Advertisement
ಉಡುಪಿ: ತಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವುದೇ ಬೆಂಕಿಗೆ ಬಿದ್ದಂತೆ. ಅಂಥದ್ದರಲ್ಲಿ ಬೆಂಕಿಯಿಂದ ಬಾಣಲೆಗೆ ಬೀಳುವಂತಾದರೆ ಹೇಗಾಗಬೇಡ? ಇದೇ ಸ್ಥಿತಿಯನ್ನು ಕಿನ್ನಿಮೂಲ್ಕಿ ವಾರ್ಡ್‌ನ ಗಡಿ ಭಾಗದಲ್ಲಿರುವ ದಾಮೋದರ್ ಅವರಿಗೆ ನಗರಸಭೆ ನಿರ್ಮಿಸಿದೆ.
ದಶಕಗಳಿಂದ ವಾಸಿಸುತ್ತಿದ್ದಾರೆ. ಅಗ್ನಿ ಶಾಮಕದಳದಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ಅವರು, ಪಿಂಚಣಿಯಿಂದ ಆರಾಮದಾಯಕ ಜೀವನ ನಡೆಸುವ ಕನಸು ಕಂಡವರು. ಆದರೆ ಕೊಳಚೆಯಿಂದ ಹಾಳಾದ ಬಾವಿ ಅವರ ನೆಮ್ಮದಿಯನ್ನೇ ಕೆಡಿಸಿದೆ. ವರ್ಷಕ್ಕೆ ಮೂರು ಬಾರಿ ಬಾವಿ ನೀರು ಶುದ್ಧೀಕರಿಸುವುದೇ ಸವಾಲಾಗಿ ಪರಿಣಮಿಸಿದೆ. ಯಾರದ್ದೋ ತಪ್ಪಿಗೆ ಯಾರಿಗೋ ಶಿಕ್ಷೆ!
ಮನೆ ಮುಂದಿನ ಮ್ಯಾನ್‌ಹೋಲ್ ಬ್ಲಾಕ್ ಆದರೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ನೆಂಟರು ಬಂದರೆ ಅವರನ್ನು ಉಳಿಸಿಕೊಳ್ಳಲು ಯೋಚನೆ ಮಾಡಬೇಕಾದ ಪರಿಸ್ಥಿತಿಯಿದೆ. ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಅವರು. ಈ ಹಿಂದೆ ಮನೆ ಬಾವಿ ನೀರನ್ನು ಧಾರಾಳವಾಗಿ
ಬಳಸುತ್ತಿದ್ದೆವು. ಆದರೆ ಈಗ ಮ್ಯಾನ್ ಹೋಲ್‌ಗಳಿಂದ ಬಾವಿ ನೀರು ಹಾಳಾಗಿದೆ. ಒಂದು ಬಕೆಟ್ ನೀರು ಬಳಸಲೂ ಯೋಚಿಸಬೇಕಿದೆ. ಬಾವಿ ಶುದ್ಧೀಕರಣದ ಹೆಸರಿನಲ್ಲಿ ಸಾವಿರಾರು ರೂ. ವ್ಯಯಿಸಬೇಕಾಗಿದೆ ಎಂದು ಗೃಹಿಣಿ ವಸಂತಿ ಅವರು ಸುದಿನ ತಂಡಕ್ಕೆ ಸಂಕಷ್ಟವನ್ನು ಹೇಳಿ ಕೊಂಡರು.
Related Articles
ನಗರಸಭೆಯಿಂದ ಆಗುತ್ತಿರುವ ತೊಂದರೆ ಕುರಿತು ಪ್ರಧಾನಿ ಮೋದಿ ಅವರ ಸಚಿವಾಲಯಕ್ಕೆ
ದೂರು ನೀಡಲಾಗಿತ್ತು. ಆ ದೂರಿಗೆ ಸ್ಪಂದಿಸಿದ ಪಿಎಂ ಕಚೇರಿಯಿಂದ ಜಿಲ್ಲಾಧಿಕಾರಿಗಳಿಗೆ ಸಮಸ್ಯೆ
ಪರಿಶೀಲಿಸುವಂತೆ (ಹಿಂದಿನ ಜಿಲ್ಲಾಧಿಕಾರಿಯಿದ್ದಾಗ) ಆದೇಶಿಸಲಾಗಿತ್ತು. ಡಿಸಿ ಅವರು ನಗರಸಭೆ ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸುವಂತೆ ಆದೇಶ ನೀಡಿದ್ದರೂ ನಗರಸಭೆ ಅಧಿಕಾರಿಗಳು ಮಾತ್ರ ತಣ್ಣಗೆ ಕುಳಿತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿಯೂ ಇಲ್ಲ, ಸಮಸ್ಯೆ ಬಗೆಹರಿಸಿಯೂ ಇಲ್ಲ.
Advertisement
ಇದ್ಯಾವ ನ್ಯಾಯ?ನಗರಸಭೆಯ ಬೇಜವಾಬ್ದಾರಿಯಿಂದ ಪ್ರತಿ ವರ್ಷ ಹಾಳಾದ ಬಾವಿನೀರಿನ ಶುದ್ಧೀಕರಣಕ್ಕೆ ಸುಮಾರು
40 ಸಾವಿರ ರೂ. ವ್ಯಯಿಸಬೇಕಿದೆ. ವಾರ್ಷಿಕವಾಗಿ ನಾಲ್ಕು ಬಾರಿ ನೀರು ಶುದ್ಧ ಮಾಡಲಾಗುತ್ತದೆ. ನಗರಸಭೆಯ ತಪ್ಪಿನ ದಂಡವನ್ನು ನನ್ನ ಪಿಂಚಣಿಯಿಂದ ಪಾವತಿ ಮಾಡಬೇಕಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ದಾಮೋದರ್. ನಗರಸಭೆಯಲ್ಲಿ ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಉಚಿತವಾಗಿ ನೀರು ನೀಡುವುದಾಗಿ ತಿಳಿಸಿದ್ದರು. ಆದರೆ ಇದೀಗ 24 ಸಾವಿರ ರೂ. ಬಿಲ್ ಪಾವತಿ ಮಾಡುವಂತೆ ನೋಟಿಸು ನೀಡಿದ್ದು, ಇಲ್ಲವಾದರೆ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿಸಿದ್ದಾರೆ. ಬಾಕಿ ಬಿಲ್ ಪಾವತಿಗೆ ಹಣ ಎಲ್ಲಿಂದ ತರಲಿ? ಬಾವಿ ಶುದ್ಧಗೊಳಿಸಿ ಉಳಿದ ಹಣದಿಂದ ಮನೆ ನೋಡಿಕೊಳ್ಳುತ್ತಿದ್ದೇನೆ. ನಗರಸಭೆ ತಪ್ಪಿಗೆ ನಾನ್ಯಾಕೆ ದಂಡ ತೆರಬೇಕು ಎಂದು ಪ್ರಶ್ನಿಸಿದರು.