Advertisement

ಸಂಘರ್ಷ ಹಿನ್ನೆಲೆಯ ಸಾಹಿತ್ಯಕ್ಕಿದೆ ಜೀವಂತಿಕೆ

01:18 PM Oct 07, 2017 | Team Udayavani |

ಹುಬ್ಬಳ್ಳಿ: ಸಂಘರ್ಷದ ಹಿನ್ನೆಲೆಯಿಂದ ಬಂದ ಸಾಹಿತ್ಯ ಮಾತ್ರ ಹೆಚ್ಚು ಕಾಲ ಉಳಿಯಲು ಸಾಧ್ಯ ಎಂದು ಬೆಲ್ವಜಿಯಂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ| ರಮೇಶಚಂದ್ರ ಶರ್ಮಾ ಹೇಳಿದರು. ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ನೇಪಾಳದ ಅವಧಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ “ಪಂ| ದೀನದಯಾಳ್‌ ಉಪಾಧ್ಯಾಯ ಅವರ ವ್ಯಕ್ತಿತ್ವ ಹಾಗೂ ಜಗದೀಶ್ಚಂದ್ರ ಮಾಥುರ್‌ ಅವರ ಸಮಗ್ರ ಸಾಹಿತ್ಯ’ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. 

Advertisement

ಸಂಘರ್ಷದಿಂದ ಬಂದ ಸಾಹಿತ್ಯ ಮಾತ್ರ  ಜನರ ಮನಸಿಗೆ ಮುಟ್ಟಲು ಸಾಧ್ಯ. ಪಂ| ದೀನದಯಾಳ್‌ ಉಪಾಧ್ಯಾಯ ಅವರದು ಸಂಘರ್ಷದಿಂದ ಹೊರಹೊಮ್ಮಿದ ವ್ಯಕ್ತಿತ್ವವಾಗಿದ್ದರೆ, ಐಸಿಎಸ್‌ ಅಧಿಕಾರಿಯಾಗಿದ್ದ ಜಗದೀಶ್ಚಂದ್ರ ಮಾಥುರ ಅವರದು ಬ್ಯುರೋಕ್ರಾಟ್‌ ಸಾಹಿತ್ಯ. 

ಉಪಾಧ್ಯಾಯರು ಭಾರತದ ನೆಲದ ಇತಿಹಾಸ, ಸಂಸ್ಕೃತಿ ಸಂಪ್ರದಾಯವನ್ನು ಆಧರಿಸಿ ಸಾಹಿತ್ಯ ರಚನೆ ಮಾಡಿದರೆ, ಮಾಥುರ ಅವರು ಪಾಶ್ಚಾತ್ಯ ಸಂಸ್ಕೃತಿ, ಸಂಪ್ರದಾಯದೊಂದಿಗೆ ತುಲನೆ ಮಾಡಿ ಸಾಹಿತ್ಯ ಕೃಷಿ ಮಾಡಿದರು ಎಂದು ಅಭಿಪ್ರಾಯಪಟ್ಟರು. ಯುರೋಪಿಗೆ ಶತಮಾನಗಳ ಇತಿಹಾಸವಿದ್ದರೆ, ಭಾರತಕ್ಕೆ ಸಹಸ್ರಮಾನಗಳ ಇತಿಹಾಸವಿದೆ.

ಆದ್ದರಿಂದ ಪಾಶ್ಚಾತ್ಯ ಸಂಸ್ಕೃತಿಯೊಂದಿಗೆ ನಮ್ಮ ಸಂಸ್ಕೃತಿಯನ್ನು ಹೋಲಿಸುವುದು ಸೂಕ್ತವಲ್ಲ. ನಮ್ಮ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡುವುದು ಮುಖ್ಯ. ಜಗದೀಶ್ಚಂದ್ರ ಮಾಥುರ ಸರಕಾರದಲ್ಲಿ ಉನ್ನತ ಅಧಿಕಾರ ಅನುಭವಿಸಿ, ಐಷಾರಾಮಿ ಜೀವನ ಕಳೆದು  ಸರಕಾರದ ಯೋಜನೆಗಳ ವೈಫ‌ಲ್ಯಗಳ ಕುರಿತು ಸಾಹಿತ್ಯ ರಚನೆ ಮಾಡಿದರು.

ಅವರ ಬದುಕು ಹಾಗೂ ಬರಹದಲ್ಲಿ ದ್ವಂದ್ವ ಕಾಣುತ್ತದೆ ಎಂದರು. ಮಹಾನ್‌ ವ್ಯಕ್ತಿಗಳ ಶತಮಾನೋತ್ಸವ ಆಚರಣೆ ಕಾರ್ಯಕ್ರಮ ಮಾಡಿದರೆ ಸಾಲದು, ಅವರ ಸಾಹಿತ್ಯ ಕೃತಿಗಳು, ಕಾರ್ಯಗಳ ಬಗ್ಗೆ ಚಿಂತನ-ಮಂಥನ ನಡೆಯುವುದು ಮುಖ್ಯ. ಮಹಾನುಭಾವರಿಂದ ಪ್ರೇರಣೆ ಪಡೆಯಬೇಕು ಎಂದು ಅಭಿಪ್ರಾಯಪಟ್ಟರು.

Advertisement

ಸತ್ಕಾರ್ಯಕ್ಕಾಗಿ ತನ್ನ ದೇಹದ ಮೂಳೆ, ಮಾಂಸವನ್ನೇ ನೀಡಿದ ಭಾರತೀಯ ಸಂತ ಬದುಕಿದ ನಾಡಿನಲ್ಲಿ ಪ್ರಸ್ತುತ ಸಂವೇದನೆ ಕಾಣೆಯಾಗುತ್ತಿದೆ. ಅಪಘಾತದಿಂದಾಗಿ ವ್ಯಕ್ತಿಯೊಬ್ಬರು ಜೀವ ರಕ್ಷಣೆಗಾಗಿ ಒದ್ದಾಡುತ್ತಿದ್ದರೆ, ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿರುವುದು ದುರ್ದೈವದ ಸಂಗತಿ ಎಂದರು.

ದಿಲ್ಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ| ಹರೀಶ ಅರೋರಾ ಮಾತನಾಡಿ, ರಾಜಧರ್ಮ ಹಾಗೂ ಲೋಕಧರ್ಮ ಸೇರಿದರೆ ಸ್ವಸ್ಥ ಸಮಾಜ ಸಾಧ್ಯ. ಸಮಾಜವಾದ ನಮಗೆ ಹೊಸದಲ್ಲ, ನಮ್ಮ ಧರ್ಮ ಗ್ರಂಥಗಳಲ್ಲಿ ಸಮಾಜವಾದವಿದೆ. ಜಗದೀಶ್ಚಂದ್ರ ಮಾಥುರ ಖ್ಯಾತ ಸಾಹಿತಿಯಾಗಿದ್ದರೆ, ದೀನದಯಾಳ್‌ ಉಪಾಧ್ಯಾಯ ದಾರ್ಶನಿಕರು. 

ಉಭಯ ಮಹಾನ್‌ ವ್ಯಕ್ತಿಗಳ ಜನ್ಮಶತಮಾನೋತ್ಸವ ನಿಮಿತ್ತ ವಿಚಾರ ಸಂಕಿರಣ ಆಯೋಜಿಸಿದ್ದು ಸಂತಸದ ಸಂಗತಿ ಎಂದರು. ನೇಪಾಳದ ವಿಷ್ಣುಲಾಲ್‌ ಕುಮಾಲ್‌, ಬೆಳಗಾವಿ ಲಿಂಗರಾಜ ಕಾಲೇಜಿನ ಡಾ| ಗುರುದೇವಿ ಹುಲ್ಲೆಪ್ಪನವರಮಠ, ಡಾ| ವಿದ್ಯಾವತಿ ರಾಜಪೂತ ಮಾತನಾಡಿದರು. ಕಾಲೇಜು ಪ್ರಾಚಾರ್ಯ ಡಾ| ಬಿ.ಆರ್‌.ಪಾಟೀಲ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next