Advertisement

100 ಅಡಿ ತಲುಪಿದ ಕೆಆರ್‌ಎಸ್‌ ಜಲಾಶಯ

05:10 PM Sep 03, 2017 | Team Udayavani |

ಮಂಡ್ಯ/ಶ್ರೀರಂಗಪಟ್ಟಣ: ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ ನೂರು ಅಡಿ ತಲುಪಿದೆ. ಇದು ಜಿಲ್ಲೆಯ ಜನತೆ ಸಮಾಧಾನದಿಂದ
ನಿಟ್ಟುಸಿರು ಬಿಡುವಂತಾಗಿದೆ. ಮಳೆಯ ಕೊರತೆಯಿಂದ ಕಳೆದ ವರ್ಷ ಕೆಆರ್‌ಎಸ್‌ ಜಲಾಶಯ ನೂರರ ಗಡಿ ತಲುಪುವುದಕ್ಕೆ ಸಾಧ್ಯವಾಗಿರಲಿಲ್ಲ.

Advertisement

ಕೆಆರ್‌ಎಸ್‌ ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳಾಗಿದೆ. ಶನಿವಾರ ಸಂಜೆ ವೇಳೆಗೆ ಜಲಾಶಯದ ನೀರಿನ ಮಟ್ಟ 100 ಅಡಿ ತಲುಪಿದೆ. ಜಲಾಶಯಕ್ಕೆ 12,205 ಕ್ಯೂಸೆಕ್‌ ನೀರು ಹರಿದುಬರುತ್ತಿದೆ. ಅಣೆಕಟ್ಟೆಯಿಂದ 8,091 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಅಣೆಕಟ್ಟೆಯಲ್ಲೀಗ 22.38 ಟಿಎಂಸಿ ನೀರು ಸಂಗ್ರಹವಾಗಿದೆ.

ಭರ್ತಿಗೆ 24 ಅಡಿ ನೀರು ಬೇಕು: ಇನ್ನೂ ಜಲಾಶಯ ಭರ್ತಿಯಾಗುವುದಕ್ಕೆ 24 ಅಡಿಗಳಷ್ಟು ನೀರಿನ ಅಗತ್ಯವಿದೆ. ಕೊಡಗಿನಲ್ಲಿ ಈಗ ಮಳೆ ಕಡಿಮೆಯಾಗಿದೆ. ಆದ್ದರಿಂದ ಜಲಾಶಯ ಭರ್ತಿಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಎರಡೂವರೆ ತಿಂಗಳಿನಿಂದ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವುದರಿಂದ ನೀರಿನ ಮಟ್ಟದಲ್ಲಿ ಏರಿಕೆ ಕಾಣದಂತಾಗಿದೆ.

ಆಗಸ್ಟ್‌ ತಿಂಗಳಲ್ಲಿ ಜಲಾಶಯಕ್ಕೆ ಹರಿದುಬಂದ ಒಳಹರಿವನ್ನು ಗಮನಕ್ಕೆ ತೆಗೆದುಕೊಂಡರೆ ಅಣೆಕಟ್ಟೆಯ ನೀರಿನ ಮಟ್ಟ ಇಷ್ಟೊತ್ತಿಗೆ 110 ಅಡಿ ದಾಟಬೇಕಿತ್ತು. ಆದರೆ, ತಮಿಳುನಾಡಿಗೆ ನೀರು ಹರಿಸುವುದಕ್ಕೆ ರಾಜ್ಯಸರ್ಕಾರ ಹೆಚ್ಚಿನ ಒಲವು ತೋರುತ್ತಿರುವುದರಿಂದ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕುಂಟುತ್ತಾ ಸಾಗುವಂತಾಗಿದೆ.

ನೂರರ ಗಡಿ ತಲುಪಲಿಲ್ಲ: ಮಳೆಯ ಕೊರತೆಯಿಂದ ಕಳೆದ ವರ್ಷ ಕೃಷ್ಣರಾಜಸಾಗರ ಜಲಾಶಯ 100ರ ಗಡಿ ತಲುಪುವ ಯೋಗವೇ ಕೂಡಿಬಂದಿರಲಿಲ್ಲ. 96.63 ಅಡಿ ತಲುಪುವುದಕ್ಕಷ್ಟೇ ಸಾಧ್ಯವಾಗಿತ್ತು. 2 ಆಗಸ್ಟ್‌ 2016ರಂದು ಜಲಾಶಯದಲ್ಲಿ 93.03 ಅಡಿ ನೀರು ಸಂಗ್ರಹವಾಗಿದ್ದು, 3603 ಕ್ಯೂಸೆಕ್‌ ನೀರು ಹರಿದುಬರುತ್ತಿದ್ದರೆ, 1796 ಕ್ಯೂಸೆಕ್‌ ನೀರನ್ನು ಹೊರಗೆ ಬಿಡಲಾಗುತ್ತಿತ್ತು.

Advertisement

2014ರ ಜುಲೈ 6ರಂದು ಕೆಆರ್‌ಎಸ್‌ ಜಲಾಶಯ 100 ಅಡಿ ತಲುಪಿದ್ದರೆ, 2015ರಲ್ಲಿ ಜೂನ್‌ 27ರಂದೇ ಕೆಆರ್‌ ಎಸ್‌ ಜಲಾಶಯ ನೂರರ ಗಡಿ ತಲುಪಿತ್ತು. 2016ರಲ್ಲಿ ಎದ್ದ ಕಾವೇರಿ ವಿವಾದದಿಂದಾಗಿ ಅಣೆಕಟ್ಟೆಯಲ್ಲಿ ನೀರು
ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಲೇ ಇಲ್ಲ.

ಜಿಲ್ಲೆಯಲ್ಲಿ ಶೇ.42ರಷ್ಟು ಹೆಚ್ಚು ಮಳೆ ಕಳೆದ ಬಾರಿಗೆ ಹೋಲಿಸಿದರೆ ಪ್ರಸಕ್ತ ವರ್ಷ ಅತಿ ಹೆಚ್ಚು ಮಳೆಯಾಗಿದೆ. ಏಪ್ರಿಲ್‌ ತಿಂಗಳಲ್ಲಿ ಹಿಂಗಾರು ಮಳೆ ಉತ್ತಮವಾಗಿತ್ತು.
ವಾಡಿಕೆಗಿಂತ ಹೆಚ್ಚು ಮಳೆಯಾಗುವ ಮೂಲಕ ಏಕದಳ ಹಾಗೂ ದ್ವಿದಳ ಧಾನ್ಯ ಸೇರಿದಂತೆ ಆಹಾರ ಬೆಳೆಗಳನ್ನು ಬೆಳೆಯಲು ಅನುಕೂಲಕರ ವಾತಾವರಣ ನಿರ್ಮಾಣವಾಗಿತ್ತು.

ಜೂನ್‌, ಜುಲೈ ತಿಂಗಳಲ್ಲಿ ಮುಂಗಾರು ಮಳೆ ಕೈಕೊಟ್ಟಿತ್ತು. ಆದರೆ, ಆಗಸ್ಟ್‌ ತಿಂಗಳಲ್ಲಿ ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದೆ. ಆಗಸ್ಟ್‌ ಮಾಹೆಯಲ್ಲಿ 1113.72 ಮಿಮೀ ಮಳೆಯಾಗಿದೆ. ವಾಸ್ತವಕ್ಕಿಂತ ಸರಾಸರಿ 203 ಮಿ.ಮೀ ಹೆಚ್ಚು
ಮಳೆಯಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಜನವರಿಯಿಂದ ಆ.26ರವರೆಗೆ ಸರಾಸರಿ 480.2 ಮಿಮೀಯಾಗಿದ್ದು, ಶೇ.42ರಷ್ಟು ಹೆಚ್ಚು ಮಳೆಯಾಗಿದೆ. ಕಳೆದ ಇದೇ ಅವಧಿಯಲ್ಲಿ ಸರಾಸರಿ 346.8 ಮಿಮೀ ಮಳೆಯಾಗಿತ್ತು.

ಮಂಡ್ಯಾ ಮಂಜುನಾಥ್

Advertisement

Udayavani is now on Telegram. Click here to join our channel and stay updated with the latest news.

Next