ಬೆಂಗಳೂರು: ಆಪರೇಷನ್ ಕಮಲ ಕಾರ್ಯಾಚರಣೆಯಡಿ ಬಲೆಗೆ ಬಿದ್ದಿರುವ ಹದಿನೈದು ಶಾಸಕರ ರಾಜೀನಾಮೆ ಅಂಗೀಕಾರ ಅಥವಾ ಅನರ್ಹತೆಯ ನಂತರ ಎದುರಾಗುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಒಲವು ಹೊಂದಿದೆ. ಬಿಜೆಪಿ ವಿರುದ್ಧ ಹೋರಾಡಲು ಉಪ ಚುನಾವಣೆಯಲ್ಲೂ ಮೈತ್ರಿ ಮುಂದುವರಿಸುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ಗೆ ಒಪ್ಪಿಸುವ ಹೊಣೆಗಾರಿಕೆಯನ್ನು ಡಿ.ಕೆ.ಶಿವಕುಮಾರ್ ವಹಿಸಿಕೊಂಡಿದ್ದಾರೆ. ಶತಾಯ, ಗತಾಯ ಅತೃಪ್ತರ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲದಂತೆ ಮಾಡುವ ಕಾರ್ಯತಂತ್ರ ರೂಪಿಸಲು ತೀರ್ಮಾನಿಸಲಾಗಿದೆ.
ಹದಿನೈದು ಕ್ಷೇತ್ರಗಳ ಜತೆ ಇನ್ನೂ ಐವರು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಸೆಳೆದು 20 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸಿ ಆ ಪೈಕಿ 15 ಕ್ಷೇತ್ರ ಗೆಲ್ಲುವ ಉದ್ದೇಶವನ್ನು ಬಿಜೆಪಿ ಹೊಂದಿರುವ ಬಗ್ಗೆ ಮಾಹಿತಿ ಪಡೆದಿರುವ ಜೆಡಿಎಸ್ ನಾಯಕರು, ಉಪ ಚುನಾವಣೆ ಮೂಲಕ “ನಂಬರ್‌ಗೇಮ್’ ತಲುಪಲು ಬಿಜೆಪಿಗೆ ಬಿಡದಂತೆ ಮೈತ್ರಿಯಡಿಯೇ ಸ್ಪರ್ಧೆಗೆ ಪಕ್ಷದ ವಲಯದಲ್ಲಿ ಒಲವು ವ್ಯಕ್ತವಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಡಿ.ಕೆ.ಶಿವಕುಮಾರ್ ಅವರು ಪ್ರಮುಖವಾಗಿ ರಾಜಧಾನಿ ಬೆಂಗಳೂರಿನ ರಾಜರಾಜೇಶ್ವರಿ ನಗರ, ಯಶವಂತಪುರ, ಮಹಾಲಕ್ಷ್ಮಿ ಲೇ ಔಟ್, ಕೃಷ್ಣರಾಜಪುರ, ಹೊಸಕೋಟೆ, ಹುಣಸೂರು ಕ್ಷೇತ್ರಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ದೋಸ್ತಿಗೆ ಕೈ ಕೊಟ್ಟು ಹೋಗಿರುವವರಿಗೆ ಪಾಠ ಕಲಿಸಬೇಕು ಎಂದು ಹಠ ತೊಟ್ಟಿದ್ದಾರೆ. ಹೀಗಾಗಿಯೇ ಹೈಕಮಾಂಡ್ ಜತೆ ಮಾತನಾಡಿ ಮೈತ್ರಿ ಮುಂದುವರಿಯುವಂತೆ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿಯವರಿಗೆ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.
ನಾಲ್ಕು- ಹನ್ನೊಂದು: ಮೈತ್ರಿಯಡಿ ಯಶವಂತಪುರ, ಹುಣಸೂರು, ಮಹಾಲಕ್ಷ್ಮಿ ಲೇ ಔಟ್, ಕೆ.ಆರ್.ಪೇಟೆ ಕ್ಷೇತ್ರಗಳನ್ನು ಜೆಡಿಎಸ್‌ಗೆ ಪಡೆದುಕೊಳ್ಳುವ ಸಾಧ್ಯತೆಯೂ ಇದೆ. ಯಶವಂತಪುರದಲ್ಲಿ ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ ಜವರಾಯಿಗೌಡ, ಮಹಾಲಕ್ಷ್ಮಿ ಲೇ ಔಟ್‌ನಲ್ಲಿ ಉಪ ಮೇಯರ್ ಭದ್ರೇಗೌಡ, ಹುಣಸೂರಿನಲ್ಲಿ ಜಿ.ಟಿ.ದೇವೇಗೌಡರ ಪುತ್ರ ಹರೀಶ್ ಸ್ಪರ್ಧೆ ಮಾಡುವ ಸಾಧ್ಯತೆಯಿದೆ. ಇನ್ನು ಕೆ.ಆರ್.ಪೇಟೆ ಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಹೆಸರು ಕೇಳಿ ಬರುತ್ತಿದೆಯಾದರೂ ಮಾಜಿ ಸ್ಪೀಕರ್ ಕೃಷ್ಣ ಅವರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆದಿದೆ.
ಈ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಗೋಕಾಕ್, ರಾಜರಾಜೇಶ್ವರಿ ನಗರ, ಹೊಸಕೋಟೆ, ಅಥಣಿ, ಯಲ್ಲಾಪುರ, ಹಿರೇಕೆರೂರು, ವಿಜಯನಗರ, ಶಿವಾಜಿನಗರ, ಕೆ.ಆರ್.ಪುರ, ಮಸ್ಕಿ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಜೆಡಿಎಸ್, ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಈಗಾಗಲೇ ಇಷ್ಟೂ ಕ್ಷೇತ್ರಗಳಲ್ಲಿ ಪರ್ಯಾಯ ಅಭ್ಯರ್ಥಿಗಳು ಹುಟ್ಟಿಕೊಂಡಿದ್ದಾರೆ ಎನ್ನಲಾಗಿದೆ. ಒಂದೊಮ್ಮೆ ಕಾಂಗ್ರೆಸ್ ಪಕ್ಷ ಯಶವಂತಪುರ ಕ್ಷೇತ್ರ ಬಿಟ್ಟು ಕೊಡಲು ಪಟ್ಟು ಹಿಡಿದರೆ ಜೆಡಿಎಸ್‌ನವರೇ ಆ ಪಕ್ಷದಿಂದ ಅಭ್ಯರ್ಥಿಯಾಗಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಎರಡೂ ಪಕ್ಷಗಳ ನಿರೀಕ್ಷೆ: ಬಿಜೆಪಿ ಇದೀಗ ಸರ್ಕಾರ ಮಾಡಿದರೂ ತಕ್ಷಣಕ್ಕೆ ವಿಧಾನಸಭೆಯ ಸಂಖ್ಯಾಬಲ 204 ಪ್ರಕಾರ ಬಹುಮತ ಸಾಬೀತುಪಡಿಸಬಹುದು. ಆದರೆ, ಇಂದಲ್ಲ, ನಾಳೆ ಮ್ಯಾಜಿಕ್ ನಂಬರ್ 113 ತಲುಪಲೇಬೇಕು. ಉಪ ಚುನಾವಣೆಯಲ್ಲಿ ಬಿಜೆಪಿ ಸಂಖ್ಯಾಬಲ ಹೆಚ್ಚಿಸಿಕೊಳ್ಳದಂತೆ ತಡೆದರೆ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತದೆ. ಜತೆಗೆ, ಆರು ತಿಂಗಳು ಕಳೆಯುವುದರೊಳಗೆ ಬಿಜೆಪಿಯಲ್ಲೂ ಭಿನ್ನಮತ, ಬಂಡಾಯ, ಅತೃಪ್ತಿ ಕಾಣಿಸಿಕೊಳ್ಳಬಹುದು. ಆಗ ಮತ್ತೆ ಕಾಂಗ್ರೆಸ್-ಜೆಡಿಎಸ್ “ಆಟ’ ಆಡಲು ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಎರಡೂ ಪಕ್ಷಗಳದ್ದಾಗಿದೆ ಎಂದು ಮೂಲಗಳು ತಿಳಿಸಿವೆ.
* ಎಸ್. ಲಕ್ಷ್ಮಿನಾರಾಯಣ