Advertisement

ಸೌರಶಕ್ತಿ ಮೊರೆಹೋದ ಕಡಬ ಕೃಷಿ ಪತ್ತಿನ ಸಂಘ

10:10 AM Jan 31, 2018 | Team Udayavani |

ಕಡಬ: ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸುಸಜ್ಜಿತವಾಗಿ ನಿರ್ಮಾಣಗೊಂಡ ಸಂಪೂರ್ಣ ಹವಾನಿಯಂತ್ರಿತ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ಸಂಘವು ತನ್ನ ಪ್ರಧಾನ ಕಚೇರಿಗೆ ಪೂರ್ಣವಾಗಿ ಸೌರವಿದ್ಯುತ್‌ ಅಳವಡಿಸುವ ಮೂಲಕ ಸ್ವಾವಲಂಬನೆಯಲ್ಲಿ ಮಾದರಿ ಎನಿಸಿಕೊಂಡಿದೆ.

Advertisement

ಮನುಷ್ಯ ಪ್ರಗತಿ ಸಾಧಿಸಿದಂತೆಲ್ಲ ವಿದ್ಯುತ್ಛಕ್ತಿಯ ಅವಲಂಬನೆ ಹೆಚ್ಚಾಗುತ್ತಿದೆ. ಆದರೆ, ವಿದ್ಯುತ್‌ ಅಭಾವ ಎಲ್ಲ ಕ್ಷೇತ್ರಗಳನ್ನೂ ಕಾಡುತ್ತಿದೆ. ಸಹಜವಾಗಿಯೇ ಪರ್ಯಾಯ ಇಂಧನಗಳತ್ತ ಗಮನ ಹರಿಯುತ್ತಿದೆ. ಈ ವೇಳೆ ಸೌರಶಕ್ತಿ ಹೊಸ ಆಶಾಭಾವನೆ ಚಿಗುರಿಸಿತು. 2050ನೇ ಇಸವಿಯ ವೇಳೆಗೆ ಜಗತ್ತಿನಲ್ಲಿ ಅತೀ ಹೆಚ್ಚು ಶಕ್ತಿಯನ್ನು ನೀಡುವ ಮೂಲವಾಗಿ ಸೌರಶಕ್ತಿ ಗುರುತಿಸಿಕೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ. ಎಂದೆಂದಿಗೂ ಮುಗಿಯದ ಈ ನೈಸರ್ಗಿಕ ಶಕ್ತಿಯ ಬಳಕೆ ಕುರಿತು ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿವೆ. ಸರಕಾರಗಳೂ ಸೌರಶಕ್ತಿಯ ಬಳಕೆಗೆ ಪ್ರೋತ್ಸಾಹ ನೀಡುತ್ತಿವೆ.

ಸದಸ್ಯರ ಸಹಕಾರ
ಹಲವು ವರ್ಷಗಳಿಂದ ಪದೇ ಪದೇ ವಿದ್ಯುತ್‌ ಕಡಿತದ ಸಮಸ್ಯೆ ಎದುರಿಸುತ್ತಿರುವ ಕಡಬ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ, ಸೌರ ಶಕ್ತಿಯನ್ನು ಬಳಸಿಕೊಳ್ಳುವ ಮಹತ್ವದ ನಿರ್ಧಾರ ಕೈಗೊಂಡಿತು. ಸದಸ್ಯರು ತಮ್ಮ ಡಿವಿಡೆಂಡ್‌ನ‌ ಒಂದು ಭಾಗವಾಗಿ ಕೊಡುಗೆಯಾಗಿ ನೀಡಿದ 2.50 ಲಕ್ಷ ರೂ. ವೆಚ್ಚದಲ್ಲಿ ತಾರಸಿ ಮೇಲೆ ಸ್ಥಾವರ ಅಳವಡಿಸಿ, ಪ್ರಧಾನ ಕಚೇರಿಯ ಉಪಯೋಗಕ್ಕೆ ಬೇಕಾದ  ವಿದ್ಯುತ್ತನ್ನು ಸೌರಶಕ್ತಿಯಿಂದಲೇ ಪಡೆಯುತ್ತಿದೆ. ಕಚೇರಿಯೊಳಗಿನ ಬೆಳಕಿನ ವ್ಯವಸ್ಥೆ, ಕಂಪ್ಯೂಟರ್‌ಗಳು, ಪ್ರಿಂಟರ್‌ಗಳು, ಫ್ಯಾನ್‌ಗಳು, ಎಲೆಕ್ಟ್ರಾನಿಕ್‌ ತೂಕದ ಯಂತ್ರಗಳು ಸಹಿತ ಎಲ್ಲವೂ ಸೌರ ವಿದ್ಯುತ್‌ನಿಂದಲೇ ನಡೆಯುತ್ತಿವೆ. ಸೌರವಿದ್ಯುತ್‌ ಬಳಕೆ ಮಾಡಲು ಸಾಧ್ಯವಿಲ್ಲದ ಕೆಲವು ನಿರ್ದಿ ಷ್ಟ ಅಗತ್ಯಗಳಿಗೆ ಮಾತ್ರ ಮೆಸ್ಕಾಂನ ವಿದ್ಯುತ್‌ ಬಳಕೆಯಾಗುತ್ತಿದೆ. ಅದು ಕೂಡ ಬಹಳ ಸಣ್ಣ ಪ್ರಮಾಣದಲ್ಲಿ.

ಪದೇ ಪದೇ ಪವರ್‌ಕಟ್‌, ಲೋ ವೋಲ್ಟೆàಜ್‌ ಸಮಸ್ಯೆ ಎದುರಿಸುತ್ತಿದ್ದೆವು. ಈ ಅಡಚಣೆಯಿಂದ ಪಾರಾಗಲು ನಮಗೆ ಸೌರವಿದ್ಯುತ್‌ ಅಳವಡಿಸುವ ಆಲೋಚನೆ ಬಂತು. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಸೌರವಿದ್ಯುತ್‌ ಬಳಕೆಯ ಕುರಿತು ಒಲವು ವ್ಯಕ್ತಪಡಿಸಿರುವುದು ನಮಗೆ ಪ್ರೇರಣೆ ನೀಡಿತು.

ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಈ ವಿಚಾರವನ್ನು ಸದಸ್ಯರ ಮುಂದಿಟ್ಟಾಗ ಅವರು ತಮ್ಮ ಡಿವಿಡೆಂಡ್‌ನ‌ಲ್ಲಿ ಶೇ. 0.5 ನೀಡಿದ ಪರಿಣಾಮವಾಗಿ ಹೊಸದಾಗಿ ನಿರ್ಮಾಣಗೊಂಡ ಪ್ರಧಾನ ಕಚೇರಿಯ ಕಟ್ಟಡಕ್ಕೆ ಪೂರ್ತಿಯಾಗಿ ಸೌರ ವಿದ್ಯುತ್‌ ಅಳವಡಿಸಲಾಗಿದೆ. ನಿರಂತರವಾಗಿ ಲಭಿಸುವ ಸೌರವಿದ್ಯುತ್‌ನಿಂದಾಗಿ ಕಚೇರಿಯ ಕೆಲಸಗಳು ಸುಲಲಿತವಾಗಿ ನಡೆಯುತ್ತಿವೆ. ಈ ರೀತಿ ಸಹಕಾರಿ ಸಂಘದ ಕಚೇರಿಗೆ ಪೂರ್ತಿಯಾಗಿ ಸೌರವಿದ್ಯುತ್‌ ಅಳವಡಿಸಿರುವ ಜಿಲ್ಲೆಯ ಪ್ರಥಮ ಸಂಘ ಎನ್ನುವ ಹೆಗ್ಗಳಿಕೆಯೂ ನಮ್ಮದಾಗಿದೆ ಎಂದು ಸಂಘದ ಅಧ್ಯಕ್ಷ ಸುಂದರ ಗೌಡ ಮಂಡೆಕರ ವಿವರಿಸಿದರು.

Advertisement

ನಾಗರಾಜ್‌ ಎನ್‌. ಕೆ.

Advertisement

Udayavani is now on Telegram. Click here to join our channel and stay updated with the latest news.

Next