Advertisement

ಸೆಪ್ಟೆಂಬರ್‌ನಲ್ಲಿ ಗರಿಷ್ಠ ಉಷ್ಣಾಂಶ

12:28 PM Sep 12, 2018 | Team Udayavani |

ಬೆಂಗಳೂರು: ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ದಾಖಲೆ ಮಳೆಗೆ ಸಾಕ್ಷಿಯಾಗಿದ್ದ ಬೆಂಗಳೂರು, ಬೇಸಿಗೆ ಕಾಲದ ಧಗೆಯನ್ನು ಅನುಭವಿಸುತ್ತಿದೆ! ಮಂಗಳವಾರ ನಗರದಲ್ಲಿ ಗರಿಷ್ಠ ತಾಪಮಾನ 31.2 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ 21.7 ಡಿಗ್ರಿ ಸೆಲ್ಸಿಯಸ್‌ ತಲುಪಿದೆ.

Advertisement

ಇದು ಸಾಮಾನ್ಯಕ್ಕಿಂತ ಕ್ರಮವಾಗಿ 3 ಮತ್ತು 2 ಡಿಗ್ರಿ ಅಧಿಕವಾಗಿದೆ. ಕಳೆದ 10 ದಿನಗಳ ಅಂತರದಲ್ಲಿ ಸತತ 2ನೇ ಬಾರಿ ಗರಿಷ್ಠ ತಾಪಮಾನ 30 ಡಿಗ್ರಿ ದಾಟಿದಂತಾಗಿದೆ. ಪರಿಣಾಮ ನಗರದ ನಾಗರಿಕರಿಗೆ ಮಳೆಗಾಲದಲ್ಲೂ ಬೇಸಿಗೆ ಅನುಭವ ಆಗುತ್ತಿದೆ. 2017ರ ಸೆಪ್ಟೆಂಬರ್‌ನಲ್ಲಿ 513.8 ಮಿ.ಮೀ. ಮಳೆಯಾಗಿತ್ತು. 

ಸೆಪ್ಟೆಂಬರ್‌ ಮುಂಗಾರು ಮಾರುತಗಳ ನಿರ್ಗಮನ ಕಾಲ. ಹಾಗಾಗಿ, ನಗರದಲ್ಲಿ ಸಾಮಾನ್ಯವಾಗಿ ಮಳೆ ಪ್ರಮಾಣ ಹೆಚ್ಚು. ಆದರೆ, ಈ ಬಾರಿ ಬಿಸಿಲಿನ ಧಗೆ ನಗರದ ನಾಗರಿಕರನ್ನು ಸುಸ್ತು ಮಾಡುತ್ತಿದೆ. ಇದಕ್ಕೆ ಕಾರಣ- ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಏರಿಕೆ ಆಗಿರುವುದು ಎನ್ನುತ್ತದೆ ಹವಾಮಾನ ಇಲಾಖೆ. 

ಮುಂಗಾರು ಮಂಕಾಗಿದೆ. ಈ ಮಧ್ಯೆ ಟ್ರಫ್ ಮತ್ತು ಚಂಡಮಾರುತಗಳ ಪರಿಚಲನೆಯಿಂದ ಮೋಡಕವಿದ ವಾತಾವರಣ ಇದೆ. ಇದು ವಾತಾವರಣದಲ್ಲಿನ ಬಿಸಿಯನ್ನು ಹೊರಹೋಗಲು ಬಿಡುವುದಿಲ್ಲ. ವಾಪಸ್‌ ವಾತಾವರಣಕ್ಕೇ ಕಳುಹಿಸುತ್ತದೆ.

ಹಾಗಾಗಿ, ಸಾಮಾನ್ಯಕ್ಕಿಂತ ಕೇವಲ 1 ಅಥವಾ 2 ಡಿಗ್ರಿ ತಾಪಮಾನ ಹೆಚ್ಚು-ಕಡಿಮೆಯಾದರೂ ಹೆಚ್ಚು ಧಗೆಯ ಅನುಭವ ಆಗುತ್ತದೆ. ಸೋಮವಾರ ಗರಿಷ್ಠ ತಾಪಮಾನ 31.1 ಡಿಗ್ರಿ ಇದ್ದರೆ, ಮಂಗಳವಾರ 31.2 ಡಿಗ್ರಿ ದಾಖಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Advertisement

ಮಳೆ ಬಿದ್ದು 10ರಿಂದ 12 ದಿನಗಳಾಗಿವೆ. ಮತ್ತೂಂದೆಡೆ ಬಂಗಾಳಕೊಲ್ಲಿ ಮತ್ತು ಅರಬ್ಬೀ ಸಮುದ್ರದಿಂದ ಯಾವುದೇ ಮೋಡವಾಗಲಿ ಅಥವಾ ತಂಪು ಗಾಳಿಯಾಗಲಿ ಬರುತ್ತಿಲ್ಲ. ಇದರಿಂದ ವಾತಾವರಣದಲ್ಲಿ ತೇವಾಂಶ ಇಲ್ಲದಂತಾಗಿದೆ. ಈ ಮಧ್ಯೆ ಹೊರಗಡೆಯಿಂದ ಕಿರಣಗಳ ಆಗಮನ ಆಗುತ್ತಿದೆ. ಆದರೆ, ಮೋಡಕವಿದ ವಾತಾವರಣದಿಂದ ನಿರ್ಗಮನ ಆಗುತ್ತಿಲ್ಲ. ಪರಿಣಾಮ ಬೇಸಿಗೆ ಅನುಭವ ಆಗುತ್ತಿದೆ ಎಂದು ಹವಾಮಾನ ತಜ್ಞ ಡಾ.ಎಂ.ಜೆ. ರಾಜೇಗೌಡ ತಿಳಿಸಿದ್ದಾರೆ. 

ಸೆ. 1ರಿಂದ 11ರವರೆಗೆ ನಗರದಲ್ಲಿ ದಾಖಲಾದ ತಾಪಮಾನ ಹೀಗಿದೆ (ಡಿಗ್ರಿ ಸೆಲ್ಸಿಯಸ್‌ನಲ್ಲಿ). 
ದಿನಾಂಕ    ಗರಿಷ್ಠ    ಕನಿಷ್ಠ 

1    28.3    20
2    28.2    20.3
3    29.3    19.7
4    29.8    19.7
5    29.9    20.4
6    29.2    19.9
7    29.2    20.3
8    29.1    20.1
9    29    20.5
10    31.1    21.6
11    31.2    21.7

Advertisement

Udayavani is now on Telegram. Click here to join our channel and stay updated with the latest news.

Next