Advertisement

ಕಲ್ಲೂರ್‌ ಬ್ರಿಡ್ಜ್ ತಂದ ಕುತ್ತು

12:02 PM Jan 04, 2018 | |

ಕಲಬುರಗಿ: ನೀರಾವರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಭೀಮಾ ನದಿಗೆ ಜೇವರ್ಗಿ ತಾಲೂಕಿನ ಕಲ್ಲೂರು ಬಳಿ ಕಟ್ಟಿದ್ದ ಬ್ರಿಡ್ಜ್ ಕಮ್‌ ಬ್ಯಾರೇಜ್‌ ಗೇಟು ಕಿತ್ತುಕೊಂಡು ಹೋಗಿರುವುದರಿಂದ ಚಿನಮಳ್ಳಿ ಭಾಗದ ರೈತರು ಕಬ್ಬು ಸಾಗಿಸಲು ಪರದಾಡುವಂತೆ ಆಗಿದೆ.

Advertisement

ಅಕ್ರಮ ಮರಳುಗಾರಿಕೆ ಮಾಡುವ ವ್ಯಕ್ತಿಗಳಿಗೆ ಸಹಾಯ ಮಾಡಲು ಹೋಗಿ ನೀರಾವರಿ ಅಧಿಕಾರಿಗಳು ರೈತರಿಗೆ ಸಂಕಷ್ಟ ತಂದೊಡಿದ್ದಾರೆ. 2016ರ ಸೆಪ್ಟೆಂಬರ್‌ 17ರಂದು ಭೀಮಾ ಜಲಾನಯನ ಪ್ರದೇಶದಲ್ಲಿ ಬಿದ್ದ ಭಾರಿ ಮಳೆಯಿಂದ ಮತ್ತು ಸೊನ್ನ ಬ್ಯಾರೇಜ್‌ ನೀರು ಹೊರಬಿಟ್ಟಿದ್ದರಿಂದ ಕಲ್ಲೂರು ಬ್ಯಾರೇಜ್‌ನಲ್ಲಿ ನೀರು ಹೆಚ್ಚಾಗಿತ್ತು. ಎಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ನೀರನ್ನು ಹೊರ ಬಿಡದೆ ಅಕ್ರಮ ಮರಳುಗಾರಿಕೆ ಮಾಡುವವರಿಗೆ ಸಹಾಯ ಮಾಡುವ ಹಂತದಲ್ಲಿದ್ದಾಗಲೇ ಬ್ಯಾರೇಜ್‌ ಗೇಟು ಕಿತ್ತುಕೊಂಡು ಅಪಾರ ಪ್ರಮಾಣದ ನೀರು ಪೋಲಾಗಿತ್ತು. ಅಲ್ಲದೆ, ಗೇಟಿನ ಪಕ್ಕದಲ್ಲಿನ ಫಲವತ್ತಾದ 100 ಎಕರೆ ಭೂಮಿಯೂ ಹಾಳಾಯಿತು. ನೀರಿನ ರಭಸಕ್ಕೆ 80 ಅಡಿ ಆಳದ ಹೊಂಡ ನಿರ್ಮಾಣವಾಯಿತು. ಪ್ರಯುಕ್ತ ಈಗ ಅಫಜಪುರ ಮತ್ತು ಜೇವರ್ಗಿ ತಾಲೂಕುಗಳ ಮಧ್ಯದ ಸಂಪರ್ಕ ಸಂಪೂರ್ಣ ಕಡಿದು ಹೋಗಿದೆ. 

ಇದರ ಪರಿಣಾಮ ಈಗ ಅಫಜಲಪುರ ತಾಲೂಕಿನ ಕೊನೆ ಭಾಗದ ಚಿನಮಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳ ರೈತರಿಗೆ ಕಬ್ಬು ಸಾಗಿಸಲು ತೀವ್ರ ತೊಂದರೆ ಎದುರಾಗಿದೆ. ಈ ಭಾಗದಲ್ಲಿ ಸುಮಾರು 2 ಸಾವಿರ ಎಕರೆ ಪ್ರದೇಶಕ್ಕಿಂತ ಹೆಚ್ಚು ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಈ ಮೊದಲು ಬ್ರಿಡ್ಜ್ ಇದ್ದಾಗ 40 ಕಿ.ಮೀ ಅಂತರದಲ್ಲಿ ಹವಳಗಾ, ಮಳ್ಳಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲಾಗುತ್ತಿತ್ತು. ಆದರೆ ಈಗ ಅಫಜಲಪುರ ಪಟ್ಟಣದ ಮೂಲಕ ಹಾಯ್ದು ಹವಳಾಗಾಕ್ಕೆ ಹೋಗಬೇಕಾಗಿರುವುದರಿಂದ ಕನಿಷ್ಠ 80 ಕಿ.ಮೀ ಸಾಗಿಸಬೇಕು. ಅದರಂತೆ ಮಳ್ಳಿ ಕಾರ್ಖಾನೆಗೆ ಸಾಗಿಸಲು ಅಷ್ಟೇ ದೂರ ಆಗುತ್ತಿದೆ. ಆದ್ದರಿಂದ ಯಾದಗಿರಿ ಜಿಲ್ಲೆಯ ವಡಗೇರಾ ಕೋರ್‌ಗ್ರೀನ್‌ ಸಕ್ಕರೆ ಕಾರ್ಖಾನೆಗೆ ಸಾಗಿಸಲಾಗುತ್ತಿದೆ. ಇದರಿಂದಾಗಿ ಸಾರಿಗೆ ವೆಚ್ಚ ಹೆಚ್ಚಾಗುತ್ತಿದೆ ಎಂದು ರೈತರು ಗೋಳು ತೋಡಿಕೊಂಡಿದ್ದಾರೆ.

ಬ್ರಿಡ್ಜ್ ಗೇಟು ಮುರಿದು ಉಂಟಾಗಿರುವ ಹೊಂಡ ನೋಡಿದರೆ ಈ ವರ್ಷ ಅದು ದುರಸ್ತಿ ಆಗಲು ಸಾಧ್ಯವಿಲ್ಲ ಎನ್ನುವಂತಾಗಿದೆ. ಇದರಿಂದಾಗಿ ಅನ್ಯ ಮಾರ್ಗವಿಲ್ಲದೆ ಸರಕಾರ ಹಾಗೂ ಅಕ್ರಮ ಮರುಳುಗಾರಿಕೆ ಮಾಡುವವರ ಮತ್ತು ನೀರಾವರಿ ಅಧಿಕಾರಿಗಳಿಗೆ ಶಾಪ ಹಾಕುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ರೈತರಾದ ದೌಲಪ್ಪ ತಳಕೇರಿ, ಹಸನಸಾಬ ಮುಲ್ಲಾ, ಚೋಟು ದೇವರಮನಿ, ಸಿದ್ದಣ್ಣ ಹಟಗಾರ, ಮಲ್ಲೇಶಿ ತಳವಾರ ದೂರಿದ್ದಾರೆ.

ದೊಡ್ಡ ಸಮಸ್ಯೆಯಾಗಿದೆ ಕಲ್ಲೂರ್‌ ಬ್ರಿಡ್ಜ್ ಕಂ ಬ್ಯಾರೇಜ್‌ ಸಂಪರ್ಕ ಕಡಿತದಿಂದಾಗಿ ಅಫಜಲಪುರ ತಾಲೂಕಿನ ಕೊನೆ ಭಾಗದ ಕಬ್ಬು ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಈಗ ಕಬ್ಬು ಕಟಾವು ನಡೆದಿದೆ. ಮಳ್ಳಿ, ಹವಳಗಾ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ತೆಗೆದುಕೊಂಡು ಹೋಗುವುದು ತುಂಬಾ ವೆಚ್ಚದಾಯಕವಾಗಿದೆ. ಮೊದಲೇ ಕಬ್ಬಿಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲ. ಇಂತಹದರಲ್ಲಿ ಸಾಗಾಟ ವೆಚ್ಚದಿಂದ ರೈತರು ಕೈ ಸುಟ್ಟು ಕೊಳ್ಳುತ್ತಿದ್ದಾರೆ. ಕೂಡಲೇ ಸರಕಾರ ಸ್ಪಂದಿಸಿ ಸೇತುವೆ ದುರಸ್ತಿ ಕಾರ್ಯ ಶೀಘ್ರ ಆರಂಭಿಸಲಿ.  ರಮೇಶ ಹೂಗಾರ, ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಲಾಭ ತರದ ಗಣ್ಯರ ಭೇಟಿ ಸೆಪ್ಟೆಂಬರ್‌ನಲ್ಲಿ ಬ್ರಿಡ್ಜ್ ಗೇಟು ಕಿತ್ತು ಹೋಗಿ ಅಪಾರ ಪ್ರಮಾಣದಲ್ಲಿ ನೀರು ಪೋಲಾಗಿ ಜಮೀನು ಹಾಳಾಗಿ ಹೋದಾಗ ಅಫಜಲಪುರ ಮಾಜಿ ಶಾಸಕ ಎಂ.ವೈ. ಪಾಟೀಲ, ರೈತ ಹೋರಾಟಗಾರರು, ಮಾಜಿ ಜಿಪಂ ಸದಸ್ಯೆ ಶೋಭಾ ಬಾಣಿ, ಜೇವರ್ಗಿ ಶಾಸಕ ಅಜಯಸಿಂಗ್‌ ಭೇಟಿ ನೀಡಿ ಪರಿಶೀಲಿಸಿ ಅನಾಹುತಕ್ಕೆ ಮಿಡಿದಿದ್ದರು. ಆದರೆ, ಇದರ ಲಾಭವೇನೂ ಆಗಲಿಲ್ಲ. ಶೋಭಾ ಬಾಣಿ ಮತ್ತು ಇತರರು ನೀರಾವರಿ ಅಧಿಕಾರಿಗಳ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವ ಎಚ್ಚರಿಕೆ ನೀಡಿ ಸ್ಪಂದಿಸಿದ್ದರು. ಶಾಸಕರು ಕೂಡಲೇ ಕಾಮಗಾರಿ ಆರಂಭಿಸುವ ತುಗಳನ್ನಾಡಿದ್ದರು. ಆದರೆ, ಯಾವುದೇ ಫಲ ನೀಡಿಲ್ಲ

Advertisement

ಸೂರ್ಯಕಾಂತ ಎಂ.ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next