Advertisement

ಚೀನ “ಮಾಯಾ’ಲೋಕ; ಖಿನ್‌ ಗಾಂಗ್‌ ಪ್ರೇಮ ಪ್ರಕರಣವೂ, ವಿದೇಶಾಂಗ ಇಲಾಖೆಯೂ…

12:27 AM Aug 01, 2023 | Team Udayavani |

ಪಕ್ಕಾ ಕಮ್ಯೂನಿಸ್ಟ್‌ ದೇಶವಾಗಿರುವ ಚೀನದಲ್ಲಿ ಎಲ್ಲವೂ ಗುಪ್ತ್ ಗುಪ್ತ್. ಅಲ್ಲಿ ಏನಾಗುತ್ತಿದೆ ಎಂಬ ಅರಿವು ಹೊರ ಜಗತ್ತಿಗೆ ಎಷ್ಟೋ ಬಾರಿ ಗೊತ್ತಾಗುವುದೇ ಇಲ್ಲ. ಇದಕ್ಕೆ ಪಕ್ಕಾ ಉದಾಹರಣೆ ಅಲ್ಲಿನ ಕೊರೊನಾ ಸ್ಥಿತಿ. ಅಲ್ಲಿ ಕೊರೊನಾದಿಂದ ನೊಂದವರೆಷ್ಟು, ಸಾವನ್ನಪ್ಪಿದವರೆಷ್ಟು? ಈ ಯಾವ ವಿಚಾರವೂ ತಿಳಿಯಲೇ ಇಲ್ಲ. ಇಂಥ ಚೀನದಲ್ಲಿ ಅಲ್ಲಿನ ನಾಯಕರೇ ದಿಢೀರನೇ ಮಾಯವಾಗಿ ಬಿಡುತ್ತಾರೆ. ಅವರೆಲ್ಲಿ ಹೋದರು, ಏನು ಮಾಡುತ್ತಿದ್ದಾರೆ, ಈ ಅಂಶಗಳೆಲ್ಲವೂ ನಿಗೂಢ…

Advertisement

ಖಿನ್‌ ಗಾಂಗ್‌ ಪ್ರೇಮ ಪ್ರಕರಣವೂ, ವಿದೇಶಾಂಗ ಇಲಾಖೆಯೂ…
ಸದ್ಯ ಇಡೀ ಜಗತ್ತಿನ ತುಂಬೆಲ್ಲಾ ಸದ್ದು ಮಾಡುತ್ತಿರುವುದು ಚೀನಾದ ವಿದೇಶಾಂಗ ಸಚಿವರಾಗಿದ್ದ ಖೀನ್‌ ಗಾಂಗ್‌ ಎಲ್ಲಿ ಹೋದರು ಎಂಬುದು. ಜೂ.25ರಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಖಿನ್‌, ದಿಢೀರನೇ ನಾಪತ್ತೆಯಾಗಿದ್ದಾರೆ. ಚೀನಾದ ಅಧಿಕೃತ ಮೂಲಗಳ ಪ್ರಕಾರ, ಇವರಿಗೆ ಆರೋಗ್ಯ ಸರಿ ಇಲ್ಲ. ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ, ಇದನ್ನು ನಂಬಲು ಜಗತ್ತು ಸಿದ್ಧವಿಲ್ಲ. ಈವರೆಗೆ ಚೀನದ ಅದೆಷ್ಟೋ ನಾಯಕರು ದಿಢೀರನೆ ನಾಪತ್ತೆಯಾಗಿ, ಬಹಳ ದಿನಗಳ ಬಳಿಕ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಅಲ್ಲಿನ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಕೂಡ ಹೊರತಲ್ಲ. 2021ರಲ್ಲಿ ಇವರೂ ನಿಗೂಢವಾಗಿ ನಾಪತ್ತೆಯಾಗಿದ್ದರು. ಹಾಗಾದರೆ, ಎಲ್ಲಿ ಹೋಗಿದ್ದಾರೆ ಕೀ?

ಪ್ರಸಿದ್ಧ ಆ್ಯಂಕರ್‌ ಜತೆಗೆ ಪ್ರೇಮ
ಜೂ.25ಕ್ಕೂ ಮುನ್ನ ಹಾಂಕಾಂಗ್‌ ಮೂಲದ ಫಿಯೋನಿಕ್ಸ್‌ ಟಿವಿಯ ಆ್ಯಂಕರ್‌ ಫು ಕ್ಸಿಯೋಟಿಯಾನ್‌ ನಡೆಸಿಕೊಡುವ ಪ್ರಸಿದ್ಧ ಶೋವೊಂದರಲ್ಲಿ ಖಿನ್‌ ಗಾಂಗ್‌ ಭಾಗಿಯಾಗಿದ್ದರು. ಫು ಅವರು ಜಗತ್ತಿನ ಪ್ರಮುಖ ನಾಯಕರನ್ನು ಈ ಶೋನಲ್ಲಿ ಸಂದರ್ಶಿಸುತ್ತಾರೆ. ಹೀಗಾಗಿಯೇ ಈ ಶೋಗೆ ಜಾಗತಿಕ ಮನ್ನಣೆ ಇದೆ. ಇದರಲ್ಲಿ ಭಾಗಿಯಾಗಿದ್ದ ಖಿನ್‌, ನಿರೂಪಕಿ ಫು ಜತೆಗೆ ತುಂಬಾ ಆತ್ಮೀಯವಾಗಿಯೇ ಮಾತನಾಡಿದ್ದರು. ಬಳಿಕ ಇವರಿಬ್ಬರ ನಡುವೆ ಇರಬಹುದಾದ ಪ್ರೇಮ ಪ್ರಕರಣದ ಬಗ್ಗೆ ಸುದ್ದಿಗಳು ಹಬ್ಬಿದ್ದವು. ಇದ್ದಕ್ಕಿದ್ದ ಹಾಗೆ, ಹಾಂಕಾಂಗ್‌ ಟೀವಿಯಿಂದ ಫು ಕೂಡ ಕಣ್ಮರೆಯಾಗಿದ್ದರು. ಆದರೆ, ಅವರು ಗರ್ಭಿಣಿಯಾಗಿದ್ದರಿಂದ ಹೆರಿಗೆಗೆ ಹೋಗಿದ್ದರು ಎಂಬ ಮಾಹಿತಿಗಳಿವೆ. ಸದ್ಯದ ವಿಚಾರವೆಂದರೆ, ಫು ಅವರ ಮಗುವಿಗೆ ಖಿನ್‌ ಅವರೇ ತಂದೆ ಎಂಬ ಮಾತುಗಳಿವೆ. ಅಲ್ಲದೆ, ಫು ಕೂಡ ಮಗುವಿನ ತಂದೆ ಯಾರು ಎಂಬ ಬಗ್ಗೆ ಎಲ್ಲಿಯೂ ಬಹಿರಂಗ ಮಾಡಿಲ್ಲ. ಈ ಅಂಶಗಳು ಬಹಿರಂಗವಾದ ಮೇಲೆ, ಖಿನ್‌ ಇದ್ದಕ್ಕಿದ್ದಂತೆ ನಾಪತ್ತೆಯಾದರು.

ಅಮೆರಿಕ ಸಿಟಿಜನ್‌
ಆ್ಯಂಕರ್‌ ಫು ಅಮೆರಿಕ ಮೂಲದಾಕೆ. ಹೇಳಿ ಕೇಳಿ ಸದ್ಯ ಚೀನ- ಅಮೆರಿಕದ ಸಂಬಂಧವೂ ಅಷ್ಟಕ್ಕಷ್ಟೇ. ಇಂಥ ಹೊತ್ತಿನಲ್ಲಿ ಚೀನಾದ ವಿದೇಶಾಂಗ ಸಚಿವರೇ ಅಮೆರಿಕದ ನಾಗರಿಕರಾಗಿರುವ ಫು ಜತೆಗೆ ಸಂಬಂಧ ಇರಿಸಿಕೊಂಡರೆ ಸುಮ್ಮನೆ ಇದ್ದೀತೇ? ಹೀಗಾಗಿಯೇ ಚೀನವೇ ಖಿನ್‌ ಅವರನ್ನು ಅಡಗಿಸಿಟ್ಟಿದೆ ಎಂಬ ಆರೋಪಗಳಿವೆ. ಅಲ್ಲದೆ, ಸದ್ಯ ಕೀ ಕುರಿತ ಎಲ್ಲ ಮಾಹಿತಿಯನ್ನೂ ಚೀನ ಅಂತರ್ಜಾಲದಿಂದ ಅಳಿಸಿ ಹಾಕಿದೆ. ಅಂದರೆ, ಚೀನದ ಯಾವುದೇ ವೆಬ್‌ಸೈಟ್‌ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಖಿನ್‌ ಅವರ ಮಾಹಿತಿ ಸಿಗುವುದಿಲ್ಲ. ಜತೆಗೆ, ಖಿನ್‌ ಪ್ರಕರಣದಲ್ಲಿ ರಾಷ್ಟ್ರೀಯ ಭದ್ರತೆ ವಿಚಾರವನ್ನೂ ಚೀನ ತುರುಕುತ್ತಿದೆ. ಖಿನ್‌ ವಿಚಾರದಲ್ಲಿ ಬೇರೆ ಬೇರೆ ದೇಶಗಳು ಅನಗತ್ಯವಾಗಿ ಮೂಗು ತೂರಿಸುತ್ತಿವೆ ಎಂದು ಆರೋಪಿಸಿದೆ.

ಕ್ಸಿಯವರ ನೀಲಿ ಕಂಗಳ ವ್ಯಕ್ತಿ
ಅಂದ ಹಾಗೆ, ಖಿನ್‌ ಗಾಂಗ್‌ ವಿಚಾರದಲ್ಲಿ ಚೀನದಲ್ಲಿಯೇ ಒಂದು ಅಸಹನೆ ಇತ್ತು. ಅಲ್ಲಿನ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಅವರು ಹಿರಿಯ ನಾಯಕರನ್ನು ಬದಿಗೊತ್ತಿ, ಖಿನ್‌ ಅವರಿಗೆ ಮಹತ್ವದ ವಿದೇಶಾಂಗ ಇಲಾಖೆ ಜವಾಬ್ದಾರಿ ನೀಡಿದ್ದರು. ಈ ಹಿಂದೆ ಇದ್ದ ವಾಂಗ್‌ ಯಿ ಅವರನ್ನೂ ಪಕ್ಕಕ್ಕೆ ಸರಿಸಲಾಗಿತ್ತು. ಇದು ಕಮ್ಯೂನಿಸ್ಟ್‌ ನಾಯಕರಲ್ಲಿ ಇರುಸು ಮುರುಸು ತಂದಿತ್ತು. ಅಲ್ಲದೆ, ಅಮೆರಿಕದ ರಾಯಭಾರಿಯಾಗಿಯೂ ಖಿನ್‌ ಗಾಂಗ್‌ ಕೆಲಸ ಮಾಡಿದ್ದರು. ವಿದೇಶಾಂಗ ವಿಚಾರಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಅವರನ್ನು ನೇಮಿಸಿ, ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ಆದರೆ, ಖಿನ್‌ ಅವರ ಪ್ರೇಮ ಪ್ರಕರಣ ಹೊರಬಂದ ಮೇಲೆ, ಜಿನ್‌ ಪಿಂಗ್‌ ಅವರಿಗೂ ಇರುಸು ಮುರುಸಾಗಿದೆ. ಹೀಗಾಗಿಯೇ ಅವರನ್ನು ಸಾರ್ವಜನಿಕರ ಕಣ್ಣಿಗೆ ಕಾಣದಂತೆ ಅಡಗಿಸಿಡಲಾಗಿದೆ ಅಥವಾ ಇವರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

Advertisement

ಅಲ್ಲದೆ, ಈ ಹಿಂದಿನ ವಿದೇಶಾಂಗ ಸಚಿವ ವಾಂಗ್‌ ಯೀ ಅವರಿಗೇ ಮತ್ತೆ ಹೊಣೆ ಹೊರಿಸಲಾಗಿದೆ. ಸದ್ಯದಲ್ಲೇ ಮಹತ್ವದ ಜಿ20 ಸೇರಿದಂತೆ ಜಾಗತಿಕ ವಿದ್ಯಮಾನಗಳು ನಡೆಯಲಿದ್ದು, ವಾಂಗ್‌ ಯೀ ಅವರ ನೇಮಕದ ಮೂಲಕ ಕ್ಸಿ ಜಿನ್‌ಪಿಂಗ್‌ ಹಳಬರಿಗೇ ಮಣೆ ಹಾಕಿದ್ದಾರೆ.

ಖಿನ್‌ ಒಬ್ಬರೇ ಅಲ್ಲ…
ಚೀನಾದಲ್ಲಿ ಖಿನ್‌ ಗಾಂಗ್‌ ಒಬ್ಬರೇ ಅಲ್ಲ, ಸ್ವತಃ ಜಿನ್‌ ಪಿಂಗ್‌ ಅವರೇ ಕಾಣೆಯಾಗಿದ್ದರು. ಅಲ್ಲದೆ, ಖ್ಯಾತ ಉದ್ಯಮಿ ಜಾಕ್‌ ಮಾ ಕೂಡ ಹಲವಾರು ತಿಂಗಳು ಸಾರ್ವಜನಿಕ ಬದುಕಿನಿಂದ ನಾಪತ್ತೆಯಾಗಿದ್ದರು. ಹೀಗೆ ಕಾಣೆಯಾದವರ ದೊಡ್ಡ ಪಟ್ಟಿಯೇ ಇದೆ.

1. ಹು ಜಿಂಟಾವೋ
ಚೀನಾದ ಈ ಹಿಂದಿನ ಅಧ್ಯಕ್ಷ ಹು ಜಿಂಟಾವೋರನ್ನು ಪಕ್ಷದ ಸಭೆಯಿಂದ ಪೊಲೀಸರ ಸಹಾಯದಿಂದ ಎತ್ತಿಹಾಕಿಕೊಂಡು ಹೋಗಲಾಗಿತ್ತು. ಬಳಿಕ ಅವರು ಎಲ್ಲಿದ್ದಾರೆ ಎಂಬ ಮಾಹಿತಿಯೇ ಇರಲಿಲ್ಲ. ಡಿಸೆಂಬರ್‌ನಲ್ಲಿ ಒಮ್ಮೆ ಅವರು ಕಾಣಿಸಿಕೊಂಡಿದ್ದರು. ಇದಾದ ಮೇಲೂ ಅವರು ಕಾಣಿಸಿಕೊಂಡಿಲ್ಲ.

2. ಜಾಕ್‌ ಮಾ
2020ರ ನವೆಂಬರ್‌ನಲ್ಲಿ ಚೀನಾದ ಅತ್ಯಂತ ಯಶಸ್ವಿ ಉದ್ಯಮಿ ಜಾಕ್‌ ಮಾ ಕೂಡ ದಿಢೀರನೇ ನಾಪತ್ತೆಯಾಗಿದ್ದರು. 3 ತಿಂಗಳ ಕಾಲ ಇವರು ಯಾರ ಕಣ್ಣಿಗೂ ಕಾಣಿಸಿಕೊಂಡಿರಲಿಲ್ಲ. ಇ-ಕಾಮರ್ಸ್‌ ಅಲಿಬಾಬಾದ ಸ್ಥಾಪಕರಾಗಿರುವ ಜಾಕ್‌ ಮಾ, ಒಮ್ಮೆ ಚೀನಾದ ಆಡಳಿತದ ಬಗ್ಗೆ ಟೀಕೆ ಮಾಡಿದ್ದರು. ಅದಾದ ಮೇಲೆ ಕಣ್ಮರೆಯಾಗಿದ್ದರು. ಅಲ್ಲದೆ, ಅಲಿಬಾಬಾದ ಐಪಿಒಗೂ ಮುಂದಾಗಿದ್ದ ಜಾಕ್‌ ಮಾ, ಸರ್ಕಾರದ ವಿರುದ್ಧದ ಟೀಕೆಯ ಕಾರಣದಿಂದಾಗಿ ಐಒಪಿ ನಿರ್ಧಾರದಿಂದ ಹಿಂದೆ ಸರಿದರು. 3 ತಿಂಗಳ ಕಾಲ ಕಣ್ಮರೆಯಾಗಿದ್ದ ಜಾಕ್‌ ಮಾ, ನಂತರ ಪತ್ತೆಯಾಗಿದ್ದು, ಈಗ ಲೋ ಪ್ರೊಫೈಲ್‌ ಜೀವನ ನಡೆಸುತ್ತಿದ್ದಾರೆ.

3. ಗುವೋ ಗುವಾಂಗ್ಚಾಂಗ್
2015ರಲ್ಲಿ ಗುವೋ ಗುವಾಂಗ್ಚಾಂಗ್ ಸೇರಿ 5 ಮಂದಿ ಕಣ್ಮರೆಯಾಗಿದ್ದರು. ಇವರು ಫಾಸೂನ್‌ ಇಂಟರ್‌ನ್ಯಾಷನಲ್‌ ನಲ್ಲಿ ಅಧ್ಯಕ್ಷರಾಗಿದ್ದಾರೆ. ಇವರದ್ದೇ ಆದ ಒಂದು ಫ‌ುಟ್ಬಾಲ್‌ ಕ್ಲಬ್‌ ಕೂಡ ಇದೆ. ಭ್ರಷ್ಟಾಚಾರ ಆರೋಪದ ಮೇಲೆ ಇವರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಲಾಗಿತ್ತು.

4. ಫ್ಯಾನ್‌ ಬಿಂಗ್ಬಿಂಗ್
ಕೇವಲ ರಾಜಕಾರಣಿಗಳು ಅಥವಾ ಉದ್ಯಮಿಗಳಷ್ಟೇ ಅಲ್ಲ, ಸಿನಿಮಾದವರನ್ನೂ ಚೀನಾ ಆಡಳಿತ ಸುಮ್ಮನೆ ಬಿಟ್ಟಿಲ್ಲ. 2018ರ ಜುಲೈನಲ್ಲಿ ಮೆಗಾಸ್ಟಾರ್‌ ಫ್ಯಾನ್‌ ಬಿಂಗ್ಬಿಂಗ್ ಕೂಡ ಸಾಮಾಜಿಕ ಜಾಲತಾಣ ಮತ್ತು ಸಾರ್ವಜನಿಕ ಬದುಕಿನಿಂದ ದಿಢೀರನೇ ನಾಪತ್ತೆಯಾಗಿದ್ದರು. ಒಂದು ವರ್ಷ ಕಾಲ ಈಕೆ ಎಲ್ಲಿಯೂ ಕಾಣಿಸಿರಲಿಲ್ಲ. ಈ ನಟಿ ದೇಶ ಬಿಟ್ಟು ಓಡಿ ಹೋಗಿದ್ದಾ ರೆ ಎಂಬ ಸುದ್ದಿಯನ್ನೂ ಹಬ್ಬಿಸಲಾಗಿತ್ತು. ಕಡೆಗೆ, ವರ್ಷದ ಬಳಿಕ ಕಾಣಿಸಿಕೊಂಡರು. ಅಲ್ಲದೆ, ತೆರಿಗೆ ಕಟ್ಟದ ಆರೋಪದ ಮೇಲೆ ಭಾರೀ ಪ್ರಮಾಣದ ದಂಡವನ್ನೂ ತೆರಬೇಕಾಯಿತು.

5. ಕ್ಸಿ ಜಿನ್‌ಪಿಂಗ್‌
2012ರ ಸೆಪ್ಟೆಂಬರ್‌ನಲ್ಲಿ ಕ್ಸಿ ಜಿನ್‌ಪಿಂಗ್‌ ಕೂಡ ದಿಢೀರನೇ ನಾಪತ್ತೆಯಾಗಿದ್ದರು. ಆಗ ಇವರು ಚೀನಾದ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. 2 ವಾರಗಳ ಬಳಿಕ ಇವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಆದರೆ, ಈ ಅವಧಿಯಲ್ಲಿ ಇವರು ಹೋಗಿದ್ದು ಎಲ್ಲಿಗೆ? ಏನಾಯಿತು? ಈ ಯಾವ ಪ್ರಶ್ನೆಗಳಿಗೂ ಯಾರೊಬ್ಬರೂ ಉತ್ತರ ನೀಡಲಿಲ್ಲ. ವಿಚಿತ್ರವೆಂದರೆ, ಒಮ್ಮೆ ನಾಪತ್ತೆಯಾಗಿ ಮತ್ತೆ ಕಾಣಿಸಿಕೊಂಡವರು ಚೀನದಲ್ಲಿ ಲೋ ಪೊ›ಫೈಲ್‌ ನಲ್ಲಿ ಜೀವನ ಮಾಡಬೇಕು. ಆದನ ಜಿನ್‌ ಪಿಂಗ್‌ ವಿಚಾರದಲ್ಲಿ ಅದು ಉಲ್ಟಾ ಆಯಿತು. ಈ ಘಟನೆಯಾದ ಎರಡೇ ತಿಂಗಳಲ್ಲಿ ಇವರು ಚೀನಾದ ಅಧ್ಯಕ್ಷರಾಗಿ ನೇಮಕವಾದರು.

6. ಪೆಂಗ್‌ ಶ್ಯೂಯಿ
ಚೀನಾದ ಟೆನಿಸ್‌ ಆಟಗಾರ್ತಿಯಾಗಿದ್ದ ಇವರು, 2021ರ ನವೆಂಬರ್‌ನಲ್ಲಿ ಮಾಜಿ ಉಪ ಪ್ರಧಾನಿ ಬಗ್ಗೆಯೇ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಆದರೆ, ಇದಾದ ಬಳಿಕ ಅವರು ದಿಢೀರನೇ ನಾಪತ್ತೆಯಾದರು. ಇದುವರೆಗೆ ಇವರ ಬಗ್ಗೆ ಯಾವುದೇ ಮಾಹಿತಿ ಇಲ್ಲ.

7. ಮೆಂಗ್‌ ಹಾಂಗ್ವೇಯಿ
ಇವರು ಚೀನಾದ ಮೊದಲ ಇಂಟರ್‌ಪೋಲ್‌ ಮುಖ್ಯ ಸ್ಥ. 2018ರ ಸೆಪ್ಟೆಂಬರ್‌ ನಲ್ಲಿ ಫ್ರಾನ್ಸ್‌ ನಿಂದ ಚೀನಾಗೆ ಬರುತ್ತಿದ್ದಾಗ ನಾಪತ್ತೆಯಾದರು. ಇದು ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿತ್ತು. ಅವರ ನಾಪತ್ತೆ ಕುರಿತು ಪತ್ನಿಯು ದೂರು ನೀಡಿದ ಬೆನ್ನಲ್ಲೇ, ಮೆಂಗ್‌ ರನ್ನು ಎಲ್ಲ ಹುದ್ದೆಗಳಿಂದಲೂ ವಜಾ ಮಾಡಲಾಯಿತು. ನಂತರದಲ್ಲಿ ಭ್ರಷ್ಟಾಚಾರದ ವಿರುದ್ಧದ ಕ್ರಮವೆಂಬಂತೆ ಅಧ್ಯಕ್ಷ ಜಿನ್‌ಪಿಂಗ್‌ ಆದೇ ಶದ ಭಾಗವಾಗಿಯೇ ಅವರನ್ನು ಬಂಧಿಸಲಾಗಿತ್ತು ಎಂದು ಚೀನಾ ಸರ್ಕಾರ ದೃಢಪಡಿಸಿತು.

ನಾಪತ್ತೆಯಾದ ಇತರರು
– ಎಯೈ ವೈವೇಯಿ, ಕಲಾವಿದ
– ಝೊà ವೇಯಿ – ನಟಿ
– ಗುಯಿ ಮಿನ್ಹಾಯಿ – ಪುಸ್ತಕ ಮಾರಾಟಗಾರ

-ಸಿ.ಜೆ. ಸೋಮಶೇಖರ್‌

Advertisement

Udayavani is now on Telegram. Click here to join our channel and stay updated with the latest news.

Next