Advertisement

ಲೈಬ್ರರಿ ನೀಡದಿರಲು ಸಾಹಿತಿಗಳ ಒತ್ತಾಯ

01:16 AM Jul 03, 2019 | Lakshmi GovindaRaj |

ಬೆಂಗಳೂರು: ನಗರದಲ್ಲಿರುವ ಎಲ್ಲ ಸಾರ್ವಜನಿಕ ಗ್ರಂಥಾಲಯಗಳನ್ನು ಬಿಬಿಎಂಪಿ ಸುರ್ಪದಿಗೆ ನೀಡುವಂತೆ ಬಿಬಿಎಂಪಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಗ್ರಂಥಾಲಯ ಸೆಸ್‌ ಪಾವತಿ ವಿಚಾರ ಕಳೆದ ಹಲವು ವರ್ಷಗಳಿಂದ ಸಾರ್ವಜನಿಕ ಗ್ರಂಥಾಲಯ ಹಾಗೂ ಬಿಬಿಎಂಪಿ ನಡುವಿನ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ.

Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿ 250 ಗ್ರಂಥಾಲಯಗಳಿವೆ. ಆದರೆ, ಇವುಗಳಲ್ಲಿ ಬಹುತೇಕ ಕಡೆ ಮೂಲ ಸೌಕರ್ಯಗಳಿಲ್ಲ. ಬಿಬಿಎಂಪಿ ಕಳೆದ ಐದು ವರ್ಷಗಳಿಂದ 300 ಕೋಟಿಗೂ ಹೆಚ್ಚಿನ ಹಣ ಬಾಕಿ ಉಳಿಸಿಕೊಂಡಿರುವ ಕಾರಣ ನಗರದಲ್ಲಿರುವ ಗ್ರಂಥಾಲಯಗಳಿಗೆ ಮೂಲಸೌಕರ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಆರೋಪವೂ ಇದೆ.

ಬಿಬಿಎಂಪಿಗೆ ಸಾರ್ವಜನಿಕ ಗ್ರಂಥಾಲಯಗಳನ್ನು ನೀಡುವುದಕ್ಕೆ ಸಾಹಿತಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಗ್ರಂಥಾಲಯಗಳನ್ನು ಇಲಾಖೆ ಅತ್ಯಂತ ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುತ್ತಿದೆ. ಇರುವ ಇಲಾಖೆಗಳನ್ನೇ ಸರ್ಮಪಕವಾಗಿ ನಡೆಸಲಾಗದ ಬಿಬಿಎಂಪಿ ಗ್ರಂಥಾಲಯ ಇಲಾಖೆಯನ್ನು ನಡೆಸುತ್ತದೆಯೇ ಎಂದು ಸಾಹಿತಿಗಳು ಪ್ರಶ್ನಿಸಿದ್ದಾರೆ.

ಪಾಲಿಕೆಯ ವ್ಯಾಪ್ತಿಯಲ್ಲಿರುವ 200ಕ್ಕೂ ಹೆಚ್ಚು ಗ್ರಂಥಾಲಯಗಳಿಗೆ ವಾರ್ಷಿಕ ಕೇವಲ 40ರಿಂದ 50 ಕೋಟಿ ಮಾತ್ರ ಬಳಸಲಾಗುತ್ತಿದ್ದು, ಉಳಿದ ಹಣವನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ನೀಡಲಾಗುತ್ತಿದೆ. ಪಾಲಿಕೆಯ ಹಣವನ್ನು ಪಾಲಿಕೆಯ ಗ್ರಂಥಾಲಯಗಳಿಗೆ ಬಳಸುವುದು ಉತ್ತಮ ಎಂದು ಬಿಬಿಎಂಪಿ ಪ್ರತಿಪಾದಿಸುತ್ತಿದೆ.

ಬಿಬಿಎಂಪಿಗೆ ಗ್ರಂಥಾಲಯ ಸೆಸ್‌ ಅಂದಾಜು 100 ಕೋಟಿ ರೂ. ಸಂಗ್ರಹವಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಹಣವನ್ನು ರಾಜ್ಯದ ಬೇರೆ ಜಿಲ್ಲೆಗೆ ನೀಡುವುದರ ಬಗ್ಗೆ ವಿರೋಧ ವ್ಯಕ್ತವಾಗಿದೆ. ಸೆಸ್‌ ಹಣವನ್ನು ಸರ್ಮಪಕವಾಗಿ ಬಳಸಿಕೊಂಡರೆ ಬಿಬಿಎಂಪಿಯೇ ಗ್ರಂಥಾಲಯವನ್ನು ಅಭಿವೃದ್ಧಿಪಡಿಸಬಹುದು ಎಂದು ಬಿಬಿಎಂಪಿಯ ಅಧಿಕಾರಿಯೊಬ್ಬರು ತಿಳಿಸಿದರು.

Advertisement

ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ: ಗ್ರಂಥಾಲಯಗಳನ್ನು ಬಿಬಿಎಂಪಿಗೆ ನೀಡುವುದು ಬೇಡ ಎಂದು ಸಾಹಿತಿಗಳಾದ ಡಾ. ಚಂದ್ರಶೇಖರ ಕಂಬಾರ, ಸಿದ್ದಲಿಂಗಯ್ಯ, ದೊಡ್ಡರಂಗೇಗೌಡ, ಶೂದ್ರ ಶೀನಿವಾಸ, ಪ್ರಕಾಶ ಕಂಬತ್ತಳ್ಳಿ ಮತ್ತು ಲೇಖಕಿ ಡಾ.ವಸುಂಧರ ಭೂಪತಿ ಸೇರಿದಂತೆ ಮತ್ತಿತರರು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್‌ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಗ್ರಂಥಾಲಯ ಸೆಸ್‌: ಸಾರ್ವಜನಿಕ ಗ್ರಂಥಾಲಯ ಕಾಯ್ದೆ -1965’ರ ನಿಯಮ 30ರ ಪ್ರಕಾರ ಸ್ಥಳೀಯ ಸಂಸ್ಥೆಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಸಂಗ್ರಹಿಸುವ ಆಸ್ತಿ ತೆರಿಗೆಯ ಶೇ.6ರಷ್ಟನ್ನು ಗ್ರಂಥಾಲಯಗಳ ಅಭಿವೃದ್ಧಿಗಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ನೀಡಬೇಕು. ಅದರಂತೆ ಈ ಹಿಂದೆ ಪಾಲಿಕೆಯಿಂದ ಹಣ ಪಾವತಿಸಿದ್ದು, 2014-15ನೇ ಸಾಲಿನಲ್ಲಿ 240 ಕೋಟಿ ರೂ., 2017-18ನೇ ಸಾಲಿನಲ್ಲಿ 156 ಕೋಟಿ ರೂ. ಹಾಗೂ 2018-19ನೇ ಸಾಲಿನಲ್ಲಿ 160 ಕೋಟಿ ರೂ. ಸೇರಿ ಒಟ್ಟು 346 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.

ಬಾಕಿ ಹಣ ಸಾರ್ವಜನಿಕರದ್ದು: ದೇಶದಲ್ಲೇ ಅತ್ಯತ್ತಮ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆ ನಮಲ್ಲಿ ಮಾತ್ರ ಇದೆ. ಇದನ್ನು ಯಾವುದೇ ಕಾರಣಕ್ಕೂ ಬಿಬಿಎಂಪಿಗೆ ನೀಡಬಾರದು. ಬಿಬಿಎಂಪಿ ಬಾಕಿ ಉಳಿಸಿಕೊಂಡಿರುವ ಸೆಸ್‌ ಹಣ 350 ಕೋಟಿ ರೂ. ನೀಡಿದರೆ ಉತ್ತಮ ಗ್ರಂಥಾಲಯಗಳನ್ನು ನಿರ್ಮಿಸಬಹುದು. ಇದು ಬಿಬಿಎಂಪಿ ಹಣವಲ್ಲ ಸಾರ್ವಜನಿಕರ ಹಣ. ಬಿಬಿಎಂಪಿ ಸಂಗ್ರಹಕಾರನಾಗಿ ಕೆಲಸ ಮಾಡುತ್ತಿದೆ. ಕಾನೂನಿನಲ್ಲಿ ಅವಕಾಶವಿರುವುದರಿಂದ ಈ ಹಣ ಸಂಗ್ರಹವಾಗುತ್ತಿದೆ ಎಂದು ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ಪೊನ್ನುರು ತಿಳಿಸಿದ್ದಾರೆ.

ನಗರದ ಸಾರ್ವಜನಿಕ ಗ್ರಂಥಾಲಯಗಳನ್ನು ಬಿಬಿಎಂಪಿಗೆ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಾರ್ವಜನಿಕ ಗ್ರಂಥಾಲಯಗಳನ್ನು ನಮಗೆ ನೀಡಿದರೆ ನಾವೇ ಅತ್ಯುತ್ತಮವಾಗಿ ನಿರ್ವಹಿಸುತ್ತೇವೆ
-ಬಿಬಿಎಂಪಿ ಆಯುಕ್ತ, ಮಂಜುನಾಥ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next