ಜಗಳೂರು: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡಕ್ಕೆ ರಕ್ಷಣಾಗೋಡೆ ಹಾಗೂ ಭದ್ರತಾ ಸಿಬ್ಬಂದಿಯ ಸೌಲಭ್ಯವಿಲ್ಲದ ಪರಿಣಾಮ ಕೊಠಡಿಗಳಿಗೆ ಅಳವಡಿಸಲಾಗಿರುವ ಗಾಜಿನ ಕಿಟಕಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಪಟ್ಟಣದ ಅಶ್ವತ್ಥರೆಡ್ಡಿ ನಗರದ ಸಮೀಪದಲ್ಲಿರುವ ಈ ನೂತನ ಕಟ್ಟಡದ ಕೊಠಡಿಗಳಿಗೆ ಅಳವಡಿಸಲಾಗಿರುವ ಗಾಜಿನ ಕಿಟಕಿಗಳು ಕಿಡಿಗೇಡಿಗಳ ಕೃತ್ಯಕ್ಕೆ ದಿನದಿಂದ ದಿನಕ್ಕೆ ಪುಡಿ ಪುಡಿಯಾಗುತ್ತಿವೆ.
ಒಳ ಮತ್ತು ಹೊರ ಪ್ರಾಂಗಣದಲ್ಲಿನ ಗಾಜಿನ ಕಿಟಕಿಗಳು ಮತ್ತು ವಿದ್ಯುತ್ ದೀಪಗಳನ್ನು ಕಿಡಿಗೇಡಿಗಳು ಒಡೆದು ಹಾಕಿದಂತೆ ಪದೇ ಪದೇ ರಿಪೇರಿ ಮಾಡಿಸಿ ಬೇಸತ್ತ ಪ್ರಾಂಶುಪಾಲರು ಇಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜಗಳೂರು ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ರಾತ್ರಿ ಕಾವಲುಗಾರರು ಇಲ್ಲದೇ ಇರುವುದರಿಂದ ಪ್ರತಿದಿನ ಸಂಜೆ 6.30ರ ನಂತರ ಬರುವ ಅಪರಿಚಿತರು ಮದ್ಯ ಸೇವಿಸಿ ಖಾಲಿ ಬಾಟಲಿಗಳನ್ನು ಕಾಲೇಜಿನ ಆವರಣದಲ್ಲಿ ಒಡೆದು ಹಾಕುತ್ತಿದ್ದಾರೆ.
ಅಲ್ಲದೇ ನಶೆಯಲ್ಲಿ ಕಾಲೇಜಿನ ಕೊಠಡಿಗಳಿಗೆ ಅಳವಡಿಸಲಾಗಿರುವ ಗಾಜಿನ ಕಿಟಕಿಗಳನ್ನು ಮತ್ತು ಅಳವಡಿಸಲಾಗಿರುವ ವಿದ್ಯುತ್ ಬಲ್ಬಗಳನ್ನು ಒಡೆದು ಹಾಕಿ ಸರ್ಕಾರದ ಆಸ್ತಿ ಪಾಸ್ತಿಗೆ ನಷ್ಟವುನ್ನುಂಟು ಮಾಡುತ್ತಿದ್ದಾರೆ. ಇಂತವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪ್ರಾಂಶುಪಾಲರು ಜಗಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 2007ರಲ್ಲಿ ಜಗಳೂರಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರಾಯಿತು.
ಸುಮಾರು ನಾಲ್ಕೈದು ವರ್ಷಗಳ ಕಾಲ ಇಲ್ಲಿನ ಸರ್ಕಾರಿ ಬಾಲಕರ ಶಾಲೆಯ ಖಾಲಿ ಕೊಠಡಿಗಳು ಮತ್ತು ಹಳೆ ಕ್ಷೇತ್ರಶಿಕ್ಷಣಾಧಿಧಿಕಾರಿಗಳ ಕಚೇರಿಯ ಕೊಠಡಿಯಲ್ಲಿ ತರಗತಿಗಳು ನಡೆದವು. ಆದರೆ ವರ್ಷದಿಂದ ವರ್ಷಕ್ಕೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಇತ್ತ ಸರ್ಕಾರ 8 ಕೊಠಡಿಗಳ ಮಂಜೂರು ಮಾಡಿತು. 2015ರ ವೇಳೆಗೆ ಕಾಮಗಾರಿ ಮುಕ್ತಾಯ ಕಂಡಿತು.
ಕೊಠಡಿಗಳ ಕೊರೆತೆಯಿಂದಾಗಿ ನೂತನ ಕಟ್ಟಡವನ್ನು ತರಗತಿಗಳಿಗೆ ಬಳಸಿಕೊಂಡಿದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಕೊಠಡಿಗಳಿಗೆ ರಕ್ಷಣಾಗೋಡೆ ಮತ್ತು ಭದ್ರತಾ ಸಿಬ್ಬಂದಿಯ ಸೌಲಭ್ಯ ಇಲ್ಲದ ಪರಿಣಾಮ ಕೊಠಡಿಗಳಿಗೆ ಅಳವಡಿಸಲಾಗಿರುವ ಗಾಜಿನ ಕಿಟಕಿಗಳು ದಿನೇ ದಿನೆ ಪುಡಿ ಪುಡಿಯಾಗುತ್ತಿರುವುದು ಸಹಜವಾಗಿ ಪ್ರಾಂಶುಪಾಲರು ಮತ್ತು ಸಿಬ್ಬಂದಿ ಬೇಸತ್ತು ಹೋಗಿದ್ದಾರೆ. ಸಂಬಂಧಪಟ್ಟ ಪೊಲೀಸ್ ಇಲಾಖೆಯ ಪದೇ ಪದೇ ನಡೆಯುತ್ತಿರುವ ಕಿಡಿಗೇಡಿಗಳ ಕೃತ್ಯಕ್ಕೆ ಕಡಿವಾಣ ಹಾಕುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
* ಸಿ.ಬಸವರಾಜ್