Advertisement

42 ಕೆರೆಗಳಿರುವ ತೆಕ್ಕಟ್ಟೆ ಗ್ರಾಮದಲ್ಲಿ ಬರಿದಾಗುತ್ತಿದೆ ನೀರ ಸೆಲೆ

12:30 AM Feb 17, 2019 | Team Udayavani |

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ತೆಕ್ಕಟ್ಟೆ ಪ್ರದೇಶ ಕೆರೆಗಳ ಗ್ರಾಮ.ಇಲ್ಲಿ 42 ಕೆರೆಗಳಿದ್ದು ಅದರಲ್ಲಿ 10 ಕೆರೆಗಳು ಮಾತ್ರ ನೀರಾವರಿಗೆ ಬಳಕೆಯಾಗುತ್ತಿವೆ. ಇತರ ಕೆರೆಗಳು ಅತಿಕ್ರಮಣಗೊಂಡು ಮೂಲ ಸ್ವರೂಪ ಕಳೆದುಕೊಂಡಿವೆ. ಇದರಿಂದ ಗ್ರಾಮದಲ್ಲಿ ಅಂತರ್ಜಲದ ಕೊರತೆ ಕಾಡುತ್ತಿದೆ.  

Advertisement

ನಿರ್ವಹಣೆಯಿಲ್ಲ 
ಇಲ್ಲಿನ ಕೃಷಿ ಚಟುವಟಿಕೆ ಗಳಿಗೆ ಮೂಲ ಸೆಲೆಯಾದ ಕೆರೆಗಳು ನಿರ್ವಹಣೆ ಇಲ್ಲದೆ ಹೂಳುತುಂಬಿವೆ.  ಕೃಷಿ ಭೂಮಿಗಳ ಗೃಹ/ಕಟ್ಟಡ ನಿರ್ಮಾಣ ಚಟುವಟಿಕೆಗಳು ನಡೆಯುತ್ತಿದ್ದು ಕೆರೆಗಳು ಅತಿಕ್ರಮಣದೊಂದಿಗೆ ತ್ಯಾಜ್ಯ ಎಸೆಯುವ ಜಾಗವಾಗಿ ಪರಿವರ್ತನೆಗೊಳ್ಳುತ್ತಿವೆ.

ಅಂತರ್ಜಲ ಕುಸಿತ 
ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೊಮೆ, ಕನ್ನುಕೆರೆ, ಮಾಲಾಡಿ, ಮಲ್ಯಾಡಿ ಭಾಗಗಳಲ್ಲಿ 5,590ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, 1,638 ವಾಣಿಜ್ಯ ಕಟ್ಟಡ ಹಾಗೂ ಮನೆಗಳನ್ನು ಒಳಗೊಂಡಿದೆ. 

ಇಲ್ಲೆಲ್ಲ ವ್ಯಾಪಕ ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದು, ಮಿತಿಮೀರಿ ಅಂತರ್ಜಲ ಬಳಕೆ ಇದೆ. ಇದರಿಂದ ಈಗಾಗಲೇ ನೀರಿನ ಮಟ್ಟ ಕುಸಿಯುತ್ತಿದೆ. 

ಮುಂದಿನ ದಿನಗಳಲ್ಲಿ ಆಲುಗುಡ್ಡೆ, ಮಾಲಾಡಿ , ಕೊಮೆ, ಶೇಡಿಗುಳಿ ಪರಿಸರದಲ್ಲಿ ಇದರ ನೇರ ಪರಿಣಾಮವಾಗುವ ಸಾಧ್ಯತೆ ಯನ್ನೂ ಅಲ್ಲಗಳೆಯುವಂತಿಲ್ಲ. ಹೀಗಾಗುವ ಮೊದಲೇ ಎಚ್ಚೆತ್ತುಕೊಂಡಲ್ಲಿ ಮಾತ್ರವೇ ಸಮಸ್ಯೆಯಿಂದ ಪಾರಾಗುವುದು ಸಾಧ್ಯ.  

Advertisement

ವರದಾನದಂತಿತ್ತು
ಕುಂಭಾಸಿ ಹಾಗೂ ತೆಕ್ಕಟ್ಟೆ ಗ್ರಾ.ಪಂ. ವ್ಯಾಪ್ತಿಯ ಗಡಿಭಾಗದಲ್ಲಿ  ಸುಮಾರು 3ಎಕರೆ ವಿಸ್ತೀರ್ಣದ  ಶೇಡಿಗುಳಿ ಮದಗ ಹಿಂದೆ ಕೃಷಿಕರ ಪಾಲಿಗೆ ವರವಾಗಿದ್ದು, ಸುತ್ತಮುತ್ತಲಿನ ಸುಮಾರು ನೂರಾರು ಎಕರೆ ಕೃಷಿ ಭೂಮಿಗಳಿಗೆ ನೀರುಣಿಸುತ್ತಿತ್ತು.ಬದಲಾದ ಕಾಲದಲ್ಲಿ ಶೇಡಿಗುಳಿ ಮದಗ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಗಿಡಗಂಟಿಗಳು ಆವರಿಸಿದೆ. ಈಗಾಗಲೇ ಮದಗದ ಸುತ್ತಮುತ್ತಲಿನ ಜಾಗಗಳು ಅತಿಕ್ರಮಣಗೊಳ್ಳುತ್ತಿದೆ.

ಸಂರಕ್ಷಿಸಬೇಕು
ಪ್ರಕೃತಿ ಮೇಲೆ ಮಾನವನ ನಿರಂತರ ಪ್ರಹಾರದಿಂದಾಗಿ ಗ್ರಾಮದಲ್ಲಿ ಹಿಂದೆಂದೂ ಕಾಣದ ಅಂತರ್ಜಲಮಟ್ಟ  ಕುಸಿತ ಎದುರಾಗುವ ಭೀತಿ ಇದೆ. ಆದ್ದರಿಂದ ಸರಕಾರ ಕೆರೆಗಳನ್ನು ಗುರುತಿಸಿ, ಸಂರಕ್ಷಿಸುವ ಕೆಲಸ ಮಾಡಬೇಕು.
– ವೆಂಕಟೇಶ್‌ ವೈದ್ಯ ಕೊಮೆ, ಕೃಷಿಕರು

ಸಹಕಾರ ಅಗತ್ಯ
ಮಳೆ  ಕೊಯ್ಲು ಹಾಗೂ ಕೆರೆಗಳಿಗೆ ನೀರು ಇಂಗಿಸಿ ಅಂತರ್ಜಲವನ್ನು ಸಂರಕ್ಷಿಸುವ ಮಾರ್ಗೋಪಾಯ ಕಂಡುಕೊಳ್ಳಬೇಕಾಗಿದೆ. ಇದಕ್ಕೆ ಸರಕಾರದ ಸ್ಪಂದನೆ ಹಾಗೂ ಸಾರ್ವಜನಿಕರ ಸಹಕಾರ ಕೂಡ ಅತೀ ಅಗತ್ಯವಿದೆ. 
– ಶೇಖರ ಕಾಂಚನ್‌
ಅಧ್ಯಕ್ಷರು, ಗ್ರಾ.ಪಂ.ತೆಕ್ಕಟ್ಟೆ

– ಟಿ.ಲೋಕೇಶ್‌ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next