿಗೆ ಸಂಬಂಧಿಸಿದಂತೆ ನಡೆಸಲಾದ ಸಮೀಕ್ಷೆಯಿದು. ಪ್ರತಿ ಮೂವರು ಗರ್ಭಿಣಿಯರ ಪೈಕಿ ಒಬ್ಬರು ಗರ್ಭಪಾತಕ್ಕೆ ಒಳಗಾಗುತ್ತಾರೆ ಎಂದು ಈ ಸಮೀಕ್ಷೆ ತಿಳಿಸುತ್ತದೆ. ಗರ್ಭಪಾತದಲ್ಲಿ ಬಾಂಗ್ಲಾ, ಪಾಕಿಸ್ಥಾನ, ನೇಪಾಳದಂತಹ ದೇಶಗಳ ಸಾಲಿನಲ್ಲೇ ನಾವಿದ್ದೇವೆ ಎನ್ನುವುದು ತಲೆತಗ್ಗಿಸಬೇಕಾದ ವಿಷಯ. ವೈದ್ಯಕೀಯ ಕ್ಷೇತ್ರದಲ್ಲಿ ಅದರಲ್ಲೂ ಮಹಿಳೆಯರಿಗೆ ಸಂಬಂಧಿಸಿದ ಸ್ವಾಸ್ಥ್ಯ ಕಾಳಜಿಯಲ್ಲಿ ದೇಶ ಇನ್ನೂ ಬಹಳಷ್ಟು ಹಿಂದುಳಿದಿದೆ ಎಂಬ ಸತ್ಯಕ್ಕೆ ಲ್ಯಾನ್ಸೆಟ್‌ ವರದಿ ಕೈಗನ್ನಡಿ ಹಿಡಿದಿದೆ. 

2015ರಲ್ಲಿ 1.56 ಕೋಟಿ ಗರ್ಭಪಾತಗಳು ನಡೆದಿದ್ದು, ಈ ಪೈಕಿ ಶೇ. 48 ಉದ್ದೇಶಪೂರ್ವಕವಲ್ಲದ ಗರ್ಭಪಾತಗಳು. ಸುಮಾರು 80 ಲಕ್ಷ ಮಹಿಳೆಯರು ಗರ್ಭಪಾತಕ್ಕೆ ಅಸುರಕ್ಷಿತ ವಿಧಾನವನ್ನು ಅನುಸರಿಸಿದ್ದಾರೆ. ಭಾರತದಲ್ಲಿ ಹೆರಿಗೆ ಸಂದರ್ಭದಲ್ಲಿ ಸಂಭವಿಸುವ ಸಾವಿಗೆ ಮೂರನೇ ಅತಿ ದೊಡ್ಡ ಕಾರಣ ಸುರಕ್ಷಿತವಲ್ಲದ ಗರ್ಭಪಾತ. ನುರಿತ ವೈದ್ಯರು, ಸಮರ್ಪಕವಾದ ವೈದ್ಯಕೀಯ ತಂತ್ರಜ್ಞಾನ ಮತ್ತು ಔಷಧಿಗಳನ್ನು ಉಪಯೋಗಿಸಿ ಆರೋಗ್ಯಕರ ಪರಿಸ್ಥಿತಿಯಲ್ಲಿ ಗರ್ಭಪಾತ ನಡೆಸಿದರೆ ಅದು ಅತ್ಯಂತ ಸುರಕ್ಷಿತ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ದುರದೃಷ್ಟವಶಾತ್‌ ಈ ಯಾವ ಮಾನದಂಡವೂ ಭಾರತದಲ್ಲಿ ಇಲ್ಲ. ಅಭಿವೃದ್ಧಿ ಹೊಂದಿದ ಶೇ. 80ರಷ್ಟು ದೇಶಗಳಲ್ಲಿ ಗರ್ಭಪಾತ ಸಂಪೂರ್ಣ ಮಹಿಳೆಯ ನಿರ್ಧಾರ. ಇದು ಅವಳ ದೇಹದ ಮೇಲೆ ಅವಳಿಗಿರುವ ಹಕ್ಕು ಎಂದು ವ್ಯಾಖ್ಯಾನಿಸುತ್ತವೆ. ಆದರೆ ಭಾರತದಲ್ಲಿ ಗರ್ಭಪಾತ ಸಾಮಾಜಿಕ ಮತ್ತು ಕೌಟುಂಬಿಕ ಆಯಾಮಗಳನ್ನೂ ಹೊಂದಿದೆ. ಗರ್ಭಪಾತ ಮಾಡಿಸಿ ಕೊಳ್ಳುವುದು ಪಾಪ ಎಂಬ ಎಂಬ ನಂಬಿಕೆ ನಮ್ಮಲ್ಲಿದೆ. ಇದರ ಹೊರತಾಗಿಯೂ ವರ್ಷದಲ್ಲಿ ಒಂದೂವರೆ ಕೋಟಿ ಗರ್ಭಪಾತಗಳಾಗುತ್ತವೆ ಎನ್ನುವ ವರದಿ ಅಶ್ಚರ್ಯವುಂಟು ಮಾಡುತ್ತದೆ. ಗರ್ಭಪಾತ ಮಾಡಿಸಿಕೊಳ್ಳಲು ಬರುತ್ತಿರುವ ಅವಿವಾಹಿತ ಯುವತಿಯರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ವೈದ್ಯರು ನೀಡುವ ಅಂಕಿಅಂಶ ಕಳವಳ ಹುಟ್ಟಿಸುತ್ತದೆ. 

1972ರಲ್ಲೇ ಗರ್ಭಪಾತ ಕಾಯಿದೆಯನ್ನು ಜಾರಿಗೆ ತರಲಾಗಿದೆ. 20 ವಾರದೊಳಗಿನ ಅನಪೇಕ್ಷಿತ ಗರ್ಭವನ್ನು ತೆಗೆಯಲು ಕಾನೂನಿನ ಸಮ್ಮತಿಯಿದೆ. ಆದರೆ ಬಹುತೇಕ ಮಹಿಳೆಯರಿಗೆ ಈ ಹಕ್ಕಿನ ಕುರಿತು ಅರಿವಿಲ್ಲ. ಗರ್ಭದಲ್ಲಿರುವ ಮಗುವಿನಲ್ಲಿ ಗಂಭೀರ ಸ್ವರೂಪದ ನ್ಯೂನತೆಗಳಿದ್ದರೆ ಮತ್ತು ಗರ್ಭದಿಂದಾಗಿ ತಾಯಿಯ ಪ್ರಾಣಕ್ಕೆ ಅಪಾಯವಿದ್ದರೆ ಗರ್ಭಪಾತ ಮಾಡಿಸಬಹುದು ಎನ್ನುತ್ತದೆ ಕಾಯಿದೆ. ಆದರೆ 20 ವಾರದೊಳಗೆ ನ್ಯೂನತೆ ಪತ್ತೆಯಾಗದಿರುವ ಸಾಧ್ಯತೆಯೂ ಇರುವುದರಿಂದ ಈ ಅವಧಿಯನ್ನು 24 ವಾರಕ್ಕೇರಿಸಲು ಕಾಯಿದೆಗೆ ತಿದ್ದುಪಡಿ ಮಾಡುವ ಪ್ರಸ್ತಾವ ಮಂಡಿಸಲಾಗಿದೆ. ಅತ್ಯಾಚಾರ, ಸಮ್ಮತಿಯಿಲ್ಲದ ಲೈಂಗಿಕ ಸಂಪರ್ಕದಂತಹ ಪ್ರಕರಣಗಳಲ್ಲಿ ಗರ್ಭಪಾತ ಮಾಡಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಆದರೆ ದೇಶದಲ್ಲಿ ಈಗಲೂ ಸುರಕ್ಷಿತ ಗರ್ಭಪಾತ ಕೇಂದ್ರಗಳಿಲ್ಲ. ಸರಕಾರಿ ಆಸ್ಪತ್ರೆಗಳಲ್ಲಿ ಇದಕ್ಕೆ ಅಗತ್ಯವಿರುವ ಸೌಲಭ್ಯಗಳಿಲ್ಲದಿರುವುದರಿಂದ ಹೆಚ್ಚಿನವರು ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಹಳ್ಳಿಗಳಲ್ಲಿ ಗ್ರಾಮೀಣ ವಿಧಾನದಿಂದಲೇ ಗರ್ಭಪಾತ ಮಾಡುವ ಪ್ರವೃತ್ತಿ ಇನ್ನೂ ಇದೆ. ಇದು ಅತ್ಯಂತ ಅಸುರಕ್ಷಿತವಾಗಿದ್ದರೂ ಕೈಗೆಟಕುವ ದರದಲ್ಲಿ ಸಿಗುವುದರಿಂದ ಮತ್ತು ಮಾನಕ್ಕೆ ಅಂಜಿ ಎಷ್ಟೋ ಮಂದಿ ಇದಕ್ಕೆ ಮೊರೆ ಹೋಗುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಸಾವು ಸಂಭವಿಸಿದರೂ ಅದನ್ನು ಮುಚ್ಚಿ ಹಾಕಲಾಗುತ್ತದೆ. 

ಗರ್ಭಪಾತ ತಪ್ಪು ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಗರ್ಭಪಾತ ಮಹಾಪಾಪ ಎಂಬ ನಂಬಿಕೆಯನ್ನು ಹಿಂದಿನವರು ಬೆಳೆಸಿದ್ದಾರೆ.  ಆದರೆ ಕೆಲವೊಮ್ಮೆ ಅನಿವಾರ್ಯ ಪರಿಸ್ಥಿತಿಯಲ್ಲಿ ಮಾಡಿಸಿಕೊಳ್ಳಲೇ ಬೇಕಾಗುತ್ತದೆ. ಆದರೆ ಪದೇ ಪದೇ ಗರ್ಭಪಾತ ಮಾಡಿಸಿಕೊಳ್ಳುವುದರಿಂದ ತಾಯಿಯ ಆರೋಗ್ಯದ ಮೇಲೆ ದುಷ್ಪರಿಣಾಮವಾದ ಸಾವಿರಾರು ಉದಾಹರಣೆಗಳಿವೆ. ಇದನ್ನು ತಪ್ಪಿಸಲು ದಂಪತಿಗಳು ಸುರಕ್ಷಿತ ಲೈಂಗಿಕ ಕ್ರಿಯೆ ಅನುಸರಿಸುವುದು ಒಳ್ಳೆಯದು. ಪ್ರಸ್ತುತ ಇದಕ್ಕೆ ಹಲವು ಮಾರ್ಗೋಪಾಯಗಳಿರುವುದರಿಂದ ಹಿಂದೇಟು ಹಾಕುವ ಅಗತ್ಯವಿಲ್ಲ. ಸರಕಾರವೂ ಗರ್ಭಪಾತ ಹಾಗೂ ಆ ಮೂಲಕ ಸಂಭವಿಸುವ ಸಾವುಗಳನ್ನು ತಡೆಯಲು ಕುಟುಂಬ ಯೋಜನೆ ಕಾರ್ಯಕ್ರಮಗಳಿಗೆ ಇನ್ನಷ್ಟು ಉತ್ತೇಜನ ನೀಡುವ ಅಗತ್ಯವಿದೆ. ಇದೇ ವೇಳೆ ಗರ್ಭಪಾತ ಸಂಬಂಧಿ ಕಾಯಿದೆಯನ್ನು ಇನ್ನಷ್ಟು ಪರಿಷ್ಕರಿಸಬೇಕು ಹಾಗೂ ಅನಧಿಕೃತವಾಗಿ ಗರ್ಭಪಾತ ನಡೆಸುವ ಆಸ್ಪತ್ರೆಗಳು ಮತ್ತು ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next