Advertisement

ಜೆಡಿಎಸ್‌ನಲ್ಲಿ ಅಭ್ಯರ್ಥಿ ಆಯ್ಕೆಗೆ ನಡೆದಿದೆ ಭಾರೀ ಕಸರತ್ತು

06:55 AM May 28, 2018 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಆಡಳಿತಾರೂಢ ಜೆಡಿಎಸ್‌ ಪಕ್ಷಕ್ಕೆ ಎರಡು ಸ್ಥಾನ ಲಭ್ಯವಾಗುವ ಸಾಧ್ಯತೆ ಇದ್ದು, ಅಭ್ಯರ್ಥಿಗಳಾಗಲು ಪಕ್ಷದಲ್ಲಿ ತೀವ್ರ ಪೈಪೋಟಿ ಕಾಣಿಸಿಕೊಂಡಿದೆ.

Advertisement

ಪ್ರಸ್ತುತ ವಿಧಾನಸಭೆಯ 221 ಸದಸ್ಯರು ವಿಧಾನ ಪರಿಷತ್ತಿಗೆ 11 ಮಂದಿಯನ್ನು ಆಯ್ಕೆ ಮಾಡಬೇಕಿದ್ದು, ಒಬ್ಬ ಅಭ್ಯರ್ಥಿ ಗೆಲ್ಲಲು 21 ಮತ ಬೇಕು. ವಿಧಾನಸಭೆಯಲ್ಲಿ 104 ಸದಸ್ಯ ಬಲ ಇರುವ ಬಿಜೆಪಿಗೆ ನಾಲ್ಕು ಸ್ಥಾನ ಸುಲಭವಾಗಿ ದಕ್ಕಲಿದ್ದು, ಐದನೇ ಸ್ಥಾನಕ್ಕೆ ಒಂದು ಮತದ ಕೊರತೆ ಇದೆ. 78 ಸ್ಥಾನ ಹೊಂದಿರುವ ಕಾಂಗ್ರೆಸ್‌ಗೆ ಮೂರು ಸ್ಥಾನಗಳನ್ನು ಆಯ್ಕೆ ಮಾಡಿ ನಾಲ್ಕನೇ ಸ್ಥಾನಕ್ಕೆ ಆರು ಮತಗಳು ಬೇಕು. ಜೆಡಿಎಸ್‌ 37 ಸ್ಥಾನ (ಬಿಎಸ್‌ಪಿ ಸೇರಿ) ಹೊಂದಿದ್ದು, ಒಬ್ಬರನ್ನು ಆಯ್ಕೆ ಮಾಡಿದ ನಂತರ 16 ಮತ ಉಳಿಯುತ್ತದೆ. ಇಬ್ಬರು ಪಕ್ಷೇತರರು ಸರ್ಕಾರದ ಬೆಂಬಲಕ್ಕೆ ಇದ್ದಾರೆ.

ಹೀಗಾಗಿ ಬಿಜೆಪಿಗೆ 5, ಕಾಂಗ್ರೆಸ್‌ಗೆ 4 ಮತ್ತು ಜೆಡಿಎಸ್‌ಗೆ 2 ಸ್ಥಾನಗಳನ್ನು ನೀಡಿ 11 ಸ್ಥಾನಗಳಿಗೆ ಅವಿರೋಧ ಆಯ್ಕೆ ಮಾಡಲು ಮೂರೂ ಪಕ್ಷಗಳು ಮುಂದಾಗಿದೆ. ಪಕ್ಷಕ್ಕೆ ಸಿಗುವ ಎರಡು ಸ್ಥಾನಗಳಿಗಾಗಿ ಜೆಡಿಎಸ್‌ನಲ್ಲಿ ಸಾಕಷ್ಟು ಲಾಬಿ ಆರಂಭವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಪ್ರಭಾವಿ ಮಾಜಿ ಶಾಸಕರೊಂದಿಗೆ ಪಕ್ಷಕ್ಕಾಗಿ ದುಡಿದ ಮುಖಂಡರೂ ಕೂಡ ಈ ಎರಡು ಸ್ಥಾನಗಳಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಈಗಾಗಲೇ ಜೆಡಿಎಸ್‌ ವರಿಷ್ಠ ಮತ್ತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಹಿಂದೆ ಬಿದ್ದಿದ್ದಾರೆ.

ಜೆಡಿಎಸ್‌ನಿಂದ ಅಲ್ಪಸಂಖ್ಯಾತ ಸಮುದಾಯದವರು ಯಾರೂ ಗೆಲ್ಲದ ಕಾರಣ ಎರಡು ಬಾರಿ ರಾಜ್ಯಸಭೆಗೆ ಸ್ಪರ್ಧಿಸಿ ಸೋತಿರುವ ಬಿ.ಎಂ.ಫಾರೂಕ್‌ ಅವರನ್ನು ವಿಧಾನ ಪರಿಷತ್ತಿಗೆ ಕಳುಹಿಸಿ ಅವರಿಗೆ ಮಂತ್ರಿ ಪದವಿ ನೀಡಬೇಕು ಎಂದು ದೇವೇಗೌಡ ಮತ್ತು ಕುಮಾರಸ್ವಾಮಿ ಈಗಾಗಲೇ ನಿರ್ಧರಿಸಿದ್ದಾರೆ. ಇದರಿಂದ ಅಲ್ಪಸಂಖ್ಯಾತರಿಗೆ ಸೂಕ್ತ ಸ್ಥಾನಮಾನ ನೀಡಿದ ಹಾಗೂ ಆಗುತ್ತದೆ. ಪಕ್ಷಕ್ಕೆ ಫಾರೂಕ್‌ ಅವರು ನೀಡಿದ ಕೊಡುಗೆಗೆ ಪ್ರತಿಯಾಗಿ ಸರ್ಕಾರದಲ್ಲಿ ಅವಕಾಶ ಕಲ್ಪಿಸಿದಂತೆಯೂ ಆಗುತ್ತದೆ ಎಂಬುದು ಅವರ ಅಭಿಪ್ರಾಯ ಎನ್ನಲಾಗಿದೆ.

ಇನ್ನುಳಿದ ಒಂದು ಸ್ಥಾನದ ಮೇಲೆ ದೇವೇಗೌಡರ ಮಾನಸ ಪುತ್ರರಾಗಿದ್ದ ಮಾಜಿ ಶಾಸಕ ವೈ.ಎಸ್‌.ವಿ.ದತ್ತ, ಮಹದಾಯಿ ಹೋರಾಟದಲ್ಲಿ ಹೆಚ್ಚು ಸಕ್ರಿಯರಾಗಿದ್ದ ಮಾಜಿ ಶಾಸಕ ಎನ್‌.ಎಚ್‌.ಕೋನರೆಡ್ಡಿ, ರಾಜರಾಜೇಶ್ವರಿನಗರದಲ್ಲಿ ರಾಮಚಂದ್ರ ಅವರಿಗಾಗಿ ವಿಧಾವನಸಭೆ ಅಭ್ಯರ್ಥಿ ಸ್ಥಾನ ಬಿಟ್ಟುಕೊಟ್ಟ ಪಕ್ಷದ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಪ್ರಕಾಶ್‌, ಹಿರಿಯ ಮುಖಂಡ ಎಂ.ಎಸ್‌.ನಾರಾಯಣರಾವ್‌, ಚಿಕ್ಕನಾಯಕನಹಳ್ಳಿ ಕ್ಷೇತ್ರದ ಮಾಜಿ ಶಾಸಕ ಸಿ.ಬಿ.ಸುರೇಶ್‌ಬಾಬು ಕಣ್ಣಿಟ್ಟಿದ್ದಾರೆ.

Advertisement

ವೈ.ಎಸ್‌.ವಿ.ದತ್ತ ಅವರು ಜೆಡಿಎಸ್‌ ಪಾಲಿಗೆ ಥಿಂಕ್‌ ಟ್ಯಾಂಕ್‌ ಆಗಿದ್ದು, ಪಕ್ಷ ಮಾತ್ರವಲ್ಲದೆ, ರಾಜ್ಯ ರಾಜಕಾರಣದಲ್ಲೂ ಉತ್ತಮ ಹೆಸರು ಹೊಂದಿದ್ದಾರೆ. ಅಲ್ಲದೆ, ಕಡೂರು ಕ್ಷೇತ್ರದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ದತ್ತ ಸೋಲಿಗೆ ಜೆಡಿಎಸ್‌ನ ಜಾತಿ ರಾಜಕಾರಣವೇ ಕಾರಣ ಎಂಬ ಮಾತೂ ಇರುವುದರಿಂದ ಅವರನ್ನು ವಿಧಾನ ಪರಿಷತ್ತಿಗೆ ಕಳುಹಿಸಬೇಕು ಎಂಬ ಒತ್ತಡ ಪಕ್ಷದಲ್ಲಿದೆ. ಇನ್ನೊಂದೆಡೆ ಉತ್ತರ ಕರ್ನಾಟಕ ಭಾಗದ ರೈತ ಮುಖಂಡರೊಬ್ಬರನ್ನು ವಿಧಾನಪರಿಷತ್‌ಗೆ ಆಯ್ಕೆ ಮಾಡುವ ಉದ್ದೇಶ ಜೆಡಿಎಸ್‌ ವರಿಷ್ಠರಿಗೆ ಇದೆ. ಹೀಗಾಗಿ ಈ ಪಟ್ಟಿಯಲ್ಲಿಲ್ಲದ ಮೂರನೇ ವ್ಯಕ್ತಿಗೆ ಅವಕಾಶ ಸಿಕ್ಕಿದರೆ ಅದು ಅಚ್ಚರಿಯಲ್ಲ. ಹೀಗಾಗಿ ವಿಧಾನ ಪರಿಷತ್ತಿನ ಎರಡು ಸ್ಥಾನಗಳಿಗೆ ಯಾರಿಗೆ ಅವಕಾಶ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕು.

ಒಂದು ಸುತ್ತಿನ ಚರ್ಚೆ ಪೂರ್ಣ
ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಕುರಿತಂತೆ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಪಕ್ಷಕ್ಕೆ ಲಭ್ಯವಾಗುವ ಎರಡು ಸ್ಥಾನಗಳ ಪೈಕಿ ಒಂದು ಸ್ಥಾನವನ್ನು ಬಿ.ಎಂ.ಫಾರೂಕ್‌ ಅವರಿಗೆ ನೀಡುವುದಕ್ಕೆ ಇಬ್ಬರೂ ಆಸಕ್ತಿ ತೋರಿಸಿದ್ದಾರೆ. ಇನ್ನೊಂದು ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ವಿಧಾನ ಪರಿಷತ್‌ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 31 ಕಡೆಯ ದಿನವಾಗಿದ್ದು, ಅದಕ್ಕೆ ಮೊದಲು ಇನ್ನೊಂದು ಸುತ್ತಿನ ಸಭೆ ನಡೆಸಿ ಎರಡೂ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next