Advertisement
ನೀರಿನಿಂದ ನದಿ ನೋಡುವುದು ಗೊತ್ತಿದೆ. ಅಘನಾಶಿನಿಯ ತದಡಿ ಬೆಸ್ತರಿಗೆ ಮೀನಿನ ಮೂಲಕ ಅರಿಯುವ ತಜ್ಞತೆ ಇದೆ. ರಾಂಸಿ, ಕುರಕ, ಏರಿ, ಬಣಗು, ಕಾಗಾಳಿ, ಶಾಡೆ, ಬಿಂಗಲಿ, ಬೊಂಡಕಾನ, ಕರಸಿ, ಮಡ್ಲೆ, ಕಂಡ್ಲಿ, ಉಂಡಾರಿ, ಕೆಂಕ, ಸೊಗ, ಗೋಲಿ, ನಿಚಿಕೆಯೆಂದು ಪಟಪಟನೆ ಹೇಳುತ್ತ ಇವರು ಮತ್ಸ್ಯಲೋಕ ಪರಿಚಯಕ್ಕೆ ನಿಂತರೆ ಅವರಿಗಿರುವ ಜಲಚರ ಜಾnನಕಂಡು ಎಂಥವರೂ ಬೆರಗಾಗಬೇಕು. ಕರಾವಳಿ ನದಿ ಪಾತ್ರದ ದಂಡೆಯ ಇಕ್ಕೆಲಗಳಲ್ಲಿ 15-20 ಸಾವಿರ ಕುಟುಂಬಗಳು ಮೀನುಗಾರಿಕೆ ನಂಬಿ ಬದುಕಿವೆ.
Related Articles
Advertisement
ಆನಂತರದಲ್ಲಿ ನುಕ್ ವಸತಿ ಏಡಿಗೆ ವಿಪರೀತಿ ಬೇಡಿಕೆಬಂದು, ಅದೀಗ ವಿದೇಶಕ್ಕೆ ರಫ್ತಾಗುತ್ತಿದೆ. ಕಿ.ಲೋ ಏಡಿ 300- 400 ರೂಪಾಯಿಗೆ ದೊರೆಯುತ್ತಿದೆ. ಒಂದೊಂದು ಏಡಿ ಎರಡು ಮೂರು ಕಿ.ಲೋ ತೂಗುತ್ತದೆ. ಗಜನಿಯಲ್ಲಿ ಓಡಾಡುವ ಬೆಸ್ತರ ಪಾಲಿಗೆ ಇಂದು ಒಂದು ನುಕ್‌ಎಸಡಿ ಸಿಕ್ಕರೆ ಸಾವಿರ ರೂಪಾಯಿ ಲಾಟ್ರಿ ಹೊಡೆದಷ್ಟು ಸಂತಸ. ಜಮೀನಿಲ್ಲದ ಮಂದಿಗೆ ತಾಯಿ ಅಘನಾಶಿನಿ ಮೀನಿನ ರೂಪದಲ್ಲಿ ಇಡೀ ವರ್ಷ ನೆಮ್ಮದಿಯಿಂದ ಬದುಕುವ ದಾರಿ ತೋರಿಸಿಕೊಡುತ್ತಾಳೆ.
ಮೀನು ಹಾಗೂ ಮಾವಿನ ತಳಿಗಳಿಗೆ ನದಿ ಕಣಿವೆ ಖ್ಯಾತವಾಗಿದೆ. ಉಪ್ಪಿನಕಾಯಿಗೆ ಹೆಸರಾದ ಅನಂತಭಟ್ಟ ಅಪ್ಪೆ ಮಿಡಿ ನಾಡಿನ ಗಮನ ಸೆಳೆದಿದೆ. ಕುಂದಾಪುರದ ಕೋ.ಲ.ಕಾರಂತರು ಪರಿಮಳಕ್ಕೆ ಮನಸೋತು ಕ್ರಿ.ಶ. 1939ರಲ್ಲಿ ತಳಿ ಹುಡುಕಿ ಕಾಲ್ನಡಿಗೆಯಲ್ಲಿ ಘಟ್ಟವೇರಿದವರು. ಊರಿಗೆಲ್ಲ ಸ್ವಾದಿಷ್ಟ ಮಿಡಿಮಾವು ನೀಡಿದ ನದಿಯಂಚಿನ ಹೆಮ್ಮರ ಕ್ರಿ.ಶ. 1989ರ ಒಂದು ದಿನ ವಯಸ್ಸಾಗಿ ಮುರಿದು ಬಿತ್ತು. ಗಣ್ಯ ವ್ಯಕ್ತಿಯ ಗತಯಾತ್ರೆಯಂತೆ ನೂರಾರು ಜನಸೇರಿ ಮರಕ್ಕೆ ಅಂತಿಮ ನಮನ ಸಲ್ಲಿಸಿದ್ದು ಆ ಸೀಮೆಯ ಜನರಿಗೆ, ಆ ಮರದ ಮೇಲಿದ್ದ ಪ್ರೀತಿ,
ಭಕ್ತಿ, ಅಭಿಮಾನಕ್ಕೆ ಸಾಕ್ಷಿ ಒದಗಿಸಿತು. ಅಘನಾಶಿನಿಯ ಉಪನದಿಗಳಾದ ಬೆಣ್ಣೆಹೊಳೆ, ಸರುಳಿ, ಹೇರೂರು, ಮಾವಿನಿಹೊಳೆ ಅಪ್ಪೆ ತಳಿಗಳ ಮಹಾ ಖಜಾನೆಯಾಗಿವೆ. ಓದು ಗೊತ್ತಿಲ್ಲದ ಅಜ್ಜಿಯರು ಇಲ್ಲಿ ರುಚಿರುಚಿಯ ಮಿಡಿ ಉಪ್ಪಿನಕಾಯಿ ತಯಾರಿಸಿ ಮನೆಮಂದಿಯ ಆರೋಗ್ಯ ಹೆಚ್ಚಿಸುವ ತಜ್ಞರು. ಉಪ್ಪು ನೀರಿನ ಮೀನುಗಾರಿಕೆಗೆ ಪಾತಿದೋಣಿಗಳು ಬೇಕು. ಮಾವಿನ ಕಟ್ಟಿಗೆಗೆ ಉಪ್ಪಿನನೀರಲ್ಲಿ ಬಾಳಿಕೆ ಬರುವ ತಾಕತ್ತಿದೆ. ದೋಣಿ ನಿರ್ಮಿಸಲು ನದಿಯಂಚಿನ ಕಾಡು ಬೃಹತ್ ಮಾವಿನ ಮರಗಳನ್ನು ನೀಡಿದೆ. ಉಂಚಳ್ಳಿಯ ಅಘನಾಶಿನಿ ನದಿಯಂಚಿನಲ್ಲಿ ವಾಟೆ ಬಿದಿರಿನ ಸಂಕುಲವಿದೆ.
ಸಂಜೆಯ ಇಳೆಯಲ್ಲಿ ಬಿಸಿಲುತಾಗುವ ಬಿದಿರಿಗೆ ಸ್ವರ ಬಿಟ್ಟುಕೊಡುವ ಗುಣವಿದೆ. ಹೀಗಾಗಿ ಕಣಿವೆಯ ಬಿದಿರು ಕೊಳಲಾಗಿ ದೇಶದ ಪ್ರಸಿದ್ಧ ಕಲಾವಿದರ ಕೈಯಲ್ಲಿದೆ. ಕೊಳಲಿನ ಇಂಪು ನಿನಾದದಲ್ಲಿ ಪಶ್ಚಿಮ ಘಟ್ಟದ ಕಾಡಿನ ಮರಗಳ ಮೂಲಕ ಅಘನಾಶಿನಿಯ ಮಾತು ಎಲ್ಲೆಡೆ ಕೇಳಿಸುತ್ತಿದೆ. ಹಾಲಕ್ಕಿಗಳ ಸುಗ್ಗಿ ಅಘನಾಶಿನಿಯ ದೊಡ್ಡ ಮೆರುಗು. ಯಕ್ಷಗಾನ ಕಣಿವೆಯ ಕಲಾವಂತಿಕೆಯನ್ನು ಎತ್ತರಕ್ಕೆ ಒಯ್ದಿದೆ. ಕುಮಟಾದ ತೆಂಗಿನಲ್ಲಿ ಏಣ್ಣೆಯ ಅಂಶ ಜಾಸ್ತಿ. ಕೂಜಳ್ಳಿ, ಮೂರೂರು, ಕಲ್ಲಬ್ಬೆ, ವಾಲಗಳ್ಳಿ ಮುಂತಾದೆಡೆ ಬೆಳೆಯುವ ತೆಂಗು ಸೀಮೆಗೆ ಹೆಸರು ತಂದಿದೆ.
ಕಾಡಿನ ಕಹಿ ಕಾಸರಕದ ಟೊಂಗೆಗಳು ತೆಂಗಿಗೆ ಉತ್ಕೃಷ್ಟ ಗೊಬ್ಬರವಾಗಿ ಫಲ ಸಂಬಂಧ ಬೆಳೆದಿದೆ. ಘಟ್ಟದ ಮೇದಿನಿಯ ಪರಿಮಳದ ಸಣ್ಣಕ್ಕಿ, ವಾಲಗಳ್ಳಿಯ ಸಿಹಿಬೆಲ್ಲದ ಸವಿ ನೆಲದ ವಿಶೇಷ. ಗೋಕರ್ಣ ಸನಿಹದ ಸಾಣಿಕಟ್ಟಾ ಉಪ್ಪುತಯಾರಿಕೆಗೆ ಪ್ರಸಿದ್ಧಿ. ಅಗೇರರು ಇಲ್ಲಿ ಕಟ್ಟಿದ ಉಪ್ಪಿನಾಗರ ನಮ್ಮ ಊಟಕ್ಕೆ ರುಚಿ ಒದಗಿಸಿದೆ. ತಾಡ ಓಲೆಗಳಲ್ಲಿ ನಮ್ಮ ಪುರಾಣಗಳ ಪುಣ್ಯ ಕತೆಗಳಿವೆಯಲ್ಲವೇ? ಇದೇ ನದಿಯಂಚಿನ ಹರಿಟಾ ಹಳ್ಳಿ ಹಿಂದೆ ಹರೀತಕೀಪುರವಾಗಿತ್ತು. ಕಾಡು ತಾಳೆ ಶ್ರೀತಾಳೆ ಎಲೆಗಳಲ್ಲಿ ಗ್ರಂಥಗಳ ಪ್ರತಿ ಮಾಡುವ ಕಾರ್ಯವನ್ನು ಇಲ್ಲಿ ಋುಷಿ ಮುನಿಗಳು ಮಾಡುತ್ತಿದ್ದರಂತೆ!
ಇಂದು ನಾಶದಂಚಿನಲ್ಲಿರುವ ತಾಳೆ ಮರಗಳಿಗೆ ಕಣಿವೆಯ ಯಾಣದ ಕಾಡು ಆಶ್ರಯ ನೀಡಿದೆ. ಸುಮಾರು 365 ಕೋಟಿ ವರ್ಷಗಳ ಪ್ರಾಗ್ರೆ„ತಿಹಾಸಿಕ ನೆಲೆಯಾಗಿ ಯಾಣ ಕಣಿವೆಯ ಪುಣ್ಯಕ್ಷೇತ್ರವಾಗಿದೆ. ಸಾಂಬಾರ ಪದಾರ್ಥ, ಉಪ್ಪು, ಕಬ್ಬಿಣಗಳ ಸಾಗಣೆಗೆ ಒಳನಾಡ ಜಲಮಾರ್ಗವಾಗಿ ಒಂದು ಕಾಲದಲ್ಲಿ ಉಪ್ಪಿನಪಟ್ಟಣ ಹೆಸರಾಗಿತ್ತು. ಹುಡುಕುತ್ತ ಹೊರಟರೆ ನದಿ ಕಣಿವೆಯ ಪ್ರತಿ ಹಳ್ಳಿಯಲ್ಲಿಯೂ ಚರಿತ್ರೆಯ ಚೆಂದದ ಚಿತ್ರಗಳಿವೆ. ಮಂಗಟ್ಟೆ, ಸಿಂಗಳೀಕ, ಬೆತ್ತ, ರಾಮಪತ್ರೆ ಸೇರಿದಂತೆ ಹಲವು ಜೀವಜಾಲದ ತೊಟ್ಟಿಲಿಗೆ ಕಣಿವೆ ಆಶ್ರಯ ಕಲ್ಪಿಸಿದೆ.
ಮೇದಿನಿ ಘಟ್ಟದ ದೈತ್ಯ ಹೆನ್ನೇರಲು, ಅಬ್ಬರದ ಮಳೆನಾಡಿಗೆ ಹೆಸರಾದ ಹೈಗ ವೃಕ್ಷಗಳಿವೆ. ಗುರಿಗೆ ಹೂವರಳಿಸಿದ ಸಂಭ್ರಮಕ್ಕೆ ಒಂದೇ ಮರದಲ್ಲಿ 500ಕ್ಕೂ ಹೆಚ್ಚು ಹೆಜ್ಜೆàನು ಜಾತ್ರೆ ಮೆರೆದ ಕರಮನೆ ಕಾಡಿದೆ. ಬಿಜಾಪುರದ ಆದಿಲ್‌ಶಾ, ಬಿದನೂರು(ಇಕ್ಕೇರಿ)ನಾಯಕರ ಕಾಲದಲ್ಲಿ ಅಘನಾಶಿನಿ(ಅಗಸರಹೊಳೆ)ನದಿ ರಾಜ್ಯದ ಗಡಿಯಾಗಿದೆ. ಕುಮಟಾದ ಮಿಜಾìನ್ ಕ್ರಿ.ಶ.ಮೂರನೇ ಶತಮಾನದಲ್ಲಿಯೇ ಗ್ರೀಸ್, ರೋಮ್ ವ್ಯಾಪಾರಿಗಳನ್ನು ಸೆಳೆದು ಅಂತಾರಾಷ್ಟ್ರೀಯ ಖ್ಯಾತಿಯ ಬಂದರಾಗಿದೆ. ವಿಜಾಪುರ ಸುಲ್ತಾನರ ಸೇವಕ ಸರದಾರ್ ಶರೀಪ್ ಉಲ್ ಮೂಲ್ಕನ್ 16 ನೇ ಶತಮಾನದಲ್ಲಿ ಮಿಜಾìನ್‌ದಲ್ಲಿ ಜಲದುರ್ಗ ಕಟ್ಟಿಸಿದವನು.
ಜನಸಂಪರ್ಕವಿಲ್ಲದ ಕಗ್ಗಾಡಿನ ಬದುಕು ಹತ್ತು ಹಲವು ಸಂಕಷ್ಟ ಎದುರಿಸಿದೆ. ಬೇಡ್ಕಣಿ, ಬಾಳೂರು, ಐಸೂರು, ಬಿಳಗಿ, ಹುಕ್ಕಳಿ, ಕರೂರ್, ಶಿರಸಿ ಕೋಟೆಯ ಕುರುಹುಗಳಲ್ಲಿ ನದಿ ನಾಡಿನ ಅಚ್ಚರಿ ಇದೆ. ದೊಡ್ಮನೆ, ನಿಲ್ಕುಂದ, ದೇವಿಮನೆ ಘಟ್ಟದ ದಾರಿಗಳೆಲ್ಲ ನದಿಯ ಅಂಚಿನಲ್ಲಿದೆ. ಕುಮಟಾ ಉಪ್ಪಿನಪಟ್ಟಣದಿಂದ ಕ್ರಿ. ಶ. 1856 ರಲ್ಲಿ ಚಕ್ಕಡಿ ಓಡಾಡುವ ಮಾರ್ಗ ದೇವಿಮನೆ ಘಟ್ಟದಲ್ಲಿ ಶುರುವಾಯ್ತು. ಕ್ರಿ.ಶ. 1873-74ರಲ್ಲಿ ದೊಡ್ಮನೆ ಘಟ್ಟದ ಮಾರ್ಗ ತೆರೆಯಿತು. ಇದಾದ ನಾಲ್ಕೈದು ವರ್ಷಕ್ಕೆ ನಿಲ್ಕುಂದದ ದಾರಿಯಾಯ್ತು.
ಕರಾವಳಿ ಹಾಗೂ ಘಟ್ಟದ ಸಂಪರ್ಕಕ್ಕೆ ಚಕ್ಕಡಿಗಳು ಬಂದ ಸುಮಾರು 70 ವರ್ಷಗಳ ನಂತರ ಒಡ್ಡರ ಬಂಡಿ ಎಂಬ ಕಲ್ಲಿದ್ದಲಿಂದ ಚಲಿಸುವ ಲಾರಿಗಳು ಬಂದವು. ವಾರ್ಷಿಕ 2500-5000 ಮಿಲಿ ಮೀಟರ್ ಅಬ್ಬರದ ಮಳೆಯ ಕಡಿದಾದ ನದಿ ಕಣಿವೆಯಲ್ಲಿ ಬದಲಾವಣೆಗಳು ಶುರುವಾಯ್ತು. ಶತಮಾನಗಳ ಹಿಂದೆ ಮೈಲಿ ಬೇನೆ, ಪ್ಲೇಗ್ ಹಾವಳಿಯಿಂದ ಹಳ್ಳಿಗಳು ಕಂಗಾಲಾಗಿದ್ದವು. ಅಘನಾಶಿನಿ ನದಿ ಮೂಲಕ ಶಿರಸಿ ಇಂದು ನಗರವಾಗಿದೆ. ಕೊಳಚೆಯಾಗಿ ಹೂಳು ತುಂಬಿದ್ದ ಶಂಕರಹೊಂಡ ಈಗಷ್ಟೇ ಶಿರಸಿ ಜೀವಜಲ ಕಾರ್ಯಪಡೆಯ ಪ್ರಯತ್ನದಿಂದ ಮರುಜೀವ ಪಡೆದಿದೆ.
ಇಂದಿಗೆ ನೂರಿಪ್ಪತ್ತು ವರ್ಷಗಳ ಹಿಂದೆ ಇಲ್ಲಿನ ಜನಸಂಖ್ಯೆ ಐದು ಸಾವಿರ ಮಾತ್ರವಿತ್ತು. ಕ್ರಿ. ಶ. 1929 ಏಪ್ರಿಲ್ 29 ರಂದು ಶಿರಸಿ ನಗರಸಭಾ ಸದಸ್ಯ ವೈಕುಂಠರಾವ್ ಎಸ್. ನೀಲಕುಂದರು ಹುಲಿ ದಾಳಿಗೆ ಸಾವನ್ನಪ್ಪಿದ್ದರು. ಅಂದು ಶಿರಸಿ ನಗರಸಭೆಯ ಬಹುತೇಕ ಸದಸ್ಯರು ಹುಲಿಬೇಟೆಗಾರರಾಗಿದ್ದರು ! ಕಾಡು ನೆಲದ ಕಾಲದ ನೋಟಕ್ಕೆ ಇಷ್ಟು ವಿವರಣೆ ಸಾಕಾಗಬಹುದು. ಕ್ರಿ. ಶ. 1971 ರ ಜನಗಣತಿಯಲ್ಲಿ ನದಿ ಕಣಿವೆಯ ಸಿದ್ದಾಪುರದಲ್ಲಿ 86 ಹಾಗೂ ಕುಮಟಾ ಗ್ರಾಮೀಣ ಪ್ರದೇಶಗಳಲ್ಲಿ 141 ಜನ ಪ್ರತಿ ಚದರ ಕಿಲೋ ಮೀಟರ್ ಕ್ಷೇತ್ರದಲ್ಲಿದ್ದರು.
ರಸ್ತೆ, ಶಿಕ್ಷಣ, ಆರೋಗ್ಯ, ಕೃಷಿ ಸುಧಾರಣೆಗಳ ನಂತರದಲ್ಲಿ ಇಂದು ಜನಸಂಖ್ಯೆ ಏರಿದೆ. ಜಲವಿದ್ಯುತ್ ಯೋಜನೆ, ತದಡಿ ಉಷ್ಣ ವಿದ್ಯುತ್ ಸ್ಥಾವರಗಳ ವಿರುದ್ಧ ಹೋರಾಡಿ ನದಿ ಸಂರಕ್ಷಿಸಿದ ಹಿರಿಮೆ ಇಲ್ಲಿನ ನಿವಾಸಿಗಳದು. ಇಂದು ಅಣೆಕಟ್ಟೆ, ಬೃಹತ್ ಯೋಜನೆಗಳ ಅಡೆತಡೆ ಇಲ್ಲದೇ ನದಿ ಹರಿಯುತ್ತಿದೆ. ಆದರೆ ನಗರದ ಕುಡಿಯುವ ನೀರು, ಕೃಷಿ ಬಳಕೆಗಾಗಿ ನದಿಯನ್ನೇ ಹಗಲೂ ನಂಬಿವೆ. ರಸ್ತೆ, ವಿದ್ಯುತ್ ಮಾರ್ಗ, ಕೃಷಿ ಅತಿಕ್ರಮಣಕ್ಕೆ ಅರ್ಧದಷ್ಟು ಅರಣ್ಯ ಖರ್ಚಾಗಿದೆ. ಎಂದೂ ಬತ್ತದ ಹಳ್ಳಗಳು ಒಣಗಲು ಶುರುವಾಗಿವೆ.
ದೇವಿಮನೆ ಘಟ್ಟ ಹೆಸರು ದೇವಿದೇಗುಲದಿಂದ ಬಂದಿದೆ. ರಾಗಿಹೊಸಳ್ಳಿಯ ಕುದರ್‌ಬಾಳ್ ಅಂಟೆಯ ತುದಿ, ನಿಲ್ಕುಂದದ ಭೀಮನಗುಡ್ಡದ ಏರಿದರೆ ಅಘನಾಶಿನಿಯ ಕಾಡು ನೋಡಬಹುದು. ದೊಡ್ಮನೆ ಘಟ್ಟದ ತಿರುವಿನಲ್ಲಿಯೂ ಸೊಬಗು ಸೆಳೆಯುತ್ತದೆ. ಶಿರಸಿಯಲ್ಲಿ ಜನಿಸಿ ಮಂಜುಗುಣಿಯ ಇನ್ನೊಂದು ಹಳ್ಳದ ಜೊತೆಯಾದ ಹೊಳೆ ಸಿದ್ದಾಪುರದ ಮುಠಳ್ಳಿಯಲ್ಲಿ ಅಘನಾಶಿನಿ ಎಂಬ ಹೆಸರು ಪಡೆದಿದೆ. ಈ ನದಿ ಸುಮಾರು 72 ಕಿಲೋ ಮೀಟರ್ ಹರಿದು ಪಶ್ಚಿಮವಾಹಿನಿಯಾಗಿ ಸಮುದ್ರ ಸೇರುತ್ತದೆ. ಇದಕ್ಕೆ ತದಡಿಹೊಳೆ, ದೋಣಿಹಳ್ಳ, ಪಾಪನಾಶಿನಿ ಎಂದೆಲ್ಲಾ ಹೆಸರುಗಳಿವೆ.
ಪಾಪನಾಶಿನಿಯ ದಡದಲ್ಲಿ ದೇವಿ ದುರ್ಗೆ ನೆಲೆಸಿದ್ದಾಳೆಂಬ ಕಥೆ ಸಹ್ಯಾದ್ರಿ ಖಂಡದಲ್ಲಿದೆ. ಪುರಾಣದ ಕಥೆಗೆ ಪೂರಕವಾಗಿ ಅಘನಾಶಿನಿ ಕಣಿವೆಯಲ್ಲಿ ಹಲವು ವನದುರ್ಗೆಯ ದೇಗುಲಗಳಿವೆ. ಎತ್ತರದ ಹುತ್ತಗಳಿಗೆ ಇಲ್ಲಿ ಪೂಜೆ ನಡೆಯುತ್ತದೆ. ದೇವರ ಕಾಡಿನ ಈ ನಂಬಿಕೆಯ ಆಧಾರದಲ್ಲಿಯೇ ಹಳ್ಳಿಗರ ನೇತೃತ್ವದಲ್ಲಿ ಅರಣ್ಯ ಸಂರಕ್ಷಿಸಲು ಕ್ರಿ.ಶ. 1924ರಲ್ಲಿ ಫಾರೆಸ್ಟ್ ಪಂಚಾಯತ್ ವ್ಯವಸ್ಥೆಯನ್ನು ಬ್ರಿಟಿಷರು ಆರಂಭಿಸಿದ್ದಾರೆ. ಅಘನಾಶಿನಿಯ ನದಿಯಂಚಿನ ಕುಮಟಾದ ಹಳಕಾರಿನಲ್ಲಿ ಕೇಂದ್ರೀಕೃತ ಅರಣ್ಯ ಪಂಚಾಯತ್ ವ್ಯವಸ್ಥೆ 94 ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿದೆ. ಕಾಡು ಉಳಿಸುವ ನೀತಿಯನ್ನು ನದಿ ಕಣಿವೆ ಸಾರುತ್ತಿದೆ..
* ಶಿವಾನಂದ ಕಳವೆ