Advertisement

ಅನುರಣಿಸಿದ ಶಿವಕುಮಾರ ಶ್ರೀಗಳ ನೆನಪು

09:52 AM Jan 21, 2020 | Lakshmi GovindaRaj |

ತುಮಕೂರು: ಇಂದಿನ ಜಾತಿ ವ್ಯವಸ್ಥೆ ಭಾರತವನ್ನು ದುರ್ಬಲವನ್ನಾಗಿಸುತ್ತಿದೆ. ಈ ವ್ಯವಸ್ಥೆಯ ವಿರುದ್ಧ ಅಂದು ಬಸವಣ್ಣನವರು ಸಾಮಾಜಿಕ ಆಂದೋಲನವನ್ನೇ ಮಾಡಿದರು. ಇಂದು ಮಠಾಧಿಪತಿಗಳು, ಜನಾಧಿಪತಿಗಳಾಗಿ ಸಾಮಾಜಿಕ ಆಂದೋಲನ ಮಾಡಬೇಕಿದೆ ಎಂದು ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ ಹೇಳಿದರು.

Advertisement

ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಕರ್ನಾಟಕ ರತ್ನ, ಲಿಂ.ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಪ್ರಥಮ ಪುಣ್ಯಸಂಸ್ಮರಣೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನರನೇ ಹರನಾಗೋದು, ಮನುಷ್ಯನೇ ದೈವತ್ವಕ್ಕೆ ರೋದು. ಬದುಕಿನ ಕಾಲಘಟ್ಟದಲ್ಲೇ ಶ್ರೀ ಶಿವಕುಮಾರ ಸ್ವಾಮಿಗಳು ನಡೆದಾಡುವ ದೇವರಾಗಿದ್ದಾರೆ. ದೇವರನ್ನು ನಾವ್ಯಾರೂ ನೋಡಿಲ್ಲ.

ಆದರೆ, ಶ್ರೀಗಳು ಇದ್ದ ಕಾಲಘಟ್ಟದಲ್ಲಿ ನಾವೆಲ್ಲಾ ಬದುಕಿದ್ದೀವಿ ಎನ್ನುವುದೇ ನಮ್ಮೆಲ್ಲರ ಹೆಮ್ಮೆ. ಮಠಕ್ಕೆ ಬಂದ ಯಾರಿಗೂ ನೀನ್ಯಾರು ಅಂತ ಕೇಳಿಲ್ಲ. ಅನ್ನ ದಾಸೋಹ, ಜ್ಞಾನ ದಾಸೋಹ ನಿರಂತರ ವಾಗಿ ನಡೆದು ಕೊಂಡು ಬರುತ್ತಿದೆ. ಇದೇ ಬಸವಣ್ಣ ನವರ ತತ್ವ, ಆಶಯ. ಶ್ರೀಗಳು ತಮ್ಮ ಬದುಕಿನ ಮೂಲಕ ದೈವತ್ವಕ್ಕೆ ಏರಿದ್ದಾರೆ. ನಡೆ, ನುಡಿ ಯಲ್ಲಿ ಬದುಕಿನ ಕಾಲಘಟ್ಟದಲ್ಲಿಯೇ ನಡೆದಾಡುವ ದೇವರೆಂದು ಹೆಸರು ಮಾಡಿದ್ದ ಶ್ರೀ ಶಿವಕುಮಾರ ಸ್ವಾಮಿಗಳು ಪರೋಪಕಾರವೇ ಜೀವನದ ನಿಜ ಧರ್ಮವೆಂದು ಆಚರಿಸಿ ತೋರಿಸಿದವರು ಎಂದರು.

ಸಮಾರಂಭದಲ್ಲಿ ಸ್ವಾಮೀಜಿಯವರ 50 ಕೆ.ಜಿ.ಯ ಬೆಳ್ಳಿ ಪುತ್ಥಳಿಯನ್ನು ಮಾಡಿಸಿಕೊಟ್ಟಿರುವ ಕೈಗಾರಿಕೋದ್ಯಮಿ ಮುಖೇಶ್‌ ಗರ್ಗ್‌, ದೆಹಲಿ ಉಗ್ರ ನಿಗ್ರಹ ದಳದ ಅಧ್ಯಕ್ಷರಾದ ಮಣೀಂದರ್‌ ಜೀತ್‌ಸಿಂಗ್‌ ಬಿಟ್ಟ, ಅಂಗಾಂಗ ಕಸಿ ತಜ್ಞರಾದ ಡಾ.ರವೀಂದ್ರನಾಥ್‌ ಅವರನ್ನು ಸನ್ಮಾನಿಸಲಾಯಿತು. ಸ್ವಾಮೀಜಿಯವರ ಕುರಿತು ಪ್ರಕಟಗೊಂಡಿರುವ ಪುಸ್ತಕಗಳ ಬಿಡುಗಡೆ ಮಾಡಲಾಯಿತು.

ಬೆಂಗಳೂರು ಬೇಲಿಮಠದ ಅಧ್ಯಕ್ಷರಾದ ಶ್ರೀ ಶಿವರುದ್ರ ಮಹಾಸ್ವಾಮಿಗಳು, ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು, ವಸತಿ ಸಚಿವ ವಿ.ಸೋಮಣ್ಣ, ಸಂಸದ ಜಿ.ಎಸ್‌.ಬಸವರಾಜು, ಬಿ.ವೈ. ವಿಜಯೇಂದ್ರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಸಮಾರಂಭದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಭಕ್ತರ ದಂಡೇ ಹರಿದು ಬಂತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮಠದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Advertisement

ಸತ್‌ ಸಂಪ್ರದಾಯ ನಿಜ ಜೀವನಕ್ಕೆ ದಾರಿದೀಪ: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಸಿದ್ಧಗಂಗಾ ಮಠ ದೇಶ-ವಿದೇಶಗಳಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ, ಆಚಾರ-ವಿಚಾರದಲ್ಲಿ ಬಸವಣ್ಣನವರನ್ನು ಅನುಸರಿಸಿ, ಸರ್ವರ ಏಳಿಗೆಗೆ ಶ್ರಮಿಸಿದ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮಿಗಳು ಚಿರಸ್ಮರಣೀಯರಾಗಿದ್ದಾರೆ. ಜಾತಿ, ಮತ, ಕುಲ ಎಂಬ ತಾರತಮ್ಯ ತಡೆಯುವಲ್ಲಿ ಮತ್ತು ಹಿಂಸೆ ನಿಗ್ರಹಿಸಲು ಅವರು ಹಾಕಿಕೊಟ್ಟ ಸತ್‌ ಸಂಪ್ರದಾಯ ನಿಜ ಜೀವನಕ್ಕೆ ದಾರಿದೀಪವಾಗಿದೆ ಎಂದು ಸ್ಮರಿಸಿದರು.

ಮಠದಲ್ಲಿ ಪರಮಪೂಜ್ಯರು ಇಲ್ಲ ಎನ್ನುವ ಭಾವನೆ ಯಾರಿಗೂ ಬಂದಿಲ್ಲ. ಶ್ರೀಗಳು ನಮ್ಮೊಟ್ಟಿಗಿದ್ದು, ಅನುಗ್ರಹ ಮಾಡುತ್ತಿದ್ದಾರೆ. ಅವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕೆಂದು ಭಕ್ತರು ಬಯಸುತ್ತಾರೆ. ಆದರೆ, ಶ್ರೀಗಳು ಯಾವುದೇ ಪ್ರಶಸ್ತಿಯನ್ನು ಬಯಸಿದವರಲ್ಲ. ಭಕ್ತರ ಹೃದಯರತ್ನರಾಗಿದ್ದಾರೆ. ಅದಕ್ಕಿಂತ ಪ್ರಶಸ್ತಿ ಬೇರೆ ಬೇಕಿಲ್ಲ.
-ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ, ಸಿದ್ಧಗಂಗಾ ಮಠಾಧ್ಯಕ್ಷರು

ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರು ಧರ್ಮನಿಷ್ಠೆಯನ್ನು ಬಿಡದೆ, ಕಾಯಕ ದಾಸೋಹಕ್ಕೆ ಮಹತ್ವ ನೀಡಿ, ಜಾತ್ಯತೀತವಾಗಿ ಮಠ ಬೆಳೆಸಿದ್ದಾರೆ. ಅವರಿಗೆ ಕೇಂದ್ರ ಸರ್ಕಾರ ಭಾರತರತ್ನ ನೀಡಬೇಕು ಎನ್ನುವ ಒತ್ತಾಯ ಭಕ್ತರದ್ದಾಗಿದೆ. ನಮ್ಮ ಕ್ಷೇತ್ರದಲ್ಲಿ 16 ಕೋಟಿ ವೆಚ್ಚದಲ್ಲಿ ಶ್ರೀಗಳ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಮುಂದಿನ ತಿಂಗಳು ಚಾಲನೆ ನೀಡಲಾಗುವುದು.
-ವಿ.ಸೋಮಣ್ಣ, ವಸತಿ ಸಚಿವ

ಶಿವಕುಮಾರ ಮಹಾಸ್ವಾಮಿಗಳು ಶ್ರೀಗಂಧದ ಕೊರಡಿನಂತೆ ಶ್ರಮಿಸಿ, ಗಂಧದ ಪರಿಮಳವನ್ನು ಅವರ ಸೇವೆಯ ಮೂಲಕ ಹರಡಿದ್ದಾರೆ. ನಿತ್ಯ ಲಿಂಗಪೂಜೆ, ಸಮಾಜ ಸೇವೆ ಮಾಡುವುದರ ಜೊತೆಗೆ ಹಸಿದ ಹೊಟ್ಟೆಗೆ ಅನ್ನ, ಜ್ಞಾನವನ್ನು ನೀಗಿಸಲು ಅಕ್ಷರ ದಾಸೋಹದ ಮೂಲಕ ನಮ್ಮೊಂದಿಗೆ ಸದಾ ಇರುತ್ತಾರೆ. ಕಡು ಬಡವರ ಏಳಿಗೆಗೆ ಶ್ರಮಿಸಿದ ಅವರ ಕೀರ್ತಿ ಕಳಸಪ್ರಾಯವಾಗಿ ಅಜರಾಮರವಾಗಿದೆ.
-ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಠ

ಭೌತಿಕವಾಗಿ ಸ್ವಾಮೀಜಿಯವರು ನಮ್ಮೊಂದಿಗೆ ಇಂದು ಇಲ್ಲ ಎಂದು ಭಾವಿಸುವುದು ಬೇಡ. ಅವರು ಅಂತರಂಗದ ಪ್ರಾತಃಸ್ಮರಣೀಯರಾಗಿದ್ದಾರೆ. ಸೂರ್ಯ-ಚಂದ್ರ ಇರುವವರೆಗೂ ಅವರು ಮಾಡಿರುವ ಸೇವಾ ಕಾರ್ಯ ಪುಣ್ಯದ ಫ‌ಲದಂತೆ ನಮ್ಮೊಂದಿಗೆ ಇರುತ್ತದೆ.
-ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ಸದಸ್ಯ

ನನ್ನ ನಿಜ ಜೀವನದಲ್ಲಿ ಸ್ವಾಮೀಜಿಯವರಲ್ಲಿ ನಾನು ದೇವರನ್ನು ಕಂಡುಕೊಂಡಿದ್ದೇನೆ. ಮಾತೃಭೂಮಿ ರಕ್ಷಣೆಗಾಗಿ, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಸ್ವಾಮೀಜಿಯವರು ನೀಡಿರುವ ಮಾರ್ಗದರ್ಶನ ಸದಾ ನನ್ನೊಂದಿಗೆ ಇರುತ್ತದೆ. ಮೋದಿಯವರು ಶಕ್ತಿಶಾಲಿ ಪ್ರಧಾನ ಮಂತ್ರಿಯಾಗಲು ಸ್ವಾಮೀಜಿಯವರ ಆಶೀರ್ವಾದ ಮತ್ತು ಕೃಪೆ ಮಹತ್ವದ್ದಾಗಿದೆ.
-ಮಣೀಂದರ್‌ ಜೀತ್‌ಸಿಂಗ್‌ ಬಿಟ್ಟ, ದೆಹಲಿ ಉಗ್ರ ನಿಗ್ರಹ ದಳದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next