ಮಂಡ್ಯ: ಮುಂಬಯಿಯಲ್ಲಿ ನೆಲೆಸಿದ್ದ ನಾಗಮಂಗಲ ಮೂಲದ ವ್ಯಕ್ತಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಲಾಕ್‌ಡೌನ್ ನಡುವೆಯೂ ಸರಕು-ಸಾಗಣೆ ವಾಹನದಲ್ಲಿ ಮುಂಬಯಿಯಿಂದ ಹುಟ್ಟೂರು ಸಾತೇನಹಳ್ಳಿಗೆ ಆಗಮಿಸಿ ಗ್ರಾಮೀಣ ಭಾಗಕ್ಕೂ ಸೋಂಕು ವ್ಯಾಪಿಸುವುದಕ್ಕೆ ಕಾರಣನಾಗಿದ್ದಾನೆ.
ನಾಗಮಂಗಲ ಮೂಲದ 50 ವರ್ಷದ ವ್ಯಕ್ತಿಯೊಬ್ಬರು ಕಳೆದ 20 ವರ್ಷಗಳಿಂದ ಮುಂಬಯಿಯಲ್ಲಿ ನೆಲೆಸಿದ್ದು, ಜೀವನೋಪಾಯಕ್ಕಾಗಿ ಹೊಟೇಲ್ ಉದ್ಯಮ ನಡೆಸುತ್ತಿದ್ದಾರೆ. ಎ.20ರಂದು ರಾತ್ರಿ 9 ಗಂಟೆಗೆ ಮುಂಬಯಿಯ ವಾಶಿ ಮಾರುಕಟ್ಟೆ ಬಳಿಯ ಪಾರ್ಕಿಂಗ್ ಸ್ಥಳದಿಂದ ಖರ್ಜೂರ ಸಾಗಿಸುವ ಕ್ಯಾಂಟರ್ ವಾಹನ (ಕೆಎ-13 ಸಿ-8352)ದಲ್ಲಿ ಪ್ರಯಾಣಿಸಿ ಎ. 21ರಂದು ಬೆಳಗ್ಗೆ 6 ಗಂಟೆಗೆ ಉಡುಪಿಯ ಐಒಸಿ ಪೆಟ್ರೋಲ್ ಬಂಕ್ ಬಳಿ ಸ್ನಾನ ಮತ್ತು ಉಪಾಹಾರ ಸೇವಿಸಿ ಬಳಿಕ ಮಂಗಳೂರು ಕಡೆ ಪ್ರಯಾಣಿಸಿದ್ದಾರೆ.
ಎ.22ರಂದು ಪೂರ್ವಾಹ್ನ 4.30ರ ವೇಳೆಗೆ ಓಲ್ಡ್ ಬಂದರ್ ಮಾರುಕಟ್ಟೆಗೆ ಬಂದು ಅಂಗಡಿಗಳಿಗೆ ಭೇಟಿ ನೀಡಿ ಬಳಿಕ ಅಲ್ಲಿಂದ ಹೊರಟು ಬೆಳಗ್ಗೆ 11.30ಕ್ಕೆ ಹಾಸನ ಮಾರ್ಗವಾಗಿ ಚನ್ನರಾಯಪಟ್ಟಣದಲ್ಲಿ ಬಂದಿಳಿದಿದ್ದರು. ಅನಂತರ ಸಂಬಂಧಿಕ ತಂದಿದ್ದ ಕಾರಿನಲ್ಲಿ (ಕೆಎ-54 ಇ-2620) ಸಾತೇನಹಳ್ಳಿಗೆ ತಲುಪಿದ್ದರು.
ಮನೆಗೆ ಹೋದ ಬಳಿಕ ಕುಟುಂಬದವರೆಲ್ಲರನ್ನೂ ಬೇರೆ ಮನೆಯಲ್ಲಿಟ್ಟು ಒಂಟಿಯಾಗಿ ಮನೆಯಲ್ಲಿದ್ದರು. ಎ.24ರಂದು ಸ್ವಯಂಪ್ರೇರಿತರಾಗಿ ಆಗಮಿಸಿ ಆರೋಗ್ಯಾಧಿಕಾರಿಗೆ ವಿಷಯ ತಿಳಿಸಿ ತಪಾಸಣೆಗೆ ಒಳಗಾದರು. ಈ ಸಮಯದಲ್ಲಿ ಅವರ ಗಂಟಲು ದ್ರವ, ರಕ್ತವನ್ನು ಪರೀಕ್ಷೆಗೆ ಕಳುಹಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ.
ಈ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿ ಹಾಸನದ 27 ವರ್ಷದ ಚಾಲಕ, 36 ವರ್ಷದ ಯುವಕ, ಭಾವಮೈದುನ ಮತ್ತು ಸೋಂಕಿತ ವ್ಯಕ್ತಿಯ ಪತ್ನಿಯನ್ನು ಗುರುತಿಸಲಾಗಿದೆ. ಎರಡನೇ ಹಂತದಲ್ಲಿ ವ್ಯಕ್ತಿಯ ತಂದೆ-ತಾಯಿ, ಭಾವಮೈದುನನ ಪತ್ನಿ, ಮಕ್ಕಳನ್ನು ಗುರುತಿಸಿ ಹೋಂ ಕ್ವಾರಂಟೈನ್‌ನಲ್ಲಿಡಲಾಗಿದೆ. ಸೋಂಕಿತ ವ್ಯಕ್ತಿಯನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ಹಾಸನ ಮೂಲದ ಚಾಲಕ ಮತ್ತು ಕ್ಲೀನರ್‌ಗಾಗಿ ಆ ಜಿಲ್ಲೆಯ ಪೊಲೀಸರು ಹುಡುಕಾಟ ನಡೆಸಿದ್ದಾರೆ.