ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷದ ಮಹಾನ್ ನಾಯಕರು ತಮ್ಮ ವೈಫಲ್ಯಗಳನ್ನು ಆತ್ಮ ವಿಮರ್ಶೆ ಮಾಡಿಕೊಳ್ಳದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಆಪತ್ತು ತಪ್ಪಿದ್ದಲ್ಲ. ಪಕ್ಷದ ಸಂಘಟನೆ ದೃಷ್ಟಿಯಿಂದ ಶುಕ್ರವಾರ 30 ರಿಂದ 40 ಶಾಸಕರು ಬೆಂಗಳೂರಿನಲ್ಲಿ ಸಭೆ ಸೇರಲಿದ್ದೇವೆ ಎಂದು ಸಚಿವ ಸ್ಥಾನ ವಂಚಿತರಾಗಿ ಅತೃಪ್ತ ಕೈ ಶಾಸಕರ ಬಣದಲ್ಲಿ ಗುರುತಿಸಿಕೊಂಡಿರುವ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ಮಾತನಾಡಿ, ಅತೃಪ್ತ ಶಾಸಕರು ಸೇರಿ ಸಭೆ ನಡೆಸುವುದು ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವುದಕ್ಕೆ ಅಥವಾ ಮಂತ್ರಿ ಪದವಿಗೋಸ್ಕರ ಅಲ್ಲ. ಪಕ್ಷ ಸಂಘಟ ನೆಯ ಸದೃಢತೆಗಾಗಿ ಪಕ್ಷದ ಚೌಕಟ್ಟಿನಲ್ಲಿಯೆ ಸಭೆ ನಡೆಸಲಾಗುತ್ತಿದೆ. ದೇಶಕ್ಕೆ ಮಾದರಿಯಾದ ಸರ್ಕಾರ ನೀಡಿದರೂ ಕಳೆದ ಚುನಾವಣೆಯಲ್ಲಿ
ರಾಜ್ಯದ ಜನತೆ ಪಕ್ಷದ ಕೈ ಹಿಡಿಯಲಿಲ್ಲ.
ಜೆಡಿಎಸ್ ಜೊತೆ ಸೇರಿ ಈಗ ಅಧಿಕಾರ ನಡೆಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ಭವಿಷ್ಯ ಇರುತ್ತದೆ ಎನ್ನುವುದು ಏನು ಗ್ಯಾರಂಟಿ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ತಾತ, ಅಪ್ಪಂದಿರನ್ನು ನೋಡಿ ಯುವಕರಿಗೆ ಮಣೆ ಹಾಕಲಾಗುತ್ತಿದೆ. ನಿಷ್ಟಾವಂತರಿಗೆ, ಸಮರ್ಥರಿಗೆ ಅವಕಾಶಗಳನ್ನು ತಪ್ಪಿಸಲಾಗುತ್ತಿದೆ. ತಮ್ಮನ್ನು ಸೇರಿಕೊಂಡು ಅನೇಕ ಯುವ ಶಾಸಕರು ಪಕ್ಷದಲ್ಲಿದ್ದಾರೆ.
ಯಾರಿಗಾದರೂ ಅವಕಾಶ ನೀಡಬಹುದಿತ್ತು. ಆದರೆ, ಸಮರ್ಥರಿಗೆ, ಅರ್ಹರಿಗೆ ಅವಕಾಶ ನೀಡಿಲ್ಲ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ, ಯುವಕರಿಗೆ ನೀಡುತ್ತಿರುವ ಆದ್ಯತೆಯನ್ನು ನಮ್ಮ ಪಕ್ಷದ ಮಹಾನ್ ನಾಯಕರು ಅರಿತುಕೊಳ್ಳಬೇಕಿದೆ ಎಂದು ತೀಕ್ಷ್ಮವಾಗಿ ಹೇಳಿದರು.
ಬಿಜೆಪಿ ಈಗಾಗಲೇ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣಕ್ಕೆ ಹೊರಟಿದೆ. ಪಂಜಾಬ್ ಬಿಟ್ಟರೆ ಕಾಂಗ್ರೆಸ್‌ಗೆ ಎಲ್ಲೂ ಅಧಿಕಾರ ಇಲ್ಲ. ಇರುವ ಕರ್ನಾಟಕವನ್ನು ಕಳೆದುಕೊಂಡಿದ್ದೇವೆ. ಹಳೆಯ ಮೈಸೂರು ಭಾಗದಲ್ಲಿ ನಮ್ಮ ಪ್ರಬಲ ಎದುರಾಳಿಯಾಗಿರುವ ಜೆಡಿಎಸ್ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ನಡೆಸಿದರೆ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಭವಿಷ್ಯ ಇರುತ್ತದೆಯೇ ಎಂದು ಶಾಸಕ ಡಾ.ಕೆ.ಸುಧಾಕರ್ ಪ್ರಶ್ನಿಸಿದರು.