ಮಂಗಳೂರು: ಮಂಗಳೂರಿನಲ್ಲಿರುವ ಆದಾಯ ತೆರಿಗೆ ಇಲಾಖೆಯ ಕಚೇರಿಯನ್ನು ಗೋವಾಕ್ಕೆ ಸ್ಥಳಾಂತಗೊಳಿಸುವ ಅಥವಾ ಗೋವಾದ ಕಚೇರಿ ಜತೆಯಲ್ಲಿ ವಿಲೀನಗೊಳಿಸುವ ಯಾವುದೇ ಪ್ರಸ್ತಾಪಗಳು ಸರಕಾರದ ಮುಂದಿಲ್ಲ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನ ಆದಾಯ ತೆರಿಗೆ ಕಚೇರಿಯಲ್ಲಿ ಆದಾಯ ತೆರಿಗೆ ಪ್ರಧಾನ ಆಯುಕ್ತರ ಹುದ್ದೆ ಇದೆ. ಅದೇ ರೀತಿ ಗೋವಾದಲ್ಲೂ ಪ್ರಧಾನ ಆಯುಕ್ತರ ಹುದ್ದೆ ಇದೆ. ಈ ಎರಡು ಕಚೇರಿಯ ಹುದ್ದೆಯನ್ನು ಸೇರಿಸಿ ಒಂದೇ ಪ್ರಧಾನ ಆಯುಕ್ತರನ್ನು ನಿಯೋಜನೆ ಮಾಡಬೇಕು ಎಂಬ ಪ್ರಸ್ತಾಪ ಇದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಪ್ರಧಾನ ಆಯುಕ್ತರ ಹುದ್ದೆ ಮಾತ್ರ ಗೋವಾಕ್ಕೆ ಶಿಫ್ಟ್ ಆಗುವ ಸಾಧ್ಯತೆ ಇದೆ. ಆದರೆ ಇಡೀ ಕಚೇರಿ ಗೋವಾದ ಕಚೇರಿ ಜತೆಯಲ್ಲಿ ವಿಲೀನವಾಗುತ್ತಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾದುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನ ಅತ್ತಾವರದ ಆದಾಯ ತೆರಿಗೆ ಇಲಾಖೆಯ ವ್ಯಾಪ್ತಿಯಲ್ಲಿ ದೊಡ್ಡ ಮಟ್ಟಿನ ಆದಾಯ ಬರುತ್ತಿದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ವ್ಯಾಪ್ತಿಯಲ್ಲಿ ಸುಮಾರು ನಾಲ್ಕು ಸಾವಿರ ಕೋಟಿ ರೂ.ಗೂ ಹೆಚ್ಚು ಆದಾಯ ಕೊಡುವ ಕೇಂದ್ರವಾಗಿದೆ. ಹಾಗಾಗಿ ಇದನ್ನು ಅರಿತುಕೊಂಡು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ ಹಾಗೂ ಪ್ರಹ್ಲಾದ್ ಜೋಶಿ ಅವರಿಗೆ ಪತ್ರ ಬರೆದು ಮನವರಿಕೆ ಮಾಡಿದ್ದಾರೆ. ನಾನೂ ಕೂಡಾ ಈ ಬಗ್ಗೆ ಸದಾನಂದ ಗೌಡ ಹಾಗೂ ಪ್ರಹ್ಲಾದ್ ಜೋಶಿ ಜತೆ ಮಾತನಾಡಿ ಪ್ರಧಾನ ಆಯುಕ್ತರ ಕಚೇರಿಯನ್ನು ಇಲ್ಲೇ ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಉಡುಪಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಎರಡು ಅಂಗಡಿಯಲ್ಲಿ ಅಗ್ನಿ ಅವಘಡ, ಅಪಾರ ಹಾನಿ !
ಆದಾಯ ತೆರಿಗೆ ಕಚೇರಿಯೇ ಇಲ್ಲಿಂದ ಗೋವಾಕ್ಕೆ ಹೋಗಲಿದೆ ಎಂಬ ಅರ್ಥದಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಈ ಸುದ್ದಿಯ ರಾಜಕೀಯ ಲಾಭವನ್ನು ಎತ್ತಿಕೊಳ್ಳುವ ಷಡ್ಯಂತ್ರವನ್ನು ಕಾಂಗ್ರೆಸ್ ಮಾಡುತ್ತಿದೆ. ಇಲ್ಲಿನ ತೆರಿಗೆದಾರರು ಮುಂದಿನ ದಿನಗಳಲ್ಲಿ ಗೋವಾಕ್ಕೆ ಅಲೆದಾಡಬೇಕಾಗುತ್ತದೆ ಎಂದೆಲ್ಲ ಸುಳ್ಳು ಸುದ್ದಿಗಳನ್ನು ಕಾಂಗ್ರೆಸ್ ಹಬ್ಬಿಸುತ್ತಿದೆ. ಕಚೇರಿ ಸ್ಥಳಾಂತರ ಆಗುತ್ತದೆ ಎಂದು ಹೇಳಿಕೆ ನೀಡಿ ಜನರಿಗೆ ತಪ್ಪು ಮಾಹಿತಿ ನೀಡುವ ಕೆಲಸವನ್ನು ಮಾಡಬಾರದು ಎಂದು ಶಾಸಕ ಕಾಮತ್ ಕಾಂಗ್ರೆಸ್‍ಗೆ ಕಿವಿಮಾತು ಹೇಳಿದರು.
ಇದನ್ನೂ ಓದಿ: ಪೆಟ್ರೋಲ್ ಬಂಕ್ ನಲ್ಲಿ ಮಲಗಿದ್ದ ದನಗಳ ಕಳ್ಳತನ: ಸಿಸಿಟಿವಿಯಲ್ಲಿ ಕೃತ್ಯ ಸೆರೆ