ಹುಮನಾಬಾದ: ಮನಸ್ಸು ಮುಟ್ಟುವ ಹೃದಯ ತಟ್ಟುವ ಸಾಹಿತ್ಯ ಶ್ರೇಷ್ಠವೆನ್ನಿಸಿಕೊಳ್ಳುತ್ತದೆ. ಹಾಗಾಗಿ ಶ್ರೇಷ್ಠ ಸಾಹಿತಿಗಳ ಜೀವನ, ಸಾಹಿತ್ಯ ಮೌಲ್ಯಗಳನ್ನು ಇಂದಿನವರು ಅಳವಡಿಸಿಕೊಳ್ಳುವುದು ಅಗತ್ಯ ಎಂದು ಮಾಣಿಕನಗರ ಮಾಣಿಕ ಪ್ರಭು ಸಂಸ್ಥಾನದ ಕಾರ್ಯದರ್ಶಿ ಆನಂದರಾಜ ಮಾಣಿಕ ಪ್ರಭುಗಳು ಹೇಳಿದರು.
ಮಾಣಿಕನಗರದ ಮಾಣಿಕಪ್ರಭು ಭವನದಲ್ಲಿ “ಮಾಣಿಕಪ್ರಭು ಸಾಹಿತ್ಯ ಸೇವಾ ಪ್ರತಿಷ್ಠಾನ’ ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ಸಾಹಿತ್ಯಕ್ಕೆ ಭವ್ಯ ಪರಂಪರೆಯಿದೆ. ವೇದ ಕಾಲದಿಂದಲೂ ಅದರ ಛಾಪು ದಟ್ಟವಾಗಿದ್ದು, ಸಮರ್ಥ ಸಾಹಿತ್ಯ ಸೃಷ್ಟಿಗೆ ವಿಶಾಲ ಮನಸ್ಸು ಅಗತ್ಯ. ಭಾರತದ ಭವ್ಯ ಇತಿಹಾಸವನ್ನು ಇಂದಿನ ಜನರಿಗೆ ಮುಟ್ಟುವಂತೆ ಮಾಡಿರುವುದು ಸಾಹಿತಿಗಳು ಎಂಬುನ್ನು ಮರೆಯಬಾರದು ಎಂದರು.
ಮಹಾಭಾರತ, ರಾಮಾಯಣ ಸೇರಿದಂತೆ ಅನೇಕ ನೈಜ ಘಟನೆಗಳು ಮೂಲತ ಸಂಸ್ಕೃತ ಭಾಷೆಯಲ್ಲಿದ್ದರೂ ಕೂಡ ಅವುಗಳನ್ನೂ ಮೀರಿಸುವಂತೆ ಇತರೆ ಭಾಷೆಗಳಿಗೆ ಭಾಷಾಂತರ ಮಾಡಿ ಪ್ರತಿಯೊಬ್ಬರಿಗೆ ಇತಿಹಾಸದ ಸಾಹಿತ್ಯವನ್ನು ಪಸರಿಸುವಲ್ಲಿ ಸಾಹಿತಿ, ಋಷಿ ಮುನಿಗಳ ಶ್ರಮ ಮುಖ್ಯವಾಗಿದೆ ಎಂದರು. ಹೊಸದಾಗಿ ಉದ್ಘಾಟನೆಗೊಂಡ ಮಾಣಿಕಪ್ರಭು ಸಾಹಿತ್ಯ ಸೇವಾ ಪ್ರತಿಷ್ಠಾನದ ಮೂಲಕ ಕೂಡ ಹೊಸ ಇತಿಹಾಸದ ಸೃಷ್ಟಿಯಾಗಬೇಕು. ಸಮಾಜದಲ್ಲಿ ಬದಲಾವಣೆಗೆ ಪ್ರೇರಣೆ ನೀಡುವ ಮೂಲಕ ಭವಿಷ್ಯದ ಯುವ ಜನತೆಗೆ ಉತ್ತಮ ಸಂದೇಶ ಸಾರುವಂತಾಗಲಿ ಎಂದು ಹೇಳಿದರು.
ಸಾಹಿತಿ ಬಂಡೆಪ್ಪಾ ಖೂಬಾ ಮಾತನಾಡಿ, ಇಂದಿನ ಸಾಹಿತ್ಯದಲ್ಲಿ ರಾಜಕಾರಣ ಹೆಚ್ಚಾಗಿದೆ. ಸಾಹಿತಿಗಳಲ್ಲಿ ಪರಸ್ಪರ ಸಾಮರಸ್ಯದ ಕೊರತೆ ಇದೆ. ನಿಜವಾದ ಸಾಹಿತಿಗೆ ಆತ್ಮತೃಪ್ತಿ ಇದೆ. ಸ್ಥಾನಮಾನಗಳ ಹಂಗು ತೊರೆದು ನೈಜ ಸಾಹಿತ್ಯ ರಚನೆಗೆ ಮುಂದಾಗಬೇಕು ಎಂದು ಹೇಳಿದರು.
ಸಾಹಿತಿ ಎಚ್. ಕಾಶಿನಾಥರೆಡ್ಡಿ ಮಾತನಾಡಿ, ಈ ಭಾಗದಲ್ಲಿ ಬಹಳಷ್ಟು ಸಾಹಿತ್ಯ ಜಾನಪದದಲ್ಲಿದೆ. ಅದನ್ನು ವ್ಯಾಪಕವಾಗಿ ಸಂಗ್ರಹಿಸಿ ಪ್ರಕಟಿಸಿದರೆ ಈ ಭಾಗದ ಸಾಹಿತ್ಯ ಶ್ರೀಮಂತಿಕೆ ಇನ್ನೂ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸಾಹಿತಿಗಳಾದ ಡಾ| ಗವಿಸಿದ್ದಪ್ಪಾ ಪಾಟೀಲ, ಟಿ.ಕೆ. ಮಾಣಿಕರೆಡ್ಡಿ ಇಸ್ಲಾಂಪುರ, ಪ್ರತಿಷ್ಠಾನದ ಅಧ್ಯಕ್ಷ ಶಿವಶಂಕರ ತರನಳ್ಳಿ, ಎಂ.ಆರ್. ಗಾದಾ ಮಾತನಾಡಿದರು.
ಪ್ರಾಚಾರ್ಯ ಸುಮಂಗಲಾ ಜಾಗಿರದಾರ, ಭೀಮಸೇನ ಗಾಯಕವಾಡ, ರುಕಮೋದ್ದಿನ್ ಇಸ್ಲಾಮಪುರ, ಕೆ. ಪ್ರಭಾಕರ, ಶಕೀಲ್ ಐ.ಎಸ್, ಈಶ್ವರ ತಡೋಳಾ, ರೈಯಬಖಾನ ಬೇಮಳಖೇಡಾ, ವೀರಶೇಟ್ಟಿ ಜೀರಗಿ, ಶಿವರಾಜ ಮೇತ್ರೆ, ಮಾರುತಿ ಪೂಜಾರಿ, ಬಸವರಾಜ ಕೆ, ನಾರಾಯಣರಾವ್ ಚಿದ್ರಿ, ಕಂಠೆಪ್ಪಾ ಹಲರ್ಬಗೆ, ಅಮೃತ ಬರ್ಮಾ, ರಾಜಕುಮಾರ ಹರನಾಳ ಉಪಸ್ಥಿತರಿದ್ದರು.