Advertisement

ಕನ್ನಂಬಾಡಿ ಯೋಜನೆ ಸರ್‌.ಎಂ.ವಿಶ್ವೇಶ್ವರಯ್ಯ ಅವರದಲ್ಲ!

12:45 PM Jun 05, 2017 | |

ಮೈಸೂರು: ಕನ್ನಂಬಾಡಿ ಕಟ್ಟೆ ಕಟ್ಟಿಸಿದ್ದು ಯಾರು? ಇಂತಹದೊಂದು ಪ್ರಶ್ನೆಗೆ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಹಿಂದಿಡಿದು ವಯೋವೃದ್ಧರವರೆಗೆ ಹೇಳುವುದು ಒಂದೇ ಹೆಸರು, ಅದು ಸರ್‌ ಎಂ.ವಿಶ್ವೇಶ್ವರಯ್ಯ.

Advertisement

ಆದರೆ, ಮೈಸೂರಿನ ಇತಿಹಾಸ ತಜ್ಞ ಪೊ.ಪಿ.ವಿ.ನಂಜರಾಜ ಅರಸು ಅವರು ಕಳೆದ ಮೂರ್‍ನಾಲ್ಕು ವರ್ಷಗಳಿಂದ ಪರಿಶ್ರಮಪಟ್ಟು ಸರ್ಕಾರದ ಇಲಾಖೆಗಳಲ್ಲಿ ಹುದುಗಿಹೋಗಿದ್ದ ದಾಖಲೆಗಳನ್ನು ಪಡೆದು, ನಾನು ಕನ್ನಂಬಾಡಿ ಕಟ್ಟೆ- ಹೀಗೊಂದು ಆತ್ಮಕಥೆ ಎಂಬ 320 ಪುಟಗಳ ಕೃತಿಯನ್ನು ರಚಿಸಿ ವಾಸ್ತವವಾಗಿ ಕನ್ನಂಬಾಡಿ ಅಣೆಕಟ್ಟೆಯ ಮೂಲ ಯೋಜನೆ ಸರ್‌.ಎಂ.ವಿಶ್ವೇಶ್ವರಯ್ಯ ಅವರದ್ದಲ್ಲ, 1908ರಲ್ಲಿ ಮೈಸೂರು ಸಂಸ್ಥಾನದಲ್ಲಿ ಪ್ರಭಾರ ಮುಖ್ಯ ಎಂಜಿನಿಯರ್‌ ಆಗಿದ್ದ ಬ್ರಿಟೀಷ್‌ ಪ್ರಜೆ ಕ್ಯಾಪ್ಟನ್‌ ನಿಕೊಲಾಸ್‌ ಬರ್ನಾಡ್‌ ಎಡ್ವಿನ್‌ ಡಾಸ್‌ ಅವರದ್ದು ಎಂದು ದಾಖಲಿಸಿದ್ದಾರೆ.

ಕೃತಿಯನ್ನು ಡಾಸ್‌ ಅವರಿಗೆ ಅರ್ಪಿಸಿರುವ ಪೊ›.ನಂಜರಾಜ ಅರಸು ಅವರು, ಕ್ಯಾಪ್ಟನ್‌ ನಿಕೊಲಾಸ್‌ ಬರ್ನಾಡ್‌ ಎಡ್ವಿನ್‌ ಡಾಸ್‌ ಹುಟ್ಟಿದ್ದು ಇಂಗ್ಲೆಂಡ್‌ನ‌ಲ್ಲಿ, ದುಡಿದದ್ದು, ದುರ್ಮರಣಕ್ಕೀಡಾದದ್ದು ಮೈಸೂರಿನಲ್ಲಿ ಎಂದು ದಾಖಲಿಸುತ್ತಾರೆ. 1908ರಲ್ಲಿ ಕನ್ನಂಬಾಡಿ ಕಟ್ಟೆಯ ಮೂಲ ಯೋಜನೆ ರೂಪಿಸಿ, ಸ್ಥಳ ಆಯ್ಕೆ ಮಾಡಿ, ಯೋಜನೆಗೆ ಹಸಿರು ನಿಶಾನೆ ತೋರುವ ಮುನ್ನ 1909ರ ಜುಲೈ 30ರ ಶುಕ್ರವಾರದಂದು ಮಧ್ಯಾಹ್ನ,

&ಹಿಂದಿನ ರಾತ್ರಿ ಹಠಾತ್‌ ಉಕ್ಕಿ ಬಂದಿದ್ದ ಕಾವೇರಿ ಪ್ರವಾಹದಿಂದ ಕೊಂಚ ಹಾನಿಗೊಳಗಾಗಿದ್ದ ಕೃಷ್ಣರಾಜ ಕಟ್ಟೆಯ ತಾತ್ಕಾಲಿಕ ಹೊರಕಾಲುವೆ ವ್ಯವಸ್ಥೆಯ ತುರ್ತು ರಿಪೇರಿ ಮಾಡಿ ವಾಪಸ್ಸಾಗುವಾಗ ಮತ್ತೆ ನುಗ್ಗಿ ಬಂದ ದೈತ್ಯ ಅಲೆಗೆ ಸಿಕ್ಕಿಕೊಂಡಿದ್ದ ಬಡ ಕೂಲಿಯೊಬ್ಬನನ್ನು ರಕ್ಷಿಸಲು ಪ್ರವಾಹದ ಎದುರು ಈಜಿ ಕೊಚ್ಚಿ ಹೋದರು, ಆಗಿನ್ನು 31 ವರ್ಷ ಪ್ರಾಯದವರಾಗಿದ್ದ ಡಾಸ್‌ ಶವ ಮೂರು ದಿನಗಳ ಸಿಕ್ಕಿತು.

ಡಾಸ್‌ ದುಡಿಮೆ ಗುರುತಿಸಲಿಲ್ಲ: ಆ ಬಡಕೂಲಿಯ ಹಳ್ಳಿಗರು ಡಾಸ್‌ರನ್ನು ನೆನೆದು ಮರುಗಿದ್ದು ಮಾತ್ರವಲ್ಲ, ಒಂದಷ್ಟು ಹಣ ಸಂಗ್ರಹಿಸಿ ಡಾಸ್‌ ಹೆಸರಲ್ಲಿ ಪ್ರಶಸ್ತಿ ನೀಡಲೆಂದು 1922ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ದತ್ತಿ ಸ್ಥಾಪಿಸುತ್ತಾರೆ. ಆದರೆ, ವಿಶ್ವವಿದ್ಯಾನಿಲಯ ಡಾಸ್‌ ಹೆಸರಲ್ಲಿ ದತ್ತಿ ಪ್ರಶಸ್ತಿ ನೀಡುವುದನ್ನು ಮರೆತೇ ಬಿಟ್ಟಿದೆ. ಹಾಗೆಯೇ ನಮ್ಮ ವ್ಯಕ್ತಿ ಪೂಜಾ ನಿರತ ಇತಿಹಾಸಕಾರರು ಕನ್ನಂಬಾಡಿ ಕಟ್ಟೆ ಯೋಜನೆಯಲ್ಲಿ ಡಾಸ್‌ ದುಡಿಮೆಯನ್ನು ಗುರುತಿಸಲೇ ಇಲ್ಲ ಎಂದಿದ್ದಾರೆ.

Advertisement

ಡಾಸ್‌ ಮೊದಲ ಹಂತದಲ್ಲಿ 70 ಅಡಿ ಎತ್ತರ, ಎರಡನೇ ಹಂತದಲ್ಲಿ 115 ಅಡಿ ಎತ್ತರ ಕಟ್ಟೆ ಕಟ್ಟಿ ನೀರು ಸಂಗ್ರಹಿಸುವ ಸಂಬಂಧ ಕಾವೇರಿಗೆ ಕಟ್ಟೆ ಕಟ್ಟಲು ಕನ್ನಂಬಾಡಿಯನ್ನು ಆಯ್ಕೆ ಮಾಡಿದ ಡಾಸ್‌ 1908ರ ಜುಲೈ 25ರಂದು ಕಟ್ಟೆಯ ಅಂತಿಮ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದ, ಈ ಯೋಜನೆ ಸರ್ಕಾರದ ಪರಿಶೀಲನೆಯಲ್ಲಿದ್ದ ಸಂದರ್ಭದಲ್ಲೇ ಡಾಸ್‌ ದುರ್ಮರಣಕ್ಕೀಡಾದ ನಂತರ ವಿಶ್ವೇಶ್ವರಯ್ಯ ಅವರು ಬರುತ್ತಾರೆ.

ಮೊದಲ ಹಂತದ ಎತ್ತರ 80 ಅಡಿ ಮತ್ತು ಎರಡನೇ ಹಂತದ ಎತ್ತರ 124 ಅಡಿ ನೀರು ಸಂಗ್ರಹ ಎಂದು ಪರಿಷ್ಕರಿಸಿ ಒಂದಷ್ಟು ಬದಲಾವಣೆ ಮಾಡುತ್ತಾರೆ. ಕಟ್ಟೆಯ ನಿರ್ಮಾಣ ಕಾಮಗಾರಿ 21 ವರ್ಷ ನಡೆಯುತ್ತದೆ. ಆದರೆ, ವಿಶ್ವೇಶ್ವರಯ್ಯ ಅವರು ಎಂಜಿನಿಯರ್‌ ಆಗಿ ಕಟ್ಟೆಯ ಮೇಲುಸ್ತುವಾರಿವಹಿಸಿದ್ದು1911 ರಿಂದ 1912ರವರೆಗೆ ಒಂದು ವರ್ಷ ಮಾತ್ರ. ನಂತರ 1918ರವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿದ್ದ ವಿಶ್ವೇಶ್ವರಯ್ಯನವರು 1918ರಲ್ಲಿ ರಾಜೀನಾಮೆ ಕೊಟ್ಟು ಹೋಗುತ್ತಾರೆ.

ಆದರೆ, 1912ರಲ್ಲಿ ಆರಂಭವಾದ ಕಟ್ಟೆ ನಿರ್ಮಾಣ ಮುಗಿದಿದ್ದು 1932ರಲ್ಲಿ ಈ ಅವಧಿಯಲ್ಲಿ 7 ಜನ ಮುಖ್ಯ ಎಂಜಿನಿಯರುಗಳು ಕನ್ನಂಬಾಡಿ ಅಣೆಕಟ್ಟೆ ನಿರ್ಮಾಣದ ಮೇಲುಸ್ತುವಾರಿ ಮಾಡಿದ್ದಾರೆ. ಹೀಗಾಗಿ ವಿಶ್ವೇಶ್ವರಯ್ಯ ಅವರೊಬ್ಬರೇ ಕನ್ನಂಬಾಡಿ ಕಟ್ಟೆ ಕಟ್ಟಿದರು, ಅವರದ್ದೇ ಯೋಜನೆ ಎನ್ನುವುದು ಅಪ್ಪಟ ಸುಳ್ಳು ಎಂಬುದನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಕೆಲಸ ಯಾರದೋ ಕಿರೀಟ ಇನ್ಯಾರಿಗೋ ಶೀರ್ಷಿಕೆಯಡಿ ಈ ಪುಸ್ತಕಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಅಂಗೈಯನ್ನು ಅಡ್ಡವಿಟ್ಟು ಸೂರ್ಯಕಾಂತಿ ತಡೆಯಲಾರೆ ಎಂಬ ಶೀರ್ಷಿಕೆಯಡಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್‌.ದ್ವಾರಕನಾಥ ಅವರು ಮುನ್ನುಡಿ ಬರೆದಿದ್ದಾರೆ. 29 ಅಧ್ಯಾಯಗಳ ಈ ಕೃತಿಯಲ್ಲಿ ಕನ್ನಂಬಾಡಿ ಕಟ್ಟೆ ನಿರ್ಮಾಣದಿಂದ ಹಿಡಿದು ಕರ್ನಾಟಕ-ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ನದಿ ನೀರು ಹಂಚಿಕೆ ವಿವಾದದ ಮೇಲೆ ಬೆಳಕು ಚೆಲ್ಲಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next