Advertisement

ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆ

06:00 AM Oct 07, 2018 | Team Udayavani |

ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೂರೂ ಪಕ್ಷಗಳಿಗೂ ಈ ಚುನಾವಣೆ ಪ್ರತಿಷ್ಠೆಯ ವಿಷಯವಾದ್ದರಿಂದ ಅಭ್ಯರ್ಥಿಗಳ ಆಯ್ಕೆ, ಗೆಲ್ಲುವ ಕಾರ್ಯತಂತ್ರ ಕುರಿತು ಸಮಾಲೋಚನೆ ಪ್ರಾರಂಭಿಸಿವೆ. ತಯಾರಿ, ಸಂಭಾವ್ಯ ಅಭ್ಯರ್ಥಿಗಳು, ಸೋಲು-ಗೆಲುವಿನ ಲೆಕ್ಕಾಚಾರಗಳ ಸದ್ಯದ ವರದಿ ಹೀಗಿದೆ.

Advertisement

ಜೆಡಿಎಸ್‌
ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಜೆಡಿಎಸ್‌ಗೆ ಈ ಉಪಚುನಾವಣೆ “ಟೆಸ್ಟ್‌’ ಇದ್ದಂತೆ. ಎಚ್‌.ಡಿ.ಕುಮಾರಸ್ವಾಮಿ ಅವರಿಂದ ತೆರವಾದ ರಾಮನಗರ ಹಾಗೂ ಪುಟ್ಟರಾಜು ಅವರಿಂದ ತೆರವಾದ ಮಂಡ್ಯ ಎರಡೂ ಕ್ಷೇತ್ರ ಉಳಿಸಿಕೊಂಡು ಸಾಧ್ಯವಾದರೆ ಶಿವಮೊಗ್ಗ ಲೋಕಸಭೆ ಕ್ಷೇತ್ರವನ್ನೂ ಪಡೆದು ಸಾಮರ್ಥ್ಯ ತೋರಿಸುವ ಬಯಕೆ ಜೆಡಿಎಸ್‌ನದು.

ಎರಡು ವಿಧಾನಸಭೆ ಕ್ಷೇತ್ರಗಳ ಚುನಾವಣೆ ನಿರೀಕ್ಷೆ ಇದ್ದ ಕಾರಣ ರಾಮನಗರದಲ್ಲಿ ಖುದ್ದು ಕುಮಾರಸ್ವಾಮಿ ರಂಗಪ್ರವೇಶ ಮಾಡಿ ಎರಡು ಸುತ್ತು ಸಮಾಲೋಚನೆ ಸಹ ನಡೆಸಿದ್ದಾರೆ. ಅನಿತಾ ಕುಮಾರಸ್ವಾಮಿ ಅವರೇ ಅಭ್ಯರ್ಥಿಯಾಗುವುದು ಬಹುತೇಕ ಖಚಿತ. ಜತೆಗೆ ನಿಖೀಲ್‌ ಕುಮಾರಸ್ವಾಮಿಯವರ ಹೆಸರು ಚಾಲ್ತಿಯಲ್ಲಿದೆ. ಮೂರೂ ಲೋಕಸಭೆ ಉಪ ಚುನಾವಣೆಯೂ ಒಟ್ಟಿಗೆ ಬಂದಿರುವುರಿಂದ ರಾಮನಗರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ರಣತಂತ್ರ ಬದಲಾಗುವುದೇ ಎಂಬುದನ್ನೂ ಕಾದು ನೋಡಬೇಕಾಗಿದೆ.

ಲೋಕಸಭೆ ಚುನಾವಣೆ ವಿಚಾರಕ್ಕೆ ಬಂದರೆ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡರೂ ಮೂರು ಕ್ಷೇತ್ರಗಳ ಪೈಕಿ ಮಂಡ್ಯ ಕ್ಷೇತ್ರ ಜೆಡಿಎಸ್‌ಗೆ ಬರುವುದು ಖಚಿತ. ಆ ಕ್ಷೇತ್ರಕ್ಕೆ ನಿಖೀಲ್‌, ಪ್ರಜ್ವಲ್‌ ರೇವಣ್ಣ, ಶಿವರಾಮೇಗೌಡ, ಐಆರ್‌ಎಸ್‌ನಿಂದ ಸ್ವಯಂ ನಿವೃತ್ತಿ ಪಡೆದಿದ್ದ ನಂದಿನಿ ಅವರ ಹೆಸರು ಕೇಳಿಬರುತ್ತಿದೆ.

ನಿಖೀಲ್‌ಗೆ ಅವಕಾಶ ಕೊಟ್ಟರೆ ಪ್ರಜ್ವಲ್‌ ಅವರಿಗೂ ಅವಕಾಶ ಕೊಡಬೇಕಾಗುತ್ತದೆ. ಎಚ್‌.ಡಿ.ರೇವಣ್ಣ ಅವರು, ಯಡಿಯೂರಪ್ಪ ಪುತ್ರ ಸ್ಪರ್ಧೆ ಮಾಡ್ತಾರೆ ಎಂದಾದರೆ ಪ್ರಜ್ವಲ್‌ ಸ್ಪರ್ಧೆ ಮಾಡಿದರೆ ತಪ್ಪೇನು? ಅವನಿಗೂ ಚುನಾವಣೆಗೆ ನಿಲ್ಲುವ ಅರ್ಹತೆ ಇದೆ ಎಂದು ಹೇಳಿದ್ದು, ಆ ಮೂಲಕ ತಮ್ಮ ಪುತ್ರನೂ ಆಕಾಂಕ್ಷಿ ಎಂಬ ಸಂದೇಶ ರವಾನಿಸಿದ್ದಾರೆ. ಹೀಗಾಗಿ, ಮಂಡ್ಯ ಕ್ಷೇತ್ರಕ್ಕೆ ಜೆಡಿಎಸ್‌ಗೆ ಅಭ್ಯರ್ಥಿ ಆಯ್ಕೆ ತಲೆನೋವಾಗಿ ಪರಿಣಿಸಬಹುದು.

Advertisement

ಇನ್ನು ಬಳ್ಳಾರಿ ಹಾಗೂ ಶಿವಮೊಗ್ಗ ಕ್ಷೇತ್ರಗಳ ಪೈಕಿ ಶಿವಮೊಗ್ಗ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಡುವಂತೆ ಕಾಂಗ್ರೆಸ್‌ಗೆ ಬೇಡಿಕೆ ಇಡಲು ಜೆಡಿಎಸ್‌ ನಿರ್ಧರಿಸಿದೆ. ಶಿವಮೊಗ್ಗ ಬಿಟ್ಟುಕೊಟ್ಟರೆ ಮಾಜಿ ಸಿಎಂ ಎಸ್‌.ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಅಥವಾ ನಟ ಶಿವರಾಜ್‌ ಕುಮಾರ್‌ ಪತ್ನಿ ಗೀತಾ ಶಿವರಾಜ್‌ಕುಮಾರ್‌ ಅವರನ್ನು ಕಣಕ್ಕಿಳಿಸುವ ಆಲೋಚನೆ ಹೊಂದಿದೆ. ಕಳೆದ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಗೀತಾ ಶಿವರಾಜ್‌ಕುಮಾರ್‌ ಅವರು ಕಣಕ್ಕಿಳಿದು ಸೋಲು ಅನುಭವಿಸಿದ್ದರು.

ಸಮಾಲೋಚನೆ:  ಈ ಮಧ್ಯೆ, ಎರಡು ವಿಧಾನಸಭೆ ಹಾಗೂ ಮೂರು ಲೋಕಸಭೆ ಕ್ಷೇತ್ರಗಳ ಉಪ ಚುನಾವಣೆ ಸಂಬಂಧ ಜೆಡಿಎಸ್‌ ಕಾರ್ಯತಂತ್ರ ಕುರಿತು ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿಯವರು ಶನಿವಾರ ರಾತ್ರಿ ಒಂದು ಸುತ್ತು ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್‌ ಹೈಕಮಾಂಡ್‌ ಮಟ್ಟದಲ್ಲಿ ಮೈತ್ರಿ ಚರ್ಚೆಗಳು ನಡೆದರೆ ಯಾವೆಲ್ಲಾ ಅಂಶ ಪ್ರಸ್ತಾಪಿಸಬೇಕು. ಅಭ್ಯರ್ಥಿಗಳ ವಿಚಾರದಲ್ಲಿ ಯಾವ ಮಾನದಂಡ ಅನುಸರಿಸಬೇಕು ಎಂಬುದರ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
– ಎಸ್‌.ಲಕ್ಷ್ಮಿನಾರಾಯಣ

ಕಾಂಗ್ರೆಸ್‌
ಜಮಖಂಡಿ ಹಾಗೂ ರಾಮನಗರ ಉಪ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಜಯಗಳಿಸುವ ಮೂಲಕ ಸರ್ಕಾರವನ್ನು ಭದ್ರ ಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದ ಕಾಂಗ್ರೆಸ್‌ಗೆ ಮೂರು ಲೋಕಸಭೆ ಉಪ ಚುನಾವಣೆ ಘೋಷಣೆಯಾಗಿದ್ದು ಆಶ್ಚರ್ಯ ಉಂಟು ಮಾಡಿದೆ. ಕೇವಲ ಆರು ತಿಂಗಳು ಅವಧಿ ಇರುವಾಗ ಚುನಾವಣೆ ಎದುರಿಸಿ ಗೆಲುವು ಪಡೆಯದಿದ್ದರೆ ಅದೇ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗುವ ಆತಂಕವೂ ಎದುರಾಗಿದೆ.

ಎರಡು ವಿಧಾನಸಭಾ ಕ್ಷೇತ್ರಗಳ ಪೈಕಿ ಜಮಖಂಡಿ ಕ್ಷೇತ್ರಕ್ಕೆ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದು, ಮಾಜಿ ಸಚಿವ ಸಿದ್ದು ನ್ಯಾಮಗೌಡ ಅವರ ಪುತ್ರ ಆನಂದ್‌ ನ್ಯಾಮಗೌಡ ಕಣಕ್ಕಿಳಿಯುವುದು ಬಹುತೇಕ ಖಚಿತ. ಮೂರು ಲೋಕಸಭೆ ಕ್ಷೇತ್ರಗಳ ಪೈಕಿ ಬಳ್ಳಾರಿ ಹಾಗೂ ಶಿವಮೊಗ್ಗ ಕ್ಷೇತ್ರವನ್ನು ತನ್ನ ಬಳಿ ಉಳಿಸಿಕೊಂಡು, ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ನಾಯಕರಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿಯಿಂದ ನಿವೃತ್ತ ನ್ಯಾಯಮೂರ್ತಿ ಎನ್‌.ವೈ ಹನುಮಂತಪ್ಪ, ಶಿವಮೊಗ್ಗದಿಂದ ಮಂಜುನಾಥ ಭಂಡಾರಿ ಮಂಡ್ಯದಲ್ಲಿ ರಮ್ಯಾ ಸ್ಪರ್ಧೆ ಮಾಡಿದ್ದು, ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಸೋಲು ಕಂಡಿದ್ದರು.

ಈಗ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವುದರಿಂದ ಎರಡು ಕ್ಷೇತ್ರ ಗೆಲ್ಲುವ ಮೂಲಕ ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿಗೆ ಶಾಕ್‌ ಕೊಡಲು ಸಜ್ಜಾಗುತ್ತಿದೆ.

ಅಭ್ಯರ್ಥಿಗಳ ಆಯ್ಕೆ ಸವಾಲು: ಕಾಂಗ್ರೆಸ್‌, ಶಿವಮೊಗ್ಗ ಹಾಗೂ ಬಳ್ಳಾರಿಯಲ್ಲಿ ಗೆಲ್ಲುವ ಅಭ್ಯರ್ಥಿಗಳ ತಲಾಷೆ ನಡೆಸಬೇಕಿದೆ. ಶಿವಮೊಗ್ಗದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ ಹಾಗೂ ಮಂಜುನಾಥ ಭಂಡಾರಿ ಹೆಸರುಗಳು ಕೇಳಿ ಬರುತ್ತಿವೆ. ಬಳ್ಳಾರಿಯಲ್ಲಿ  ಶಾಸಕ ಬಿ.ನಾಗೇಂದ್ರ ಸಹೋದರ ಪ್ರಸಾದ್‌, 2018ರ ವಿಧಾನಸಭಾ ಚುನಾವಣೆಯಲ್ಲಿ ಕೂಡ್ಲಿಗಿ ಕ್ಷೇತ್ರದಿಂದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿದ್ದ ಗೋಪಾಲ್‌ ನಾಯಕ್‌, ಪಕ್ಷದ ಜಿಲ್ಲಾ ಮಟ್ಟದ ಮುಖಂಡ ರಾಮ್‌ ಪ್ರಸಾದ್‌ ಎನ್ನುವವರ ಹೆಸರುಗಳು ಕೇಳಿ ಬರುತ್ತಿವೆ. ಬಳ್ಳಾರಿಯಲ್ಲಿ ಆರು ಜನ  ಕಾಂಗ್ರೆಸ್‌ ಶಾಸಕರಿರುವುದರಿಂದ ಒಮ್ಮತದ ಅಭ್ಯರ್ಥಿ ಹಾಕಿದರೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

2014 ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜೆಡಿಎಸ್‌ನ ಸಿ.ಎಸ್‌. ಪುಟ್ಟರಾಜು ವಿರುದ್ಧ ಸೋಲು ಕಂಡಿದ್ದ ರಮ್ಯಾ ಮತ್ತೆ ಮಂಡ್ಯಕ್ಕೆ ಬರುತ್ತಾರಾ ಎಂಬ ಪ್ರಶ್ನೆ ಕಾರ್ಯಕರ್ತರಲ್ಲಿ ಮೂಡಿದೆ.ಮಂಡ್ಯ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಡುವುದರಿಂದ ಕಾಂಗ್ರೆಸ್‌ ಅಭ್ಯರ್ಥಿ ಸ್ಪರ್ಧೆ ಸಾಧ್ಯತೆ ಕಡಿಮೆ. ಇನ್ನು, ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಟಿಕೆಟ್‌ ನೀಡಿದ್ದರೂ ಮುನಿಸಿಕೊಂಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದ ಅಂಬರೀಷ್‌  ಈ  ಉಪ ಚುನಾವಣೆಯಲ್ಲಿ ಯಾವ ನಿಲುವು ತಾಳುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.
– ಶಂಕರ ಪಾಗೋಜಿ

ಬಿಜೆಪಿ
ಕೇಂದ್ರದಲ್ಲಿ ತಮ್ಮದೇ ಪಕ್ಷದ ಆಡಳಿತವಿದ್ದರೂ ಮೂರು ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುವ ಸಾಧ್ಯತೆ ಬಗ್ಗೆ ಗೊಂದಲದಲ್ಲಿದ್ದ ರಾಜ್ಯ ಬಿಜೆಪಿ ನಾಯಕರು ಉಪಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ತರಾತುರಿಯಲ್ಲಿ ಸಿದ್ಧತೆ ಕಾರ್ಯ ಆರಂಭಿಸಿದ್ದಾರೆ.

ಇದೀಗ ಮೂರು ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜ್ಯ ನಾಯಕರು ಸೂಕ್ತ ಅಭ್ಯರ್ಥಿಗಳಿಗೆ ಶೋಧ ಆರಂಭಿಸಿದ್ದಾರೆ. ಶಿವಮೊಗ್ಗ, ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಉಳಿಸಿಕೊಳ್ಳುವ ಜತೆಗೆ ವಿಧಾನಸಭೆ ಚುನಾವಣೆಯಲ್ಲಿ ಸಂಖ್ಯಾಬಲ ವೃದ್ಧಿಸಿಕೊಳ್ಳುವ ದೃಷ್ಟಿಯಿಂದ ರಾಮನಗರ, ಜಮಖಂಡಿ ಕ್ಷೇತ್ರದಲ್ಲಿ ಗೆಲುವಿಗೆ ಬೆವರು ಹರಿಸಬೇಕಿದೆ.

ಸದ್ಯ ಶಿವಮೊಗ್ಗ ಕ್ಷೇತ್ರದಿಂದ ಮಾಜಿ ಸಂಸದ ಬಿ.ವೈ.ರಾಘವೇಂದ್ರ ಸ್ಪರ್ಧೆ ಬಹುತೇಕ ಖಚಿತ ಎನಿಸಿದೆ. ಇದನ್ನು ಖಾತರಿಪಡಿಸುವಂತೆ ಉಪಚುನಾವಣಾ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ಯಡಿಯೂರಪ್ಪ ಅವರು ಶಿವಮೊಗ್ಗದಲ್ಲಿ ರಾಘವೇಂದ್ರ ಅವರನ್ನು ಮತ್ತೂಮ್ಮೆ ಸಂಸದರನ್ನಾಗಿ ಆಯ್ಕೆ ಮಾಡಬೇಕು ಎಂದು ಜನತೆಯಲ್ಲಿ ಮನವಿ ಮಾಡಿದ್ದಾರೆ.

ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸಲು ಹಲವು ಆಕಾಂಕ್ಷಿಗಳಿದ್ದು, ಸೂಕ್ತ ಅಭ್ಯರ್ಥಿ ಆಯ್ಕೆ ಬಗ್ಗೆ ನಾಯಕರು ಲೆಕ್ಕಾಚಾರ ನಡೆಸಿದ್ದಾರೆ. ಮಾಜಿ ಶಾಸಕ ಸುರೇಶ್‌ಬಾಬು, ಮಾಜಿ ಸಂಸದರಾದ ಸಣ್ಣ ಫ‌ಕೀರಪ್ಪ, ಜೆ.ಶಾಂತಾ ಹಾಗೂ ಎನ್‌.ವೈ.ಹನುಮಂತಪ್ಪ ಅವರ ಹೆಸರು ಕೇಳಿಬರುತ್ತಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಹಾಗಿದ್ದರೂ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟಿಕೊಂಡು ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಒಕ್ಕಲಿಗರ ಸಂಘದ ನಿರ್ದೇಶಕ ಶಿವಲಿಂಗಯ್ಯ ಹೆಸರು ಕೇಳಿಬಂದಿದೆ.

ವಿಧಾನಸಭೆ ಚುನಾವಣೆ :  ರಾಮನಗರ ಕ್ಷೇತ್ರದಲ್ಲೂ ಪಕ್ಷ ಪ್ರಾಬಲ್ಯ ಹೇಳಿಕೊಳ್ಳುವ ಮಟ್ಟದಲ್ಲಿಲ್ಲ. ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್‌, ಜಿಲ್ಲಾ ಪದಾಧಿಕಾರಿ ವೇಣುಗೋಪಾಲ್‌, ತಾಲ್ಲೂಕು ಬಿಜೆಪಿ ಅಧ್ಯಕ್ಷ ಪ್ರವೀಣ್‌ಗೌಡ ಹೆಸರು ಕೇಳಿಬಂದಿದೆ. ಕಳೆದ ಬಾರಿ ಬಂಡಾಯ ಅಭ್ಯರ್ಥಿಯಿಂದಾಗಿ ಪರಾಭವಗೊಂಡಿದ್ದ ಶ್ರೀಕಾಂತ್‌ ಕುಲಕರ್ಣಿ ಮತ್ತೆ ಜಮಖಂಡಿ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತರಾಗಿದ್ದಾರೆ. ಬಂಡಾಯವಾಗಿ ಸ್ಪರ್ಧಿಸಿದ್ದ ಸಂಗಮೇಶ್‌ ನಿರಾಣಿ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಕಸರತ್ತು ನಡೆಸಿದ್ದಾರೆ.

ಅಭ್ಯರ್ಥಿ ಆಯ್ಕೆ: ಉಪಚುನಾವಣಾ ವೇಳಾಪಟ್ಟಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಸಭೆ ಕರೆಯಲಾಗಿದೆ. ಮತದಾನಕ್ಕೆ ಕಡಿಮೆ ದಿನಗಳಿರುವುದರಿಂದ ಸೋಮವಾರವೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದುಎಂದು ಬಿಜೆಪಿ ರಾಜ್ಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
– ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next