Advertisement

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

07:09 PM Nov 21, 2024 | Team Udayavani |

ಪಣಜಿ: ತಂತ್ರಜ್ಞಾನದ ಅಬ್ಬರದ ಮಧ್ಯೆ ಸಿನಿಮಾ ಮಾಧ್ಯಮ, ನೈಜ ಕಲಾವಿದರು, ನೈಜತೆ ಎಂಬುವುದೇ ಕಳೆದು ಹೋಗುವುದೇ?

Advertisement

ಇಂಥದೊಂದು ಪ್ರಶ್ನೆ ಈಗ ಉದ್ಭವಿಸಿದೆ. ಡಿಜಿಟಲ್‌ ತಂತ್ರಜ್ಞಾನದ ರಭಸದ ಮಧ್ಯೆ ಎಲ್ಲದಕ್ಕೂ ಪರ್ಯಾಯವನ್ನು ಸೃಷ್ಟಿಸುತ್ತಿರುವ ಹೊತ್ತಿದು. ಇದಕ್ಕೆ ಪುಷ್ಟಿ ಎಂಬಂತೆ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 55ನೇ ಆವೃತ್ತಿಯ ಉದ್ಘಾಟನಾ ಚಿತ್ರ ಬೆಟರ್‌ ಮ್ಯಾನ್. ಬ್ರಿಟನ್‌ ನ ಪಾಪ್‌ ಸಿಂಗರ್‌ ರಾಬಿ ವಿಲಿಯಮ್ಸ್‌ ನ ಜೀವನಗಾಥೆಯನ್ನು ಆಧರಿಸಿದ ಸಿನಿಮಾ. ಇದರಲ್ಲಿ ರಾಬಿಯ ಪಾತ್ರದ ನಿರ್ವಹಣೆಯಾಗಿರುವುದು ನೈಜ ಕಲಾವಿದ ಹಾಗೂ ಕಂಪ್ಯೂಟರ್‌ ಚಿತ್ರಿತ ಚಿತ್ರವನ್ನು ಬಳಸಿಕೊಳ್ಳುವ ಮೂಲಕ (ಸಿಜೆಐ). ಧ್ವನಿಯಿಂದ ಹಿಡಿದು ಎಲ್ಲವನ್ನೂ ಪ್ರತಿ ಸೃಷ್ಟಿಸುವ ಭರದಲ್ಲಿದ್ದೇವೆ.

ಇದೇ ಪ್ರಶ್ನೆ ಚಿತ್ರೋತ್ಸವದ ಸಂವಾದದಲ್ಲೂ ಉದ್ಭವಿಸಿತು. ಕಲಾ ಅಕಾಡೆಮಿಯಲ್ಲಿ ಗುರುವಾರ ನಡೆದ ಚಿತ್ರೋತ್ಸವ ಕಲಾ ನಿರ್ದೇಶಕರ ಸಂವಾದದಲ್ಲಿಈ ಪ್ರಶ್ನೆ ಮುನ್ನೆಲೆಗೆ ಬಂದಿತು. ಆಗ ಬಹುತೇಕರ ಅನಿಸಿಕೆ ಎನ್ನುವುದಕ್ಕಿಂತ ಕಾಳಜಿ ವ್ಯಕ್ತವಾಯಿತು- ಸಿನಿಮಾ ಸಾಯುವುದಿಲ್ಲ. ಆದರೆ ನಾವು ಉಳಿಸಿಕೊಳ್ಳಬೇಕು.

ಲೊಕಾರ್ನೊ ಸಿನಿಮೋತ್ಸವದ ಕಲಾ ನಿರ್ದೇಶಕ ಜಾನೊ ನಜಾರೊ, ಸಿನಿಮಾ ಮಾಧ್ಯಮ ಹುಟ್ಟಿದ್ದೇ ತಂತ್ರಜ್ಞಾನದ ಜತೆಗೇ. ಕ್ಯಾಮೆರಾವೇ ಅದಕ್ಕೆ ಪ್ರಬಲ ಉದಾಹರಣೆ. ಈಗಿನ ಬೆಳವಣಿಗೆಯನ್ನು ಗಮನಿಸುವಾಗ ಈ ತಂತ್ರಜ್ಞಾನ ನಮ್ಮ ಅಗತ್ಯ ಮತ್ತು ಅವಶ್ಯಕತೆಗಳನ್ನು ಹೈಜಾಕ್ ಮಾಡಿಬಿಡುವ ಅಪಾಯವಿದೆ. ಅದಾಗದಂತೆ ನಾವು ಎಚ್ಚರ ವಹಿಸಬೇಕು. ಈ ಅರಿವನ್ನೂ ನಾವು ಮೂಡಿಸಿಕೊಳ್ಳಬೇಕು. ಕಂಟೆಂಟ್‌ ಯುಗದಲ್ಲಿ ಒಂದು ಸಾಮೂಹಿಕ ಸಂವಾದಕ್ಕೆ ಅವಕಾಶ ಕಲ್ಪಿಸುವಂತೆ ಸಿನಿಮಾವನ್ನು ಉಳಿಸಿಕೊಳ್ಳಬೇಕು. ಇದಕ್ಕೆ ತಂತ್ರಜ್ಞಾನವನ್ನು ಒಗ್ಗಿಸಿಕೊಳ್ಳಬೇಕು. ಈ ನೆಲೆಯಲ್ಲಿಅದರ ಸಹಾಯವನ್ನು ಬಳಸಿಕೊಳ್ಳುವುದು ಸೂಕ್ತ ಎಂದರು.

ಅವರ ಪ್ರಮುಖ ಅಭಿಪ್ರಾಯವೆಂದರೆ, ತಂತ್ರಜ್ಞಾನ ಮುಖ್ಯವಲ್ಲ, ಅದನ್ನು ಬಳಸಿ ಏನನ್ನು ಮಾಡುತ್ತೀರಾ? ಎಷ್ಟು ಮಾಡುತ್ತೀರಾ? ಎಂಬುದು ಮುಖ್ಯ. ನನ್ನಲ್ಲಿ ಕಾರಿದೆ. ಅದು ನಾನು ದೂರವನ್ನು ಕ್ರಮಿಸಲೇ ಹೊರತು ಬೇರೆಯವರ ಮೇಲೆ ಹರಿಸುವುದಕ್ಕಲ್ಲ ಎಂದದ್ದು ಜಾನೊ.

Advertisement

ಇದೇ ಅಭಿಪ್ರಾಯವನ್ನು ಪುಷ್ಟೀಕರಿಸಿದ ಟೊರೊಂಟೊ ಸಿನಿಮೋತ್ಸವದ ಕಲಾ ನಿರ್ದೇಶಕ ಕ್ಯಾಮ್ರನೊ ಬೇಲೆ, ನಾವೀಗ ತಂತ್ರಜ್ಞಾನ ಭಾಗವಾಗಿದ್ದೇವೆ. ಅದರಿಂದ ಯಾವುದನ್ನೂ ಬಚ್ಚಿಡಲು ಸಾಧ್ಯವಿಲ್ಲ ಎನಿಸಿದೆ. ಆದರೆ ಭೌತಿಕ ಅನುಭವಕ್ಕೆ ಪರ್ಯಾಯವಿಲ್ಲ ಎಂದರು.

ಎಡಿನ್‌ ಬರ್ಗ್‌ ಸಿನಿಮೋತ್ಸವದ ನಿರ್ದೇಶಕಿ ಎಮಾ ಬೊಯೆ ಅವರೂ ಧ್ವನಿಗೂಡಿಸಿದರು. ಸಿನಿಮಾಗಳನ್ನು ಉಳಿಸಿಕೊಳ್ಳಬೇಕಾದದ್ದೇ ಸಾಮೂಹಿಕ ಅನುಭವಕ್ಕಾಗಿ. ಥಿಯೇಟರ್‌ ನಲ್ಲಿ ಸಿನಿಮಾ ವನ್ನು ವೀಕ್ಷಿಸುವ ಅನುಭವವನ್ನು ಕಳೆದುಕೊಳ್ಳಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next