ಆ ಪ್ರಶ್ನೆ ಬರುತ್ತದೆ ಎಂದು ರಾಜೇಂದ್ರ ಕಾರಂತ್ ಅವರಿಗೆ ಗ್ಯಾರಂಟಿ ಗೊತ್ತಿತ್ತು. ಆದರೆ, ಕೇಳುವುದಕ್ಕೆ ಆಸ್ಪದವೇ ಕೊಡಲಿಲ್ಲ. ನೇರವಾಗಿ ತಾವೇ ಪ್ರಶ್ನೆ ಹಾಕಿಕೊಂಡು, ತಾವೇ ಉತ್ತರವನ್ನೂ ಕೊಟ್ಟುಬಿಟ್ಟರು. “ಟ್ರೇಲರ್ ನೋಡಿ, ಇದೇನಪ್ಪಾ ಇಷ್ಟೊಂದು ಡಬ್ಬಲ್ ಮೀನಿಂಗ್ ಮಾತುಗಳಿವೆ ಅಂತ ಅನಿಸಬಹುದು. ಚಿತ್ರದಲ್ಲಿ ಹಾಗಿಲ್ಲ. ಚಿತ್ರದಲ್ಲಿರುವ ಅಷ್ಟೂ ಡಬ್ಬಲ್ ಮೀನಿಂಗ್ ಮಾತುಗಳನ್ನು ಹುಡುಕಿ ಹುಡುಕಿ ಟ್ರೇಲರ್ ಮಾಡಿದ್ದಾನೆ ತನುಷ್. ಚಿತ್ರ ಬೇರೆ ತರಹವೇ ಇದೆ. ಅಶ್ಲೀಲತೆಯ ಗೆರೆ ದಾಟದಂತೆ ಚಿತ್ರ ಮೂಡಿಬಂದಿದೆ. ಇನ್ನೂ ಸರಿಯಾಗಿ ಹೇಳಬೇಕೆಂದರೆ, ಸದಭಿರುಚಿ ರೋಡ್‌ನ ಎರಡು ಕ್ರಾಸ್ ಆಚೀಚೆಯಲ್ಲಿ ಈ ಚಿತ್ರ. ಇದೆ. 2 ಗಂಟೆ 10 ನಿಮಿಷದ ಪಕ್ಕಾ ಕಾಮಿಡಿ ಚಿತ್ರ ಇದು. ದುಡ್ಡು ಕೊಟ್ಟು ಬರುವ ಪ್ರೇಕ್ಷಕರಿಗೆ ಫುಲ್ ಮೀಲ್ಸ್ ಕೊಡ್ತೀವಿ ಎಂಬ ನಂಬಿಕೆ ಇದೆ’ ಎಂದು ಒಂದೇ ಉಸಿರಿನಲ್ಲಿ ಹೇಳಿಬಿಟ್ಟರು ರಾಜೇಂದ್ರ ಕಾರಂತ್.
“ನಂಜುಂಡಿ ಕಲ್ಯಾಣ’ ಚಿತ್ರದ ಟ್ರೇಲರ್ ಬಿಡುಗಡೆ ಮತ್ತು ಮೊದಲ ಪತ್ರಿಕಾಗೋಷ್ಠಿಯಲ್ಲಿ ಮೊದಲು ಮಾತನಾಡಿದ್ದು ಅದೇ ರಾಜೇಂದ್ರ ಕಾರಂತ್. ಅವರು ಚಿತ್ರಕ್ಕೆ ನಿರ್ದೇಶಕರಷ್ಟೇ ಅಲ್ಲ, ಕಥೆ-ಚಿತ್ರಕಥೆಯನ್ನೂ ಅವರೇ ಬರೆದಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಶುರುವಾದ ಈ ಚಿತ್ರ, ಇದೀಗ ಮುಗಿದು, ಪೋಸ್ r -ಪ್ರೊಡಕ್ಷನ್ ಹಂತದಲ್ಲಿದೆ. ಈ ಸಂದರ್ಭದಲ್ಲಿ ಮಾಧ್ಯಮದವರ ಜೊತೆಗೆ ಮಾತಾಡುವುದಕ್ಕೆ ಬಂದಿದ್ದರು. ಟ್ರೇಲರ್ ತೋರಿಸಿ ಚಿತ್ರತಂಡದವರೆಲ್ಲರೂ ವೇದಿಕೆ ಏರಿದರು. ರಾಜೇಂದ್ರ ಕಾರಂತ್ ಅಕ್ಕ-ಪಕ್ಕ ನಾಯಕ ತನುಷ್, ನಾಯಕಿ ಶ್ರಾವ್ಯ, ಪದ್ಮಜಾ ರಾವ್, ಮಂಜುನಾಥ್ ಹೆಗಡೆ ಮುಂತಾದವರು ಅಕ್ಕ-ಪಕ್ಕ ಕುಳಿತರು.
ತನುಷ್ ಎಲ್ಲರನ್ನೂ ಪರಿಚಯಿಸಿ, ಕಾರಂತರಿಗೆ ಮೈಕು ಕೊಟ್ಟರು. ಇದು ಅವರ ಎರಡನೆಯ ಚಿತ್ರ. “ಮಂಗನ ಕೈಲಿ ಮಾಣಿಕ್ಯ’ ಆದಮೇಲೆ ಅವರು ನಿರ್ದೇಶನ ಮಾಡಿರಲಿಲ್ಲ. “ಮಡಮಕ್ಕಿ’ ಸಂದರ್ಭದಲ್ಲಿ ತನುಷ್ ಪರಿಚಯವಾಗಿ, ಮುಂದೊಂದು ದಿನ ಸಿನಿಮಾ ಮಾಡುವ ಮಾತಾಗಿ, ಈಗ ಅದು ಬಿಡುಗಡೆಯ ಹಂತಕ್ಕೆ ಬಂದಿದೆ. “ಕಥೆಗೆ ಏನು ಹೆಸರಿಡಬೇಕು ಅಂತ ಬಂದಾಗ, “ನಂಜುಂಡಿ ಕಲ್ಯಾಣ’ ಅಂತ ಇಡು ಅಂತ ತನುಷ್‌ಗೆ ಹೇಳಿದೆ. ಅವನು ಹೋಗಿ, ರಾಘವೇಂದ್ರ ರಾಜಕುಮಾರ್ ಅವರಿಗೆ ಒಪ್ಪಿಸಿಕೊಂಡು ಬಂದ. ಅವನಿಗೆ ಐಡಿಯಾ ಕೊಡುವ ಮೂಲಕ ಅನಾವಶ್ಯಕವಾಗಿ ಜವಾಬ್ದಾರಿ ಎಳೆದುಕೊಂಡೆ. ಅದೊಂದು ಐಕಾನಿಕ್ ಚಿತ್ರ. ಆ ಲೆವೆಲ್‌ಗೆ ತೂಗಿಸುವ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ತೀರಾ ಅದ್ಭುತವಲ್ಲದಿದ್ದರೂ, ಬೇಸರ ತರಿಸದ ಒಂದು ಚಿತ್ರವನ್ನು 33 ದಿನಗಳಲ್ಲಿ ಮಾಡಿ ಮುಗಿಸಿದ್ದೇವೆ’ ಎಂದರು. ಏನೋ ನೆನಪಿಸಿಕೊಂಡವರಂತೆ, “ಇದು ನಂಜುಂಡಿ ಎಂಬ ಯುವಕನ ಕಥೆ. ತನ್ನ ಹಠಮಾರಿ ತಾಯಿಯನ್ನು ಹೇಗೆ ಒಪ್ಪಿಸಿ, ತಾನು ಇಷ್ಟಪಟ್ಟ ಹುಡುಗಿಯನ್ನು ಮದುವೆಯಾಗುತ್ತಾನೆ’ ಎಂಬುದು ಚಿತ್ರದ ಕಥೆ ಎಂದು ಹೇಳಿದರು. ಈ ಹಿಂದೆ “ಮಡಮಕ್ಕಿ’ ಚಿತ್ರದಲ್ಲಿ ಸಾಕಷ್ಟು ಕಳೆದುಕೊಂಡಿದ್ದರೂ, ಈ ಚಿತ್ರವನ್ನು ನಿರ್ಮಿಸುವ ಮನಸ್ಸು ಮಾಡಿದ್ದಕ್ಕೆ ತಮ್ಮ ತಂದೆ ದಾಸನಾಪುರ ಶಿವಣ್ಣರನ್ನು ಹೊಗಳಿದರು ತನುಷ್. ಇದೇ ಕೊನೆಯ ಅವಕಾಶ ಎಂದು ಹೇಳಿಯೇ ಶಿವಣ್ಣನವರು, ಚಿತ್ರ ನಿರ್ಮಿಸುವುದಕ್ಕೆ ಮುಂದಾದರಂತೆ. ಅವರ ನಂಬಿಕೆ ಉಳಿಸಿಕೊಳ್ಳುವ ಪ್ರಯತ್ನ ಮಾಡಿರುವುದಾಗಿ ಹೇಳಿದರು ತನುಷ್. ನಾಯಕಿ ಶ್ರಾವ್ಯಗೆ ಕಾರಂತರಿಂದ
ಹೊಗಳಿಸಿಕೊಳ್ಳಬೇಕು ಎಂಬ ಆಸೆ ಇತ್ತಂತೆ. ಅದು ಈ ಚಿತ್ರದಲ್ಲಿ ಈಡೇರಿದ್ದರಿಂದ ಅವರಿಗೆ ಸಹಜವಾಗಿಯೇ ಖುಷಿಯಾಗಿದೆ. ಇನ್ನು ಪದ್ಮಜಾ ರಾವ್ ಅವರು, ಶೂಟಿಂಗ್ ಸಂದರ್ಭದಲ್ಲಿ ಕೊಡುತ್ತಿದ್ದ ಊಟವನ್ನು ನೆನಪಿಸಿಕೊಂಡು ಬಾಯಿ ಚಪ್ಪರಿಸಿದರು. ಚಿತ್ರದಲ್ಲಿ ಕಲರ್‌ಫುಲ್ ಸೀರೆ ಮತ್ತು ಒಡವೆಗಳನ್ನು ಧರಿಸುವುದಕ್ಕೆ ಅವಕಾಶ ಕೊಟ್ಟಿದ್ದಕ್ಕೆ, ಧನ್ಯವಾದ ಸಲ್ಲಿಸಿದರು.
ಚೇತನ್ ನಾಡಿಗೇರ್