Advertisement

ಪ್ರಧಾನಿಗೆ ಮತ್ತೊಮ್ಮೆ ಪತ್ರ ಬರೆವೆ

10:59 AM Nov 01, 2017 | Team Udayavani |

ಬೆಂಗಳೂರು: ಮಾತೃಭಾಷೆಯಲ್ಲೇ ಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಸಂವಿಧಾನ ತಿದ್ದುಪಡಿ ತರುವ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಇನ್ನೊಮ್ಮೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ಶಿಕ್ಷಕರ ಸದನದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಸಮುದಾಯ ಶೈಕ್ಷಣಿಕ ಸಮಾವೇಶದ ಸಮಾರೋಪದಲ್ಲಿ ಮಾತನಾಡಿದರು.

Advertisement

ಮಕ್ಕಳಿಗೆ ಯಾವ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು ಎಂಬ ಆಯ್ಕೆ ಪಾಲಕರ ವಿವೇಚನೆಗೆ ಬಿಟ್ಟಿದ್ದು ಎಂಬ ಸುಪ್ರೀಂ ಕೋರ್ಟ್‌ ಆದೇಶದಿಂದ ಪ್ರಾದೇಶಿಕ ಭಾಷೆಗಳ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಮಾತೃಭಾಷೆಯಲ್ಲೇ ಶಿಕ್ಷಣ ನೀಡುವ ಅಥವಾ ಶಾಲಾ ಮಕ್ಕಳ ಮಾಧ್ಯಮದ ಆಯ್ಕೆಯನ್ನು ಸರ್ಕಾರ ನಿರ್ಧರಿಸುಂತೆ ಸಂವಿಧಾನ ತಿದ್ದುಪಡಿ ಅಗತ್ಯವಿದೆ ಎಂದರು.

3ನೇ ಪತ್ರ: ಮಕ್ಕಳ ಶಿಕ್ಷಣದ ಮಾಧ್ಯಮ ಆಯ್ಕೆಯ ಸಂವಿಧಾನ ತಿದ್ದುಪಡಿಗಾಗಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಎರಡು ಬಾರಿ ಪತ್ರ ಬರೆದಿದ್ದೇನೆ. ಇದುವರೆಗೂ ಸ್ಪಂದಿಸಿಲ್ಲ. ಪ್ರಧಾನಿಯವರ ಮೇಲೆ ಒತ್ತಡ ಹೇರುವಂತೆ ಎಲ್ಲ ರಾಜ್ಯದ ಮುಖ್ಯಮಂತ್ರಿಗಳೂ ಪತ್ರ ಬರೆದಿದ್ದೇನೆ. ಆದರೂ, ಪ್ರಯೋಜನವಾಗಿಲ್ಲ.

ಸಾಹಿತಿ ಪ್ರೊ.ಚಂದ್ರಶೇಖರ್‌ ಪಾಟೀಲ್‌ ಅವರ ಸಲಹೆ ಪಡೆದು, 3ನೇ ಬಾರಿಗೆ ಪ್ರಧಾನಿಯವರಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು. 80 ಲಕ್ಷ ಪೋಷಕರು, 43 ಸಾವಿರ ಶಾಲೆಗಳು, 8 ಲಕ್ಷ ಎಸ್‌ಡಿಎಂಸಿ ಸದಸ್ಯರಿದ್ದಾರೆ. ಆದರೂ, ಇಂಗ್ಲಿಷ್‌ ವ್ಯಾಮೋಹದ ಪೋಷಕರ ಸಂಖ್ಯೆ ಕುಗ್ಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಆರ್‌ಟಿಇ ಪುನರ್‌ ಪರಿಶೀಲನೆ: ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್‌ ಮಾತನಾಡಿ, ಸರ್ಕಾರಿ ಶಾಲೆಗೆ ಮಕ್ಕಳ ದಾಖಲಾತಿ 46 ಲಕ್ಷದಿಂದ 49 ಲಕ್ಷಕ್ಕೆ ಏರಿದೆ.  13 ಸಾವಿರ ಖಾಸಗಿ ಶಾಲೆಗಳ ಪೈಕಿ ಸುಮಾರು 5 ಸಾವಿರ ಖಾಸಗಿ ಶಾಲೆಗಳು ಆರ್‌ಟಿಇ ಹಣದಿಂದಲೇ ನಡೆಯುತ್ತಿದೆ. ಹೀಗಾಗಿ ಆರ್‌ಟಿಇ ಪುನರ್‌ ಪರಿಶೀಲನೆ ಅಗತ್ಯ ಎಂದರು.

Advertisement

ಸರ್ಕಾರಿ ಶಾಲೆಯ ನವೀಕರಣಕ್ಕೆ ಎಸ್‌ಇಪಿ, ಟಿಎಸ್‌ಪಿ ಯೋಜನೆಯಿಂದ 300 ಕೋಟಿ ರೂ. ನೀಡುವಂತೆ ಸಮಾಜ ಕಲ್ಯಾಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಒಪ್ಪಿಗೆ ಸೂಚಿಸಿದ್ದಾರೆ. ಸರ್ಕಾರಿ ಶಾಲೆಯ ಸಬಲೀಕರಣಕ್ಕಾಗಿ ಶೂನ್ಯ ಸಂಪಾದನೆಯ 812 ಶಾಲೆಗಳ ಮಾನ್ಯತೆ ರದ್ದು ಮಾಡಿದ್ದೇವೆ. ಒಂದೇ ಮಗು ಇರುವ 256 ಶಾಲೆ ನಡೆಸುತ್ತಿದ್ದೇವೆ. ಹೆಚ್ಚುವರಿ ಶಿಕ್ಷಕರ ನಿಯೋಜನೆಯಿಂದ 700 ಶಾಲೆ ಪುನರ್‌ ಆರಂಭವಾಗಿದೆ ಎಂದು ಹೇಳಿದರು.

83ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊ.ಚಂದ್ರಶೇಖರ್‌ ಪಾಟೀಲ್‌, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಆಂಜನೇಯ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಪಿ.ಸಿ.ಜಾಫ‌ರ್‌, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರ ಭೂಪತಿ, ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ಇತರರು ಇದ್ದರು.

ಮಲತಾಯಿ ಧೋರಣೆ ನಿಲ್ಲಲಿ: ಸರ್ಕಾರಿ ಶಾಲೆಗೆ ಎದುರಾಗಿರುವ ಸಂಕಟ ಪರಿಹರಿಸುವ ವೆಂಕಟರಮಣ ನೀವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಹಿತಿ ಚಂಪಾ ಸಲಹೆ ನೀಡಿದರು. ಸರ್ಕಾರದಿಂದ ಅನುದಾನ ಪಡೆಯುವ ಖಾಸಗಿ ಶಾಲೆಗಳು ಆರ್‌ಟಿಇ ಮಕ್ಕಳ ಶಿಕ್ಷಣದ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈ ತಾರತಮ್ಯ ನಿಲ್ಲಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next