Advertisement

ಬಾಳ ಸೂರ್ಯನ ಕೊನೆಯ ಹಾಡು

06:35 AM Aug 29, 2017 | |

ಅದೊಂದು ದಿನ ಮುಂಜಾನೆ ಏಳುತ್ತಲೇ ಕಾಲು ಎಡವಿತ್ತು. ದೇವರ ಬಳಿ ಹೋಗಿ ಪ್ರಾರ್ಥಿಸುವಾಗ ನನ್ನವನ ನೆನಪು ಬರಲೂ, ದೀಪ ಆರಲೂ ಸರಿಯಾಗಿತ್ತು. ಮನವೇಕೋ ಅವಘಡ, ಆತಂಕದ ಗೀತೆ ಹಾಡುತ್ತಿತ್ತು…

Advertisement

ಅತ್ತರೂ, ಕರೆದರೂ, ಚೀರಿದರೂ ಆತ ಇನ್ನೆಂದೂ ಸಿಗುವುದಿಲ್ಲ. ಇನ್ನು ನನ್ನ ಮನದಂಗಳದಿ ಅವನು ನೆನಪು ಮಾತ್ರ…

ಅಂದೆಲ್ಲಾ ಕಾಲೇಜಿನಲ್ಲಿ ನಮಗಿಟ್ಟ ಹೆಸರು “ಜೋಡಿಹಕ್ಕಿ’ಗಳೆಂದು. ಬನದ ಚಿಟ್ಟೆಯ ಹಾಗೆ ಆತನೊಂದಿಗೆ ಅಲೆಯುವುದೆಂದರೆ ಏನೋ ಖುಷಿ. ಕಾಲೇಜಿಗೆ ಹೋಗುವಾಗ, ಬರುವಾಗಲೆಲ್ಲಾ ಆತನೊಡನೆ ಸ್ವಲ್ಪ ಸಮಯ ಕಳೆಯದಿದ್ರೆ ಆ ದಿನ ನಾನು ನಾನಾಗೇ ಇರುತ್ತಿರಲಿಲ್ಲ. ಆಗೆಲ್ಲಾ ನನ್ನ ಮುಖ ಬೇರೆಯೇ ಮುಖವಾಡ ಧರಿಸುತ್ತಿತ್ತು. ಆತನ ಜೊತೆ ವಿಹರಿಸಿದ ಆ ಸುಂದರ ಕ್ಷಣಗಳು ಬಹುಶಃ ನನ್ನ ಜೀವನದಲ್ಲಿ ಇನ್ನೆಂದಿಗೂ ಬರಲಿಕ್ಕಿಲ್ಲ. ಆತನ ಆ ಸುಂದರ ವದನದ ಕಾಂತಿ, ಆ ನಗು, ಆ ತೇಜಸ್ಸಿನ ಮುಖವನ್ನು ನಾನು ಕೋಮಾ ಸ್ಟೇಜಿಗೆ ಹೋದರೂ ಮರೆಯಲಾಗದು. ನಮ್ಮ ದೇಹಗಳು ಬೇರೆ ಬೇರೆಯಾದರೂ ಮನಸ್ಸು- ಕನಸುಗಳೆಲ್ಲಾ ಒಂದೇ ವೇಗದಲ್ಲಿ, ಒಂದೇ ಹಾದಿ ಹಿಡಿದು ಯಾನ ಹೊರಟಿದ್ದವು. ಹೀಗಾಗಿ, ನಮ್ಮ ಪ್ರೀತಿಯಲ್ಲಿ ಯಾವತ್ತೂ ಕಲಹದ ಛಾಯೆಯೇ ಉದಿಸಿರಲಿಲ್ಲ.

ಅದೊಂದು ದಿನ ಮುಂಜಾನೆ ಏಳುತ್ತಲೇ ಕಾಲು ಎಡವಿತ್ತು. ದೇವರ ಬಳಿ ಹೋಗಿ ಪ್ರಾರ್ಥಿಸುವಾಗ ನನ್ನವನ ನೆನಪು ಬರಲೂ, ದೀಪ ಆರಲೂ ಸರಿಯಾಗಿತ್ತು. ಮನವೇಕೋ ಅವಘಡ, ಆತಂಕದ ಗೀತೆ ಹಾಡುತ್ತಿತ್ತು. ಏನೋ ಅನಾಹುತವಾಗುವ ಸಂಭವವಿದೆಯೆಂದು ಮನದ ಭಾಷೆ ಕ್ಷಣ ಕ್ಷಣಕ್ಕೂ ವರದಿ ನೀಡುತ್ತಿತ್ತು. ಮನಸ್ಸಿನ ತುಂಬಾ ಆತನ ನೆನಪು ಎಗ್ಗಿಲ್ಲದೇ ನುಗ್ಗುತ್ತಿತ್ತು. ಭೂಮಿಯಿಂದ ಬಹುದೂರ ಇರುವ ಆಕಾಶದಂತೆ, ಈ ಭೂಮಿಕಾಳಿಗೆ ಆಕಾಶ್‌ ಅವಳನ್ನು ಬಿಟ್ಟು ದೂರ ಹೋಗುವಂತೆ ಭಾಸವಾಗಿತ್ತು. 

ಈ ಗೊಂದಲಕ್ಕೆ ಕೊನೆ ಹಾಡಲು ನಾವು ಪ್ರತಿನಿತ್ಯ ಸಿಗುವ ಆ ಮಾಮೂಲು ಜಾಗಕ್ಕೆ ಆಕಾಶನನ್ನು ಬರಹೇಳಿ ಅವಸರದಿ ಧಾವಿಸಿದೆ. ಆದರೆ, ಆತ ನನಗಿಂತ ಮೊದಲೇ ಬಂದು ಕಾಯುತ್ತಾ ಕುಳಿತಿದ್ದ. ಅವನನ್ನು ನೋಡಿ ಹೇಳತೀರದ ಆನಂದ ಹರಿದುಬಂತು. ಆ ಇಳಿಸಂಜೆಯ ಹೊತ್ತು ಹಿಂದೆಂದೂ ಸಿಗದ ಅಪೂರ್ವ ಅನುಭವ ನೀಡಿತ್ತು. ಆ ಬಾನ ಸೂರ್ಯ ಕಣ್ಮರೆಯಾಗುತ್ತಿದ್ದಂತೆ ನಾವೂ ಬೈ ಹೇಳಿ ಮನೆ ಕಡೆಗೆ ಹೊರಟೆವು. ಅಂದು ನಾನು ಹೇಳಿದ ಬೈ ಆತನಿಗೆ ಹೇಳುವ ಕೊನೆಯ ವಿದಾಯವಾಗುತ್ತದೆಂದು ನಾನು ತಿಳಿದಿರಲಿಲ್ಲ.

Advertisement

ಅಲ್ಲಿಂದ ಹೊರಟ ಆಕಾಶ್‌ನನ್ನು ವಿಧಿ ಕರೆದುಕೊಂಡಿತ್ತು. ಮನೆಯ ಬಳಿ ಹೋಗುತ್ತಿರುವಾಗ ನೆಲದ ಮೇಲೆ ಬಿದ್ದಿದ್ದ ವಿದ್ಯುತ್‌ ತಂತಿಯ ಮೇಲೆ ಕಾಲಿರಿಸಿದ್ದ. ಕ್ಷಣ ಮಾತ್ರದಲ್ಲಿ ಸಾವು ಸಂಪೂರ್ಣವಾಗಿ ಆತನನ್ನು ನುಂಗಿಬಿಟ್ಟಿತ್ತು. ವಿಷಯ ನನ್ನ ಕಿವಿಯ ಮೇಲೆ ಬೀಳುತ್ತಿದ್ದಂತೆ ಮನದ ಆಕ್ರಂದನ ಮುಗಿಲು ಮುಟ್ಟಿತ್ತು. ಕಣ್ಣೀರು ಒರೆಸಬೇಕಾಗಿದ್ದ ಆತನೇ ನನ್ನಿಂದ ಬಹುದೂರ ಹೋಗಿದ್ದ. ನಾನೂ ಅವನ ಬಳಿ ಹೊರಟಿದ್ದೆ. ಆದರೆ, ದೇವರು ಒಪ್ಪಿಗೆ ನೀಡಲಿಲ್ಲ. ನಾನು ಏಕಾಂಗಿ ಸಂಚಾರಿಯಾದೆ…

ಈಗ ನಾನಿದ್ದೇನೆ, ಆದರೆ ಆತನಿಲ್ಲ. ಅವನ ನೆನಪುಗಳು ಇನ್ನೂ ಹಸಿಯಾಗಿವೆ. ಅತ್ತರೂ, ಕರೆದರೂ, ಕೂಗಿ ಹಾಹಾಕಾರದಿ ಚೀರಿದರೂ ಆತ ಇನ್ನೆಂದಿಗೂ ಸಿಗುವುದಿಲ್ಲ. ಇನ್ನು ನನ್ನ ಮನದಂಗಳದಿ ಅವನು ನೆನಪು ಮಾತ್ರ.

– ಜಯಶ್ರೀ ಎಸ್‌. ಕಾನಸೂರು

Advertisement

Udayavani is now on Telegram. Click here to join our channel and stay updated with the latest news.

Next