Advertisement

ಮಹದಾಯಿ ಸಂಧಾನ ಸೂತ್ರ ಆಶಾದಾಯಕ

06:00 AM Dec 21, 2017 | Team Udayavani |

ಬೆಂಗಳೂರು: ಮಹದಾಯಿ, ಕಳಸಾ-ಬಂಡೂರಿ ವಿಚಾರದಲ್ಲಿ ಉತ್ತರ ಕರ್ನಾಟಕ ಭಾಗದ ಹಲವು ವರ್ಷಗಳ ನಿರೀಕ್ಷೆ ಈಡೇರುವ ಲಕ್ಷಣ ಗೋಚರವಾಗಿದ್ದು, ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಪೂರಕವಾಗುವ ಮಹತ್ವದ ಘೋಷಣೆಗೆ ಕ್ಷಣಗಣನೆ ಆರಂಭವಾಗಿದೆ. ವಿಶೇಷವೆಂದರೆ ಕಳಸಾ-ಬಂಡೂರಿ ನಾಲಾ ವ್ಯಾಪ್ತಿಗೆ ಬರುವ ಹುಬ್ಬಳ್ಳಿಯಲ್ಲೇ ಬಿಜೆಪಿಯಿಂದ ಈ ಘೋಷಣೆ ಹೊರಬೀಳಲಿದೆ.

Advertisement

ಈ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯುತ್ತಿರುವ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ಹುಬ್ಬಳ್ಳಿ ಸಮಾವೇಶ “ಮಹದಾಯಿ ಸಮಾವೇಶ’ವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಕಾಣಿಸಿಕೊಂಡಿದೆ. ಗುರುವಾರದೊಳಗೆ ಗೋವಾ ಮುಖ್ಯಮಂತ್ರಿಗಳು ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಅನುಮತಿ ಕೊಡುವ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಲಿದೆ. ಅದನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಭಾಗವಹಿಸುವ ಹುಬ್ಬಳ್ಳಿ ಪರಿವರ್ತನಾ ಸಮಾವೇಶದಲ್ಲಿ ಪ್ರಕಟಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಬುಧವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಸಮ್ಮುಖದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌, ಕೇಂದ್ರ ಸಚಿವ ಅನಂತಕುಮಾರ್‌, ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌, ಸಹ ಚುನಾವಣಾ ಉಸ್ತುವಾರಿ ಪಿಯೂಷ್‌ ಗೋಯೆಲ್‌, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌, ಸಂಸದ ಪ್ರಹ್ಲಾದ್‌ ಜೋಶಿ ಮತ್ತಿತರರು ಸುದೀರ್ಘ‌ ಸಮಾಲೋಚನೆ ನಡೆಸಿದ್ದಾರೆ. ಈ ಸಭೆಯ ಫ‌ಲಿತಾಂಶವನ್ನು ಯಡಿಯೂರಪ್ಪ ಅವರು ಗುರುವಾರ ಹುಬ್ಬಳ್ಳಿಯಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಘೋಷಣೆ ಮಾಡಲಿದ್ದಾರೆ.

ಆದರೆ, ಮಹದಾಯಿ ನದಿಯಿಂದ ಕಳಸಾ-ಬಂಡೂರಿ ಯೋಜನೆಗೆ ನೀರು ಬಿಡುಗಡೆ ಮಾಡಲು ಗೋವಾ ಸರ್ಕಾರ ಒಪ್ಪಿಕೊಂಡಿದೆಯೇ? ಮಾತುಕತೆ ಮೂಲಕ ಬಗೆಹರಿಸಲು ಮಾತ್ರ ಸಮ್ಮತಿಸಿದೆಯೇ ಅಥವಾ ನಿಗದಿತ ಕಾಲಮಿತಿಯಲ್ಲಿ ವಿವಾದ ಬಗೆಹರಿಸಲು ಗೋವಾ ಒಪ್ಪಿದೆಯೇ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಹೀಗಾಗಿ ಗುರುವಾರ ಬೆಳಗ್ಗೆ ಗೋವಾ ಮುಖ್ಯಮಂತ್ರಿಗಳು ಕಳುಹಿಸುವ ಸಂದೇಶವನ್ನು ಯಡಿಯೂರಪ್ಪ ಅವರ ಘೋಷಣೆ ಆಧರಿಸಿದೆ.

ಮೂಲಗಳ ಪ್ರಕಾರ ಇದು ಕುಡಿಯುವ ನೀರಿನ ಸಮಸ್ಯೆಯಾಗಿರುವುದರಿಂದ ಮಹದಾಯಿ ನದಿಯಿಂದ ರಾಜ್ಯ ಕೇಳಿದಷ್ಟು ನೀರು ಅಲ್ಲದಿದ್ದರೂ ಗೋವಾ ರಾಜ್ಯಕ್ಕೆ ಯಾವುದೇ ಸಮಸ್ಯೆಯಾಗದ ರೀತಿ ಸ್ವಲ್ಪ ಮಟ್ಟಿಗೆ ನೀರು ಹರಿಸಲು ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಅವರು ಒಪ್ಪಿಕೊಂಡಿದ್ದಾರೆ. ಆದರೆ, ಅದಕ್ಕೆ ಮುನ್ನ ಮಾತುಕತೆ ನಡೆಸುವ ಬಗ್ಗೆ ಯಾವುದೇ ಮಾಹಿತಿ ಗೊತ್ತಾಗಿಲ್ಲ.

Advertisement

ಮನವೊಲಿಕೆ ಯಶಸ್ವಿ:
ಅಮಿತ್‌ ಶಾ ಅವರ ನೇತೃತ್ವದಲ್ಲಿ ಸುಮಾರು ಅರ್ಧಗಂಟೆಗಳ ಕಾಲ ನಡೆದ ಸಭೆಯಲ್ಲಿ, ಮಹದಾಯಿ ವಿವಾದ ಬಗೆಹರಿಸುವ ಕುರಿತಂತೆ ರಾಜ್ಯ ನಾಯಕರು ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ಗೆ ಮನವರಿಕೆ ಮಾಡಿಕೊಟ್ಟಿ¨ªಾರೆ. ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದರ ಜತೆಗೆ ಚುನಾವಣಾ ದೃಷ್ಟಿಯಿಂದಲೂ ಈ ವಿಚಾರ ಎಷ್ಟು ಮಹತ್ವದ್ದು ಎಂಬುದನ್ನು ವಿವರಿಸಿದರು. ಅಮಿತ್‌ ಶಾ ಅವರ ಮನವೊಲಿಕೆ ಮಾತಿಗೂ ಒಪ್ಪಿದ ಪರಿಕ್ಕರ್‌, ಪಕ್ಷದ ನಾಯಕರು, ಸಚಿವ ಸಂಪುಟ ಸದಸ್ಯರು ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರವನ್ನು ಗುರುವಾರ ಕಳುಹಿಸಿಕೊಡುವ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಸಭೆ ಬಹುತೇಕ ಫ‌ಲಪ್ರದವಾಗಿದ್ದು, ಅಮಿತ್‌ ಶಾ ಸಂಧಾನಕ್ಕೆ ಗೋವಾ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಅಮಿತ್‌ ಶಾ ಅವರ ಸಮ್ಮುಖದಲ್ಲಿ ಮಹದಾಯಿ ವಿಚಾರದ ಬಗ್ಗೆ ಗೋವಾ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದು, ಮಾತುಕತೆ ಸಮಾಧಾನ ತಂದಿದೆ. ಗುರುವಾರದೊಳಗೆ ಗೋವಾ ಮುಖ್ಯಮಂತ್ರಿಗಳು ಅನುಮತಿ ಕೊಡುವ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳಲಿದ್ದು, ಅವರು ಕಳುಹಿಸುವ ಮಾಹಿತಿಯನ್ನು ಹುಬ್ಬಳ್ಳಿಯಲ್ಲಿ ನಡೆಯುವ ಪರಿವರ್ತನಾ ಯಾತ್ರೆಯಲ್ಲಿ ಲಕ್ಷಾಂತರ ಜನರ ಮುಂದೆ ಘೋಷಣೆ ಮಾಡುತ್ತೇವೆ.
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next