ಮುಂಬಯಿ : ಬಾಲಿವುಡ್ ಚಿತ್ರಗಳಲ್ಲೇ ಒಂದು ರೀತಿಯ ವಿಭಿನ್ನ ಟ್ರೆಂಡ್ ಸೃಷ್ಟಿ ಮಾಡಿ ಮುನ್ನುಗ್ಗುತ್ತಿರುವ ”ದಿ ಕಾಶ್ಮೀರ್ ಫೈಲ್ಸ್” ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಗಬೇಕು ಎನ್ನುವ ಕೂಗು ಕೇಳಿಬಂದಿದ್ದು, ಈ ಬಗ್ಗೆ ಸಹಿ ಸಂಗ್ರಹ ಅಭಿಯಾನವನ್ನೂ ಆರಂಭಿಸಲಾಗಿದೆ.
ಕಾಶ್ಮೀರದಲ್ಲಿ ಪಂಡಿತರ ಮೇಲೆ ನಡೆದ ದಬ್ಬಾಳಿಕೆ, ಹತ್ಯಾಕಾಂಡಗಳ ಕುರಿತಾಗಿನ ನೈಜ ಕಥಾ ಹಂದರ ಉಳ್ಳ ಚಿತ್ರಕ್ಕೆ ದೇಶಾದ್ಯಂತ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ರಾಜಕೀಯ ರೂಪದಲ್ಲೂ ಬಹು ಚರ್ಚಿತ ವಿಚಾರವಾಗಿ ಹೊರ ಹೊಮ್ಮಿದೆ.
ಮುಂಬಯಿಯಲ್ಲಿ ಆಯೋಜಿಸಲಾಗಿದ್ದ ಚಿತ್ರದ ವಿಶೇಷ ಪ್ರದರ್ಶನದ ವೇಳೆ ನಡೆದ ಸಂವಾದದಲ್ಲಿ ನಿರ್ದೇಶಕ ವಿವೇಕ್ ಅಗ್ನಿ ಹೋತ್ರಿ ಅವರಿಗೆ ಮಹಿಳೆಯೊಬ್ಬರು ”ಸಾಮಾನ್ಯ ಜನರು ಈ ಚಿತ್ರವನ್ನು ಆಸ್ಕರ್‌ಗೆ ನಾಮನಿರ್ದೇಶನ ಮಾಡಬಹುದೇ?” ಎಂದು ಪ್ರಶ್ನಿಸಿದ್ದಾರೆ.
ಪ್ರಶ್ನೆಗೆ ಉತ್ತರಿಸಿದ ವಿವೇಕ್ ಅಗ್ನಿಹೋತ್ರಿ, ”ಅದನ್ನು ಮಾಡಿ. ಅವರ ಜೊತೆ ಸೇರಿಕೊಳ್ಳಿ… ಅವರು ನಮ್ಮಿಂದ ಬೇರೆ ಅಂತ ಅನಿಸಬಾರದು. ನಾವು ಅದೆಲ್ಲವನ್ನೂ ಮೀರಿದ್ದೇವೆ. ಅವರು ಮಾಡುತ್ತಿರುವ ಆಶೀರ್ವಾದ ದೊಡ್ಡ ಮಾರ್ಗಗಳನ್ನು ತೆರೆಯುತ್ತವೆ. ಹಿಮಾಲಯವೂ ಸಿಗುತ್ತದೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಅಗ್ನಿ ಹೋತ್ರಿ ಅವರ ಹೃದಯಸ್ಪರ್ಶಿ ಪ್ರತಿಕ್ರಿಯೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಈ ಚಿತ್ರ ಆಸ್ಕರ್ ಪ್ರಶಸ್ತಿ ಗೆಲ್ಲಲು ಪ್ರಯತ್ನಿಸಬೇಕು, ವಿಶ್ವಕ್ಕೆ ಕಾಶ್ಮೀರದಲ್ಲಿ ಆದ ಘೋರ ದುರಂತ ತಿಳಿದು ಬರಬೇಕಿದೆ ಎಂದು ಪ್ರತಿಕ್ರಿಯಿಸಿದ್ದಾರೆ.