ಉಡುಪಿ: ಇಪ್ಪತ್ತೆರಡು ವರ್ಷಗಳಿಂದ ಪ್ರತ್ಯೇಕವಾಗಿ ಒಂಟಿ ಯಾಗಿದ್ದ ವೃದ್ಧರೊಬ್ಬರು ಮಕ್ಕಳನ್ನು ಕೂಡಿಕೊಂಡ ಮನ ಮಿಡಿಯುವ ಘಟನೆ ಕಾಪುವಿನಲ್ಲಿ ನಡೆದಿದೆ.
82 ವರ್ಷ ಪ್ರಾಯದ ಅಣ್ಣಯ್ಯ ಬಂಗೇರ ಎಂಬವರು ಮನೆ ಮಂದಿ ಜತೆ ಮುನಿಸಿಕೊಂಡು 22 ವರ್ಷಗಳಿಂದ ದೂರ ಉಳಿದುಕೊಂಡಿದ್ದರು. ಕಾಪುವಿನ ಮಜೂರಿನಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಹಾಸಿಗೆ ಹಿಡಿದಿದ್ದರು.
ಸ್ಥಳೀಯರು ನೀಡಿದ ಅನ್ನ ಆಹಾರ, ಔಷಧೋಪಚಾರದ ನೆರವು ಪಡೆದುಕೊಂಡಿದ್ದರು. ತಿಂಗಳ ಹಿಂದೆ ವೃದ್ಧರ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ಈ ಸಂದರ್ಭ ಪಂ.ಅಭಿವೃದ್ಧಿ ಅಧಿಕಾರಿ ನೆರವಿಗೆ ಧಾವಿಸಿದ್ದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಸಹಕಾರದಿಂದ ವೃದ್ಧರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ವೃದ್ಧರು ಗುಣಮುಖಗೊಂಡಿ ದ್ದರಿಂದ ಆಸ್ಪತ್ರೆಯಿಂದ ಬಿಡುಗಡೆ ಗೊಳಿಸಿದ ಒಳಕಾಡು ಅವರು ಹೊಸಬದುಕು ಆಶ್ರಮದಲ್ಲಿ ಪುನರ್ವಸತಿ ಕಲ್ಪಿಸಿದ್ದರು. ಹಿರಿಯ ನಾಗರಿಕರ ಸಹಾಯವಾಣಿಗೆ ಮಾಹಿತಿ ನೀಡಿದ್ದರು. ವೃದ್ಧರು ನೀಡಿದ ಮಾಹಿತಿಯಂತೆ ಸಂಬಂಧಿಕರ ವಿಳಾಸ ಪತ್ತೆ ಕಾರ್ಯ ನಡೆಸಿ ಮನೆಯವರನ್ನು ಸಂಪರ್ಕಿಸಿ, ಬಂಗೇರರ ಪುತ್ರ ಹಾಗೂ ಪುತ್ರಿ ಆಶ್ರಮಕ್ಕೆ ಬಂದು, ತಂದೆಯನ್ನು ಮನೆಗೆ ಸೇರಿಸಿಕೊಂಡರು. ಮಕ್ಕಳು ತಂದೆಯವರ ಗುರುತು ಹಿಡಿದರೂ, 22 ವರ್ಷ ಮಕ್ಕಳಿಂದ ಅಂತರ ಕಾಯ್ದುಕೊಂಡಿದ್ದರಿಂದ ಮಕ್ಕಳ ಗುರುತು ಹಿಡಿಯಲು ತಂದೆ ಬಹಳ ಹೊತ್ತು ತೆಗೆದುಕೊಂಡರು.
ಕಾರ್ಯಾಚರಣೆಯಲ್ಲಿ ಹಿರಿಯ ನಾಗರಿಕ ಸಹಾಯವಾಣಿಯ ಅಶ್ವಿನಿ, ಜಿಲ್ಲಾ ಯೋಜನಾ ಸಯೋಜಕಿ ಅಶ್ವಿನಿ, ಆಪ್ತಸಮಾಲೋಚಕ ರೋಶನ್ ಅಮೀನ್ ಭಾಗಿಯಾಗಿದ್ದರು. ಕಾಪು ಠಾಣೆಯ ಪೋಲಿಸರು, ಆರೋಗ್ಯ ಇಲಾಖೆಯ ಸಿಬಂದಿ, ವಿನಯಚಂದ್ರ ಸಹಕರಿಸಿದರು.