Advertisement

ಹೈ.ಕ ಸೇರ್ಪಡೆ ಹೋರಾಟಕ್ಕೆ ಮರುಜೀವ

01:04 PM Feb 22, 2017 | Team Udayavani |

ಹರಪನಹಳ್ಳಿ: ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಹರಪನಹಳ್ಳಿ ತಾಲೂಕು ಸೇರ್ಪಡೆಗೊಳಿಸುವ ಕುರಿತು ಪಟ್ಟಣದ ತಾಲೂಕು ಪಂಚಾಯ್ತಿ ಸಾಮರ್ಥಯ ಸೌಧದಲ್ಲಿ ಶಾಸಕ ಎಂ.ಪಿ.ರವೀಂದ್ರ ಅಧ್ಯಕ್ಷತೆಯಲ್ಲಿ ತಾಲೂಕನ್ನು 371ಜೆ ಸೌಲಭ್ಯಕ್ಕೆ ಒಳಪಡಿಸಲು ಸರ್ಕಾರಕ್ಕೆ ಒತ್ತಾಯಿಸಲು ಹಾಗೂ ಹರಪನಹಳ್ಳಿ ತಾಲೂಕನ್ನು ಒಳಗೊಂಡ ಪ್ರತ್ಯೇಕ ಜಿಲ್ಲೆ ರಚಿಸುವ ಕುರಿತು ಆಡಳಿತಾತ್ಮಕ ಸಾಧಕ, ಬಾಧಕಗಳ ಚರ್ಚಿಸಲು ಫೆ.22ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕು ಆಡಳಿತದಿಂದ ಸಭೆ ಆಯೋಜಿಸಿರುವುದರಿಂದ ಇದೀಗ ಹೈ.ಕ ಸೇರ್ಪಡೆ  ಹೋರಾಟಕ್ಕೆ ಮತ್ತೆ ಮರುಜೀವ ಬಂದಂತಾಗಿದೆ. 

Advertisement

ಹರಪನಹಳ್ಳಿಯನ್ನು ಪುನಃ ಬಳ್ಳಾರಿ ಜಿಲ್ಲೆಗೆ ಸೇರಿಸಿ ಹೈ.ಕ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಕಳೆದ 2015 ಡಿಸೆಂಬರ್‌ 13ರಂದು ಶಾಸಕ ಎಂ.ಪಿ.ರವೀಂದ್ರ ನೇತೃತ್ವದಲ್ಲಿ ಸರ್ವ ಪಕ್ಷದ ನಿಯೋಗ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ತಾಲೂಕಿನ ಸ್ವಾಮೀಜಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಪ್ರಗತಿಪರ ಚಿಂತಕರು, ಹೋರಾಟಗಾರರು, ಸಾಹಿತಿಗಳ ಸಭೆ ನಡೆದು ಅಲ್ಲಿ ಹರಪನಹಳ್ಳಿಗೆ ಹೈ.ಕ ಸೌಲಭ್ಯ ಸಿಗುವ ಕುರಿತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಕೊಡಲಾಗಿತ್ತು.

ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂದಾಯ ಹಾಗೂ ಕಾನೂನು ಇಲಾಖೆಗಳ ಸಭೆ ನಡೆಸಿ ತಾಲೂಕಿಗೆ 371ಜೆ ಕಲಂ ವ್ಯಾಪ್ತಿಯ ಸೌಲಭ್ಯ ದೊರಕಿಸುವುದಾಗಿ ಭರವಸೆ ನೀಡಿದ್ದರು. ಆದರೆ ಸಭೆ ನಡೆದ ನಂತರ ಸಿಎಂ ಚಕಾರವೆತ್ತಿಲ್ಲ. ಸಿಎಂ ವರ್ತನೆಯಿಂದ ಬೇಸರಗೊಂಡು ಹೈ.ಕ ಸೌಲಭ್ಯ ದೊರೆಯದ ಹಿನ್ನೆಲೆಯಲ್ಲಿ ವಿಧಾನ ಪರಿಷತ್‌ ಚುನಾವಣೆ ಬಹಿಷ್ಕರಿಸುವಂತೆ ಶಾಸಕ ಎಂ.ಪಿ.ರವೀಂದ್ರ ಕರೆ ನೀಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಪುನಃ ಸಭೆ ನಡೆಸಿದ್ದರು.

ಇದಕ್ಕೂ ಮೊದಲು ನೀಲಗುಂದ ವಿರಕ್ತ ಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಜಿಲ್ಲಾಧಿಕಾರಿಗಳ ಕಚೇರಿ ಎದುರು 5 ದಿನಗಳ ಉಪವಾಸ ಧರಣಿ ಸತ್ಯಾಗ್ರಹ ನಡೆಸಿದ್ದರು. ಪ್ರಗತಿಪರ ಸಂಘಟನೆಗಳು ನಿರಂತರವಾಗಿ ಪತ್ರ ಚಳವಳಿ, ಸರದಿ ಧರಣಿ ಸತ್ಯಾಗ್ರಹ ನಡೆಸಿ ಸರ್ಕಾರದ ಗಮನ ಸೆಳೆದಿದ್ದರು. ಆದರೆ ಕೆಲವರು ಹರಪನಹಳ್ಳಿಯನ್ನು ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದ ಹಿನ್ನೆಲೆಯಲ್ಲಿ ಹೋರಾಟ ಸ್ಥಗಿತಗೊಂಡಿತ್ತು.

ನಂತರ ಸಮಾನ ಮನಸ್ಕರ ಹೋರಾಟ ಸಮಿತಿ ಮೂಲಕ ಹೋರಾಟಕ್ಕೆ ಚಾಲನೆ ನೀಡಿ, ಸಂಘಟನೆಗಳ ನಾಯಕರು 2016, ಜುಲೈ 21ರಂದು ಹರಪನಹಳ್ಳಿ ಬಂದ್‌ ಯಶಸ್ವಿ ಹೋರಾಟ ನಡೆಸಿದ್ದರು. ಬಳ್ಳಾರಿ ಜಿಲ್ಲೆಯ ಜನಪ್ರತಿನಿಧಿಗಳು ಹರಪನಹಳ್ಳಿ ಸೇರ್ಪಡೆಗೆ ಅಭ್ಯಂತರವಿಲ್ಲವೆಂದು ಘೋಷಿಸಿದ್ದಾರೆ. ಸಚಿವರಾಗಿದ್ದ ಸಮಯದಲ್ಲಿ ಶಾಮನೂರು ಶಿವಶಂಕ್ರಪ್ಪ ಬಳ್ಳಾರಿಗೆ ಹರಪನಹಳ್ಳಿ ಸೇರಿದ್ರೆ ನಮ್ಮ ತಕರಾರಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

Advertisement

ತಾಪಂ, ಗ್ರಾಪಂ, ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಬಳ್ಳಾರಿ ಜಿಲ್ಲೆಗೆ ಸೇರಿ 371ಜೆ ಸೌಲಭ್ಯ ಕಲ್ಪಿಸಬೇಕೆಂಬ ನಿರ್ಣಯಕೈಗೊಂಡಿವೆ. ಇದೀಗ ಶಾಸಕ ಎಂ.ಪಿ.ರವೀಂದ್ರ, ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ ಉಪಸ್ಥಿತಿಯಲ್ಲಿ ಹರಪನಹಳ್ಳಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸಲು ಆಡಳಿತಾತ್ಮಕ ಸಾಧಕ, ಬಾಧಕಗಳ ಬಗ್ಗೆ ಆರ್ಥಿಕವಾಗಿ ತಗಲುಬಹುದಾದ ಅಂದಾಜು ವೆಚ್ಚ ಮತ್ತು 371ಜೆ ಸೌಲಭ್ಯ ಕಲ್ಪಿಸುವ ಮುಂತಾದವುಗಳ ಕುರಿತು ಪರಿಶೀಲಿಸಿ ಸಮಗ್ರವಾದ ಪ್ರಸ್ಥಾವನೆ ಸಲ್ಲಿಸಲು ನಿರ್ಧರಿಸಲಾಗಿದೆ.

ಸಂಘ, ಸಂಸ್ಥೆಗಳ ಮುಖಂಡರು, ರಾಜಕೀಯ ಪಕ್ಷದ ಪದಾಧಿಕಾರಿಗಳು, ಸಾರ್ವಜನಿಕ ಮುಖಂಡರು, ತಾಲೂಕು ಮಟ್ಟದ ಅಧಿಕಾರಿಗಳು, ಸಭೆಗೆ ಹಾಜರಾಗಿ ಸೂಕ್ತ ಸಲಹೆಗಳನ್ನು ನೀಡಬೇಕು ಎಂದು ತಹಶೀಲ್ದಾರ್‌ ಕೆ.ಗುರುಬಸವರಾಜ್‌ ಆಹ್ವಾನ ನೀಡಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುವ ಸೂಚನೆ ಕಾಣುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next