ಯಲಹಂಕ: ಸರಿಯಾದ ಕೌಶಲ್ಯತೆ ಹಾಗೂ ಜ್ಞಾನ ಮಾತ್ರ ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳ ಕೈಹಿಡಿಯುತ್ತದೆ ಎಂದು ದೇಶದ ದೂರ ಸಂಪರ್ಕ ಕ್ರಾಂತಿಯ ಪಿತಾಮಹ ಹಾಗೂ ಪದ್ಮಭೂಷಣ ಸ್ಯಾಮ್ ಪಿತ್ರೋಡ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಗರದ ಯಲಹಂಕದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ರಜತ ಮಹೋತ್ಸವದಲ್ಲಿ ಆಶಾದಾಯಕ ಮನಸ್ಸುಗಳಿಗಾಗಿ ಆಧುನಿಕ ವಿದ್ಯಾಭ್ಯಾಸದಲ್ಲಿ ಹೊಸತನ (ಸೃಜನಶೀಲತೆ) ಈ ವಿಷಯದ ಕುರಿತು ಉಪನ್ಯಾಸ ನೀಡಿದರು.
ವಿದ್ಯಾರ್ಥಿಗಳು ಕೇವಲ ಅಂಕಗಳನ್ನುಗಳಿಸು ವುದರ ಜೊತೆಯಲ್ಲಿಯೇ, ಜ್ಞಾನ ಹಾಗೂ ಕೌಶಲ್ಯವೃದ್ಧಿಗೂ ಒತ್ತು ನೀಡಬೇಕು. ಪೋಷಕರೂ ಇಂತಹ ವ್ಯವಸ್ಥೆಗೆ ಮುಂದಾಗಬೇಕು ಎಂದರು. ಆಧುನಿಕ ಶಿಕ್ಷಣ ದೇಶದ ಅಭಿವೃದ್ಧಿಯನ್ನು ಹೊಸ ದಿಕ್ಕಿನತ್ತ ಕರೆದೊಯ್ಯವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ದೇಶ ದೂರ ಸಂಪರ್ಕ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಹೊಂದಿದೆ. ಆದರೆ, ಇದನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಜನೆಯಲ್ಲಿ ಹೆಚ್ಚಿನ ಸಾಧನೆಯಾಗದೇ ಇರುವುದು ವಿಪರ್ಯಾಸ ಎಂದು ವಿಷಾದಿಸಿದರು.
ಪೋಷಕರು ಹಾಗೂ ಸಮಾಜದ ಒತ್ತಡದ ನಡುವೆ ವಿದ್ಯಾರ್ಥಿಗಳು ಅಂಕಗಳನ್ನು ಗಳಿಸುವತ್ತ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಅಲ್ಲದೆ, ಅನೇಕ ವಿದ್ಯಾರ್ಥಿಗಳು ವಾಮಮಾರ್ಗಗಳನ್ನು ಉಪಯೋಗಿಸುವ ಚಿಂತನೆಯನ್ನು ಮಾಡುತ್ತಾರೆ. ಆದರೆ, ವಾಮ ಮಾರ್ಗಗಳಿಂದ ಗಳಿಸುವ ಅಂಕಗಳಿಗಿಂತಾ ಒಂದು ವರ್ಷ ಅದೇ ವಿಷಯವನ್ನು ಕಲಿತು ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು ಒಳಿತು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿಗಳಾದ ಡಾ.ವೂಡೆ ಪಿ.ಕೃಷ್ಣ, ಅಧ್ಯಕ್ಷರಾದ ಎನ್.ಆರ್. ಪಂಡಿತಾರಾಧ್ಯ, ಶೇಷಾದ್ರಿಪುರಂ ಫಸ್ಟ್ ಗ್ರೇಡ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಎನ್ ವೆಂಕಟೇಶ್, ಡಾ.ಎಂ.ಪ್ರಕಾಶ್, ನಿರ್ದೇಶಕರು, ಎಸ್‌ಇಟಿ, ಟ್ರಾನ್ಸ್ ಡಿಸಿಪ್ಲಿನರಿ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ.ಬಾಲಕೃಷ್ಣ ಪಿಸುಪತಿ ಮತ್ತಿತರರಿದ್ದರು.
ಈಗಿನ ಉದ್ಯೋಗ ಕ್ಷೇತ್ರ ಬಯಸುವುದು ಕೇವಲ ಕೌಶಲ್ಯಯುತ ಜ್ಞಾನವನ್ನೇ ಹೊರತು ಅಂಕಗಳನ್ನಲ್ಲ. ಒಂದು ಸ್ಥಾನವನ್ನು ತುಂಬಲು 300 ಜನರನ್ನು ಸಂದರ್ಶನಕ್ಕೆ ಒಳಪಡಿಸುವ ಅನಿವಾರ್ಯತೆ ಒದಗಿದೆ. ಶಿಕ್ಷಣ ಕ್ಷೇತ್ರ ಇಂದು ಕೇವಲ ಹಣ ಮಾಡುವ ಕ್ಷೇತ್ರವಾಗಿ ಪರಿಣಮಿಸಿದ್ದು, ರ್‍ಯಾಂಕ್ ಗಳಿಕೆಯೇ ಸಾಧನೆಯಲ್ಲ.
ಸ್ಯಾಮ್ ಪಿತ್ರೋಡ, ದೂರ ಸಂಪರ್ಕ ಕ್ರಾಂತಿಯ ಪಿತಾಮಹ