Advertisement

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

10:21 AM Mar 04, 2024 | Team Udayavani |

ಇದು ಸಂತೋಷದ ಮಾರುಕಟ್ಟೆ. ಒಂದು ಅಂದಾಜಿನ ಪ್ರಕಾರ ಇದರ ವ್ಯಾಪ್ತಿ 5 ರಿಂದ 6 ಟ್ರಿಲಿಯನ್‌ ಡಾಲರ್‌ಗಳಷ್ಟು ಅಗಾಧ!. ಇಲ್ಲಿ ಎನೇನು ಬಿಕರಿಯಾಗುತ್ತದೆ ಅಂತೀರಾ?. ಆಧುನಿಕ ಮಾನವರು ಮನಶಾಂತಿಗಾಗಿ, ಸಂತೋಷಕ್ಕಾಗಿ ಏನೇನು ಕಸರತ್ತುಗಳನ್ನು ಮಾಡುತ್ತಾರೋ ಅವೆಲ್ಲ. ಇಲ್ಲಿ ಬರುವ ಗಿರಾಕಿಗಳು ಒಂದೇ ವಸ್ತುವನ್ನು ಖರೀದಿಸುವುದಿಲ್ಲ. ಬದಲಾಗಿ ಒಬ್ಬೊಬ್ಬರ ಅಭಿರುಚಿಯೂ ಭಿನ್ನ. ಒಬ್ಬರಿಗೆ ವಾರಾಂತ್ಯ ಪಾರ್ಟಿ ಮಾಡುವುದಲ್ಲಿ ಸಮಾಧಾನ ಸಿಕ್ಕರೆ, ಇನ್ನೊಬ್ಬರಿಗೆ ಟ್ರಕ್ಕಿಂಗ್‌ನಲ್ಲಿ, ಮತ್ತೂಬ್ಬರಿಗೆ ಅಧ್ಯಾತ್ಮದಲ್ಲಿ, ಮಗದೊಬ್ಬರಿಗೆ ಶಾಪಿಂಗ್‌ ಮಾಡುವುದರಲ್ಲಿ, ಇನ್ನು ಹಲವರಿಗೆ ಸಂತೋಷವಾಗಿರುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಹ್ಯಾಪಿನೆಸ್‌ ಕೋಚ್‌ಗಳ ಯೂಟ್ಯೂಬ್‌ ವೀಡಿಯೋಗಳಲ್ಲಿ, ಬೆವರಿಳಿಸುವ ಜಿಮ್ ಗಳಲ್ಲಿ, ಸಿನೆಮಾ ನೋಡುವುದರಲ್ಲಿ, ಯೋಗ ತರಬೇತಿಯಲ್ಲಿ. ಒಟ್ಟಿನಲ್ಲಿ ಕೊಡುಕೊಳ್ಳುವ ಪ್ರಕ್ರಿಯೆ ಹತ್ತು ಹಲವು ರೀತಿಯಲ್ಲಿ, ರೂಪದಲ್ಲಿ. ಅಂತಿಮ ಗುರಿಯೆಂದರೆ ಗೊಂದಲದ, ಧಾವಂತದ, ವ್ಯಾಪಾರಿ ಮನೋಭಾವದ ಸಂಕೀರ್ಣ ಬದುಕಿನ ಜಂಜಾಟದ ನಡುವೆ ಒಂದಷ್ಟು ಮನಶಾಂತಿ, ಸಮಾಧಾನದ ಹುಡುಕಾಟ. ಇದಕ್ಕಾಗಿ ನಿರಂತರ ವ್ಯಾಪಾರ, ವಹಿವಾಟು. ಒಂದು ಕಾಲದಲ್ಲಿ ಸಂತೋಷ, ನೆಮ್ಮದಿಯೆಂದರೆ ಅದೊಂದು ಮನಸ್ಸಿನ ಭಾವ, ಅಧ್ಯಾತ್ಮದ ಅನುಭವ. ಆದರೆ ಈಗ ಸಂತೋಷ ವ್ಯಾಪಾರೀಕರಣದ ಅವಿಭಾಜ್ಯ ತಂತ್ರ. Money can’t buy happiness ಎನ್ನುವ ಮಾತಿಗೆ ತದ್ವಿರುದ್ಧವಾಗಿ ಕಾಸು ಕೊಟ್ಟಾದಾರು ಸಂತೋಷ ಪಡೆದುಕೊಳ್ಳುವ ನಿತ್ಯದ ಪರದಾಟ.

Advertisement

ಉದಾಹರಣೆಗೆ ಅಮೆರಿಕದ ಯಾಲೇ ವಿಶ್ವವಿದ್ಯಾನಿಲಯವು ಕೋರ್ಸ್‌ ಇರಾದ ಮೂಲಕ ನಡೆಸುವ “ದಿ ಸೈನ್ಸ್‌ ಆಫ್ ವೆಲ್‌ ಬಿಯಿಂಗ್‌’ ಎನ್ನುವ ಆನ್‌ಲೈನ್‌ ತರಬೇತಿಗೆ ಇಲ್ಲಿವರೆಗೆ ಸುಮಾರು 4.6 ಮಿಲಿಯನ್‌ ಮಂದಿ ನೋಂದಣಿ ಮಾಡಿಸಿಕೊಂಡು ತರಬೇತಿ ಪಡೆದಿದ್ದಾರೆ. ಜೀವನದಲ್ಲಿ ಕ್ಷೇಮವಾಗಿರುವುದಕ್ಕೂ ತರಬೇತಿ ಆರಂಭವಾಗಿದೆ ಹಾಗೂ ಅದಕ್ಕೆ ಅತ್ಯಂತ ಬೇಡಿಕೆಯಿದೆ ಎನ್ನುವುದು ಜೀವನದಲ್ಲಿ ನೆಮ್ಮದಿ, ಸಂತೋಷ ಹಾಗೂ ತೃಪ್ತಿ ಪಡೆದುಕೊಳ್ಳುವ ಮನುಷ್ಯನ ಚಡಪಡಿಕೆಯ ಪ್ರಮಾಣವನ್ನು ಊಹಿಸಿಕೊಳ್ಳಬಹುದು. ಪ್ರಪಂಚ ದಾದ್ಯಂತ ಸುಮಾರು 2,000 ವಿಶ್ವವಿದ್ಯಾನಿಲಯಗಳು ಸಂತೋಷದ ಮಟ್ಟವನ್ನು ಅಳೆಯುವುದಕ್ಕೆ ಹಾಗೂ ತಂತ್ರಗಳನ್ನು ತಿಳಿಯುವುದಕ್ಕೆ ಸಂಶೋಧನ ಕೇಂದ್ರಗಳನ್ನು ತೆರೆದಿವೆ. ಆದರೂ ಸಂತೋಷವೆಂದರೇನು? ಎನ್ನುವುದನ್ನು ಅರ್ಥಮಾಡಿಕೊಂಡಿ ದ್ದೇವೆಯೇ?. ಉತ್ತರ ಬಹುಶಃ ಇಲ್ಲ.

ಹಿಂದೂ ಧರ್ಮ ಗ್ರಂಥಗಳ ಪ್ರಕಾರ ಅಂತಿಮ ಶಾಂತಿ, ಸಮಾಧಾನ, ಸಂತೋಷ ಸಿಗುವುದು ನಾಲ್ಕು ಪುರುಷಾರ್ಥಗಳನ್ನು ಸಮರ್ಥವಾಗಿ ಪಾಲಿಸುವುದರಿಂದ. ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷಗಳೆಡೆಗೆ ಜವಾಬ್ದಾರಿಯುತ ಪಯಣದಿಂದ ಹಾಗೂ ಆತ್ಮದ ಮುಕ್ತಿಯಲ್ಲಿ. ಇಸ್ಲಾಂ ಧರ್ಮದ ಪ್ರಕಾರ ಸಂತೋಷ, ನೆಮ್ಮದಿ ಎಂದರೆ ಅದು ಜೀವನ ಪರ್ಯಂತದ ಪ್ರಕ್ರಿಯೆ, ಶಾಂತಿ, ಸಮಾಧಾನ ಹಾಗೂ ಶಾಶ್ವತ ಆನಂದದ ಅನುಭೂತಿ. ಜುಡಾಯಿಸಂ ಪ್ರಕಾರ ಜೀವನದಲ್ಲಿ ಶಾಂತಿ, ಸಂತೋಷ ಪಡೆಯುವುದು ಪ್ರತಿಯೊಬ್ಬನ ನೈತಿಕ ಜವಾಬ್ದಾರಿ. ಇವೆಲ್ಲ ವ್ಯಾಖ್ಯಾನಗಳಿದ್ದರೂ ಶಾಶ್ವತ ಆನಂದವನ್ನು ಪಡೆದುಕೊಳ್ಳುವ ಜನಸಾಮಾನ್ಯನ ಹುಡುಕಾಟ ಮಾತ್ರ ನಿರಂತರ.

ಈ ಶತಮಾನದ ಮಾನವನ ಜೀವನಮಟ್ಟ ಹಲವು ರೀತಿಯಲ್ಲಿ ಸುಧಾರಿಸಿದೆ, ನಿತ್ಯ ಜೀವನದ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಮೊದಲಿನಷ್ಟು ಕಷ್ಟವಲ್ಲ. ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿನ ಆರ್ಥಿಕ ಮಟ್ಟದಲ್ಲಿ ಸುಧಾರಣೆ ಕಾಣಸಿಗುತ್ತದೆ. ಸುಖ ಸಂಸಾರಕ್ಕೆ ಬೇಕಾದ ಮೂಲಭೂತ ಅಗತ್ಯಗಳಿಗಿಂತ ಹೆಚ್ಚಿನದನ್ನು ಸಂಪಾದಿಸುವ ಆರ್ಥಿಕ ಶಕ್ತಿ ಬಂದಿದೆ. ಆದರೆ ಸಮಸ್ಯೆಯಿರುವುದು ನಾಗಾಲೋಟದ ಬದುಕಿನಲ್ಲಿ ನೆಮ್ಮದಿ ಮರೀಚಿಕೆಯಾಗಿರುವುದು, ಇದರ ಪರಿಣಾಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಸಮಸ್ಯೆ. ಮನಸ್ಸಿನಲ್ಲಿ ಅದೇನೋ ತಳಮಳ, ಎನೇ ಮಾಡಿದರೂ ಮೊದಲಿನ ನೆಮ್ಮದಿ ಇಲ್ಲ. ಶಾಂತಿ ಇಲ್ಲ. ಊರು ಬಿಟ್ಟು ನಗರ ಸೇರಿದವರಿಗೆ ಎಲ್ಲಿಗೂ ಸಲ್ಲದವರಾಗುತ್ತಿದ್ದೇವೆ ಎನ್ನುವ ಚಿಂತೆ. ಕೈ ತುಂಬಾ ಕಾಸು ಸಂಪಾದಿಸುವವರಿಗೆ ಎಷ್ಟು ಖರೀದಿ ಮಾಡಿದರೂ ತಾನು ಪಡೆಯದ್ದು ಇನ್ನೇನೋ ಇದೆ ಎನ್ನುವ ತಳಮಳ, ಅದನ್ನು ಪಡೆದುಕೊಳ್ಳಲು ಇನ್ನಷ್ಟು ಖರೀದಿ. ಆದರೆ ಆ ಆತಂಕ ಮಾತ್ರ ಮನಸ್ಸಿನಿಂದ ಹೋಗಲೊಲ್ಲದು.

ಇಂತಹ ಮನಃಸ್ಥಿತಿಯ ಹೊಯ್ದಾಟದಲ್ಲಿರುವವರ ಕಣ್ಣೆದುರಿಗೆ ಸುಲಭವಾಗಿ ಕಾಣುವುದು, ಸಾಮಾಜಿಕ ಜಾಲತಾಣದಲ್ಲಿ ಕಂಡು ಬರುವ ಸಂತೋಷದ ಮಾದರಿ ಗಳು ಆ ಪರಿಕಲ್ಪನೆಯಲ್ಲಿಯೇ ಸಂತೋಷದ ಹುಡುಕಾಟ, ನೆಮ್ಮದಿಗಾಗಿ ಅಲೆದಾಟ. ಈ ಅನ್ವೇಷಣೆಯ ದಾರಿಯಲ್ಲಿ ನಮ್ಮೆದುರಿಗೆ ತೆರೆದುಕೊಳ್ಳುವುದು ಸಂತೋಷವನ್ನು ತಂದುಕೊಡುವ ವ್ಯವಹಾರದ ಮಾದರಿಗಳು. ಮಾಸ್ಟರ್‌ ಕ್ಲಾಸ್‌ಗಳು, ಡೊಪೋಮಿನ್‌ ಹೆಚ್ಚಿಸಲು ಬಳಸಬಹುದಾದ ವೈದ್ಯಕೀಯ ಉತ್ಪನ್ನಗಳು, ಧನಾತ್ಮಕ ಚಿಂತನೆ ಹೆಚ್ಚಿಸುವ ವ್ಯಾಯಾಮಗಳು, ಆಹಾರೋತ್ಪನ್ನಗಳು, ಸುಂದರವಾಗಿ ಕಾಣಿಸುವುದರಿಂದ ಆನಂದ ವಾಗಿರಬಹುದು ಎನ್ನುವುದಕ್ಕೆ, ಜಿಮ್‌ ಸೇರಿದಂತೆ ದೇಹಕ್ಕೆ ಕಸರತ್ತು ನೀಡುವ ತರಬೇತಿ ಕೇಂದ್ರಗಳ ಜಾಹಿರಾತುಗಳು ಇತ್ಯಾದಿ. ಒಟ್ಟಿನಲ್ಲಿ ಸಂತೋಷ ಪಡೆಯುವುದಕ್ಕೆ ಹಲವಾರು ಪರಿಹಾರೋಪಾಯಗಳು, ಶಾಂತಿ ನೆಮ್ಮದಿ ಪ್ರವಾಸಿ ತಾಣಗಳಲ್ಲಿವೆ, ಹಸುರು ಪರಿಸರದಲ್ಲಿದೆ, ನದಿ, ಬೆಟ್ಟಗುಡ್ಡಗಳಲ್ಲಿದೆ ಎನ್ನುವ ಟ್ರಾವೆಲಿಂಗ್‌ ಪ್ರಚಾರಗಳು. ಆದರೆ ಅದನ್ನು ಪಡೆದುಕೊಳ್ಳಲು ಮತ್ತದೇ ಹಣವೆಂಬ ಅಸ್ತ್ರ. ಒಂದು ಅಂಕಿಅಂಶದ ಪ್ರಕಾರ 175 ಬಿಲಿಯನ್‌ ಹ್ಯಾಪಿನೆಸ್‌, 1.5 ಮಿಲಿಯನ್‌ ಹ್ಯಾಪಿನೆಸ್‌ ಇಸ್‌ ಚಾಯ್ಸ ಎನ್ನುವ ಇನ್‌ಸ್ಟಾಗ್ರಾಂ ಪೋಸ್ಟ್‌ಗಳಿವೆ. ಇತರ ಸಾಮಾಜಿಕ ಜಾಲತಾಣಗಳೇನು ಕಡಿಮೆ ಇಲ್ಲ. ಮನುಷ್ಯ ಹೇಗೆ ಸಂತೋಷ ವಾಗಿರಬಹುದು, ನೆಮ್ಮದಿ ಪಡೆದುಕೊಳ್ಳಬಹುದು ಎನ್ನುವುದರ ಬಗೆಗೆ ಸಂದೇಶಗಳು ಲೆಕ್ಕವಿಲ್ಲದಷ್ಟು. ದಾರ್ಶನಿಕರು ಹೇಳುವಂತೆ ಸಂತೋಷ ಬೇರೆಲ್ಲೂ ಇಲ್ಲ ನಮ್ಮೊಳಗೇ ಇದೆ ಎನ್ನುವುದನ್ನು ಸಾವಿರಾರು ಜನರು ಹಲವಾರು ರೀತಿಯಲ್ಲಿ ಹೇಳುವ ಸಂದೇಶಗಳೂ ಇವೆ. ಆದರೂ ಗಿಟ್ಟಿಸಿಕೊಳ್ಳುವಲ್ಲಿ ಎಡವುತ್ತಿದ್ದೇವೆ. ಸಂತೋಷ ಸಣ್ಣಸಣ್ಣ ವಿಚಾರಗಳಲ್ಲಿವೆ, ಅದು ದಿನನಿತ್ಯದ ನಿರಂತರ ಪ್ರಕ್ರಿಯೆ ಎನ್ನುವುದು ಮರೆತೇ ಬಿಡುತ್ತೇವೆ. ನಮಗೆಲ್ಲ ಸಂತೋಷವೆಂದರೆ ಅದೊಂದು ಗುರಿ. ಅದರೆಡೆಗೆ ಗಂಭೀರವಾಗಿ ಯೋಚಿಸುತ್ತೇವೆ, ಯೋಜಿಸುತ್ತೇವೆ, ಕೂಡಿಡುತ್ತೇವೆ. ಈ ಪ್ರಕ್ರಿಯೆಯಲ್ಲಿ ಹಲವನ್ನು ಕಳೆದುಕೊಳ್ಳುತ್ತೇವೆ. ಸಂತೋಷದ ಪರಿಕಲ್ಪನೆಯ ಮಾದರಿಯನ್ನು ಮುಂದಿಡುವ ಮಾರುಕಟ್ಟೆ ಬೆಳೆಯುತ್ತಲೇ ಇದೆ.

Advertisement

– ಡಾ| ಗೀತಾ ಎ.ಜೆ., ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next