ನವದೆಹಲಿ: ಉತ್ತರಪ್ರದೇಶದಲ್ಲಿ ರಾಜ್ಯ ಸರ್ಕಾರವು ಅಲ್ಲಿನ ರೈತರ ಸಾಲ ಮನ್ನಾ ಮಾಡಿತು, ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ಅರ್ಧದಷ್ಟು ಮನ್ನಾ ಮಾಡಿದರೆ, ಉಳಿದರ್ಧ ನಾನು ಮಾಡುತ್ತೇನೆ ಎಂದು ಹೇಳಿದರು. ಇನ್ನೊಂದೆಡೆ, ಸಾಲ ಮನ್ನಾ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಇದೀಗ ರೈತರ ಸಾಲ ಮನ್ನಾ ವಿಚಾರವು ರಾಜಕೀಯ ಪಕ್ಷಗಳ ಕೆಸರೆರಚಾಟಕ್ಕೆ ಕಾರಣವಾಗಿದೆ. ಶುಕ್ರವಾರ ರಾಜ್ಯಸಭೆಯಲ್ಲಿ ಇದೇ ವಿಚಾರವಾಗಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಭಾರೀ ವಾಕ್ಸಮರವೇ ನಡೆದಿದೆ.
ಆಸ್ಕರ್-ಸಿಂಗ್-ಶರ್ಮಾ ವಾಗ್ಯುದ್ಧ: ಶುಕ್ರವಾರ ರಾಜ್ಯಸಭೆ ಕಲಾಪದ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್, “ಕರ್ನಾಟಕವು ಭಾರೀ ಬರಗಾಲದಿಂದ ನಲುಗುತ್ತಿದೆ. ಇಂಥ ಸ್ಥಿತಿಯಲ್ಲಿ ಕೇಂದ್ರ ಸರ್ಕಾರವು ಅಲ್ಲಿನ ರೈತರ ಸಾಲ ಮನ್ನಾ ಮಾಡಲಿದೆಯೇ,’ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್, “ಸಾಲ ಮನ್ನಾ ವಿಚಾರದಲ್ಲಿ ಕರ್ನಾಟಕ ಸರ್ಕಾರವು ಉತ್ತರಪ್ರದೇಶದ ಮಾದರಿಯನ್ನು ಅನುಸರಿಸಲಿ,’ ಎಂದರು. ಇದರಿಂದ ಕೆಂಡಾಮಂಡಲರಾದ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಅವರು ಸಚಿವ ರಾಧಾಮೋಹನ್‌ಸಿಂಗ್ ವಿರುದ್ಧ ಹರಿಹಾಯ್ದರು. “ನೀವೇಕೆ ಒಂದು ರಾಜ್ಯದ ಬಗ್ಗೆ ಮಾತನಾಡುತ್ತೀರಿ? ಯುಪಿಎ ಸರ್ಕಾರವು ಅಧಿಕಾರದಲ್ಲಿದ್ದಾಗ ದೇಶಾದ್ಯಂತದ ರೈತರ ಸಾಲ ಮನ್ನಾ ಮಾಡಿಲ್ಲವೇ? ಸಚಿವರಾಗಿರುವ ನೀವು ಹಾಗೂ ಪ್ರಧಾನಿ ಮೋದಿಯವರು ಈಗ ಏಕೆ ಯುಪಿಎ ಮಾದರಿಯಲ್ಲಿ ಇಡೀ ದೇಶದ ರೈತರ ಸಾಲ ಮನ್ನಾ ಮಾಡಬಾರದು,’ ಎಂದು ಖಾರವಾಗಿ ಪ್ರಶ್ನಿಸಿದರು.
ಹೆಚ್ಚಿನ ನೆರವು ನೀಡಿದ್ದೇವೆ: ಆನಂದ್ ಶರ್ಮಾ ಅವರ ಪ್ರಶ್ನೆಯಿಂದ ಮೆಲ್ಲಗೆ ಜಾರಿಕೊಂಡ ರಾಧಾಮೋಹನ್‌ಸಿಂಗ್, “ಕರ್ನಾಟಕ ಸರ್ಕಾರಕ್ಕೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ನೆರವು ನೀಡಲಾಗಿದೆ. 2010-2015ರ ಅವಧಿಯಲ್ಲಿ ಕರ್ನಾಟಕಕ್ಕೆ 67 ಸಾವಿರ ಕೋಟಿ ರೂ. ನೀಡಲಾಗಿತ್ತು. ಆದರೆ, 2015ರಿಂದ 2020ರ ಅವಧಿಗೆ ಕೇಂದ್ರ ಸರ್ಕಾರವು ಬರೋಬ್ಬರಿ 1.85 ಲಕ್ಷ ಕೋಟಿ ನೆರವು ನೀಡಿದೆ,’ ಎಂದರು.
ರಾಜಕೀಯ ವಾಗ್ಯುದ್ಧ ಹೀಗೇ ಮುಂದುವರಿದಾಗ ಮಧ್ಯಪ್ರವೇಶ ಮಾಡಿದ ಸಭಾಧ್ಯಕ್ಷ ಹಮೀದ್ ಅನ್ಸಾರಿ, “ಪ್ರಶ್ನೋತ್ತರ
ವೇಳೆಯಲ್ಲಿ ಪ್ರಶ್ನೆಯು ಪ್ರಶ್ನೆಯಾಗಿರಬೇಕು, ಉತ್ತರವು ಉತ್ತರವಾಗಿರಬೇಕೇ ಹೊರತು ಅದು ರಾಜಕೀಯ ಚರ್ಚೆಯಾಗಬಾರದು,’ ಎನ್ನುವ ಮೂಲಕ ವಾಗ್ವಾದಕ್ಕೆ ತೆರೆ ಎಳೆದರು.