ಶಿರ್ವ : ಬೆಳ್ಳೆ-ಕಟ್ಟಿಂಗೇರಿ ,ಪೆರ್ಣಂಕಿಲ ,ಮತ್ತು ಮರ್ಣೆ ಗ್ರಾಮದ ಗಡಿಭಾಗವಾದ ಗುಂಡುಪಾದೆಯ ಅಶೋಕ್ ನಾಯ್ಕ ಅವರ ಮನೆ ಬಳಿ ಉಡುಪಿ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಇರಿಸಿದ ಬೋನಿಗೆ ಗುರುವಾರ ರಾತ್ರಿ ಚಿರತೆಯೊಂದು ಬಿದ್ದಿದ್ದು, ಚಿರತೆ ಬಂಧಿಸುವ ಇಲಾಖೆಯ ಪ್ರಯತ್ನ ಸಫಲವಾಗಿದೆ.
ಪೆರ್ಣಂಕಿಲ,ಮರ್ಣೆ ಮತ್ತು ಕಟ್ಟಿಂಗೇರಿ ಪರಿಸರದ ನಾಗರಿಕರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಪರಿಸರದ ಸಾಕು ಪ್ರಾಣಿಗಳು ಮತ್ತು ನಾಟಿ ಕೋಳಿಗಳನ್ನು ಕೊಂದು ತಿನ್ನುತ್ತಿತ್ತು. ಬೆಳ್ಳೆ ಗ್ರಾ.ಪಂ. ಮತ್ತು ಸ್ಥಳೀಯ ನಾಗರಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು 15 ದಿನಗಳ ಹಿಂದೆ ಬೋನು ಇರಿಸಿದ್ದರು. ಬೇಟೆಯನ್ನು ಆರಸಿಕೊಂಡು ಬಂದ ಚಿರತೆ ಗುರುವಾರ ರಾತ್ರಿಬೋನಿಗೆ ಬಿದ್ದಿದ್ದು,ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಬೋನಿಗೆ ಬಿದ್ದ 7 ವರ್ಷ ಪ್ರಾಯದ ಗಂಡು ಚಿರತೆಯನ್ನು ಅರಣ್ಯ ಇಲಾಖೆಯ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಶುಕ್ರವಾರ ಕೊಲ್ಲೂರು ವನ್ಯಜೀವಿ ಅಭಯಾರಣ್ಯಕ್ಕೆ ಬಿಡಲಾಗಿದೆ.
ಉಡುಪಿ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರಿ ಅವರ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಉಡುಪಿ ಶಾಖೆಯ ಸುರೇಶ್ ಗಾಣಿಗ,ಹಿರಿಯಡ್ಕ ಶಾಖೆಯ ಜಯರಾಮ ಪೂಜಾರಿ, ಅರಣ್ಯರಕ್ಷಕರಾದ ಸುನೀಶ್ ಬಾಬು,ಗಣಪತಿ ನಾಯಕ್,ದೇವರಾಜ ಪಾಣ,ಜಯರಾಮ ಶೆಟ್ಟಿ, ಕೇಶವ ಪೂಜಾರಿ, ವಾಹನ ಚಾಲಕ ಜೋಯ್, ಬೆಳ್ಳೆ ಗ್ರಾ.ಪಂ. ಅಧ್ಯಕ್ಷ ಸುಧಾಕರ ಪೂಜಾರಿ ಮತ್ತು ಸ್ಥಳೀಯರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.