Advertisement

ಒಂದು ಲೆಗ್ಗಿನ್ಸ್‌ನ ಆತ್ಮಕತೆ

09:38 AM Aug 02, 2017 | |

ಮಹಿಳೆಗೆ ಲೆಗ್ಗಿನ್ಸ್‌ ತೀರಾ ಕಂಫ‌ರ್ಟ್‌ ಉಡುಪು. ಈ ಲೆಗ್ಗಿನ್ಸ್‌ನ ಇತಿಹಾಸದ ಪುಟ ತಿರುವಿ ಹಾಕಿದರೆ, ಕೆಲವು ಅಚ್ಚರಿಗಳು ಕಾಣಿಸುತ್ತವೆ. ಅದು ಮೂಲತಃ ಮಹಿಳೆಯ ಉಡುಪೇ ಅಲ್ಲ! 

Advertisement

ನಾನು ಲೆಗ್ಗಿನ್ಸ್‌. ಹುಡುಗಿಯರಿಗೆ ನಾನಂದ್ರೆ ಹುಚ್ಚು. ಬಾಯ್‌ಫ್ರೆಂಡ್‌ಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತಾರೆ. ನಾನು ಬಂದ ಮೇಲೆಯೇ ಅನೇಕ ಹುಡುಗಿಯರು ಹಾಯ್‌ ಆಗಿ, ಆರಾಮವಾಗಿ ಓಡಾಡಿಕೊಂಡಿದ್ದಾರೆ. ಆ ಹುಡುಗಿಯರಿಗೆ ನಾನೆಷ್ಟು ಇಷ್ಟವೆಂದರೆ, ನನ್ನ ಮೇಲೆಯೇ ಜೋಕ್‌ಗಳನ್ನು ಸೃಷ್ಟಿಸಿದ್ದಾರೆ. ಕೆಲ ಹುಡುಗಿಯರು ದೇವರ ಮುಂದೆ ಪ್ರಾರ್ಥಿಸುತ್ತಾರಂತೆ: “ನನ್ನನ್ನು ಕಟ್ಟಿಕೊಳ್ಳುವ ಹುಡುಗ ಲೆಗ್ಗಿನ್ಸ್‌ನಂತೆ ಇರಬೇಕು’ ಅಂತ!

ಅವರು ಹಾಗೆ ಬೇಡಿಕೊಳ್ಳಲೂ ಕಾರಣವುಂಟು. ನಿಮಗೆ ಹೊಟ್ಟೆಕಿಚ್ಚಾದರೂ ಇಲ್ಲಿ ನಾನು ಆ ಕಾರಣವನ್ನು ಹೇಳಲೇಬೇಕು. ನಾನು ಅಷ್ಟೊಂದು ಬ್ಯೂಟಿಫ‌ುಲ್‌, ತುಂಬಾ ಕಂಫ‌ರ್ಟ್‌, ಏನೂ ಕಿರಿಕಿರಿ ಮಾಡದೆ ಅಡ್ಜಸ್ಟ್‌ ಹೋಗುವ ಸ್ವಭಾವದ ಉಡುಪು… ಅದಕ್ಕಾಗಿ ನನ್ನ ವ್ಯಕ್ತಿತ್ವದಲ್ಲಿ ಅವರೆಲ್ಲ ಭಾವಿ ಪತಿಯನ್ನು ಕಾಣುತ್ತಾರೆ. ಅದು ತಪ್ಪಲ್ಲ ಬಿಡಿ. ಆದರೆ, ನಾನು ಯಾಕೆ ಇಷ್ಟು ಮೃದು ಸ್ವಭಾವದ ಉಡುಪಾದೆ? ಈ ಮೊದಲು ನಾನು ಹೇಗಿದ್ದೆ? ಏಕೆ ನಾನು ಈ ಭೂಮಿ ಮೇಲೆ ಹುಟ್ಟಿಬಂದೆ ಎಂಬುದು ನಿಮಗೆ ಗೊತ್ತೇನು? ಹೇಳುತ್ತೇನೆ ಕೇಳಿ…

ನಾನು ಹುಟ್ಟಿದ್ದು ಹದಿನಾಲ್ಕನೇ ಶತಮಾನದಲ್ಲಿ, ಅದೂ ಸ್ಕಾಟ್ಲೆಂಡಿನಲ್ಲಿ. ನನ್ನನ್ನು ಮೊದಲು ಧರಿಸಿದ್ದು ಪುರುಷರು. ಬೂಟಿನ ಮೇಲ್ಭಾಗದ ತನಕ ತೊಟ್ಟು, ಕೆಸರು ದಾರಿಯಲ್ಲಿ ಹೇಗೇ ಬೇಕೋ ಹಾಗೆ ಓಡಾಡಿ, ನನ್ನನ್ನು ಬೇಗನೆ “ಕೊಳಕು’ ಮಾಡಿದ ಆರೋಪ ಈಗಲೂ ಅವರ ಮೇಲಿದೆ. ಆ ಸಂಕಟವನ್ನೆಲ್ಲ ನುಂಗಿಕೊಂಡು, ಕಾಲದೊಂದಿಗೆ ನಾನು ಹಾಗೆಯೇ ಬಂದೆ.

ಹಾಗೆ ನೋಡಿದರೆ, 1960ರ ವರೆಗೆ ನನಗೆ ಒಂದು ರೂಪುರೇಷೆಯೇ ಇದ್ದಿರಲಿಲ್ಲ. ಯಾಕೋ ನನ್ನ ಕಣ್ಣು ಮಹಿಳೆಯರ ಮೇಲೆ ಬಿತ್ತು. ಪುರುಷನ ರಫ್ ಕಾಲಿಗೆ ಆಸರೆ ಆಗುವುದಕ್ಕಿಂತ, ಮಹಿಳೆಯ ಸುಂದರ ಕಾಲಿಗೆ ರಕ್ಷಕಿ ಆಗುವುದು ಮೇಲು ಅಂತನ್ನಿಸಿತು. ಆ ದಶಕದಲ್ಲಿ ಮಹಿಳೆ ತುಸು ಬಿಗಿಯಾದ ವಸ್ತ್ರಗಳನ್ನು ತೊಡುತ್ತಿದ್ದಳು. “ಲೆಗ್‌ ವಾರ್ಮರ್ಸ್‌’ (ಬಿಗಿ ಉಡುಪು) ಎನ್ನುವ ಹೆಸರಿನಲ್ಲಿ ಅದನ್ನು ಕರೆಯುತ್ತಿದ್ದರು. ಅದರ ವ್ಯಕ್ತಿತ್ವವೋ… ಭಯಂಕರ ಗಡಸು! ಅದಾಗಿ ಕೆಲವೇ ವರುಷಗಳಲ್ಲಿ ಉಣ್ಣೆಯಿಂದ ರೂಪಿಸಿದ ಪ್ಯಾಂಟ್‌ಗಳನ್ನು ಶಿಶುಗಳಿಗೆ ತೊಡಿಸಿದರು ನೋಡಿ, ಅದೇ ನನ್ನ ಮರುಜನ್ಮ ಎಂದು ಈಗಲೂ ಅಂದುಕೊಳ್ಳುತ್ತೇನೆ. ಅಷ್ಟರಲ್ಲಾಗಲೇ ಯುದ್ಧಭೂಮಿಗಳಲ್ಲೂ ನನ್ನ ಜಪ ಶುರುವಾಗಿತ್ತು. ಚರ್ಮ ಮತ್ತು ಉಣ್ಣೆಯಿಂದ ಮಾಡಲ್ಪಟ್ಟಿದ್ದ ನನ್ನನ್ನು ಸೈನಿಕರು, ಮೊಣಕಾಲಿನ ತನಕ ಧರಿಸುತ್ತಿದ್ದರು. ನನಗೆ ಆಗಿನ ನನ್ನ ವೇಷ ಕಂಡು ನಗು ಉಕ್ಕುತ್ತದೆ. ನನ್ನನ್ನು ತೊಟ್ಟ ಸೈನಿಕರ ಕಾಲು ನೋಡಿದರೆ, ಬ್ಯಾಂಡೇಜ್‌ ಸುತ್ತಿದಂತೆ ಇರುತ್ತಿತ್ತು. ನಾನಾಗ ಅಷ್ಟು ದಪ್ಪಗಿದ್ದೆ ಕಣ್ರೀ! ಎಮ್ಮೆ, ಕುರಿ, ಜಿಂಕೆಯ ಚರ್ಮದಿಂದ ನನ್ನನ್ನು ತಯಾರಿಸುತ್ತಿದ್ದರು.

Advertisement

ಅದೇ ಹೊತ್ತಿನಲ್ಲಿ ನರ್ತಕಿಯರಿಗೆ ನಾನು ಪ್ರೀತಿದಾಯಕ ಉಡುಗೆಯಾದೆ. ಆಗ ನನ್ನನ್ನು “ಡಿಸ್ಕೋ ಪ್ಯಾಂಟ್‌’ ಎಂದು ಕರೆಯುತ್ತಿದ್ದರು. ಹಾಗೆ ಕರೆದಾಗಲೆಲ್ಲ ನಾನು ನಾಚಿಕೊಳ್ಳುತ್ತಿದ್ದೆ. ನಂತರ ಏರೋಬಿಕ್ಸ್‌ ಜಗತ್ತಿಗೂ ನಾನು ಕಾಲಿಟ್ಟೆ. ಮಹಿಳೆಗೆ ಕಾಲುಗಳನ್ನು ಸುಲಭವಾಗಿ ಮೇಲೆ ಕೆಳಗೆ ಮಾಡಲು, ಸುತ್ತ ತಿರುಗಿಸಲು ಪ್ಯಾಂಟ್‌ ಕಷ್ಟವಾಗಿದ್ದರಿಂದ, ನರ್ತಕಿಯರು ಮತ್ತು ಏರೋಬಿಕ್ಸ್‌ ಪಟುಗಳು ನನ್ನನ್ನೇ ನೆಚ್ಚಿಕೊಂಡರು. ಸಿಂಥೆಟಿಕ್‌ ಫ್ಯಾಬ್ರಿಕ್‌ ಶೈಲಿಯಲ್ಲಿ ನನ್ನನ್ನು ರೂಪಿಸಿದವು, ಬಟ್ಟೆ ಫ್ಯಾಕ್ಟರಿಗಳು. ನಂತರ ನನ್ನನ್ನು ಧರಿಸಿದವರು ಕ್ರೀಡಾಪಟುಗಳು. ಜಿಮ್ನಾಸ್ಟಿಕ್‌ನ ಪಟುಗಳು, ಲಾಂಗ್‌ಜಂಪ್‌- ಹೈ ಜಂಪ್‌ ಪಟುಗಳ ಕಾಲುಗಳ ಸುಲಭ ಚಲನೆಗೆ ನಾನೇ ನೆರವಾದೆ. ಕೆಲ ಕಾಲ ನನ್ನನ್ನು ಅನೇಕರು ಸ್ಕರ್ಟ್‌ ಕೆಳಗೂ ಧರಿಸುವ ಉಡುಪಾಗಿ ಬಳಸಿಕೊಂಡರು.

1980ರ ಬಳಿಕ ನನ್ನನ್ನು ಯಾರೋ ಫ್ಯಾಶನ್‌ ಡಿಸೈನರ್‌ ಗುರುತಿಸಿಬಿಟ್ಟ. ನನ್ನ ಪಯಣದ ಟರ್ನಿಂಗ್‌ ಪಾಯಿಂಟ್‌ ಆತನಿಂದಲೇ ಆಯಿತು. ಕ್ರೀಡಾಪಟುಗಳಲ್ಲದೆ, ರ್‍ಯಾಂಪ್‌ ಮೇಲೂ ನಾನು ಬಂದೆ. ನನ್ನ ಆಧಾರ ಸ್ತಂಭವಾದ ಸುಂದರಿಯರ ಕಾಲಿನ ಮೇಲೆ ಕ್ಯಾಮೆರಾಗಳ ಕಣ್ಣು ಬಿದ್ದವು. ಉಫ್! ಸಾಕೆನಿಸುವಷ್ಟು ಫೋಟೋ ತೆಗೆಸಿಕೊಂಡೆ. ಈಗಲೂ ತೆಗಿಸಿಕೊಳ್ಳುತ್ತಲೇ ಇರುವೆ. ಮಜಾ ಎಂದರೆ, ಈಗಲೂ ನಾನು ದಕ್ಷಿಣ ಕೊರಿಯಾದ ಪುರುಷರಿಗೆ ಅಚ್ಚುಮೆಚ್ಚಿನ ಉಡುಪು. ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ಗೆ ಹೋದರೆ, ನನ್ನನ್ನು ಅತಿಯಾಗಿ ಇಷ್ಟಪಡುವ ಅಭಿಮಾನಿ ಹುಡುಗರ ದೊಡ್ಡ ದಂಡನ್ನೇ ಅಲ್ಲಿನ ಬೀದಿಗಳಲ್ಲಿ ಕಾಣಬಹುದು.

ಏನೇ ಅನ್ನಿ, ಹುಡುಗಿಯರ ಹೃದಯದಿಂದ ನನ್ನನ್ನು ಹೊರತರಲು ಯಾವ ಬಾಯ್‌ಫ್ರೆಂಡ್‌ಗೂ ಸಾಧ್ಯವಿಲ್ಲ. ನಿಮಗೆ ಗೊತ್ತಾ? ಅಂದು ನನ್ನನ್ನು ಕೊಳಕು ಮಾಡಿದ ಪುರುಷರ ಮೇಲೆ ನಾನು ಈಗ ಸೇಡು ತೀರಿಸಿಕೊಳ್ಳುತ್ತಿರುವೆ. ನನಗಾಗಿ ಅವರ ಪಾಕೆಟ್‌ ಮನಿ ಬೇಜಾನ್‌ ಖರ್ಚಾಗುತ್ತಿದೆ!

ನನ್ನನ್ನು ಧರಿಸುವಾಗ ನಿಮಗಿದು ಗೊತ್ತಿರಲಿ…
1. ಕ್ರಾಪ್ಟ್ ಟಾಪ್‌ ಧರಿಸಿದಾಗ ನಾನು ನಿಮ್ಮ ಚರ್ಮಕ್ಕೆ ಅಂಟಿಕೊಂಡಿರುತ್ತೇನೆ. ಕ್ರಾಪ್‌ ಟಾಪ್‌ ಅಥವಾ ಶಾರ್ಟ್‌ ಟಾಪ್‌ ಧರಿಸುವಾಗ ಬಟ್ಟೆಯ ಫಿಟ್ಟಿಂಗ್‌ ಎದ್ದು ಕಾಣಿಸುತ್ತದೆ. ಇದು ನಡೆಯುವಾಗ ಅಸಹ್ಯ. ಆದ್ದರಿಂದ ಕ್ರಾಪ್‌ ಟಾಪ್‌ ಧರಿಸಿದಾಗ, ನನ್ನನ್ನು ಧರಿಸಬೇಡಿ ಪ್ಲೀಸ್‌…

2. ನನ್ನ ಜೊತೆಗೆ ನೀವು ಶಾರ್ಟ್‌ ಧರಿಸುವುದು ಕೂಡ ತಪ್ಪು. ಟೈಟ್‌ ಫಿಟ್‌ ಪ್ಯಾಂಟಿ ಮೇಲೆ ನನ್ನನ್ನು ಧರಿಸುವುದರಿಂದ, ಪ್ಯಾಂಟಿ ಲೈನ್‌ ಕಾಣಿಸಿ, ನೋಡುಗರ ದೃಷ್ಟಿಗೆ ಅಸಹ್ಯವಾಗಿ ತೋರುತ್ತದೆ.

3. ತೆಳುವಾದ ಲೆಗ್ಗಿನ್ಸ್‌ ಅನ್ನು ಯಾವತ್ತೂ ಖರೀದಿಸಬೇಡಿ. ಅದಕ್ಕಿಂತ ಕಾಟನ್‌ ಲೆಗ್ಗಿನ್ಸ್‌ ತುಂಬಾ ಉತ್ತಮ. ಅದು ದಪ್ಪವಾಗಿರುವುದರಿಂದ ಧರಿಸಲೂ ಕಂಫ‌ರ್ಟ್‌ ಆಗಿರುತ್ತದೆ.

ಮೇಘಾ ಗೊರವರ ನವನಗರ

Advertisement

Udayavani is now on Telegram. Click here to join our channel and stay updated with the latest news.

Next