ಮೈಸೂರು: “ಅವರಪ್ಪನಾಣೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲ್ಲ’ ಎಂದು ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಗಳಲ್ಲಿ ಲೇವಡಿ ಮಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅತಂತ್ರ ವಿಧಾನಸಭೆ ಸೃಷ್ಟಿಯಾಗುತ್ತಲೇ ಕಾಂಗ್ರೆಸ್ ಹೈಕಮಾಂಡ್ ಮಾತಿಗೆ ಕಟ್ಟು ಬಿದ್ದು, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮನ್ನೇ ಖೆಡ್ಡಾಕ್ಕೆ ಬೀಳಿಸಿದ್ದನ್ನು ಮರೆತು, ಕುಮಾರಸ್ವಾಮಿ ಅವರನ್ನು ಸಿಎಂ ಗಾದಿಗೇರಿಸಿದ್ದರು.
ಸಿದ್ದರಾಮಯ್ಯ ಇಂದು ಅದರ ಫಲ ಉಣ್ಣುತ್ತಿದ್ದಾರೆ ಎಂಬ ಟೀಕೆಗಳು ಸಾರ್ವಜನಿಕವಾಗಿ ಕೇಳಿ ಬರುತ್ತಿವೆ. ಲೋಕಸಭಾ ಚುನಾವಣೆಯಲ್ಲೂ ದೋಸ್ತಿ ಮುಂದುವರಿಯಿತು. ಅಷ್ಟರಲ್ಲಾಗಲೇ ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟು ಕೊಟ್ಟಿದ್ದ ಎಚ್.ಡಿ.ದೇವೇಗೌಡಗೆ ಒಕ್ಕಲಿಗರ ಬಾಹುಳ್ಯವಿರುವ ಮೈಸೂರು ಸುರಕ್ಷಿತ ಕ್ಷೇತ್ರವಾಗಲಿದೆ.
ಇಲ್ಲಿ ಮೈತ್ರಿ ಅಭ್ಯರ್ಥಿಯನ್ನಾಗಿ ದೇವೇಗೌಡರನ್ನು ಕಣಕ್ಕಿಳಿಸಬೇಕು ಎಂಬ ಒತ್ತಾಯ ಜೆಡಿಎಸ್ ನಾಯಕರಿಂದ ಬಂದಿತ್ತು. ಆದರೆ, ಸಿದ್ದರಾಮಯ್ಯ ಅದನ್ನು ಒಪ್ಪಲಿಲ್ಲ. ಹಠ ಸಾಧಿಸಿ, 2 ಬಾರಿ ಜಯ ಸಾಧಿಸಿರುವ ಸಿ.ಎಚ್.ವಿಜಯಶಂಕರ್‌ರನ್ನು ಕಣಕ್ಕಿಳಿಸಿದರು. ಆ ಮೂಲಕ ಮೈಸೂರು ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಂಡು, ತವರು ಜಿಲ್ಲೆಯಲ್ಲಿ ತಮ್ಮ ಪ್ರಾಬಲ್ಯ ಉಳಿಸಿಕೊಳ್ಳಬಹುದು ಎಂದು ಲೆಕ್ಕಾಚಾರ ಹಾಕಿದರು.
ಹಾಲಿ ಸಂಸದ, ಬಿಜೆಪಿಯ ಪ್ರತಾಪ್ ಸಿಂಹ ಕಳೆದ 6 ತಿಂಗಳ ಹಿಂದೆಯೇ ಕ್ಷೇತ್ರ ಪ್ರವಾಸ ನಡೆಸಿ, ಚುನಾವಣೆಗೆ ತಯಾರಿ ನಡೆಸಿದ್ದರೆ, ಸ್ಥಾನ ಹೊಂದಾಣಿಕೆಯಲ್ಲಾದ ವಿಳಂಬದಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ವಿಜಯಶಂಕರ್‌ಗೆ 8 ವಿಧಾನಸಭಾ ಕ್ಷೇತ್ರಗಳ ಹಳ್ಳಿ, ಹಳ್ಳಿಗಳನ್ನು ಸುತ್ತಿ ಮತದಾರರನ್ನು ತಲುಪಲು ಸಾಧ್ಯವಾಗಲೇ ಇಲ್ಲ. ಮೈತ್ರಿ ಅಭ್ಯರ್ಥಿ ಘೋಷಣೆಯಾಗುವ ವೇಳೆಗೆ ಪ್ರತಾಪ್ ಸಿಂಹ ಕ್ಷೇತ್ರದಲ್ಲಿ 2 ಸುತ್ತಿನ ಪ್ರಚಾರ ಮುಗಿಸಿದ್ದರು.
ಕೈಕೊಟ್ಟ ಜಿಟಿಡಿ: ಜತೆಗೆ, ಜೆಡಿಎಸ್‌ನ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಕೈ ಕೊಟ್ಟಿದ್ದರಿಂದ ಹೆಸರಿಗೆ ಮೈತ್ರಿ ಅಭ್ಯರ್ಥಿಯಾದರೂ ಕಾಂಗ್ರೆಸ್ ಏಕಾಂಗಿ ಹೋರಾಟ ನಡೆಸಬೇಕಾಯಿತು. ಅಲ್ಲದೆ, ಜೆಡಿಎಸ್‌ಗೆ ಕ್ಷೇತ್ರ ತಪ್ಪಿಸಿದ ಸಿದ್ದರಾಮಯ್ಯ ಅವರ ಮೇಲೆ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಜೆಡಿಎಸ್‌ನ ಸಾಂಪ್ರದಾಯಿಕ ಒಕ್ಕಲಿಗ ಮತಬ್ಯಾಂಕ್ ಸಾರಾಸಗಟಾಗಿ ಬಿಜೆಪಿಗೆ ಬಿದ್ದವು. ಜತೆಗೆ, ಮೋದಿ ಅಲೆ ಕಾಂಗ್ರೆಸ್‌ಗೆ ಮುಳುವಾಯಿತು.
* ಗಿರೀಶ್ ಹುಣಸೂರು