ಹೊಸದಿಲ್ಲಿ: ಪಾಕ್ ಆಕ್ರಮಿತ ಕಾಶ್ಮೀರದ ನಗರಗಳ ಹವಾಮಾನ ವರದಿಯನ್ನು ನೀಡಲು ಭಾರತೀಯ ಹವಾಮಾನ ಇಲಾಖೆ ನೀಡಲು ಪ್ರಾರಂಭಿಸಿದೆ.
ಈ ಮೂಲಕ ಪಾಕಿಸ್ಥಾನದ ಸುಪ್ರೀಂಕೋರ್ಟ್ ಗಿಲ್ಗಿಟ್ – ಬಾಲ್ಟಿಸ್ತಾನ್‌ನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಕೊಟ್ಟಿರುವ ಆದೇಶಕ್ಕೆ ಭಾರತ ಸರಿಯಾದ ತಿರುಗೇಟನ್ನು ನೀಡಿದೆ.
ಮೇ 5ರಿಂದ ಈ ವ್ಯವಸ್ಥೆ ಶುರುವಾಗಿದ್ದು, ಶ್ರೀನಗರದಲ್ಲಿರುವ ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಪ್ರಾದೇಶಿಕ ಕಚೇರಿ ಮೂಲಕವೇ ಅದನ್ನು ಪ್ರಕಟಿಸಲಾಗುತ್ತದೆ.
ಇದೇ ಮೊದಲ ಬಾರಿಗೆ ಇಂಥ ಕ್ರಮ ಕೈಗೊಳ್ಳಲಾಗುತ್ತಿದ್ದು, ಗಿಲ್ಗಿಟ್-ಬಾಲ್ಟಿಸ್ತಾನ್, ಮುಝಾಫರಾ ಬಾದ್, ಸ್ಕರ್ದು, ನೀಲಂ ನಗರಗಳ ಹವಾಮಾನ ವರದಿ ಸಿಗಲಾರಂಭಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಐಎಂಡಿ ಮಹಾನಿರ್ದೇಶಕ ಎಂ.ಮಹಾಪಾತ್ರ, “ಕಳೆದ ಆಗಸ್ಟ್‌ನಿಂದ ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರ ಎಂದು ವಿಭಜನೆಗೊಂಡ ಬಳಿಕ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದ ಹವಾಮಾನವನ್ನು ದೈನಂದಿನ ಆಧಾರದಲ್ಲಿ ಗಮನಿಸಲಾಗುತ್ತಿತ್ತು.
ಇದೀಗ ವಿಶೇಷವಾಗಿ ಅಲ್ಲಿನ ನಗರಗಳಲ್ಲಿನ ಹವಾಮಾನದ ಬಗ್ಗೆ ಪ್ರಸ್ತಾವ ಮಾಡಲಾಗುತ್ತಿದೆ. ಪಾಕಿಸ್ಥಾನ ಆಕ್ರಮಿತ ಕಾಶ್ಮೀರ ಕೂಡ ಭಾರತದ ಅವಿಭಾಜ್ಯ ಅಂಗವೆಂದು ಕೇಂದ್ರ ಪ್ರತಿಪಾದಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮಹತ್ವ ಬಂದಿದೆ.