ಹುಣಸೂರು: ಕಳೆದ ಐದು ವರ್ಷದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರತಿವರ್ಷ 10 ಸಾವಿರ ಹೆಣ್ಣಮಕ್ಕಳ ಮೇಲೆ ಅತ್ಯಾಚಾರ ನಡೆದಿದೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಹಾಗೂ ಕಾಮದೇ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಈ ಸರ್ಕಾರ ಹಸ್ತಕ್ಷೇಪ ನಡೆಸುತ್ತಿದೆ ಎಂದು ಐಪಿಎಸ್ ಅಧಿಕಾರಿಗಳು ಮುಖ್ಯ ಕಾರ್ಯದರ್ಶಿಯವರಿಗೆ ಬರೆದಿರುವ ಪತ್ರವೇ ಸಾಕ್ಷಿ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ನಗರದ ಮಂಜುನಾಥಸ್ವಾಮಿ ದೇವಾಲಯದ ಬಳಿಯ ಎಸ್‌ಎಲ್‌ವಿ ಕಲ್ಯಾಣಮಂಟಪದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಬಿಜೆಪಿ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಜನರ ಮನದಲ್ಲಿ ಮಡುಗಟ್ಟಿರುವ ಆಕ್ರೋಶವನ್ನು ಮತವನ್ನಾಗಿ ಪರಿವರ್ತಿಸಿಕೊಳ್ಳುವ ಕಾರ್ಯ ನಡೆಯಬೇಕಿದೆ.
ರಾಜ್ಯದ ಕಾಂಗ್ರೆಸ್ ಸರ್ಕಾರದ 5ವರ್ಷಗಳ ಆಡಳಿತ ಜನರಲ್ಲಿ ಬೇಸರ ಮೂಡಿಸಿದೆ. ಮಾತ್ರವಲ್ಲ ಸರ್ಕಾರದ ವಿರುದ್ಧ ಜನಾಕ್ರೋಶ ಎದ್ದೇಳುತ್ತಿದೆ. ದೇಶಪ್ರೇಮಿಗಳನ್ನು ಹತ್ತಿಕ್ಕುವ, ಭ್ರಷ್ಟಾಚಾರವನ್ನು ಪೋಷಿಸುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನರಗೆ ಬೇಡವಾಗಿದೆ.
ಅತ್ಯಾಚಾರ, ಸಾಲದ ಹೊರೆಯೇ ಸಾಧನೆ: ವರ್ಷವೊಂದಕ್ಕೆ 10 ಸಾವಿರ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆದಿದೆ ಈ ಸರ್ಕಾರದಲ್ಲಿ. 2 ಲಕ್ಷದ 42 ಸಾವಿರ ಕೋಟಿ ಸಾಲದ ಹೊರೆಯನ್ನು ಜನರ ಮೇಲೆ ಹೊರಿಸಿರುವುದೇ ಈ ಸರ್ಕಾರದ ದೊಡ್ಡ ಸಾಧನೆ. ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತರೇ ಪಕ್ಷದ ಆಸ್ತಿ. ಮುಂಬರುವ ವಿಧಾನಸಬಾ ಚುನಾವಣೆಯಲ್ಲಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ಮೋದಿಯವರ ಆದೇಶದಂತೆ ನಾವೆಲ್ಲರೂ ಪಕ್ಷ ಸಂಘಟನೆ ನಡಸುವ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ತರೋಣವೆಂದರು.
ಮೊಯ್ಲಿ ಆರೋಪ: ಮೈಸೂರು ಕೊಡಗು ಸಂಸದ ಮಾತನಾಡಿ, ಹುಣಸೂರಿಗೆ ಯಾರು ಅಭ್ಯರ್ಥಿ ಎನ್ನುವುದು ಮುಖ್ಯವಲ್ಲ. ವ್ಯಕ್ತಿಗಿಂತ ಪಕ್ಷ ಮುಖ್ಯ. ಹೈಕಮಾಂಡ್ ಸೂಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸುವ ಪಣ ತೊಡೋಣವೆಂದರು. ಜಿಲ್ಲಾ(ಗ್ರಾಮಾಂತರ)ಅಧ್ಯಕ್ಷ ಎಂ.ಶಿವಣ್ಣ ಪ್ರಧಾನಿ ಮೋದಿ ರಾಜ್ಯ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರವೆಂದಿದ್ದರು. ಇದು ಸರಿಯೆಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ವೀರಪ್ಪಮೊಯ್ಲಿ ಪ್ರತಿಪಾದಿಸಿದ್ದಾರೆಂದು ಆರೋಪಿಸಿದರು.
ಸಭೆಯಲ್ಲಿ ಹುಣಸೂರು ಚುನಾವಣಾ ಉಸ್ತುವಾರಿ ಹೊತ್ತಿರುವ ರೀನಾ ಪ್ರಕಾಶ್, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ವಸಂತಕುಮಾರ್‌ಗೌಡ, ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣ್ಯ, ತಾಲೂಕು ಅಧ್ಯಕ್ಷ ಬಿ.ಎಸ್.ಯೋಗಾನಂದಕುಮಾರ್, ನಗರಾಧ್ಯಕ್ಷ ಎನ್.ರಾಜೇಂದ್ರ, ಮುಖಂಡರಾದ ಬಿ.ಎನ್.ನಾಗರಾಜಪ್ಪ, ಹನಗೋಡು ಮಂಜುನಾಥ್,ಚಂದ್ರಶೇಖರ್, ಜಾಬಗೆರೆ ರಮೇಶ್, ರಾಜ್ಯ ಎಸ್.ಸಿ.ಸೆಲ್ ಉಪಾಧ್ಯಕ್ಷ ನಾಗರಾಜಮಲ್ಲಾಡಿ ಹಾಗೂ ಕಾರ್ಯಕರ್ತರು ಇದ್ದರು.