ನಿರ್ದೇಶಕ ಸೂರಿ ಅವರು ಇರುವುದೇ ಹಾಗೆ, ತಾವಾಯಿತು, ತಮ್ಮ ಕೆಲಸವಾಯಿತು.. ಅನವಶ್ಯಕ ಪ್ರಚಾರ, ತೋರಿಕೆಯ ಮಾತುಗಳಿಂದ ದೂರ,ಬಲು ದೂರ… ಇಂತಿಪ್ಪ ಸೂರಿ ನಿರ್ದೇಶನದಲ್ಲಿ “ಕಾಗೆ ಬಂಗಾರ’ ಚಿತ್ರ ಬರಲಿದೆ ಎಂಬ ಸುದ್ದಿಯೊಂದು ಹೊರಬಿದ್ದು ತುಂಬಾ ತಿಂಗಳುಗಳೇ ಆಗಿ ಹೋಗಿವೆ. ಆದರೆ, ಆ ನಂತರ ಏನಾಯ್ತು, ಸೂರಿ ಏನು ಮಾಡುತ್ತಿದ್ದಾರೆ, ಸ್ಕ್ರಿಪ್ಟ್ ಫೈನಲ್ ಕೆಲಸ ಮುಗೀತಾ, ಶೂಟಿಂಗ್ ಯಾವಾಗ.. ಇಂತಹ ಕುತೂಹಲದೊಂದಿಗೆ ನಿರ್ದೇಶಕ ಸೂರಿ ಅವರಿಗೆ ಫೋನ್ ಮಾಡಿದಾಗ ಆ ಕಡೆಯಿಂದ ಒಂದಷ್ಟು ವಿಭಿನ್ನ ಚಿಂತನೆ, ಜೊತೆಗೆ ತೂಕದ ಮಾತುಗಳು ಬಂದವು. ಅದನ್ನು ಇಲ್ಲಿ ನೀಡಲಾಗಿದೆ.
1 ಕಾಗೆ ಬಂಗಾರ ಕೆಲಸ ಎಲ್ಲಿಗೆ ಬಂತು?
ಕಾಗೆ ಬಂಗಾರ ಕೆಲಸ ನಡೆಯುತ್ತಿದೆ. ಜಯಣ್ಣ ನಿರ್ಮಾಣ ಮಾಡುತ್ತಿರುವ ಸಿನಿಮಾವಿದು. ವಿರಾಟ್ ಹಾಗೂ ದುನಿಯಾ ವಿಜಯ್ ಪುತ್ರಿ ರಿತನ್ಯಾ ಮುಖ್ಯಭೂಮಿಕೆ ಯಲ್ಲಿದ್ದಾರೆ. “ಕಾಗೆ ಬಂಗಾರ’ ಸ್ಕ್ರಿಪ್ಟ್ ಬಹುತೇಕ ಮುಕ್ತಾಯವಾಗಿದೆ. ಸಿನಿಮಾಗಾಗಿ ಲೊಕೇಶನ್ ನೋಡುತ್ತಿದ್ದೇವೆ. ನಿರ್ಮಾಪಕರು, ಕಲಾ ನಿರ್ದೇಶಕರೊಂದಿಗೆ ಮಾತುಕತೆ ನಡೆಯುತ್ತಿದೆ. ಕಾಸ್ಟ್ಯೂಮ್ ಇತ್ಯಾದಿ ಎಲ್ಲ ಇನ್ನಷ್ಟು ತಯಾರಿ ಆಗಬೇಕು
2 “ಕೆಂಡ ಸಂಪಿಗೆ’, “ಪಾಪ್ ಕಾರ್ನ್ ಮಂಕಿ ಟೈಗರ್’ ಮತ್ತು “ಕಾಗೆ ಬಂಗಾರ’ದ ಸಂಬಂಧ ಏನು?
“ಕೆಂಡ ಸಂಪಿಗೆ’, “ಪಾಪ್ ಕಾರ್ನ್ ಮಂಕಿ ಟೈಗರ್ ಈ ಸಿನಿಮಾಗಳ ಒಂದು ರೌಂಡಪ್ ಮಾಡಬೇಕು. ಅದರಲ್ಲಿರುವ ವಿಚಾರ, ಆ ಬಾವಿ ಏನು, ಕಾಗೆ ಬಂಗಾರ ಪಾತ್ರ ಇವುಗಳ ಹಿನ್ನೆಲೆ ಕಥೆ ಇದನ್ನು ಹೇಳಬೇಕಾಗಿದೆ. ಸುರೇಂದ್ರ ಅವರು ಕೊಟ್ಟ ಕಥೆ ಇದು. “ಕೆಂಡ ಸಂಪಿಗೆ’, “ಪಾಪ್ ಕಾರ್ನ್ ಮಂಕಿ ಟೈಗರ್’ ಕಥೆಯ ಲಿಂಕ್ ಇಲ್ಲಿ ಸಣ್ಣದಾಗಿ ಕೊಡಲಾಗಿದೆ. ಹಿಂದಿನ ಕಥೆ ಜೊತೆ ಜೊತೆಗೆ ಈಗ ಏನು ನಡೆಯುತ್ತಿದೆ ಅನ್ನೊದನ್ನ ಒಟ್ಟಿಗೆ ಇಲ್ಲಿ ಹೇಳುತ್ತೇವೆ. ಇದು ಪ್ರೇಮ ಕಥೆ, ಎರಡು ಘಟ್ಟದಲ್ಲಿ ಕಥೆ ಸಾಗುತ್ತೆ. ನಮಗಿದು ಸ್ವಲ್ಪ ಸವಾಲಿನದ್ದಾಗಿದೆ. ಹಾಗಾಗಿ ತಯಾರಿ ಮಾಡಿಕೊಳ್ಳುತ್ತಿ ದ್ದೇವೆ. ಇನ್ನು ಒಂದೂವರೆ ತಿಂಗಳಲ್ಲಿ ಶೂಟಿಂಗ್ ಆರಂಭವಾಗಲಿದೆ.
3 ನಿಮ್ಮ ಸಿನಿಮಾ ರಿಲೀಸ್ ಸಮಯ ಬಿಟ್ಟರೆ ಮಿಕ್ಕಂತೆ ಸೂರಿ ದುನಿಯಾದಲ್ಲೇ ಇರುತ್ತೀರಿ?
ಹೌದು, ನಾನು ಸದಾ ಪ್ರಚಾರದಲ್ಲಿ ಇರಲು ಬಯಸುವುದಿಲ್ಲ. ಅದರ ಅವಶ್ಯಕತೆ, ಅನಿವಾರ್ಯತೆ ಇದ್ದಾಗ ಮಾತ್ರ ಅದರತ್ತ ಗಮನ ಹರಿಸುತ್ತೇನೆ. ನಾನು ಮಾತನಾಡುವುದ್ದಕಿಂತ ನನ್ನ ಸಿನಿಮಾ ಮಾತನಾಡಬೇಕು. ಬಹಳ ಇಷ್ಟಪಟ್ಟು ಈ ಕ್ಷೇತ್ರಕ್ಕೆ ಬಂದಿದ್ದೇನೆ. ನನಗೆ ಸಿನಿಮಾ ಎಷ್ಟು ಮುಖ್ಯವೋ, ಅಷ್ಟೇ ನನ್ನ ವೈಯಕ್ತಿಕ ಸ್ವಾತಂತ್ರ್ಯವೂ ಮುಖ್ಯ. ಯಾರೋ ಬಂದು ಏನೋ ಹೇಳಿದರು ಎಂಬ ಮಾತ್ರಕ್ಕೆ ನನ್ನಿಂದ ಎಲ್ಲವೂ ಆಗುವುದಿಲ್ಲ. ಅನೇಕರು ಬಂದು “ನಿಮ್ಮ ಹೆಸರಲ್ಲಿ ಅರ್ಪಿಸುವ ಹಾಕುತ್ತೇವೆ, ಸಿನಿಮಾಕ್ಕೆ ಬೈಟ್ಸ್ ಕೊಡಿ’ ಎಂದು ಕೇಳುತ್ತಾರೆ. ಏನೇ ಆಗಲಿ ಅಂತಿಮವಾಗಿ ಸಿನಿಮಾ ಚೆನ್ನಾಗಿದ್ದರೆ, ಅದೇ ಮಾತನಾಡುತ್ತದೆ. ಕೀರ್ತಿ ತಂದು ಕೊಡುತ್ತದೆ.
4 ಸಿನಿಮಾ ಹೊರತಾಗಿ ನಿಮ್ಮ ಪ್ರಪಂಚ?
ಸಿನಿಮಾದ ಜೊತೆಗೆ ನಮ್ಮದೇ ಆದ ಒಂದು ಪ್ರಪಂಚವಿರುತ್ತದೆ. ಎಷ್ಟೋ ಬಾರಿ ನಾವು ಈ ಜಂಜಾಟದಲ್ಲಿ ಅದರಿಂದ ದೂರ ಉಳಿದಿರುತ್ತೇವೆ. ಈಗ ಎಲ್ಲ ಅರ್ಥ ಆಗಿದೆ. ಈ ಜಂಜಾಟದಲ್ಲಿ ನನ್ನ ಅನೇಕ ಸಮಯ ಕಳೆದುಕೊಂಡೆ. ಇನ್ನು ನಾನು ಓದುವುದು, ನೋಡಬೇಕಾದ್ದು ಬಹಳಷ್ಟಿದೆ. ಅದರತ್ತವೂ ಗಮನ ಹರಿಸುತ್ತೇನೆ.
5 ನಿರ್ದೇಶಕರೇ ಈಗ ನಿರ್ಮಾಪಕರಾಗುತ್ತಿದ್ದಾರೆ. ನಿಮಗೆ ಆ ಯೋಚನೆ ಇಲ್ಲವೇ?
ನಾನು ಕ್ರಿಯೆಟಿವ್ ವ್ಯಕ್ತಿ, ಬಿಝಿನೆಸ್ ಮ್ಯಾನ್ ಅಲ್ಲ. ಎಲ್ಲವೂ ನಮ್ಮಿಂದಲೇ ಆಗುವಾಗ, ಗೊತ್ತಿಲ್ಲದೆ ಒಂದಿಷ್ಟು ತಪ್ಪುಗಳ ಸುಳಿಯಲ್ಲಿ ಸಿಲುಕುತ್ತೇವೆ. ಹಣಕಾಸು ಹಾಗೂ ಇತರ ವಿಚಾರಗಳ ಜಂಜಡದಿಂದ ಕೆಲಸಗಳು ನಿಧಾನವಾಗುತ್ತವೆ. ಈ ವಿಚಾರದ ಅರಿವು ನನಗೆ ಬೇಗನೇ ಆಯಿತು. ಮುಖ್ಯವಾಗಿ ನಾನು ಪ್ರೊಡ್ಯುಸರ್ ಆಗಲು ಬಂದಿಲ್ಲ. ನನಗೆ ಖುಷಿಯಾಗುವುದನ್ನು ಮಾಡಲು ಚಿತ್ರರಂಗಕ್ಕೆ ಬಂದಿದ್ದೇನೆ.
ರವಿಪ್ರಕಾಶ್ ರೈ