Advertisement
ನಾವೆಲ್ಲ ಇಂದು ಸುತ್ತುವರಿದಿರುವುದು ಬ್ರ್ಯಾಂಡೆಡ್ ಉತ್ಪನ್ನಗಳಿಂದ. ಮಧ್ಯಮ ವರ್ಗದ ಕೊಳ್ಳುವ ಶಕ್ತಿ ಬಲಗೊಳ್ಳುತ್ತಿದ್ದಂತೆ ಈ ಬ್ರ್ಯಾಂಡ್‌ಗಳು ಸಿರಿವಂತರ ಅಂಗಳದಿಂದ ಹರಿದು ಬಂದವು. ಈಗಲಂತೂ ಸಾಮಾಜಿಕ ಮಾಧ್ಯಮಗಳ ಕಾಲ. ಪ್ರತೀ ವ್ಯಕ್ತಿಯೂ ಬ್ರ್ಯಾಂಡ್ ಆಗಿ ಪರಿವರ್ತನೆಗೊಳ್ಳುತ್ತಿರುವ ಹೊತ್ತು. ಇನ್‌ಫ್ಲುಯೆನ್ಸರ್ ಎನ್ನುವ ಪದ ಎಷ್ಟರ ಮಟ್ಟಿಗೆ ಜನಪ್ರಿಯ ಆಗಿದೆಯೆಂದರೆ, ಏನಪ್ಪ ಮಾಡ್ತಿದ್ದೀಯಾ (ಕೆಲಸ) ಎಂದು ಕೇಳಿದರೆ “ನಾನೊಬ್ಬ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಎನ್ನುವ’ ಹಾಗಿದೆ. ಹಾಗಾಗಿ ಅವನೂ ದೊಡ್ಡ ಬ್ರ್ಯಾಂಡ್.
Related Articles
Advertisement
ಅವರಿಗಿದ್ದ ಮಗಳ ಹೆಸರು ನಿರುಪಮಾ. ಪ್ರೀತಿಯಿಂದ ನಿರ್ಮಾ ಆಗಿದ್ದಳು. ಒಂದು ದಿನ ಆಕೆ ಕಾರು ಅಪಘಾತ ದಲ್ಲಿ ಮೃತಪಟ್ಟಾಗ ದುಃಖ ಒತ್ತರಿಸಿಬಂದಿತು ತಂದೆಗೆ. ಅವಳನ್ನು ಜೀವಂತವಾಗಿಡಲು ಹುಡುಕಿದ ಉಪಾಯವೇ ನಿರ್ಮಾ ವಾಷಿಂಗ್ ಪೌಡರ್. ಪೊಟ್ಟಣದ ಮೇಲಿನ ಚಿತ್ರ ಅವಳದ್ದೇ ಎಂಬ ಅಭಿಪ್ರಾಯವೂ ಇದೆ. ಬಹುಶಃ ನಿಜ. ಯಾಕೆಂದರೆ, ಕಂಪೆನಿ ಬೆಳೆಯಿತು, ಪಟೇಲರು ಬೆಳೆದರು. ಆದರೆ ಅದರ ಮೇಲಿನ ಚಿತ್ರ ಬದಲಾಗಲಿಲ್ಲ. ಮಗಳ ಚಿತ್ರವೇ ದೊಡ್ಡ ಬ್ರ್ಯಾಂಡ್ ನಂತಾಗಿದ್ದೇ ವಿಶೇಷ. ಹಾಗೆ ನೋಡಿದರೆ ಮಕ್ಕಳು ಬೆಳೆದು ಅಪ್ಪ-ಅಮ್ಮನ ಹೆಸರನ್ನು ಬೆಳಕಿಗೆ ತರುತ್ತಾರೆಂಬ ಮಾತಿದೆ. ಆದರೆ ಇಲ್ಲಿ ಅಪ್ಪನೇ ಮಗಳ ಹೆಸರನ್ನು ಅಮರಗೊಳಿಸಿದರು.
ಬಹುರಾಷ್ಟ್ರೀಯ ಕಂಪೆನಿಯ ಉತ್ಪನ್ನವಾದ ಸರ್ಫ್ ಆಗ ಮಿಂಚುತ್ತಿದ್ದಾಗ ಪಟೇಲರು ನಿರ್ಮಾವನ್ನು ಹೊರ ತಂದದ್ದು. ಸರ್ಫ್ ಕೆಜಿಗೆ 14 ರೂ. ನಂತೆ ಮಾರಾಟವಾಗು ತ್ತಿದ್ದಾಗ ಇತ್ತೀಚಿನ “ಡೈರೆಕ್ಟ್ ಮಾರ್ಕೆಟಿಂಗ್’ ಪರಿಕಲ್ಪನೆ ಯಡಿ ಮೂರು ರೂ. ಗಳಿಗೆ ಒಂದು ಕೆ.ಜಿ. ನಿರ್ಮಾವನ್ನು ಮಾರಿದ್ದರು ಪಟೇಲರು. ಜನರೆಲ್ಲ ಸರ್ಫ್‌ನ ಜಾಹೀರಾತಿನ ಹೊಳಪಿನಡಿ ನಿರ್ಮಾ ಬದಿಗೆ ಸರಿಯುತ್ತಿದೆ ಎನಿಸಿದಾಗ ಪಟೇಲರು ಮೊರೆಹೊಕ್ಕಿದ್ದು ಟಿವಿ ಜಾಹೀರಾತನ್ನು. ಅದೇ ವಾಷಿಂಗ್ ಪೌಡರ್ ನಿರ್ಮಾ..ಹಾಲಿನಂಥ ಬಿಳುಪು ಎಂದು ಬಿತ್ತರವಾದದ್ದು. 1980-90 ರ ಸಂದರ್ಭದಲ್ಲಿ ಎಲ್ಲರ ಮನೆಯನ್ನೂ ಹೊಕ್ಕಿದ್ದು ಇದೇ ಜಾಹೀರಾತು. ಆ ಮಾರುಕಟ್ಟೆ ತಂತ್ರ ಕುರಿತು, ಜಾಹೀರಾತು ನಿರೂಪಣೆ ಕುರಿತು ಮತ್ತೂಮ್ಮೆ ಎಂದಾದರೂ ಚರ್ಚಿಸೋಣ.
ನನಗೆ ತೋಚಿದಂತೆ ನಮ್ಮ ಮನೆಯೂ ಸೇರಿದಂತೆ ಎಲ್ಲ ಬಡ-ಮಧ್ಯಮ ವರ್ಗದ ಮನೆಯನ್ನು ಹೊಕ್ಕ ಮೊದಲ ಬ್ರ್ಯಾಂಡ್ ನಿರ್ಮಾ ವಾಷಿಂಗ್ ಪೌಡರ್ ಎನ್ನಲಡ್ಡಿಯಿಲ್ಲ. ಅಲ್ಲಿಂದ ಆರಂಭವಾದ ಬ್ರ್ಯಾಂಡ್‌ಗಳ ಮೆರವಣಿಗೆ ಇಂದು ಕುಳಿತುಕೊಳ್ಳುವ ಕುರ್ಚಿ, ಕುಡಿಯುವ ಟೀ ಕಪ್ ನವರೆಗೂ ಬಂದಿದೆ. ಗುಂಡು ಪಿನ್ನಿಗೂ ಒಂದು ಬ್ರ್ಯಾಂಡ್‌ನ ಹಣೆಪಟ್ಟಿ ಇದೆ.
lllಹೀಗೆಯೇ ಇದೇ ಟಿವಿ ನನ್ನೊಳಗೆ ಉಳಿಸಿರುವ ಮತ್ತೂಂದು ನೆನಪು ಪ್ರಧಾನಿ ಇಂದಿರಾಗಾಂಧಿಯ ಸಾವು. ಅಕ್ಟೋಬರ್ 31, 1984. ಬುಧವಾರ. ಶಾಲೆಗೆ ಹೋದ ಹೊತ್ತು. ದೂರದ ದಿಲ್ಲಿಯಲ್ಲಿ ಬೆಳಗ್ಗೆ ಅಂಗರಕ್ಷಕರು ಇಂದಿರಾ ಗಾಂಧಿಯ ಮೇಲೆ ಗುಂಡಿನ ಮಳೆ ಸುರಿಸಿ ಹತ್ಯೆಗೈದಿದ್ದರು. ಮನೆಗೆ ಬರುವವರೆಗೂ ಸುದ್ದಿ ಇಲ್ಲ. ಆಗ ರೇಡಿಯೋ, ಟಿವಿ ಬಿಟ್ಟರೆ ಪತ್ರಿಕೆಗಳು. ಪತ್ರಿಕೆಗಳು ಮಾರನೆಯ ದಿನದ ಓದಿಗೆ. ರೇಡಿಯೊ, ಟಿವಿಗಳೂ ಈಗಿನಂತೆ ಬ್ರೇಕಿಂಗ್ ನ್ಯೂಸ್ ಎಂದು ಘಳಿಗೆಗೊಂದು ಸದ್ದು ಮಾಡುತ್ತಿರಲಿಲ್ಲ. ದೂರದರ್ಶನ, ಆಕಾಶವಾಣಿಗಳ ನಿಗದಿತ ವೇಳೆಯ ವಾರ್ತೆ ಬಿಟ್ಟರೆ ಬೇರೇನೂ ಇರಲಿಲ್ಲ. ಶಾಲೆಯಿಂದ ಬಂದಿದ್ದೆ. ನನ್ನ ಅಜ್ಜಿಯ ಮನೆಯಿಂದ ಮೂರು ಮನೆ ದಾಟಿದ ಅನಂತರ ಟಿವಿ ಉಳ್ಳವರ ಮನೆ. ಅಲ್ಲೆಲ್ಲ ಜನ ಸೇರಿದ್ದರು. ಸಂಜೆ ಹೊತ್ತು. ಟಿವಿಯಲ್ಲಿ ನಿರೂಪಕಿ ಇಂದಿರಾಗಾಂಧಿಯ ಹತ್ಯೆಯ ಸುದ್ದಿ ಓದಿದರು. ನನಗೇನೂ ಅರ್ಥವೇ ಆಗಲಿಲ್ಲ. ಟಿವಿ ಮನೆಯವರು “ಎಲ್ಲ ಹೊರಡಿ, ಇಂದು ಬೇರೆ ಯಾವ ಕಾರ್ಯಕ್ರಮವೂ ಇಲ್ಲ. ಪ್ರೈಮ್ ಮಿನಿಸ್ಟರ್ ಇಂದಿರಾಗಾಂಧಿ ಅಮ್ಮನನ್ನು ಕೊಂದಿದ್ದಾರೆ’ ಎಂದರು. ಆಲ್ಲಿ ಸೇರಿದ್ದ ಮಹಿಳೆಯರಲ್ಲ “ಅಮ್ಮ ಹೋಗಿಬಿಟ್ಟರು, ಅಮ್ಮ ಹೋಗಿ ಬಿಟ್ಟರು’ ಎನುತ್ತಾ ಅಳುತ್ತಾ ಹೊರಟರು. ನಾನು ಕಣ್ಣು ಬಿಟ್ಟುಕೊಂಡು ಎಲ್ಲವೂ ನೋಡುತ್ತಾ ನಿಂತೆ. ಅದೇ ಸಂದರ್ಭದಲ್ಲಿ ಟಿವಿಯಲ್ಲೂ ವಾರ್ತೆ ಮುಗಿದು, ಶೋಕ ಸಂಗೀತ ಆರಂಭವಾಯಿತು. ಖಾಲಿ ಸ್ಕ್ರೀನ್. ಕೇಳಿ ಬರುವ ಶೋಕ ಸಂಗೀತ. ಎರಡೋ..ಮೂರು ನಿಮಿಷದ ಅನಂತರ ಇನ್ನು ಮೂರು ದಿನ ಏನೂ ಇರುವುದಿಲ್ಲ ಎಂಬ ಪ್ರಕಟನೆಯನ್ನು ಟಿವಿ ಮನೆಯವರು ಪ್ರಕಟಿಸಿದರು. ವಾರ್ತೆಯೂ ಇಲ್ಲ, ಚಿತ್ರಗೀತೆಯೂ ಇಲ್ಲ, ನಿರ್ಮಾ ಜಾಹೀರಾತೂ ಇಲ್ಲ. ಎಲ್ಲರದ್ದೂ ಸಂತಾಪ. ರಾಷ್ಟ್ರದಲ್ಲಿ ಸುಮಾರು ಹನ್ನೆರಡು ದಿನಗಳ ಸಂತಾಪವಿತ್ತು. ಮೂರು ದಿನಗಳ ಬಳಿಕ ಪ್ರಧಾನಿಯ ಅಂತಿಮ ಯಾತ್ರೆಯ ಸುದ್ದಿ. ಶಾಲೆಗೆ ರಜೆ ಇದ್ದಂತೆ ನೆನಪು. ಎಷ್ಟೊಂದು ಜನ, ಎಷ್ಟು ದೊಡ್ಡ ಮೆರವಣಿಗೆ. ಆಗ ಇಂದಿರಾಗಾಂಧಿ ಎಂದರೆ ಕಾಂಗ್ರೆಸ್ಸೇನು, ರಾಷ್ಟ್ರ ರಾಜಕಾರಣದ ಫೈರ್ ಬ್ರ್ಯಾಂಡ್ ! ನನಗೆ ಬ್ರ್ಯಾಂಡ್‌ಗಳ ಅಬ್ಬರ ಇಲ್ಲದ ಜಾಗದಲ್ಲಿ ಪುಟ್ಟ ಮಾಯಾ ಪೆಟ್ಟಿಗೆಯೊಂದು ಪರಿಚಯಿಸಿದ ಎರಡು ಬ್ರ್ಯಾಂಡ್‌ಗಳಿವು. ಇಂದು ನಾವು ಕನ್ಸೂಮರ್ ಎಂಬ ತೂಗು ಫಲಕ ಬೆನ್ನಿಗೆ ಹಾಕಿಕೊಂಡು ಬ್ರ್ಯಾಂಡ್‌ಗಳ ಸಂತೆಯಲ್ಲಿ ಕಳೆದುಹೋಗಿದ್ದೇವೆ, ಕರಗಿ ಹೋಗಿದ್ದೇವೆ, ಮತ್ತೂಂದು ಬ್ರ್ಯಾಂಡ್‌ನ ಹುಡುಕಾಟದಲ್ಲಿ. ನಾವಿಲ್ಲದೇ ಈ ಬ್ರ್ಯಾಂಡ್‌ಗಳೇ ಇರದು ಎಂಬ ನಿಜವನ್ನೇ ಮರೆತು. ಅರವಿಂದ ನಾವಡ