Advertisement

ಸರ್ಕಾರ ಕಾಪಾಡುತ್ತೆ ಎಂದುಕೊಡರೆ ನಮ್ಮ ತಿಥಿ ಆಗುತ್ತೆ: ಶಾಸಕ ಪುಟ್ಟರಾಜು ಕಿಡಿ

06:00 PM May 03, 2021 | Team Udayavani |

ಮಂಡ್ಯ: ಕೋವಿಡ್  ಸೋಂಕಿನ ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಆಕ್ಸಿಜನ್‌ಗಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ. ಮಂಡ್ಯ, ಮೈಸೂರು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಸೋಮವಾರ ಸಂಜೆ ವೇಳೆಗೆ ಆಕ್ಸಿಜನ್ ಖಾಲಿಯಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ನಮ್ಮನ್ನು ಉಳಿಸಿಕೊಳ್ಳುತ್ತೆ ಎಂದುಕೊಂಡಿದ್ದರೆ, ನಮ್ಮೆಲ್ಲರ ತಿಥಿ ಆಗುತ್ತೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ವಾಗ್ದಾಳಿ ನಡೆಸಿದರು.

Advertisement

ಸಿಎಂ, ಸಚಿವರಿಂದ ಗೊಂದಲ ಹೇಳಿಕೆ:

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರ ಸ್ವಕ್ಷೇತ್ರಕ್ಕೆ ಆಕ್ಸಿಜನ್ ಇಲ್ಲ. ಇನ್ನು ಸಚಿವರು ಎಲ್ಲಿಂದ ತರುತ್ತಾರೆ. ಸಿಎಂ ಬಿ.ಎಸ್.ಯಡಿಯೂರಪ್ಪ ಒಂದು ಹೇಳಿಕೆ ನೀಡಿದರೆ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಇನ್ನೊಂದು ಹೇಳಿಕೆ ನೀಡುತ್ತಾರೆ. ಇರ‍್ಯಾರೂ ಸರಿಯಾದ ಮಾಹಿತಿಯನ್ನು ಜನರಿಗೆ ನೀಡುತ್ತಿಲ್ಲ. ಆದ್ದರಿಂದ ಇನ್ನಾದರೂ ಸರ್ಕಾರ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸೋಮವಾರ ಸಂಜೆಯೇ ಆಕ್ಸಿಜನ್ ಖಾಲಿ

ಹಳೇ ಮೈಸೂರು ಪ್ರಾಂತ್ಯದ ನಾಲ್ಕೈದು ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಕೊರತೆ ತೀವ್ರವಾಗಿ ಕಾಡುತ್ತಿದ್ದು, ಪ್ರಾಣವಾಯು ಅಭಾವದಿಂದ ರೋಗಿಗಳು ಸಾವನ್ನಪ್ಪಿದರೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೇ ಹೊಣೆ ಹೊರಬೇಕಾಗುತ್ತದೆ. ಆಕ್ಸಿಜನ್ ಕೊರತೆಯಿಂದ ಚಾಮರಾಜನಗರದಲ್ಲಿ 24 ಜನ ಸೋಂಕಿತರು ಮೃತಪಟ್ಟಿದ್ದಾರೆ. ಮಂಡ್ಯ, ಮೈಸೂರು ಮುಂತಾದ ಜಿಲ್ಲೆಗಳಲ್ಲಿ ಸೋಮವಾರ ಸಂಜೆ ವೇಳೆಗೆ ಆಕ್ಸಿಜನ್ ಖಾಲಿಯಾಗುವ ಸನ್ನಿವೇಶ ಸೃಷ್ಟಿಯಾಗಲಿದೆ ಎಂಬ ಮಾಹಿತಿ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

Advertisement

ಸರ್ಕಾರಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಿಲ್ಲ

ಈ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿಗಳ ಆಪ್ತ ಅಧಿಕಾರಿಗಳಿಗೆ ಮಾಹಿತಿ ನೀಡಿ ಮನವಿ ಮಾಡಲಾಗಿದ್ದರೂ, ಯಾವುದೇ ಪ್ರಯೊಜನವಾಗಿಲ್ಲ. ಸರ್ಕಾರ ತಕ್ಷಣದಲ್ಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಅನಾಹುತದ ಹೊಣೆಗಾರಿಕೆಯನ್ನು ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ವೆಂಟಿಲೇಟರ್ ಕೊರತೆ

ಮಂಡ್ಯ ಜಿಲ್ಲಾಸ್ಪತ್ರೆ, ಮಾದೇಗೌಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಹಲವು ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಹಾಗೂ ಆಕ್ಸಿಜನ್ ಕೊರತೆ ಕಾಡುತ್ತಿದೆ. ರೋಗಿಗಳ ಸಂಖ್ಯೆ ಉಲ್ಬಣಿಸುತ್ತಿದ್ದು, ಈ ಬಗ್ಗೆ ವಿಶೇಷ ನಿಗಾವಹಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.

ಸಂಸದರು ವೆಂಟಿಲೇಟರ್ ಒದಗಿಸಲಿ

ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಪ್ರವಾಸ ಮಾಡಿದರೆ ಸಾಲದು. ಸರ್ಕಾರದಿಂದ ಆಕ್ಸಿಜನ್ ಸೇರಿದಂತೆ ವೈದ್ಯಕೀಯ ಪರಿಕರಗಳ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಆಕ್ಸಿಜನ್ ಕೊರತೆ ನೀಗಿಸಲು ಜಿಲ್ಲೆಯ ಸಂಸದರು ಮುಂದಾಗಬೇಕು. ಕೇಂದ್ರ ಸರ್ಕಾರದ ಮೇಲೆ ತಮ್ಮ ಪ್ರಭಾವ ಬೀರಿ ರಾಜ್ಯದ ನೆರವಿಗೆ ಧಾವಿಸುವಂತೆ ಮಾಡಬೇಕು ಎಂದರು.

ಕಣ್ಣು, ಕಿವಿ ಇಲ್ಲದ ಸರ್ಕಾರ

ಕೋವಿಡ್ ನಿಯಂತ್ರಣದ ವಿಚಾರದಲ್ಲಿ ಸರ್ಕಾರದ ಧೋರಣೆ ಸರಿಯಲ್ಲ. ಕಣ್ಣು, ಕಿವಿ, ಮೂಗು ಇಲ್ಲದ ರೀತಿಯಲ್ಲಿ ವರ್ತಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರು ಸ್ವಯಂ ರಕ್ಷಣೆಗೆ ಮುಂದಾಗಬೇಕು. ಜಾಗೃತಿ ವಹಿಸಿ ದೈಹಿಕ ಅಂತರ ಕಾಪಾಡಿಕೊಳ್ಳುವುದರ ಜತೆಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸುವ ಮೂಲಕ ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next