Advertisement

ವಿದ್ಯುತ್‌, ಪಡಿತರವಿಲ್ಲ; ಚಿಮಣಿಯಲ್ಲಿ  ಓದು

06:00 AM Jul 08, 2018 | |

ಮಂಗಳೂರು: ಬಿರುಸು ಮಳೆ, ಸೂರಿಗೊಂದು ಜೋಪಡಿ, ಅದರೊಳಗೆ ಚಿಮಣಿ ದೀಪದಲ್ಲಿ ಓದುತ್ತಿರುವ ಮಕ್ಕಳು. ಇದು ಸ್ಮಾರ್ಟ್‌ ಸಿಟಿ ಮಂಗಳೂರಿನ ಹೃದಯ ಭಾಗದಲ್ಲೇ ಇದ್ದು ಯಾವುದೇ ಸೌಲಭ್ಯವಿಲ್ಲದೆ ವಂಚಿತರಾದ  2 ಕೊರಗ ಕುಟುಂಬಗಳ ವ್ಯಥೆ. ಹಲವಾರು ಸರಕಾರಗಳು ಬಂದು ಹೋದರೂ, ಸಮಾಜ ಕಲ್ಯಾಣದ ಬಗ್ಗೆ ಹೇಳುತ್ತಲೇ ಇದ್ದರೂ ಈ ಕುಟುಂಬಗಳಿಗೆ ಇನ್ನೂ ಸರಕಾರದ ಸವಲತ್ತುಗಳು, ನೆರವು ತಲುಪಿಲ್ಲ. ಅಚ್ಚರಿ ಎಂದರೆ ಮಂಗಳೂರು ಮಹಾ ನಗರ ಪಾಲಿಕೆಯ ಜನಪ್ರತಿನಿಧಿಗಳಿಗೂ ಇವರು ಕಣ್ಣಿಗೆ ಬಿದ್ದಿಲ್ಲ. ಪರಿಣಾಮ ಇನ್ನೂ ಜೋಪಡಿಯಲ್ಲೇ ಈ ಕುಟುಂಬಗಳು ಸಂಕಷ್ಟದ ಬದುಕು ನಡೆಸುತ್ತಿವೆ.  

Advertisement

ಯಾವುದೇ ಮೂಲಸೌಕರ್ಯವಿಲ್ಲ 
ಕೊರಗ ಜನಾಂಗಕ್ಕೆ ಸೇರಿದ ರಾಜು, ವಿಜಯ ದಂಪತಿ ಹಾಗೂ ನಾಗೇಶ್‌, ಪ್ರಿಯ ದಂಪತಿ ಕುಲಶೇಖರ ಫ್ಲೈಓವರ್‌ ಬಳಿ ಜೋಪಡಿ ಹಾಕಿ ತಮ್ಮ ಐದು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಇವರಿಗೆ ಮನೆ, ಶೌಚಾಲಯ, ಕುಡಿ ಯಲು ನೀರು, ವಿದ್ಯುತ್‌ ಸಂಪರ್ಕ ಯಾವುದೂ ಇಲ್ಲ.   


ಕೂಲಿ ಕೆಲಸ ಮಾಡುತ್ತಿರುವ ರಾಜು ಅವರು ತನ್ನ ನಾಲ್ಕು ಮಕ್ಕಳನ್ನು ಸರಕಾರಿ ಶಾಲೆಯಲ್ಲಿ ಓದಿಸುತ್ತಿದ್ದಾರೆ. ಪತ್ನಿ ವಿಜಯ ಅವರು ಮನೆ ಕೆಲಸ ಮಾಡಿಕೊಂಡಿದ್ದಾರೆ. ಪಾಲಿಕೆಯಲ್ಲಿ ದಿನಕೂಲಿ ಆಧಾರದಲ್ಲಿ ಕೆಲಸ ಮಾಡುತ್ತಿರುವ ನಾಗೇಶ್‌ ಅವರು ತನ್ನ ಮಗನನ್ನು ಬಿಕರ್ನಕಟ್ಟೆ ಸರಕಾರಿ ಶಾಲೆಯಲ್ಲಿ ಓದಿಸುತ್ತಿದ್ದು, ಪತ್ನಿ ಮನೆಗೆಲಸ ಮಾಡುತ್ತಿದ್ದಾರೆ. ಹೀಗೆ ದಿನನಿತ್ಯದ ಖರ್ಚಿಗಾಗಿ ಹೆಣಗಾಡುತ್ತಿರುವ ಕುಟುಂಬಕ್ಕೆ ಸ್ವಂತ ಮನೆ ಕನಸು ಮರೀಚಿಕೆಯಾಗುತ್ತಿದೆ.

ಸರಕಾರಿ ಸೌಲಭ್ಯಗಳು ತಲುಪಿಲ್ಲ 
ಈ ಕುಟುಂಬಗಳು  ಮನೆ, ನೀರು , ವಿದ್ಯುತ್‌ ಸೌಲಭ್ಯ ಒದಗಿಸಿ ಎಂದು  ಅನೇಕ ಬಾರಿ ಸರಕಾರಿ ಕಚೇರಿಗಳಿಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳ ಪೊಳ್ಳು ಭರವಸೆಗಳಿಂದಲೇ ಅನೇಕ ವರ್ಷಗಳು ಕಳೆದಿವೆ ಎಂದು ಕುಟುಂಬ ಸದಸ್ಯರು ಹೇಳುತ್ತಾರೆ.

ಚಿಮಣಿ ಕೆಳಗೆ ಓದು!
ಈ ಎರಡು ಮನೆಗಳಲ್ಲಿ ಐದು ಮಂದಿ ವಿದ್ಯಾರ್ಥಿಗಳಿದ್ದು, ಇವರು ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯಿಂದ ಬಂದ ಬಳಿಕ ದೂರದಲ್ಲಿರುವ ಮನೆಯಿಂದ ನೀರು ತರುವ ಕೆಲಸ ಮಾಡಿದ ಬಳಿಕ ಓದಲು ರಸ್ತೆ ಬದಿ ಇರುವ ಬೀದಿ ದೀಪ ಅಥವಾ ಮನೆಯಲ್ಲಿ ಚಿಮಣಿಯನ್ನು ಅವಲಂಬಿಸುತ್ತಾರೆ.  

ಕಾದು ಕುಳಿತು ಸ್ನಾನ ಮಾಡಬೇಕಾಗಿದೆ!
ಎರಡೂ ಕುಟುಂಬಗಳಲ್ಲಿ ಮಹಿಳೆ ಯರಿದ್ದರೂ ಜೋಪಡಿಯಲ್ಲಿ ಬದುಕುತ್ತಿರುವುದರಿಂದ ಸ್ನಾನದ ಮನೆ, ಶೌಚಾಲಯವಿಲ್ಲ.  ಹಾಗಾಗಿ ರಸ್ತೆ ಬದಿಯಲ್ಲಿ ಟರ್ಪಲ್‌ ಮುಚ್ಚಿದ ಗೂಡಿನಂತಿರುವ ಜಾಗದಲ್ಲಿ ಸ್ನಾನ ಮಾಡಬೇಕಾಗಿದೆ ಎನ್ನುತ್ತಾರೆ ವಿಜಯ.

Advertisement

ಸರಕಾರಿ ಕಚೇರಿಗೆ ಅಲೆದು ಸಾಕಾಗಿದೆ
ನಮಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಎಂದು ಸರಕಾರಿ ಕಚೇರಿಗಳಿಗೆ ಅಲೆದು ಸಾಕಾಗಿದೆ. ಮತ ಕೇಳಲು ಬಂದಾಗ ಸಮಸ್ಯೆ ಹೇಳಿದರೆ ಪರಿಹರಿಸುವ ಭರವಸೆ ನೀಡುವ ಜನಪ್ರತಿನಿಧಿಗಳು ಮತ್ತೆ ಈ ಕಡೆ ಬರುವುದಿಲ್ಲ.  
ನಾಗೇಶ್‌

ಮಕ್ಕಳಿಗೆ ಆಧಾರ್‌ ಕಾರ್ಡ್‌ ಆಗಿದೆ
ಆ ಎರಡು ಕುಟುಂಬಗಳ ಮಕ್ಕಳಿಗೆ ಶಾಲಾ ದಾಖಲಾತಿಯ ಆಧಾರದ ಮೇಲೆ ಆಧಾರ್‌ ಕಾರ್ಡ್‌ ಮಾಡಿಸಿಕೊಡಲಾಗಿದೆ. ಆದರೆ ಹೆತ್ತವರಿಗೆ ಯಾವುದೇ ದಾಖಲೆಗಳಿಲ್ಲದ ಕಾರಣ ಏನೂ ಮಾಡಲಾಗುತ್ತಿಲ್ಲ.
ಕೇಶವ ಮರೋಳಿ ಸ್ಥಳೀಯ ಕಾರ್ಪೊರೇಟರ್‌

ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next