ಹುಬ್ಬಳ್ಳಿ: ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಸಾಧನೆಗಳ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರಗೆ ಜೆಡಿಎಸ್ ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ ಪಂಥಾಹ್ವಾನ ನೀಡಿದ್ದಾರೆ.
ಬಸವರಾಜ ಹೊರಟ್ಟಿಯವರು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಸಾಧನೆ ಬಗ್ಗೆ ವಿಧಾನ ಪರಿಷತ್‌ನಲ್ಲಿ ಪ್ರಸ್ತಾಪ ಮಾಡಿದ್ದಕ್ಕೆ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಅಧಿವೇಶನದಲ್ಲಿ ಉತ್ತರ ನೀಡುವುದನ್ನು ಬಿಟ್ಟು ಮಾಧ್ಯಮಗಳಲ್ಲಿ ಹೊರಟ್ಟಿಯವರ ಸಾಧನೆ ಪ್ರಶ್ನಿಸಿದ್ದಾರೆ.
ಜಗದೀಶ ಶೆಟ್ಟರ ಹಾಗೂ ಬಸವರಾಜ ಹೊರಟ್ಟಿಯವರ ಸಾಧನೆ ಬಗ್ಗೆ ಬಹಿರಂಗ ಚರ್ಚೆಯಾಗಲಿ. ಸಮ್ಮಿಶ್ರ ಸರಕಾರದಲ್ಲಿ ಕೇವಲ 40 ತಿಂಗಳು ಸಚಿವರಾಗಿದ್ದ ಬಸವರಾಜ ಹೊರಟ್ಟಿಯವರು ಅಗಾಧ ಸಾಧನೆ ಮಾಡಿದ್ದಾರೆ. ಶಿಕ್ಷಣ ಕ್ಷೇತ್ರದ ಏಳಿಗೆಗಾಗಿ ಶ್ರಮಿಸಿದ್ದಾರೆ.
ಧಾರವಾಡದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ಆರಂಭಗೊಳ್ಳಲು ಕಾರಣಕರ್ತರಾದರು. ಸಣ್ಣ ಉಳಿತಾಯ ಸಚಿವರಾಗಿ ಒಂದಂಕಿ ಲಾಟರಿ ಮಟ್ಕಾ ತಡೆಯಲು ಗೂಂಡಾ ಕಾಯ್ದೆ ಜಾರಿ ಮಾಡಿದರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾಗಿದ್ದ ಹೊರಟ್ಟಿಯವರು ಹುಬ್ಬಳ್ಳಿಯಲ್ಲಿ ಉತ್ತರ ಕರ್ನಾಟಕದ ಮೊದಲನೆ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಿದರು.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿ ಶಾಶ್ವತ ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸಿದ್ದರಿಂದ ರಾಜ್ಯದ 23000 ಶಿಕ್ಷಕರಿಗೆ ಅನುಕೂಲವಾಗಿದೆ. ಅಲ್ಲದೇ 24768 ಪ್ರಾಥಮಿಕ, 12994 ಪ್ರೌಢ ಹಾಗೂ 5551 ಪಿಯು ಶಿಕ್ಷಕರ ಹಾಗೂ ಉಪನ್ಯಾಸಕರ ನೇಮಕಕ್ಕೆ ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದದ್ದು ಹೊರಟ್ಟಿಯವರ ಕೊಡುಗೆಯಾಗಿದೆ.
ಜಗದೀಶ ಶೆಟ್ಟರ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಸಂದರ್ಭದಲ್ಲಿ ಕೂಡ ಹು-ಧಾ ನಗರಗಳ ಸರ್ವಾಂಗೀಣ ಅಭಿವೃದ್ಧಿಗೆ ಯಾವುದೇ ಪ್ಯಾಕೇಜ್ ಘೋಷಿಸದಿರುವುದು ವಿಪರ್ಯಾಸ. ಜಗದೀಶ ಶೆಟ್ಟರ ಅವರ ಸಾಧನೆ ಹಾಗೂ ಬಸವರಾಜ ಹೊರಟ್ಟಿಯವರ ಸಾಧನೆಗಳ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧವಿರುವುದಾಗಿ ರಾಜಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.