Advertisement

ಜನರ ಪ್ರೀತಿ ಉಳಿಸಿಕೊಳ್ಳದ ಎ‍ಚ್ಡಿಕೆ:ಚಲುವರಾಯಸ್ವಾಮಿ

02:02 AM May 28, 2019 | Sriram |

ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಪ್ರಬುದ್ಧ ಮತದಾರರು ಪ್ರಜ್ಞಾವಂತಿಕೆ ತೀರ್ಪು ನೀಡಿದ್ದಾರೆ ಎಂದು ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಹತ್ತು ತಿಂಗಳ ಆಡಳಿತದಲ್ಲಿ ಅವರು ಕೊಟ್ಟ ಭರವಸೆಗಳನ್ನು ಸಮರ್ಪಕವಾಗಿ ಈಡೇರಿಸಿದ್ದರೆ ಜನರು ಅವರನ್ನು ಉಳಿಸಿಕೊಳ್ಳುತ್ತಿದ್ದರು. ಜಿಲ್ಲೆಯ ಜನರು ಬಹಳ ಸೂಕ್ಷ್ಮ. ಅವರು ಯಾವುದೇ ತೀರ್ಮಾನ ವನ್ನು ಅಷ್ಟು ಸುಲಭವಾಗಿ ತೆಗೆದುಕೊಳ್ಳುವುದಿಲ್ಲ ಎಂದು ದೇವೇಗೌಡರೇ ನನಗೆ ಹೇಳುತ್ತಿದ್ದರು. ಲೋಕಸಭಾ ಚುನಾವಣೆ ವೇಳೆ ದೇವೇಗೌಡರೇ ಜನರ ನಾಡಿಮಿಡಿತವನ್ನು ಅರ್ಥ ಮಾಡಿಕೊಳ್ಳಲಾಗಲಿಲ್ಲ ಎಂದರು.

ನಾವು ಮಾಜಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದೆವು. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಸೋತಿರೋರನ್ನು ಯಾಕೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದೆಲ್ಲಾ ಮಾತನಾಡಿದರು. ಅದಕ್ಕೆ ನಾವೇನು ಬೇಸರ ಮಾಡಿಕೊಳ್ಳಲಿಲ್ಲ. ಮೇ 23ರ ಬಳಿಕ ಉತ್ತರ ಕೊಡುತ್ತೇನೆ ಅಂದಿದ್ದರು. ಇಲ್ಲಿಯವರೆಗೂ ಉತ್ತರ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರಲ್ಲದೆ, ನಾನೇನು ಅವರ ರಾಜೀನಾಮೆಯನ್ನೂ ಕೇಳುವುದಿಲ್ಲ, ಅವರ ರೀತಿ ನಾನು ಮಾತನಾಡುವುದೂ ಇಲ್ಲ ಎಂದರು.

ಮಧ್ಯಂತರ ಚುನಾವಣೆ ಸೂಚನೆ ಇಲ್ಲ: ರಾಜ್ಯದಲ್ಲಿ ಮಧ್ಯಂತರ ಚುನಾವಣೆಯ ಸೂಚನೆಯಿಲ್ಲ. ಕಾಂಗ್ರೆಸ್‌ ವರಿಷ್ಠರು ಈಗಾಗಲೇ ನಿರ್ಧರಿಸಿದ್ದು ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುಮಲತಾ ಪರ ವಕಾಲತ್ತು: ರೈತರ ಬೆಳೆಗಳಿಗೆ ಸುಮಲತಾ ನೀರು ಬಿಡಿಸಲಿ ಎಂಬ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ಸುಮಲತಾ ಗೆದ್ದು ನಾಲ್ಕು ದಿನ ಆಗಿದೆ. ರಾಜ್ಯದಲ್ಲಿ ಜೆಡಿಎಸ್‌ನದ್ದೇ ಸರ್ಕಾರ ಇದೆ. ಹೀಗಾಗಿ ಅವರ ಕೆಲಸ ಅವರೇ ಮಾಡಲಿ. ಚುನಾವಣೆಯಲ್ಲಿ ಸುಮಲತಾ ಅವರು ತಮ್ಮ ನಡವಳಿಕೆ ಮೂಲಕ ಕೆಲಸ ಮಾಡುವ ಸಾಮರ್ಥ್ಯವಿದೆ ಎಂದು ತೋರಿಸಿದ್ದಾರೆ. ನನಗೂ ಆ ನಂಬಿಕೆ ಇದೆ. ಏಳು ಶಾಸಕರು, ಮೂವರು ಮಂತ್ರಿಗಳು ಜವಾಬ್ದಾರಿ ಅರಿತು ಕೆಲಸ ಮಾಡಲಿ. ಇವರ ಕೆಲಸ ಇವರು ಮಾಡುತ್ತಾರೆ ಎಂದು ಟಾಂಗ್‌ ನೀಡಿದರು.

Advertisement

ಸಚಿವ ಪುಟ್ಟರಾಜು ರಾಜೀನಾಮೆ ನೀಡಲಿ
ಮದ್ದೂರು:
ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಜಯಗಳಿಸಿದಲ್ಲಿ ರಾಜಕೀಯ ನಿವೃತ್ತಿ ಘೋಷಿಸಿದ್ದ ಸಚಿವ ಪುಟ್ಟರಾಜು ನಿವೃತ್ತಿ ಅಥವಾ ಸನ್ಯಾಸತ್ವ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಸಂದೇಶ್‌ ನಾಗರಾಜ್‌ ವ್ಯಂಗ್ಯವಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಮಂತ್ರಿಗಳು ಸುಳ್ಳು ಹೇಳಬಾರದು. ಇದು ರಾಜ್ಯದ ಜನತೆಗೆ ಸುಳ್ಳು ಹೇಳಿದ ಹಾಗಾಗುತ್ತದೆ. ಅವರು ಮರೆತಿರಬಹುದು. ನಾವು ಅವರಿಗೆ ನೆನಪಿಸುತ್ತಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next