Advertisement
ಏಕೆಂದರೆ, ಫಲಿತಾಂಶ ಹೊರಬಿದ್ದ ಮರು ದಿನ ಒಬ್ಬ ಪಕ್ಷೇತರ ಶಾಸಕನನ್ನು ಸೆಳೆದು ಸಂಜೆಯೊಳಗೆ ಕಾಂಗ್ರೆಸ್‌ನತ್ತ ಹೋಗುವುದು ತಡೆಯಲಾಗದ ರಾಜ್ಯ ನಾಯಕರು ಇನ್ನು 14 ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ವಿಶ್ವಾಸಮತ ಪ್ರಕ್ರಿಯೆಯಿಂದ ದೂರ ಇರಿಸುವುದು ಅಥವಾ ವಿಧಾನಸಭೆಯಲ್ಲೇ ಎಂಟು ಮಂದಿ ಬಿಜೆಪಿ ಪರ ಮತ ಚಲಾಯಿಸುವಂತೆ ನೋಡಿಕೊಳ್ಳಲು ಸಾಧ್ಯವಾಗುತ್ತಿತ್ತಾ ಎಂಬ ಪ್ರಶ್ನೆಯೂ ಕೇಂದ್ರ ನಾಯಕರನ್ನು ಕಾಡಿತ್ತು.
ಯಡಿಯೂರಪ್ಪ ಅವರು ಹಠ ಹಿಡಿದು ಒಮ್ಮೆ ನನಗೆ ಅವಕಾಶ ಕೊಡಿ. ಬಹುಮತ ಸಾಬೀತುಪಡಿಸುತ್ತೇನೆ ಎಂದು ರಾಜ್ಯಪಾಲರು ಮೊದಲು ಬಿಜೆಪಿ ಸರ್ಕಾರ ರಚನೆಗೆ ಆಹ್ವಾನ ನೀಡುವಂತೆ ನೋಡಿಕೊಂಡರು. ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಶಾಸಕರಿಗೆ ಸಚಿವಗಿರಿ ಆಮಿಷ ನೀಡಿ ರಾಜೀನಾಮೆ ಕೊಟ್ಟು ಚುನಾವಣೆಗೆ ಸ್ಪರ್ಧಿಸಿದಾಗ ವೆಚ್ಚ ನೋಡಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೊಡುವ ಭರವಸೆ ಕೊಟ್ಟರೆ ಬಿಜೆಪಿ ಪರ ಮತ ಹಾಕಲಿದ್ದಾರೆ. ಹಿಂದೆಯೂ ಇಂತಹ ತಂತ್ರ ಯಶಸ್ವಿಯಾಗಿರುವುದರಿಂದ ಈಗಲೂ ಆಗುತ್ತದೆ ಎಂದೇ ಯಡಿಯೂರಪ್ಪ ನಂಬಿದ್ದರು.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗಲೂ ಯಡಿಯೂರಪ್ಪ ಅವರ ಮುಖದಲ್ಲಿ ಆತಂಕ ಕಡಿಮೆಯಾಗಿರಲಿಲ್ಲ. ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸುವಾಗಲೂ ಸಪ್ಪೆಯಾಗೇ ಇದ್ದರು. ಬಹುಮತ ಸಾಬೀತು ಸಾಧ್ಯವಾ? ಎಂಬ ಪ್ರಶ್ನೆ ಅವರಲ್ಲೂ ಇತ್ತು.
Related Articles
Advertisement
ಯಡಿಯೂರಪ್ಪ ಅವರು ಆಪರೇಷನ್ ಕಮಲ ಕಾರ್ಯಾಚರಣೆ ಯಶಸ್ವಿಯಾಗಬಹುದು ಎಂದು ನಂಬಿದ್ದರು. ಅದಕ್ಕಾಗಿ ಜನಾರ್ದನರೆಡ್ಡಿ-ಶ್ರೀರಾಮುಲು, ಉಮೇಶ್‌ಕತ್ತಿ-ಬಸವರಾಜ ಬೊಮ್ಮಾಯಿ-ಮುರುಗೇಶ್ ನಿರಾಣಿ ಅವರನ್ನು ನೆಚ್ಚಿಕೊಂಡಿದ್ದರು. ಅವರೂ ಒಂದಷ್ಟು ಪ್ರಯತ್ನಪಟ್ಟರೂ ಆನಂದ್‌ಸಿಂಗ್, ಪ್ರತಾಪಗೌಡ ಪಾಟೀಲ್ ಬಿಟ್ಟು ಬೇರೆಯವರು ಗಾಳಕ್ಕೆ ಸಿಗಲಿಲ್ಲ.
ಎಷ್ಟೇ ಪ್ರಯತ್ನಪಟ್ಟರೂ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಅವರ ಕುಟುಂಬ ಸದಸ್ಯರ ಮೂಲಕ ಪ್ರಯತ್ನಿಸಿದರೂ ಆಗಲಿಲ್ಲ. ಹೀಗಾಗಿ, ಬಹುಮತ ಸಾಧ್ಯವಿಲ್ಲ ಎಂಬುದು ಶುಕ್ರವಾರ ರಾತ್ರಿಯೇ ಬಿಜೆಪಿ ನಾಯಕರಿಗೆ ಮನದಟ್ಟು ಆಗಿತ್ತು. ಇಷ್ಟಾದರೂ ಎಲ್ಲೋ ಒಂದು ಭರವಸೆ ಯಡಿಯೂರಪ್ಪ ಅವರಿಗೆ ಇತ್ತು. ಕೊನೇ ಪ್ರಯತ್ನ ಎಂದು ಶುಕ್ರವಾರ ರಾತ್ರಿಯೂ ವೀರಶೈವ-ಲಿಂಗಾಯಿತ ಶಾಸಕರ ಸೆಳೆಯುವ ಯತ್ನ ನಡೆಸಿದರು. ಆದರೆ, ಅದೂ ಫಲ ನೀಡಲಿಲ್ಲ.
ಮತ್ತೂಂದೆಡೆ ತಮ್ಮದೇ ಪಕ್ಷದವರು ಹಂಗಾಮಿ ಸ್ಪೀಕರ್ ಆಗಿ ನೋಡಿಕೊಂಡು ಆ ಮೂಲಕ ಬಿಜೆಪಿ ಪರ ಮತ ಹಾಕಿದರೂ ಏನೂ ಆಗುವುದಿಲ್ಲ. ಅನರ್ಹತೆ ವಿಚಾರ ನಮ್ಮ ಸ್ಪೀಕರ್ ಬಳಿಯೇ ಬರಲಿದೆ ಎಂಬ ಸಂದೇಶ ರವಾನಿಸಿದರು. ಆದರೆ, ಸುಪ್ರೀಂಕೋರ್ಟ್ ಬಹುಮತ ಯಾಚನೆಗೆ ಹದಿನೈದು ದಿನ ಕಾಲಾವಕಾಶ ಕೊಟ್ಟ ರಾಜ್ಯಪಾಲರ ನಿರ್ಧಾರವನ್ನೇ ಮಾರ್ಪಡಿಸಿದೆ. ಇನ್ನು ಹಂಗಾಮಿ ಸ್ಪೀಕರ್ ತೀರ್ಮಾನ ಬದಲಿಸುವುದಿಲ್ಲವೇ? ಒಂದೊಮ್ಮೆ ವಿಪ್ ಉಲ್ಲಂ ಸಿ ಅನರ್ಹತೆ ಶಿಕ್ಷೆಗೆ ಗುರಿಯಾದರೆ ಆರು ವರ್ಷ ಚುನಾವಣೆಗೆ ನಿಲ್ಲದಂತಾಗುತ್ತದೆ.
ಜತೆಗೆ, ಕಾಂಗ್ರೆಸ್-ಜೆಡಿಎಸ್ ಜತಗೂಡಿ ಚುನಾವಣೆಯಲ್ಲಿ ಒಮ್ಮತದ ಅಭ್ಯರ್ಥಿ ಹಾಕಿದರೆ ಎಷ್ಟು ವೆಚ್ಚ ಮಾಡಿದರೂ ಗೆಲ್ಲುವುದು ಕಷ್ಟ ಎಂಬ ಆತಂಕ ಬಿಜೆಪಿ ಪರ ಬರಲು ಮನಸ್ಸು ಮಾಡಿದ್ದ ಕೆಲವು ಶಾಸಕರಲ್ಲಿ ಮೂಡಿತು. ಹೀಗಾಗಿ, ಅಂತಿಮವಾಗಿ ಅವರು ಹಿಂದೇಟು ಹಾಕಿದರು.
ಬಿಜೆಪಿಯವರಿಗೆ ಬಹುಮತಕ್ಕೆ ಬೇಕಾದ ಸಂಖ್ಯೆ ಹೊಂದಿಸುವುದು ಎಷ್ಟು ಕಷ್ಟ. ಒಂದೊಮ್ಮೆ ಕಾಂಗ್ರೆಸ್-ಜೆಡಿಎಸ್ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾದರೆ ಮುಂದಿನ ಅಪಾಯಗಳೇನು ಎಂಬುದನ್ನು ಎರಡೂ ಪಕ್ಷದ ಶಾಸಕರಿಗೆ ದೇವೇಗೌಡ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಅವರು ಭಯ ಹಿಡಿಸುವಲ್ಲಿಯೂ ಯಶಸ್ವಿಯಾಗಿದ್ದರು.
ಎಲ್ಲ ಬಾಗಿಲುಗಳು ಮುಚ್ಚಿದ ನಂತರ ಬಿಜೆಪಿ ನಾಯಕರು ಕೈ ಚೆಲ್ಲಿದರು. ಸೋಮಶೇಖರರೆಡ್ಡಿ ಸುಪರ್ದಿಯಲ್ಲಿದ್ದ ವಿಜಯ್‌ಸಿಂಗ್, ಪ್ರತಾಪಗೌಡ ಪಾಟೀಲರನ್ನು ಬಿಟ್ಟು ಕಳುಹಿಸಲು ನಿರ್ಧರಿಸಿದರು ಎಂದು ಹೇಳಲಾಗಿದೆ.ಹೀಗಾಗಿಯೇ, ಶನಿವಾರ ಸದನಕ್ಕೆ ಬರುವಾಗಲೇ ಭಾವನಾತ್ಮಕ ಭಾಷಣ ಮಾಡಿ ನಿರ್ಗಮಿಸುವ ತೀರ್ಮಾನ ಮಾಡಿಯೇ ಬಂದಿದ್ದರು. ಆದರೆ, ಬಿಜೆಪಿ ಕಾರ್ಯಕರ್ತರು-ಮುಖಂಡರಲ್ಲಿ ಏನಾದರೂ ಮ್ಯಾಜಿಕ್ ಆಗಲಿದೆ ಎಂದೇ ಕೊನೇವರೆಗೂ ನಂಬಿದ್ದರು. ಆದರೆ, ಅದು ಹುಸಿಯಾಯಿತು. ಬಿಎಸ್‌ವೈ ಕನಸು ಭಗ್ನ
ಮೇ 17 ರಂದು ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಯೇ ತೀರುತ್ತೇನೆ ಎಂದು ಹೇಳಿದ್ದ ಮಾತು ಸತ್ಯವಾಯಿತಾದರೂ ಮುಖ್ಯಮಂತ್ರಿಯಾಗಿ ಮುಂದುವರಿಯುವ ಕನಸು ಭಗ್ನಗೊಂಡಿತು. ಚುನಾವಣೆಗೆ ಮುನ್ನ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎಂಟು ದಿನದ ಸುಲ್ತಾನ ಎಂದು ಟೀಕಿಸಿದ್ದ ಯಡಿಯೂರಪ್ಪ ಮೂರು ದಿನದ ಸುಲ್ತಾನರಾದರು. ರಾಜಕೀಯ ಮೇಲಾಟದಲ್ಲಿ ಬಿ.ಎಸ್.ಯಡಿಯೂರಪ್ಪ ಮತ್ತೂಮ್ಮೆ “ದುರಂತ ನಾಯಕ’ ಆಗಬೇಕಾಯಿತು. ಹಿಂದೊಮ್ಮೆ ಏಳು ದಿನ ಮುಖ್ಯಮಂತ್ರಿಯಾಗಿ ನಿರ್ಗಮಿಸಿದಂತೆ ಈಗ ಮೂರು ದಿನಕ್ಕೆ ಸೀಮಿತವಾಗಿ ಹೋಗಬೇಕಾಯಿತು. “ಚಾಣಕ್ಯ’ನ ತಂತ್ರ ವಿಫಲವಾಯ್ತಾ?
ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ಸಂಖ್ಯೆ ಪಡೆಯುವಲ್ಲಿ ಬಿಜೆಪಿ ವಿಫಲವಾಯ್ತಾ? ಚುನಾವಣಾ ಪೂರ್ವದಲ್ಲಿ ಅಮಿತ್ ಶಾ ಹೂಡಿದ್ದ ಕಾರ್ಯತಂತ್ರ ಪೂರ್ಣವಾಗಿ ಫಲಿಸಲಿಲ್ಲವಾ? ಎಂಬ ಚರ್ಚೆಯೂ ನಡೆಯುತ್ತಿದೆ. 72 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ನಂತರ ಬಿಡುಗಡೆಯಾದ ಅಭ್ಯರ್ಥಿಗಳಲ್ಲಿ ಗೆದ್ದೇ ಗೆಲ್ಲುವ ಗಟ್ಟಿ ಕುಳಗಳು ಹೆಚ್ಚು ಇರಲಿಲ್ಲ. ಹಳೇ ಅಭ್ಯರ್ಥಿಗಳನ್ನು ಬಿಟ್ಟು ಮಣೆ ಹಾಕಿದ ಹೊಸಬರು ಗೆಲುವಿನ ಹತ್ತಿರ ಬರಲಿಲ್ಲ. ಕೆಲವು ಕಡೆ ಸ್ಪರ್ಧೆ ಮಾಡಲು ಅಭ್ಯರ್ಥಿಗಳು ಸಿಗಲಿಲ್ಲ, ಟಿಕೆಟ್ ಕೊಟ್ಟವರು ಬೇಡ ಎಂದು ಹೇಳಿದ್ದರು. ಇದು ಮೊದಲ ಹಂತದ ಫೇಲ್. ಇಷ್ಟರ ನಡುವೆಯೂ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಭಾಷಣ, ಶೋಭಾ ಕರಂದ್ಲಾಜೆ ಸೇರಿ ವಾರ್ ರೂಂ ತಂಡದಿಂದ ಕಾಂಗ್ರೆಸ್ ವಿರುದ್ಧ ವಾಗಾœಳಿ, ಆಡಳಿತ ವಿರೋಧಿ ಅಲೆಯಿಂದಾಗಿ ಬಿಜೆಪಿ 104 ತಲುಪಲು ಸಾಧ್ಯವಾಯಿತು. ಇದು ಸಕ್ಸಸ್. ಇಲ್ಲದಿದ್ದರೆ ಬಿಜೆಪಿ 75 ಸ್ಥಾನ ಗಳಿಸುವುದು ಕಷ್ಟವಾಗುತ್ತಿತ್ತು ಎಂಬ ಮಾತುಗಳು ಬಿಜೆಪಿಯಲ್ಲೇ ಕೇಳಿಬರುತ್ತಿವೆ. – ಎಸ್.ಲಕ್ಷ್ಮಿನಾರಾಯಣ